Fact Check: ಶಾರುಖ್ ಖಾನ್ ಸಿನಿಮಾ ನೋಡಬೇಡಿ ಎಂದರೆ ಸಿಎಂ ಯೋಗಿ ಆದಿತ್ಯನಾಥ್? ಸತ್ಯ ಏನು?
ಶಾರುಖ್ ಖಾನ್ ಬಾಲಿವುಡ್‌ನ ಬಾದ್ ಷಾ ಆಗಿ ದಶಕಗಳ ಕಾಲ ಮೆರೆದವರು. ಈಗಲೂ ಶಾರುಖ್ ಖಾನ್ ಬಾಲಿವುಡ್‌ನ ಬಾದ್ ಷಾ ಆದರೆ ಇತ್ತೀಚೆಗೆ ಧರ್ಮದ ಕಾರಣಕ್ಕೆ ಸುಖಾ ಸುಮ್ಮನೆ ಶಾರುಖ್‌ರನ್ನು ಟ್ರೋಲ್ ಮಾಡಲಾಗುತ್ತಿದೆ. ಶಾರುಖ್‌ರನ್ನು ಅವರ ಧರ್ಮದ ಕಾರಣಕ್ಕೆ 'ದೇಶದ್ರೋಹಿ' ಎಂದು ಬಿಂಬಿಸುವ ಪ್ರಯತ್ನವೂ ನಡೆಯುತ್ತಿದೆ.
ಇದರ ನಡುವೆ 'ಧರ್ಮ ರಾಜಕಾರಣ'ದ 'ಪೋಸ್ಟರ್ ಬಾಯ್' ಎಂದೇ ಬಿಂಬಿತವಾಗುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಶಾರುಖ್ ಖಾನ್ ನಟಿಸಿರುವ ಹೊಸ ಸಿನಿಮಾ 'ಪಠಾಣ್' ಅನ್ನು ವೀಕ್ಷಿಸಬೇಡಿ ಎಂದು ಹೇಳಿರುವುದಾಗಿ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಪೋಸ್ಟ್‌ನ ಜೊತೆ ಯೋಗಿ ಆದಿತ್ಯನಾಥ್ ಮಾತನಾಡಿರುವ ವಿಡಿಯೋ ಸಹ ವೈರಲ್ ಆಗುತ್ತಿದೆ.
ಈಗ ವೈರಲ್ ಆಗುತ್ತಿರುವ ವಿಡಿಯೋ ಹಳೆಯದ್ದು. ಯೋಗಿ ಆದಿತ್ಯನಾಥ್ ಸಿಎಂ ಆಗುವ ಮುನ್ನ 2015 ರಲ್ಲಿ ಸಂಸದರಾಗಿದ್ದಾಗ ಮಾತನಾಡಿರುವ ವಿಡಿಯೋ ಅದಾಗಿದೆ. ವಿಡಿಯೋದಲ್ಲಿ ಶಾರುಖ್ ಖಾನ್‌ರ ವಿರುದ್ಧ ಯೋಗಿ ಆದಿತ್ಯನಾಥ್ ಮಾತನಾಡಿರುವುದು ನಿಜವೇ ಆದರೂ, ಶಾರುಖ್‌ರ 'ಪಠಾಣ್' ಸಿನಿಮಾ ಬಹಿಷ್ಕರಿಸಿ ಎಂದು ಯೋಗಿ ಹೇಳಿಲ್ಲ.

''ಇತ್ತೀಚೆಗೆ ದೇಶವಿರೋಧಿ ಎಡಪಂಥದ ಚಿಂತನೆಗಳು ಹೆಚ್ಚಾಗುತ್ತಿದೆ. ದೇಶವಿರೋಧಿಗಳು ಧ್ವನಿ ಎತ್ತುತ್ತಿದ್ದಾರೆ. ಆ ಧ್ವನಿಯ ಜೊತೆಗೆ ಶಾರುಖ್ ಖಾನ್ ಅಂಥಹವರ ಧ್ವನಿಯೂ ಸೇರಿದೆ. ಬಹುಸಂಖ್ಯದ ಹಿಂದೂ ಸಮಾಜ, ಅವರ ಸಿನಿಮಾಗಳನ್ನು ಬಹಿಷ್ಕಾರ ಮಾಡಿದರೆ ಶಾರುಖ್ ಖಾನ್ ಒಬ್ಬ ಮಾಮೂಲಿ ಮುಸಲ್ಮಾನನಂತೆ ರಸ್ತೆಯಲ್ಲಿ ಓಡಾಡಬೇಕಾಗುತ್ತದೆ'' ಎಂದು 2015 ರ ವಿಡಿಯೋದಲ್ಲಿ ಹೇಳಿದ್ದಾರೆ ಯೋಗಿ ಆದಿತ್ಯನಾಥ್.
''ಭಾರತದ ಗೌರವ ಹಾಳು ಮಾಡುವ ಅಂತರಾಷ್ಟ್ರೀಯ ಮಟ್ಟದ ಪ್ರಯತ್ನ ನಡೆಯುತ್ತಿದೆ. ಯಾವುದೇ ವ್ಯಕ್ತಿ, ಪಕ್ಷವನ್ನು ಗುರಿಯಾಗಿಸಿಕೊಂಡು ಇಡೀ ದೇಶದ ಗೌರವ ಹಾಳು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ವಿಶ್ವದ ಅತ್ಯಂತ ಸಹಿಷ್ಣು ಸಮಾಜ ಹಿಂದು ಸಮಾಜವಾಗಿದೆ. ಹಿಂದು ಸಮಾಜದ ಗೌರವ ಹಾಳುವ ಮಾಡುವ ಷಡ್ಯಂತ್ರದಲ್ಲಿ ಯಾರಾದರೂ ಶಾಮೀಲಾಗಿದ್ದರೆ ಅವರಿಗೆ ಸಾಮೂಹಿಕ ಬಹಿಷ್ಕಾರ, ಸಾಮೂಹಿಕ ನಿಂದನೆ ಮಾಡಬೇಕಾಗಿದೆ'' ಎಂದಿದ್ದಾರೆ ಯೋಗಿ.
ಭಾರತದಲ್ಲಿ ಅಹಿಷ್ಣುತೆ ಇದೆ ಎನಿಸುವ ಕಲಾವಿದರು ಪಾಕಿಸ್ತಾನಕ್ಕೆ ಬನ್ನಿ ಎಂದು ಮುಂಬೈ ಸ್ಪೋಟ ಆರೋಪಿ, ಉಗ್ರ ಹಫೀಜ್ ಸೈಯದ್ ಆಹ್ವಾನ ಮಾಡಿದ್ದಾನೆ ಎಂದು ಪ್ರತ್ರಕರ್ತ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಯೋಗಿ, ''ನಮ್ಮ ಆಸೆಯೂ ಅದೆ ಆಗಿದೆ. ಭಾರತ ಸಹಿಷ್ಣು ಅಲ್ಲ ಎನಿಸಿದವರು ಕೂಡಲೇ ಪಾಕಿಸ್ತಾನಕ್ಕೆ ಹೊರಟು ಹೋಗಲಿ. ಭಾರತದ ನಿಂದನೆ ಮಾಡುವವರಿಗೆ ಆಗಲಾದರು ಅರ್ಥವಾಗುತ್ತದೆ ಪಾಕಿಸ್ತಾನದಲ್ಲಿ ಎಂಥಹಾ ಸ್ಥಿತಿ ಇದೆಯೆಂದು. ಒಮ್ಮೆ ಜಾಮಿಯಾ ಮಸೀದಿ ಮೌಲ್ವಿ ಪಾಕಿಸ್ತಾನಕ್ಕೆ ಹೋಗಿದ್ದರು, ನಾಯಿಯಂತೆ ಆತನನ್ನು ಅಲ್ಲಿಂದ ಓಡಿಸಲಾಗಿತ್ತು'' ಎಂದಿದ್ದಾರೆ ಯೋಗಿ.
''ಈ ಜನರು ಭಯೋತ್ಪಾದನೆಯ ಭಾಷೆ ಮಾತನಾಡುತ್ತಿದ್ದಾರೆ. ನನಗನ್ನಿಸುತ್ತದೆ ಉಗ್ರ ಹಫೀಜ್ ಸೈಯದ್ ಹಾಗೂ ಶಾರುಖ್ ಖಾನ್ ಭಾಷೆಯಲ್ಲಿ ವ್ಯತ್ಯಾಸ ಇಲ್ಲ'' ಎಂದು ಶಾರುಖ್ ರನ್ನು ಉಗ್ರ ಹಫೀಜ್ ಸೈಯೀದ್‌ಗೆ ಹೋಲಿಸಿದ್ದರು ಯೋಗಿ. ಆದರೆ ಯೋಗಿ ಆದಿತ್ಯನಾಥ್ ಮಾತನಾಡಿರುವ ಈ ವಿಡಿಯೋ 2015 ರದ್ದಾಗಿದೆಯೇ ಹೊರತು ಹೊಸದಲ್ಲ.
Recommended Video

Fact Check
ಕ್ಲೇಮು
ಶಾರುಖ್ ಖಾನ್‌ರ ಹೊಸ ಸಿನಿಮಾ 'ಪಠಾಣ್' ನೋಡಬೇಡಿ ಎಂದಿರುವ ಸಿಎಂ ಯೋಗಿ ಆದಿತ್ಯನಾಥ್
ಪರಿಸಮಾಪ್ತಿ
ಶಾರುಖ್ ಖಾನ್‌ರ 'ಪಠಾಣ್' ಸಿನಿಮಾವನ್ನು ನೋಡಬೇಡಿ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿಲ್ಲ.
Rating
False (Social Media)


Click it and Unblock the Notifications











