ಅಪ್ಪು 5ನೇ ಕ್ಲಾಸ್, ನಾನು 10ನೇ ಕ್ಲಾಸ್; ಆಗ ಅವ್ನು ನನಗೆ ಕನ್ನಡ ಪಾಠ ಮಾಡ್ತಿದ್ದ ಎಂದ ಖ್ಯಾತ ನಟಿ
ಡಾ. ರಾಜ್‌ಕುಮಾರ್ ಸರಳತೆ, ಸಜ್ಜನಿಕೆ ಬಗ್ಗೆ ಸಾಕಷ್ಟು ಜನ ಮಾತನಾಡಿದ್ದಾರೆ. ಅಣ್ಣಾವ್ರು ಎಲ್ಲರನ್ನು ಒಂದೇ ರೀತಿ ನೋಡುತ್ತಿದ್ದರು. ಮನೆಗೆ ಯಾರೇ ಹೋದರು ಮತ್ತೆ ಅವರು ಹೊರಡುವಾಗ ಗೇಟಿನವರಗೆ ಬಂದು ಬೀಳ್ಕೊಡುತ್ತಿದ್ದರು. ಮನೆಗೆ ಹೋಗುತ್ತಿದ್ದಂತೆ ನೀರು, ತಿಂಡಿ, ಊಟೋಪಚಾರದ ಮಾಡುತ್ತಿದ್ದರು. ಸಿನಿಮಾ ಸೆಟ್‌ನಲ್ಲೂ ಅದೇ ರೀತಿ ಇರ್ತಿದ್ರು.
ಸಾಮಾನ್ಯವಾಗಿ ಶೂಟಿಂಗ್ ಸೆಟ್‌ಗಳಲ್ಲಿ ನಾಯಕ- ನಾಯಕಿಗೆ ಈಗ ಕ್ಯಾರವಾನ್ ಇರುತ್ತದೆ. ಶಾಟ್ ಮುಗಿದ ತಕ್ಷಣ ಅವರು ಕ್ಯಾರವಾನ್ ಒಳಗೆ ಹೋಗಿ ಸೇರಿಕೊಳ್ತಾರೆ. ಒಂದ್ಕಾಲದಲ್ಲಿ ಇಂತಹ ಕ್ಯಾರವಾನ್ ಸಂಸ್ಕೃತಿ ಇರಲಿಲ್ಲ. ಎಲ್ಲರೂ ಒಂದೇ ಕಡೆ ಇರುತ್ತಿದ್ದರು. ಸೆಟ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದರು. ಆ ಕಾಲದ ನಟ, ನಟಿಯರು ಅದನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಬಹುಭಾಷಾ ನಟಿ ಊರ್ವಶಿ ಕನ್ನಡ ಸಿನಿಮಾಗಳಲ್ಲಿ ನಟಿಸಿದ ಅನುಭವಗಳನ್ನು ಮೆಲುಕು ಹಾಕಿದ್ದಾರೆ.

'ಶ್ರಾವಣ ಬಂತು' ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಜೋಡಿಯಾಗಿ ಊರ್ವಶಿ ನಟಿಸಿದ್ದರು. ಪುನೀತ್ ನನಗೆ ಆಗ ಕನ್ನಡ ಪಾಠ ಹೇಳ್ತಿಕೊಡ್ತಿದ್ದ ಎಂದು ನೆನಪಿಸಿಕೊಂಡಿದ್ದಾರೆ. ರಾಜ್‌ಕುಮಾರ್ ಸರ್ ಸೆಟ್‌ನಲ್ಲಿ ಎಲ್ಲರ ಜೊತೆ ನೆಲದ ಮೇಲೆ ಕೂತು ಊಟ ಮಾಡುತ್ತಿದ್ದರು. ಮೊದಲ ಬಾರಿ ನಾನು ಅದನ್ನು ನೋಡಿದ್ದೆ. ಮತ್ತೆ ಯಾವುದೇ ಸೆಟ್‌ನಲ್ಲಿ ಅಂತಹ ದೃಶ್ಯ ಕಾಣಲಿಲ್ಲ ಎಂದಿದ್ದಾರೆ. ಮಲಯಾಳಂ ನಟ ಜಯರಾಂ ಹಾಗೂ ಊರ್ವಶಿ ನಟನೆಯ 'ಪರಿಮಳಾ ಅಂಡ್ ಕೊ' ಎಂಬ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಗಲಾಟ ಪ್ಲಸ್ ಯೂಟ್ಯೂಬ್ ಚಾನಲ್‌ನಲ್ಲಿ ಇಬ್ಬರೂ ಭಾಗವಹಿಸಿ ಮಾತನಾಡಿದ್ದಾರೆ.
ದಶಕಗಳಿಂದ ಜಯರಾಂ ಹಾಗೂ ಊರ್ವಶಿ ದಕ್ಷಿಣದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡ ಚಿತ್ರಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಭಾಷೆಯಿಂದ ಭಾಷೆಗೆ ಭಾವಾಭಿನಯ, ಡೈಲಾಗ್ ಡೆಲಿವರಿಯಲ್ಲಿ ಕೊಂಡ ಬದಲಾವಣೆ ಇರುತ್ತದೆ. ತಮಿಳಿನಲ್ಲಿ ಕೊಂಚ ಓವರ್ ಆಕ್ಟಿಂಗ್ ಮಾಡಬೇಕಾಗುತ್ತದೆ. ನಿರ್ದೇಶಕರಿಗೆ ತಕ್ಕಂತೆ ನಮ್ಮ ಡೈಲಾಗ್ ಟೋನ್ ಬದಲಿಸಿಕೊಳ್ಳಬೇಕಾಗುತ್ತದೆ. ಹೀಗೆ ಸಾಕಷ್ಟು ವಿಚಾರಗಳನ್ನು ಇಬ್ಬರೂ ಮಾತನಾಡಿದ್ದಾರೆ. ಇದೇ ವೇಳೆ 'ಶ್ರಾವಣ ಬಂತು' ಕನ್ನಡ ಸಿನಿಮಾದಲ್ಲಿ ನಟಿಸಿದ ಅನುಭವನ್ನು ಊರ್ವಶಿ ಹಂಚಿಕೊಂಡಿದ್ದಾರೆ.
ಮೊದಲು ಕನ್ನಡ ಸಿನಿಮಾ ಮಾಡುವಾಗ ಡಾ. ರಾಜ್‌ಕುಮಾರ್ ಸರ್ ಜೊತೆ ನಟಿಸಿದ್ದೆ. ಆಗ ಅವರ ಮಗ ಅಪ್ಪು, 5ನೇ ಕ್ಲಾಸ್ ಓದ್ತಿದ್ದ. ನಾನು 10ನೇ ಕ್ಲಾಸ್ ಓದ್ತಿದ್ದೆ. ಅವನೇ ನನಗೆ ಕನ್ನಡ ಟೂಷನ್ ಎಲ್ಲಾ ಹೇಳಿಕೊಡ್ತಿದ್ದ. ಅಕ್ಕ ಈ ಡೈಲಾಗ್ ಈ ತರ ಹೇಳ್ಬೇಕು ಅಂತ ಪಾಠ ಮಾಡ್ತಿದ್ದ. ಇಲ್ಲೇ ಚೆನ್ನೈ ಪ್ರಸಾದ್ ಸ್ಟುಡಿಯೋದಲ್ಲಿ ಎಲ್ಲಾ ಸಿನಿಮಾಗಳ ಚಿತ್ರೀಕರಣ ನಡೀತಿತ್ತು. ಆಗ ತೆಲುಗು, ಮಲಯಾಳಂ, ಕನ್ನಡ, ಹಿಂದಿ ಸಿನಿಮಾಗಳನ್ನು ಇಲ್ಲಿನ ಸ್ಟುಡಿಯೋಗಳಲ್ಲೇ ಸೆರೆಹಿಡಿಯುತ್ತಿದ್ದರು ಎಂದು ಊರ್ವಶಿ ಹೇಳಿದ್ದಾರೆ.
'ಶ್ರಾವಣ ಬಂತು' ಚಿತ್ರದ ಚಿತ್ರೀಕರಣದ ವೇಳೆ ಅಣ್ಣಾವ್ರ ಸರಳತೆ ಬಗ್ಗೆ ಕೂಡ ಊರ್ವಶಿ ಮಾತನಾಡಿದ್ದಾರೆ. ಮೊದಲ ದಿನ ಊಟಕ್ಕೆ ಎಲ್ಲರೂ ಕಾಯುತ್ತಿದ್ದೆವು. ಕೂಡಲೇ ಬೆಡ್‌ಶೀಟ್‌ಗಳನ್ನು ತಂದು ಕೆಳಗೆ ಹಾಸಿದರು. ಹೀರೊ, ಹೀರೊಯಿನ್, ಲೈಟ್ಸ್ ಬಾಯ್ ಎಲ್ಲರೂ ಕೆಳಗೆ ಕೂತು ಊಟ ಮಾಡಬೇಕು. ನಾನು ಅಷ್ಟರಲ್ಲಿ ಏಳೆಂಟು ಸಿನಿಮಾಗಳಲ್ಲಿ ನಟಿಸಿದ್ದೆ. ಕೂತು ಊಟ ಮಾಡಿ ಅಂದ್ರು. ಬಳಿಕ ರಾಜ್‌ಕುಮಾರ್ ಸರ್ ಬಂದ್ರು. ನೇರವಾಗಿ ಲೈಟ್ ಬಾಯ್ ಪಕ್ಕ ಹೋಗಿ ಕೂತ್ಕೊಂಡ್ರು. ಎಲ್ಲಾ ಊಟ ಮಾಡಿ ಅಂದ್ರು.. ಅಂತಹ ಅನುಭವ ಅದೇ ಚಿತ್ರದಲ್ಲಿ ಆಗಿದ್ದು, ಅದಕ್ಕೂ ಮುನ್ನ ಆ ಬಳಿಕ ಅದನ್ನು ಬೇರೆ ಯಾವುದೇ ಸೆಟ್‌ನಲ್ಲಿ ನೋಡ್ಲಿಲ್ಲ ಎಂದಿದ್ದಾರೆ.
ನಿರ್ದೇಶಕ, ನಟ, ನಟಿ, ತಂತ್ರಜ್ಞರೆಲ್ಲಾ ಒಟ್ಟಿಗೆ ಆ ರೀತಿ ಕೆಳಗೆ ಕೂತು ಊಟ ಮಾಡುವುದು ನಿಜಕ್ಕೂ ಒಳ್ಳೆ ಅನುಭವ. ಈಗ ಸೆಟ್‌ಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಡೆ ಊಟ ಕೊಡ್ತಾರೆ. ಈಗ ಎಲ್ಲಾ ಬಯಸುವುದಕ್ಕೆ ಆಗಲ್ಲ, ಆದರೂ ಹೊರಾಂಗಣ ಚಿತ್ರೀಕರಣದಲ್ಲಿ ಆ ರೀತಿ ಮಾಡಬಹುದು. ಈಗ ಎಲ್ಲಾ ಕ್ಯಾರವಾನ್ ಸಂಸ್ಕೃತಿ ಬಂದುಬಿಡ್ತು ಎಂದು ಊರ್ವಶಿ ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications