ಒಂದು ದಿನವಾದರೂ ಹುಡುಗನಂತೆ ಬದುಕಬೇಕು; ನಟಿ ತ್ರಿಶಾ ವಿಚಿತ್ರ ಬಯಕೆ
ತಮಿಳು ನಟಿ ತ್ರಿಶಾ ಸೌತ್ ಸಿನಿದುನಿಯಾದಲ್ಲಿ ಮಾತ್ರವಲ್ಲದೇ ಬಾಲಿವುಡ್ ಸಿನಿಮಾಗಳಲ್ಲಿ ಕೂಡ ಮಿಂಚಿದ್ದಾರೆ. ವಯಸ್ಸು 40 ದಾಟಿದ್ರು ಚೆನ್ನೈ ಚೆಲುವೆ ಚೆಲುವು, ಚಾರ್ಮ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಹೊಸ ನಟಿಯರಿಗೂ ಆಕೆ ಪೈಪೋಟಿ ಕೊಡುತ್ತಿದ್ದಾರೆ. ಆದರೆ ತ್ರಿಶಾ ವಿಚಿತ್ರ ಕೋರಿಕೆ ವಿಚಾರ ವೈರಲ್ ಆಗ್ತಿದೆ.
ತ್ರಿಶಾ ಚಿತ್ರರಂಗಕ್ಕೆ ಬಂದು ಹೆಚ್ಚು ಕಮ್ಮಿ 25 ವರ್ಷವಾಗುತ್ತಿದೆ. ಇಂದಿಗೂ ನಾಯಕಿಯಾಗಿಯೇ ತೆರೆಮೇಲೆ ರಾರಾಜಿಸುತ್ತಿದ್ದಾರೆ. ಬೇಡಿಕೆ ಉಳಿಸಿಕೊಂಡಿದ್ದಾರೆ. ಸ್ಟಾರ್ ನಟರ ಜೊತೆಗೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕಳೆದ 'ಲಿಯೋ' ಚಿತ್ರದಲ್ಲಿ ಕಮಾಲ್ ಮಾಡಿದ್ದರು. ಸದ್ಯ ಆಕೆಯ ಕೈಯಲ್ಲಿ 5 ಸಿನಿಮಾಗಳಿವೆ. ಅಜಿತ್ ಜೋಡಿಯಾಗಿ 'ವಿಡಮುಯರ್ಚಿ', ಚಿರಂಜೀವಿ ಜೊತೆ 'ವಿಶ್ವಂಭರ', ಕಮಲ್ ಜೊತೆ 'ಥಗ್ ಲೈಫ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.

1999 ರಲ್ಲಿ ಬಂದ 'ಜೋಡಿ' ಚಿತ್ರದಲ್ಲಿ ಸಹನಟಿಯಾಗಿ ತ್ರಿಶಾ ಮಿಂಚಿದ್ದರು. ಬಳಿಕ 'ಮೌನಂ ಪೆಸಿಯದೇ' ಚಿತ್ರದಲ್ಲಿ ನಾಯಕಿಯಾಗಿ ಪರಿಚಿತರಾದರು. ತೆಲುಗಿನಲ್ಲಿ ಪ್ರಭಾಸ್ ಜೊತೆ ನಟಿಸಿದ 'ವರ್ಷಂ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ಆಕೆಯ ಕ್ರೇಜ್ ಶುರುವಾಯಿತು. ಬಳಿಕ ತೆಲುಗು, ತಮಿಳಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು.
ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜೋಡಿಯಾಗಿ 'ಪವರ್' ಚಿತ್ರದಲ್ಲಿ ತ್ರಿಶಾ ಮಿಂಚಿದ್ದರು. ತೆಲುಗಿನ 'ದೂಕುಡು' ರೀಮೆಕ್ ಆಗಿದ್ದ ಈ ಚಿತ್ರಕ್ಕೆ ಕೆ. ಮಾದೇಶ್ ಆಕ್ಷನ್ ಕಟ್ ಹೇಳಿದ್ದರು. ಬಳಿಕ ಯಾಕೋ ಆಕೆ ಕನ್ನಡ ಸಿನಿಮಾಗಳಲ್ಲಿ ನಟಿಸಲಿಲ್ಲ. ಒಂದಷ್ಟು ಸಿನಿಮಾಗಳಿಗೆ ಆಕೆಯ ಹೆಸರು ಕೇಳಿ ಬಂತಾದರೂ ಯಾವುದೂ ನಿಜವಾಗಲಿಲ್ಲ.

'ನುವ್ವೊಸ್ತಾನಂತೇ ನೆನೊಡ್ಡಂಟಾನಾ', 'ಅತಡು', 'ಸ್ಟಾಲಿನ್', 'ಕೃಷ್ಣ' ತೆಲುಗಿನಲ್ಲಿ ತ್ರಿಶಾ ನಟಿಸಿದ ಹಿಟ್ ಸಿನಿಮಾಗಳು. ತಮಿಳಿನಲ್ಲಿ 'ಸಾಮಿ', 'ಗಲ್ಲಿ', 'ತಿರುಪಾಚ್ಚಿ', 'ಮಂಕಾತ', '96', 'ಪೇಟ' ಸಿನಿಮಾಗಳಲ್ಲಿ ಚೆನ್ನೈ ಚೆಲುವೆ ನಟಿಸಿ ಗೆದ್ದರು. ಏಳೆಂಟು ವರ್ಷಗಳ ಹಿಂದೆ ಆಕೆಯ ಕ್ರೇಜ್ ಕಮ್ಮಿ ಆಗಿತ್ತು. ಅದೇ ಸಮಯದಲ್ಲಿ '96' ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದರು.
2015ರಲ್ಲಿ ವರುಣ್ ಮಣಿಯಣ್ ಎಂಬುವವರ ಜೊತೆ ತ್ರಿಶಾ ಮದುವೆ ನಿಶ್ಚಯವಾಗಿತ್ತು. ಆದರೆ ಕಾರಣಾಂತರಗಳಿಂದ ಅದು ಮುರಿದು ಬಿತ್ತು. ಬಳಿಕ ಆಕೆ ಮದುವೆ ಬಗ್ಗೆ ಯೋಚಿಸುವ ಗೋಜಿಗೆ ಹೋಗಲಿಲ್ಲ. ಕೆಲ ದಿನಗಳ ಹಿಂದೆ ನಟಿ ತ್ರಿಶಾ ಸಂದರ್ಶನವೊಂದರಲ್ಲಿ ತಮ್ಮ ವಿಚಿತ್ರ ಬಯಕೆಯ ಬಗ್ಗೆ ಮಾತನಾಡಿದ್ದರು. ಆ ವೀಡಿಯೋ ಈಗ ವೈರಲ್ ಆಗ್ತಿದೆ.
ನನಗೆ ಬಹಳ ದಿನಗಳಿಂದ ಒಂದು ಬಯಕೆ ಇದೆ. ಅದು ಏನಂದ್ರೆ ನಾನು ಒಂದು ದಿನ ಹುಡುಗನಂತೆ ಇರಬೇಕು. ಒಬ್ಬ ಪುರುಷನಂತೆ ಇರುವುದು ಹೇಗಿರುತ್ತದೆ. ಅವನ ದೇಹದ ಅಂಗಾಗದ ಕಲ್ಪನೆ, ಆತನ ಮಾನಸಿಕ ಸ್ಥಿತಿ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಆಸೆ ಇದೆ. ಈ ವಿಚಾರವನ್ನು ನಮ್ಮ ತಾಯಿ ಬಳಿ ಕೂಡ ಹೇಳುತ್ತಿರುತ್ತೇನೆ ಎಂದಿದ್ದರು.
ತ್ರಿಶಾ ವಿಚಿತ್ರ ಬಯಕೆಯ ಬಗ್ಗೆ ತಿಳಿದು ಅಭಿಮಾನಿಗಳು ಶಾಕ್ ಆಗಿದ್ದಾರೆ. ಸದ್ಯ ತಮಿಳು, ತೆಲುಗು ಮಾತ್ರವಲ್ಲದೇ ಮಲಯಾಳಂ ಸಿನಿಮಾಗಳಲ್ಲಿ ತ್ರಿಶಾ ಬಣ್ಣ ಹಚ್ಚಿದ್ದಾರೆ. ಮೋಹನ್ ಲಾಲ್ ನಟನೆಯ 'ರಾಮ್' ಚಿತ್ರದಲ್ಲಿ ಆಕೆ ಕಾಣಿಸಿಕೊಳ್ಳುತ್ತಿದ್ದಾರೆ. 'ಐಡೆಂಟಿಟಿ' ಎನ್ನುವ ಮತ್ತೊಂದು ಮಾಲಿವುಡ್ ಸಿನಿಮಾ ಕೂಡ ಆಕೆಯ ಕೈಯಲ್ಲಿದೆ.


Click it and Unblock the Notifications











