2023 Roundup: ಈ ವರ್ಷ ನಟ ದರ್ಶನ್ ಸುತ್ತ ಸುತ್ತಿಕೊಂಡ ವಿವಾದಗಳ ಪಟ್ಟಿ
ಹಳೇ ವರ್ಷವನ್ನು ಬೀಳ್ಕೊಟ್ಟು ಹೊಸ ವರ್ಷವನ್ನು ಸ್ವಾಗತಿಸುವ ಸಮಯ ಬರ್ತಿದೆ. ಸ್ಯಾಂಡಲ್‌ವುಡ್ 2023ರನ್ನು ಒಮ್ಮೆ ಹಿಂತಿರುಗಿ ನೋಡಿದರೆ ಸಾಕಷ್ಟು ವಿವಾದಗಳು ಕಣ್ಣಿಗೆ ರಾಚುತ್ತವೆ. ಅದರಲ್ಲೂ ನಟ ದರ್ಶನ್ ಸುತ್ತಾ ಸುತ್ತಿಕೊಂಡ ವಿವಾದಗಳ ಸಂಖ್ಯೆಯೇ ಜಾಸ್ತಿಯಿದೆ.
ಅದೇನೋ ಗೊತ್ತಿಲ್ಲ. ಪದೇ ಪದೆ ವಿವಾದಗಳಲ್ಲಿ ದರ್ಶನ್ ಹೆಸರು ತಳುಕು ಹಾಕಿಕೊಳ್ಳುತ್ತದೆ. ಈ ವರ್ಷವೂ ಹಲವು ವಿಚಾರಗಳಿಂದ ದರ್ಶನ್ ಸುದ್ದಿಯಾಗುವಂತಾಯಿತು. ನೇರವಾಗಿ ಪರೋಕ್ಷವಾಗಿ ವಿವಾದಗಳಲ್ಲಿ ಚಾಲೆಂಜಿಂಗ್ ಸ್ಟಾರ್ ಹೆಸರು ತೇಲಿ ಬಂದಿತ್ತು. ತಮ್ಮದಲ್ಲದ ತಪ್ಪಿಗೂ ದರ್ಶನ್ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದ್ದು ವಿಪರ್ಯಾಸ.

ತಮ್ಮ ನೇರ ನುಡಿಯಿಂದ ದರ್ಶನ್ ಸದಾ ಗಮನ ಸೆಳೆಯುತ್ತಾರೆ. ಇದೇ ಕೆಲವೊಮ್ಮೆ ಅವರಿಗೆ ಸಂಕಷ್ಟ ತಂದೊಡ್ಡಿದ್ದು ಇದೆ. ಫಾರ್ಮ್‌ಹೌಸ್ ಮೇಲೆ ನಡೆದ ದಾಳಿಯಿಂದ ಹಿಡಿದು ದರ್ಶನ್ ಮನೆ ನಾಯಿ ಮಹಿಳೆಯೊಬ್ಬರಿಗೆ ಕಚ್ಚಿದ ಪ್ರಕರಣದವರೆಗೆ ಹಲವು ವಿವಾದಗಳು ಈ ವರ್ಷ ಸದ್ದು ಮಾಡಿದವು.
ಮೇಘಾ ಶೆಟ್ಟಿ ಪೋಸ್ಟ್‌ಗೆ ದರ್ಶನ್ ಪತ್ನಿ ಗರಂ
ಈ ವರ್ಷ ನಟ ದರ್ಶನ್ ಹುಟ್ಟುಹಬ್ಬವನ್ನು ನಟಿಯರಾದ ಮೇಘಾ ಶೆಟ್ಟಿ, ಪವಿತ್ರಾ ಹಾಗೂ ಸೋನಲ್ ಆಚರಿಸಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸ್ವತಃ ನಟಿ ಮೇಘಾ ಶೆಟ್ಟಿ ವಿಡಿಯೋ ಹಂಚಿಕೊಂಡಿದ್ದರು. ಈ ಬಗ್ಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಗರಂ ಆಗಿದ್ದರು. ಅಷ್ಟೇ ಅಲ್ಲ ಬಹಿರಂಗವಾಗಿಯೇ ಮೇಘಾ ಶೆಟ್ಟಿಗೆ ತರಾಟೆ ತೆಗೆದುಕೊಂಡಿದ್ದರು. ಬಳಿಕ ವಿಜಯಲಕ್ಷ್ಮಿ, ಮೇಘಾ ಶೆಟ್ಟಿ ಇಬ್ಬರೂ ತಮ್ಮ ತಮ್ಮ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದರು. ಬಳಿಕ ಈ ವಿಚಾರ ತಣ್ಣಗಾಗಿತ್ತು.
ದರ್ಶನ್ ಫಾರ್ಮ್‌ಹೌಸ್ ಮೇಲೆ ದಾಳಿ
ಮೈಸೂರಿನ ಟಿ. ನರಸಿಪುರದ ಸಮೀಪ ನಟ ದರ್ಶನ್ ಫಾರ್ಮ್ ಹೌಸ್ ಹೊಂದಿದ್ದಾರೆ. ಆ ಫಾರ್ಮ್ ಹೌಸ್ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನಾಲ್ಕು ವಿಶಿಷ್ಟ ಪ್ರಭೇದದ ಬಾತುಕೋಳಿಗಳನ್ನು ವಶಕ್ಕೆ ಪಡೆದಿದ್ದರು. ಬಾರ್‌ಹೆಡಡ್ ಗೂಸ್ ಎಂದು ಕರೆಯುವ ಈ ಪಕ್ಷಿಗಳನ್ನು ಸಾಕುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಅಪರಾಧ ಆಗಿದ್ದು, ಈ ಕಾರಣಕ್ಕೆ ವನ್ಯ ಪಕ್ಷಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ದರ್ಶನ್ ಮನೆ ನಾಯಿ ಕಚ್ಚಿದ ಪ್ರಕರಣ
ನಟ ದರ್ಶನ್ ಮನೆಯ ನಾಯಿ, ಅಮಿತಾ ಜಿಂದಾಲ್ ಎಂಬ ಮಹಿಳೆಗೆ ಕಚ್ಚಿದ ಪ್ರಕರಣ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆಕೆ ನೀಡಿದ ದೂರಿನ ಅನ್ವಯ ಪ್ರಕರಣದಲ್ಲಿ A2 ಆಗಿದ್ದ ದರ್ಶನ್ ಪೊಲೀಸ್ ಠಾಣೆಗೆ ಹೋಗಿ ವಿಚಾರಣೆ ಎದುರಿಸುವಂತಾಯಿತು. ತಮ್ಮದಲ್ಲದ ತಪ್ಪಿಗೆ ದರ್ಶನ್ ಈ ವಿವಾದದಲ್ಲಿ ಸಿಲುಕಿಕೊಳ್ಳುವಂತಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಲು ಮುಂದಾಗಿದ್ದಾರೆ. ಆದರೆ ಪ್ರಕರಣದಲ್ಲಿ ದರ್ಶನ್ ಪಾತ್ರವಿರುವ ಬಗ್ಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಹಾಗಾಗಿ ದರ್ಶನ್ ಹೆಸರನ್ನು ಚಾರ್ಚ್‌ಶೀಟ್‌ನಿಂದ ಕೈ ಬಿಡಲು ನಿರ್ಧರಿಸಿದ್ದು ಇದರಿಂದ ರಿಲೀಫ್ ಸಿಕ್ಕಂತಾಗಿದೆ.
ದರ್ಶನ್ ಹುಲಿ ಉಗುರಿನ ಪೆಂಡೆಂಟ್ ವಿಚಾರ
ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಕಾರಣಕ್ಕೆ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು. ಇದರ ಬೆನ್ನಲ್ಲೇ ನಟ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಸಿನಿಮಾ ತಾರೆಯರು ಹುಲಿ ಉಗುರಿನ ಹೊಂದಿದ್ದಾರೆ ಎನ್ನುವ ಚರ್ಚೆ ಶುರುವಾಯಿತು. ಇದೇ ಕಾರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ನಟ ದರ್ಶನ್ ಮನೆ ಮೇಲೆಯಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಸಿಕ್ಕ ಪೆಂಡೆಂಟ್‌ಗಳು ಹುಲಿ ಒರಿಜಿನಲ್ ಹುಲಿ ಉಗುರಿನ ಪೆಂಡೆಂಟ್ ಅಲ್ಲ ಎಂದು ಹೇಳಲಾಗಿತ್ತು.
ಲಾಂಗ್ ಹಿಡಿದು ಪೋಸ್ ಆರೋಪ
ಜಯನಗರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಟ ದರ್ಶನ್ ಹಾಗೂ ಅಭಿಷೇಕ್ ಅಂಬರೀಶ್ ಭಾಗಿ ಆಗಿದ್ದರು. ಈ ವೇಳೆ ಅಭಿಮಾನಿಗಳು ಬೆಳ್ಳಿ ಕಿರೀಟ, ಕತ್ತಿ ನೀಡಿ ಹೂವಿನ ಹಾರ ಹಾಕಿ ಸನ್ಮಾನ ಮಾಡಿದ್ದರು. ಅಭಿಮಾನಿಗಳ ಕೊಟ್ಟ ಲಾಂಗ್ ರೀತಿಯ ಕತ್ತಿಯನ್ನು ದರ್ಶನ್ ಹಿಡಿದು ಪೋಸ್ ಕೊಟ್ಟಿದ್ದರು. ಸಾರ್ವಜನಿಕವಾಗಿ ಈ ರೀತಿ ಮಾರಕಾಸ್ತ್ರಗಳನ್ನು ಪ್ರದರ್ಶಿಸುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ವಿವಾದ ಉಂಟಾಗಿತ್ತು. ಆದರೆ ನಂತರ ಈ ವಿಚಾರ ತಣ್ಣಗಾಗಿತ್ತು.


Click it and Unblock the Notifications











