"ಯಾರೋ ಹತ್ತು ಜನ್ರನ್ನ ಹೊಡೆದು ಡಾನ್ ಆದವನಲ್ಲ..ನಾನು ಹೊಡೆದಿರೋ ಹತ್ತು ಜನಾನೂ ಡಾನ್‌ಗಳೇ"
'KGF' ರಾಕಿ ಭಾಯ್ ಆಗಿ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಗೊತ್ತೇಯಿದೆ. ರಾಕಿಂಗ್ ಸ್ಟಾರ್ ಕ್ರೇಜ್ ಎಂಥದ್ದು ಎಂದು ಬಿಡಿಸಿ ಹೇಳಬೇಕಾಗಿಲ್ಲ. ಅಕ್ಕ ಪಕ್ಕದ ಇಂಡಸ್ಟ್ರಿ ಸೂಪರ್ ಸ್ಟಾರ್‌ಗಳಿಗಿಂತ ಯಶ್ ಕ್ರೇಜ್ ಹೆಚ್ಚಾಗಿದೆ. ಅದು ಪದೇ ಪದೇ ಪ್ರೂವ್ ಆಗುತ್ತಲೇ ಇದೆ. ಅದಕ್ಕೆ ಮತ್ತೊಂದು ಸಾಕ್ಷಿ ಈಗ ಸಿಕ್ಕಿದೆ. 'KGF' ಸಿನಿಮಾ ಡೈಲಾಗ್ ಮತ್ತೊಮ್ಮೆ ನೆನಪಾಗ್ತಿದೆ.
ನಟ ಯಶ್‌ಗೆ ಇನ್‌ಸ್ಟಾಗ್ರಾಂನಲ್ಲಿ 1 ಕೋಟಿ 30 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ರಾಕಿಂಗ್ ಸ್ಟಾರ್ ಒಂದೇ ಒಂದು ಪೋಸ್ಟ್ ಕೆಲವೇ ಸೆಕೆಂಡ್‌ಗಳಲ್ಲಿ ವೈರಲ್ ಆಗುತ್ತೆ. ಲೈಕ್ಸ್, ಕಾಮೆಂಟ್ಸ್ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡುತ್ತೆ. ದೀಪಾವಳಿಗೆ ಫ್ಯಾಮಿಲಿ ಜೊತೆ ಪಟಾಕಿ ಹೊಡೆಯುತ್ತಿರುವ ಫೋಟೊವನ್ನು ಯಶ್ ಶೇರ್ ಮಾಡಿದ್ದರು. ಕೇವಲ 49 ನಿಮಿಷಗಳಲ್ಲಿ ಇದು 10 ಲಕ್ಷ ಲೈಕ್ಸ್ ಗಿಟ್ಟಿಸಿ ಧೂಳೆಬ್ಬಿಸಿತ್ತು. ಇದೀಗ ತಮಿಳು ನಟ ದಳಪತಿ ವಿಜಯ್ ಇನ್‌ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿದ್ದಾರೆ. ಬಂದ ಕೆಲವೇ ನಿಮಿಷಗಳಲ್ಲಿ ದಾಖಲೆ ಬರೆದಿದ್ದಾರೆ.

ಬಹಳ ಬೇಗ ಇನ್‌ಸ್ಟಾಗ್ರಾಂನಲ್ಲಿ 10 ಲಕ್ಷ ಲೈಕ್ಸ್ ಗಿಟ್ಟಿಸಿದ ಫೋಟೊ ಯಾವ್ದು ಎನ್ನುವ ಲಿಸ್ಟ್‌ನಲ್ಲಿ ಯಶ್ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಅಕ್ಟೋಬರ್ 25ರಂದು ಈ ಫೋಟೋವನ್ನು ಶೇರ್ ಮಾಡಿ ದೀಪಾವಳಿ ಶುಭಾಶಯ ಕೋರಿದ್ದರು. ಅಪಾರ್ಟ್‌ಮೆಂಟ್ ಮೇಲೆ ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳಾದ ಐರಾ, ಯಥರ್ವ್ ಜೊತೆ ಪಟಾಕಿ ಹೊಡೆಯುತ್ತಿರುವ ಕ್ಯಾಂಡಿಡ್ ಕ್ಲಿಕ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ಲೈಕ್ಸ್ ಗಿಟ್ಟಿಸಿತ್ತು.
ಯಶ್‌ಗೂ ಮುನ್ನ ತೆಲುಗು ನಟ ಅಲ್ಲು ಅರ್ಜುನ್ ಪೋಸ್ಟ್ ಮಾಡಿದ್ದ ಫೋಟೊವೊಂದು ಇದೇ ರೀತಿ ಸದ್ದು ಮಾಡಿತ್ತು. ಜಾಹೀರಾತುವೊಂದರ ಚಿತ್ರೀಕರಣದ ವೇಳೆ ಸಿಗಾರ್ ಹಿಡಿದು ಸ್ಟೈಲಿಶ್ ಸ್ಟಾರ್ ಖಡಕ್ ಪೋಸ್ ಕೊಟ್ಟಿದ್ದರು. ಈ ಫೋಟೋ 69 ನಿಮಿಷಗಳಲ್ಲಿ 10 ಲಕ್ಷ ಲೈಕ್ಸ್ ಗಿಟ್ಟಿಸಿಕೊಂಡಿತ್ತು. ಕೆಲವರು ಇದು 'ಪುಷ್ಪ'- 2 ಚಿತ್ರದಲ್ಲಿ ಅಲ್ಲು ಅರ್ಜುನ್ ಲುಕ್ ಎಂದು ಹೇಳಿದ್ದರು. ನಂತರ ಅದು ಜಾಹೀರಾತು ಚಿತ್ರೀಕರಣ ಅನ್ನೋದು ಗೊತ್ತಾಗಿತ್ತು.
ಇದೀಗ ದಳಪತಿ ವಿಜಯ್ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದಾರೆ. "ಹೆಲೋ ಸ್ನೇಹಿತರೇ, ಸ್ನೇಹಿತೆಯರೇ" ಎಂದು ಬರೆದು ಫೋಟೊವೊಂದನ್ನು ಶೇರ್ ಮಾಡಿದ್ದಾರೆ. ಈ ಫೋಟೊ ಪೋಸ್ಟ್ ಆದ 104 ನಿಮಿಷಗಳಲ್ಲಿ 10 ಲಕ್ಷ ಲೈಕ್ಸ್ ಪಡೆದುಕೊಂಡು ಸದ್ದು ಮಾಡಿದೆ. ಆದರೂ ಕೂಡ ಅತಿ ಬೇಗ 10 ಲಕ್ಷ ಲೈಕ್ಸ್ ಗಿಟ್ಟಿಸಿದ ಫೋಟೊ ಎನ್ನುವ ದಾಖಲೆ ಯಶ್ ಹೆಸರಿನಲ್ಲಿದೆ. ಆದರೆ ಇನ್‌ಸ್ಟಾಗೆ ಬಂದ 22 ಗಂಟೆಗಳಲ್ಲಿ 45 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಸಂಪಾದಿಸಿ ವಿಜಯ್ ಎಲ್ಲರ ಹುಬ್ಬೇರಿಸಿದ್ದಾರೆ. ಈ ವಿಚಾರದಲ್ಲಿ ಅವರೇ ಗ್ರೇಟ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಸದ್ಯ ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಚಿತ್ರದಲ್ಲಿ ದಳಪತಿ ವಿಜಯ್ ನಟಿಸ್ತಿದ್ದಾರೆ. ಇತ್ತೀಚೆಗೆ ಕಾಶ್ಮೀರದಲ್ಲಿ ಸಿನಿಮಾ ಚಿತ್ರೀಕರಣ ನಡೆದಿತ್ತು. ಅಲ್ಲೇ ಈ ಫೋಟೊವನ್ನು ಕ್ಲಿಕ್ಕಿಸಲಾಗಿತ್ತು. ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ನಲ್ಲಿ ಸಖತ್ ಸ್ಟೈಲಿಶ್ ಆಗಿ ದಳಪತಿ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಇನ್ನು ವಿಜಯ್ ಇನ್‌ಸ್ಟಾ ಪೇಜ್ ಅನ್ನು ಅವರ ಆಫೀಸ್ ನಿಭಾಯಿಸಲಿದೆ.
'KGF' ಚಾಪ್ಟರ್-2 ರಿಲೀಸ್ ಆಗಿ ವರ್ಷ ಕಳೆಯುತ್ತಾ ಬಂದರೂ ಯಶ್ ತಮ್ಮ ಮುಂದಿನ ಸಿನಿಮಾವನ್ನು ಘೋಷಿಸಿಲ್ಲ. ಯಶ್19 ಅಪ್‌ಡೇಟ್‌ಗಾಗಿ ಕಾದು ಕಾದು ಅಭಿಮಾನಿಗಳು ಸುಸ್ತಾಗಿದ್ದಾರೆ. ಚಾಪ್ಟರ್-2 ತೆರೆಕಂಡ ಏಪ್ರಿಲ್ 14ರಂದೇ ಮುಂದಿನ ಸಿನಿಮಾ ಘೋಷಣೆ ಆಗುತ್ತದೆ ಎನ್ನಲಾಗ್ತಿದೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತೆ ಎನ್ನು ಗುಸುಗುಸು ಕೇಳಿಬರ್ತಿದೆ. ಆದರೆ ಅಧಿಕೃತವಾಗಿ ಯಾವುದು ಪಕ್ಕಾ ಆಗಿಲ್ಲ. ಸಿನಿಮಾ ಕಥೆ ಏನು? ನಿರ್ದೇಶಕ ಯಾರು? ನಾಯಕಿ ಯಾರು? ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.


Click it and Unblock the Notifications











