ಸಿನಿಮಾ ಅಂದರೆ ಕೇವಲ ಕಲೆಯಲ್ಲ ಎಂದು ಹೇಳಿದ್ದೇಕೆ ಅಪ್ಪು ? ಹೊಸಬರಿಗಾಗಿ ಪುನೀತ್ ಕಂಡಿದ್ದ ಕನಸೇನಾಗಿತ್ತು..?
ಪುನೀತ್ ವ್ಯಕ್ತಿತ್ವವನ್ನ ಕೇವಲ ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ.ಯಾಕಂದ್ರೇ..ಪುನೀತ್ ಅವ್ರದ್ದು ನಿಲುಕದ ವ್ಯಕ್ತಿತ್ವ.ಬದುಕಿದ್ದಷ್ಟು ದಿನ ಪ್ರೀತಿಯನ್ನೇ ಹಂಚಿ.. ಅಭಿಮಾನದ ಹೂಗಳನ್ನೆಲ್ಲ ತನ್ನ ಹೃದಯದಲ್ಲಿ ತುಂಬಿಸಿಕೊಂಡು ಬಾರದ ಲೋಕಕ್ಕೆ ಹೋದ ಪರಮಾತ್ಮ ಪುನೀತ್, ನಮ್ಮೆಲ್ಲರನ್ನೂ ಅಗಲುವ ಮುನ್ನ ಕನಸೆಂಬ ಕುದುರೆಯ ಬೆನ್ನೇರಿದ್ದರು. ವಿಶ್ವವೇ ಕನ್ನಡ ಚಿತ್ರರಂಗವನ್ನು ಕೊಂಡಾಡಬೇಕೆಂದು ಕನಸನ್ನು ಕಂಡಿದ್ದರು. ಹೊಸ ಹೊಸ ಆಲೋಚನೆಯನ್ನು ಮಾಡಲು ಶುರು ಮಾಡಿದ್ದರು. ಹೊಸ ಪ್ರತಿಭೆಗಳನ್ನು ಗುರುತಿಸಿ ಅವರ ಬೆನ್ನೆಲುಬಾಗಿ ನಿಲ್ಲುವ ಮಹದಾಸೆಯನ್ನು ಹೊಂದಿದ್ದರು.
ಇನ್ನೂ ನಿಮಗೆ ಗೊತ್ತು. ಸಿನಿಮಾ ಕೇವಲ ಮನರಂಜನೆಗಷ್ಟೇ ಸೀಮಿತವಾಗಿಲ್ಲ. ಮನರಂಜನೆಯಾಚೆ ಚಿತ್ರರಂಗ ಬಹುದೊಡ್ಡ ಉದ್ಯಮ. ಇನ್ನೂ ದಶಕದ ಹಿಂದೆ ಹೋಲಿಸಿಕೊಂಡರೆ ಇವತ್ತು ಕನ್ನಡ ಚಿತ್ರರಂಗದ ಮಾರುಕಟ್ಟೆ ಇವತ್ತು ತುಂಬಾನೇ ವಿಸ್ತಾರವಾಗಿದೆ. ಪ್ರಯತ್ನ ಮತ್ತು ಪ್ರಯೋಗಗಳು ಹೆಚ್ಚೆಚ್ಚು ಆಗುತ್ತಿವೆ. ಆದರೆ ಈ ಪ್ರಯತ್ನಗಳಿಗೆ ಸರಿಯಾದ ಬೆಂಬಲ ಸಿಗುತ್ತಿಲ್ಲ. ಪ್ರೇಕ್ಷಕರಿಗೆ ಪ್ರಯೋಗಾತ್ಮಕ ಚಿತ್ರಗಳು ತಲುಪುತ್ತಿಲ್ಲ.

ಯಾಕೆಂದರೆ ಅನೇಕರು ಇಲ್ಲಿ ಪ್ರಯತ್ನ ಮಾಡುತ್ತಾರೆ ಆದರೆ ತಾವು ಮಾಡಿರುವ ಚಿತ್ರಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲ್ಲ. ಚಿತ್ರದ ಪ್ರಚಾರದ ಕಡೆ ಗಮನ ಕೊಡಲ್ಲ. ಪುನೀತ್ ರಾಜ್ ಕುಮಾರ್ ಇಲ್ಲಿಯೇ ನೆರವಾಗಲು ಬಯಸಿದ್ದರು. ಸಿನಿಮಾ ಅಂದರೆ ಕೇವಲ ಕಲೆಯಲ್ಲ ಅದು ವ್ಯಾಪಾರ ಕೂಡ ಹೌದು ಎಂದು ಅರಿತಿದ್ದ ಪುನೀತ್ ಕನ್ನಡ ಚಿತ್ರರಂಗದಲ್ಲಾಗುವ ವಿಭಿನ್ನ ವಿಶೇಷವಾದ ಪ್ರಯತ್ನ ಮತ್ತು ಪ್ರಯೋಗಗಳನ್ನು ಸರಿಯಾದ ರೀತಿಯಲ್ಲಿ ಪ್ರೇಕ್ಷಕರಿಗೆ ತಲುಪಿಸಬೇಕೆಂದುಕೊಂಡಿದ್ದರು. ಒಂದು ಚಿತ್ರವನ್ನು ಯಶಸ್ವಿಯಾಗಿ ಗೆಲ್ಲಿಸಿದರೆ ಆ ಸಿನಿಮಾ ಮತ್ತೊಂದು ಚಿತ್ರಕ್ಕೆ ಮುನ್ನುಡಿ ಬರೆಯುತ್ತೆ, ಕನ್ನಡ ಚಿತ್ರರಂಗದಲ್ಲಿ ಅನೇಕರಿಗೆ ಕೆಲಸ ಸಿಗುತ್ತೆ, ಅವರ ಬದುಕು ಹಸನಾಗುತ್ತೆ ಎನ್ನುವ ಆಲೋಚನೆಯನ್ನು ಮಾಡುತ್ತಿದ್ದರು ಪುನೀತ್. ಈ ಕಾರಣಕ್ಕೆ ಸಿನಿಮಾ ಬರೀ ಫ್ರೊಪೆಷನ್ ಆಗಬಾರದು, ಆ ಸಿನಿಮಾವನ್ನು ಸರಿಯಾದ ರೀತಿಯಲ್ಲಿ ಎಲ್ಲರಿಗೆ ತಲುಪಿಸಬೇಕೆನ್ನುವ ಪ್ಯಾಷನ್ ಕೂಡ ಇರಬೇಕು ಅದನ್ನು ರೂಡಿಸಿಕೊಳ್ಳಿಯೆಂಬ ಸಲಹೆಯನ್ನು ಕೂಡ ಅನೇಕರಿಗೆ ಪುನೀತ್ ರಾಜ್ ಕುಮಾರ್ ನೀಡುತ್ತಿದ್ದರು.
ಇನ್ನೂ ಇದು ಓಟಿಟಿ ಕಾಲ. ಸದ್ಯಕ್ಕೆ ಚಿತ್ರಮಂದಿರಕ್ಕೆ ಓಟಿಟಿಯೇ ಪ್ರಬಲ ಸ್ಫರ್ಧಿ. ಪುನೀತ್ ರಾಜ್ ಕುಮಾರ್ ಕೂಡ ಈ ಮಾತನ್ನು ಒಪ್ಪಿಕೊಂಡಿದ್ದರು. ಕೊರೊನಾ ಕಾಲದಲ್ಲಿ ಓಟಿಟಿಗೆ ಹೆಚ್ಚಿದ ಬೇಡಿಕೆ ಕಂಡು ನಿಬ್ಬೇರಗಾಗಿದ್ದರು. ಯಾವ ಸ್ಟಾರ್‌ಗಳಿರದ ಕಥೆಯಾಧಾರಿತ ಚಿತ್ರವನ್ನು ಚಿತ್ರಮಂದಿರದಲ್ಲಿ ತೆರೆಗೆ ತಂದರೆ ಅದು ಜನರಿಗೆ ತಲುಪುವುದಿಲ್ಲ ಎನ್ನುವ ಸತ್ಯವನ್ನು ಪುನೀತ್ ಅರಿತಿದ್ದರು. ಹೀಗಾಗಿಯೇ ಕವಲು ದಾರಿಯನ್ನ ಹೊರ್ತು ಪಡಿಸಿ ಪುನೀತ್ ತಾವು ಹಿಂದೆ ನಿರ್ಮಿಸಿದ್ದ ಲಾ .. ಫ್ರೆಂಚ್ ಬಿರಿಯಾನಿ .. ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರವನ್ನ ನೇರವಾಗಿಯೇ ಓಟಿಟಿಯಲ್ಲಿಯೇ ಬಿಡುಗಡೆ ಮಾಡಿದ್ದರು. ಹೊಸ ಕಥೆಯನ್ನು ಹೆಣೆದು ನಿರ್ಮಾಪಕರಿಗೆ ಹುಡುಕಾಡುತ್ತಿದ್ದ ಪ್ರತಿಭಾವಂತ ನಿರ್ದೇಶಕರ ಪಾಲಿಗೆ ಆಶಾಕಿರಣವಾಗಿದ್ದರು.

ಅಂದ್ಹಾಗೇ ಈ ಎಲ್ಲ ವಿಚಾರಗಳನ್ನು ಅಪ್ಪು ಅಗಲಿದ ಬಳಿಕ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರ ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗುವ ಮುನ್ನ ಆ ಚಿತ್ರದ ನಿರ್ದೇಶಕ ಸತ್ಯಪ್ರಕಾಶ್ ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡಿದ್ದರು. ತಮ್ಮ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಅವರು ನೀಡಿದ್ದ ಸಹಕಾರವನ್ನು ನೆನೆದು ಭಾವುಕರಾಗಿದ್ದರು. ಒಟ್ನಲ್ಲಿ ಹತ್ತು ಹಲವು ಆಲೋಚನೆಯನ್ನ ಮಾಡ್ತಿದ್ದ, ಕನ್ನಡ ಚಿತ್ರರಂಗದ ಶ್ರೇಯೋಭಿವೃದ್ದೀಗೆ ಅನೇಕ ಯೋಚನೆಯನ್ನೂ ಮಾಡಿದ್ದ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿರ್ಗಮನ ಕನ್ನಡ ಚಿತ್ರರಂಗಕ್ಕೆ ಯಾವತ್ತಿದ್ರೂ ತುಂಬಲಾರದ ನಷ್ಟವೇ.


Click it and Unblock the Notifications











