twitter
    For Quick Alerts
    ALLOW NOTIFICATIONS  
    For Daily Alerts

    ಫಿಲ್ಮಿಬೀಟ್ ಕನ್ನಡ ಟಾಪ್ 10 ಕನ್ನಡ ಚಿತ್ರಗಳು ಯಾವುದು? ಮತ್ತು ಯಾಕೆ?

    By ರವೀಂದ್ರ ಕೊಟಕಿ
    |

    ಯಾವುದೇ ಸಿನಿಮಾರಂಗವನ್ನು ತೆಗೆದುಕೊಂಡರು ಅಲ್ಲಿ ಕೆಲವೊಂದು ಮಹತ್ವದ ಚಿತ್ರಗಳು ಅಂತ ಗುರುತಿಸುವ ಕೆಲಸ ಆಗಾಗ ನಡೆಯುತ್ತಿರುತ್ತದೆ. ಕೆಲವು ಅತಿಯಾಗಿ ಕಾಡುವ ಚಿತ್ರಗಳು, ಕೆಲವು ಸಾರ್ವತ್ರಿಕವಾಗಿ ದಾಖಲೆ ನಿರ್ಮಿಸಿದ ಚಿತ್ರಗಳು, ಕೆಲವು ಅಪರೂಪದ ಅಣಿಮುತ್ತುಗಳು ಮತ್ತು ಕೆಲವು ಅತ್ಯಂತ ಕೆಟ್ಟ ಚಿತ್ರಗಳು ಹೀಗೆ ಒಟ್ಟಾರೆ ಸಿನಿಮಾರಂಗವನ್ನು ವಿಶ್ಲೇಷಣೆ ಮಾಡುವ ಪ್ರಕ್ರಿಯೆ ಆಗಾಗ ನಡೆಯುತ್ತಲೇ ಇರುತ್ತದೆ. ಇದೇ ನಿಟ್ಟಿನಲ್ಲಿ ಕನ್ನಡ ಸಿನಿಮಾರಂಗವನ್ನು ಸಾಮಾಜಿಕ, ವಾಣಿಜ್ಯ ಮತ್ತು ಜನಪ್ರಿಯತೆಯನ್ನು ಆಧರಿಸಿ ಕನ್ನಡಿಗರ ಮನದಲ್ಲಿ ಸ್ಥಾನ ಪಡೆದಿರುವ ಅಪರೂಪದ ಹತ್ತು ಚಿತ್ರಗಳ ಆಯ್ಕೆ ಕನ್ನಡ ಫಿಲ್ಮಿಬೀಟ್ ಮಾಡಿದೆ.

    2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ) ಸಾಮಾಜಿಕ ಜಾಲ ತಾಣಗಳಲ್ಲಿ ಒನ್ಇಂಡಿಯಾ ಕನ್ನಡ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸುತ್ತಾ ಬಂದಿದೆ. ಆಡಿಯೋ ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡ ಮೇಲೆ ಸಿನಿಮಾ ಸುದ್ದಿ, ಸಮಾಚಾರ, ಸಂದರ್ಶನಗಳಿಗಾಗಿ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಕೂಡಾ ಹೊಂದಿದೆ.

    ಅಂಬರೀಶ್ ನಟಿಸಬೇಕಿದ್ದ 'ಬಂಧನ' ಚಿತ್ರ ವಿಷ್ಣುವರ್ಧನ್ ಪಾಲಾಗಿದ್ದು ಹೇಗೆ?ಅಂಬರೀಶ್ ನಟಿಸಬೇಕಿದ್ದ 'ಬಂಧನ' ಚಿತ್ರ ವಿಷ್ಣುವರ್ಧನ್ ಪಾಲಾಗಿದ್ದು ಹೇಗೆ?

    ಒನ್ಇಂಡಿಯಾದ ಸಿನಿಮಾ ತಾಣ ಫಿಲ್ಮಿಬೀಟ್ ಹೆಸರಿನಲ್ಲಿ ಜನಪ್ರಿಯವಾಗುತ್ತಾ ಎಂದಿನಂತೆ ಕನ್ನಡ ಸಿನಿ ಸಮಾಚಾರಗಳು, ಚಲನಚಿತ್ರ ವಿಮರ್ಶೆಗಳು, ಚಿತ್ರರಂಗದ ಆಗುಹೋಗುಗಳು, ಗಾಸಿಪ್ , ಹಗರಣಗಳು, ಪ್ರಕರಣಗಳು, ಹುಟ್ಟುಹಬ್ಬಗಳು, ಸಂದರ್ಶನಗಳು ಹಾಗೂ ನೀವು ತಪ್ಪದೆ ನೋಡುವ ಕಿರುತೆರೆ, ಒಟಿಟಿಯತ್ತ ಇಣುಕು ನೋಟ ನೀಡುತ್ತಿದೆ.

    'ಖಳನಾಯಕ' ದರ್ಶನ್ ನಾಯಕನಾಗಿ ಬೆಳೆದ 'ಚಾಲೆಂಜಿಂಗ್' ಕಥೆ'ಖಳನಾಯಕ' ದರ್ಶನ್ ನಾಯಕನಾಗಿ ಬೆಳೆದ 'ಚಾಲೆಂಜಿಂಗ್' ಕಥೆ

    ನಮ್ಮ ಸುದ್ದಿ ಸದ್ದುಗಳನ್ನು ಓದಿ ನಮ್ಮ ಬೆನ್ನು ತಟ್ಟಿದ್ದೀರಿ, ತಪ್ಪು ಕಂಡು ಬಂದಾಗ ಬೆನ್ನಿಗೆ ಗುದ್ದಿದ್ದೀರಿ. ಓದುಗರ ಅಭಿಮಾನಕ್ಕೆ, ಮೆಚ್ಚುಗೆ ವ್ಯಕ್ತಪಡಿಸಿದ ಕಲಾವಿದರಿಗೆ, ನಿರ್ಮಾಪಕರಿಗೆ, ನಿರ್ದೇಶಕರಿಗೆ, ತಂತ್ರಜ್ಞರಿಗೆ, ಛಾಯಾಚಿತ್ರಕಾರರಿಗೆ, ಸಾರ್ವಜನಿಕ ಸಂಪರ್ಕ ವೀರರಿಗೆ ನಮ್ಮ ವೆಬ್ ಬಳಗದ ವತಿಯಿಂದ ಕೋಟಿಗಟ್ಟಲೆ ಧನ್ಯವಾದಗಳು.

    1. ಬೇಡರ ಕಣ್ಣಪ್ಪ

    1. ಬೇಡರ ಕಣ್ಣಪ್ಪ

    ಶಿವಭಕ್ತನಾದ ಕಣ್ಣಪ್ಪನ ಜೀವನ ಚರಿತ್ರೆ ಆಧಾರಿತ ಬೇಡರ ಕಣ್ಣಪ್ಪ 1954 ರಲ್ಲಿ ತೆರೆಕಂಡಿತು. ಎಚ್ ಎಲ್ ಎನ್ ಸಿಂಹ ನಿರ್ದೇಶನದ ಈ ಚಿತ್ರದ ಮೂಲಕ ರಾಜ್ ಕುಮಾರ್ ಅಂತ ಅಗಾಧವಾದ ದೈತ್ಯ ಪ್ರತಿಭೆಯ ಅನಾವರಣವಾಯಿತು. ಪಂಡರಿಬಾಯಿ, ರಾಜಸುಲೋಚನ, ನರಸಿಂಹರಾಜು, ಜಿವಿ ಅಯ್ಯರ್ ಹೆಚ್ ಆರ್ ಶಾಸ್ತ್ರಿ, ಸಂಧ್ಯ ಅಂತಹ ಕಲಾವಿದರು ನಟಿಸಿದ ಈ ಚಿತ್ರಕ್ಕೆ ಆರ್ ಸುದರ್ಶನಂ ಅವರ ಸಂಗೀತವಿದ್ದು, ಗುಬ್ಬಿ ವೀರಣ್ಣನವರು ಈ ಚಿತ್ರವನ್ನು ನಿರ್ಮಿಸಿದ್ದರು. 'ಶಿವಪ್ಪ ಕಾಯೋ ತಂದೆ...' ಅಂದಿಗೂ ಇಂದಿಗೂ ಎಂದೆಂದಿಗೂ ಇದು ಅತ್ಯಂತ ಜನಪ್ರಿಯ ಭಕ್ತಿ ಗಾಯನ. ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಈ ಚಿತ್ರ ಅತ್ಯಂತ ಜನಪ್ರಿಯ ಚಿತ್ರವಾಗಿ ಕರ್ನಾಟಕದ ಹೊರಗೂ ಹೆಚ್ಚಿನ ಹೆಸರನ್ನು ಮಾಡಿದ್ದು, ತೆಲುಗಿಗೆ ಈ ಚಿತ್ರವನ್ನು ಡಬ್ ಮಾಡಿದಾಗ ಅಲ್ಲೂ ಕೂಡ ಬಹಳ ಯಶಸ್ಸನ್ನು ಪಡೆಯಿತು. ಕನ್ನಡದಲ್ಲಿ ಪೌರಾಣಿಕ, ಭಕ್ತಿ ಆಧಾರಿತ ಚಿತ್ರಗಳಿಗೆ ಇದು ಹೊಸದೊಂದು ಪರಿಭಾಷೆ ಹುಟ್ಟುಹಾಕಿದ ಚಿತ್ರ.

    2. ಬಂಗಾರದ ಮನುಷ್ಯ

    2. ಬಂಗಾರದ ಮನುಷ್ಯ

    'ಬಂಗಾರದ ಮನುಷ್ಯ' ಚಿತ್ರದ ಬಗ್ಗೆ ಮಾತನಾಡದೆ ಕನ್ನಡ ಸಿನಿಮಾರಂಗ ಅಪೂರ್ಣ. ಎರಡು ವರ್ಷಕ್ಕೂ ಹೆಚ್ಚಿನ ಕಾಲ ಪ್ರದರ್ಶನ ಕಂಡ ಕನ್ನಡದ ಏಕೈಕ ಚಿತ್ರವಿದು. ಎಸ್ ಸಿದ್ದಲಿಂಗಯ್ಯನವರು ನಿರ್ದೇಶನದ ಈ ಚಿತ್ರವು 1972 ರಲ್ಲಿ ತೆರೆಕಂಡಿತು. ಟಿ.ಕೆ. ರಾಮರಾವ್ ಅವರ 'ಬಂಗಾರದ ಮನುಷ್ಯ' ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ರಾಜ್ ಕುಮಾರ್, ಭಾರತಿ, ವಜ್ರಮುನಿ, ದ್ವಾರಕೀಶ್, ಅದವಾನಿ ಲಕ್ಷ್ಮೀದೇವಿ ಮುಂತಾದವರ ತಾರಾಬಳಗವಿದೆ. ಈ ಚಿತ್ರದ ಎಲ್ಲಾ ಹಾಡುಗಳು ಇಂದಿಗೂ ಕೂಡ ಅತ್ಯಂತ ಜನಪ್ರಿಯವಾಗಿದೆ. ಜಿ.ಕೆ. ವೆಂಕಟೇಶ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ (ಬಾಳ ಬಂಗಾರ ನೀನು, ನಗು ನಗುತಾ ನಲಿ,ಆಹಾ ಮೈಸೂರ ಮಲ್ಲಿಗೆ, ಆಗದು ಎಂದು ಕೈ ಕಟ್ಟಿ ಕುಳಿತರೆ) ಹಾಡುಗಳನ್ನು ಕನ್ನಡಿಗರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಳ್ಳಿಗಾಡು ತೊರೆದು ಜೀವನೋಪಾಯಕ್ಕಾಗಿ ಪಟ್ಟಣ ಮತ್ತು ನಗರಗಳಿಗೆ ಸೇರಿದ್ದ ಹಳ್ಳಿಗಾಡಿನ ತರುಣರು ರಾಜ್ ಕುಮಾರ್ ಅವರ ರಾಜೀವ್ ಪಾತ್ರದಿಂದ ಪ್ರಭಾವಿತರಾಗಿ ಮತ್ತೆ ಹಳ್ಳಿಗಳ ಕಡೆಗೆ ಮುಖಮಾಡಿ ಬದುಕನ್ನು ರೂಪಿಸಿಕೊಂಡರು. ಪಟ್ಟಣ ಸೇರಿ ಬದುಕಲಾಗದೆ, ಹಳ್ಳಿಗೆ ಮರಳಲಾಗದೆ ಪರಿತಪಿಸುತ್ತಿದ್ದ ಅನೇಕ ಯುವಕರ ಜೀವನವನ್ನು ಬಂಗಾರವಾಗಿ ಸಿದ ಹೆಗ್ಗಳಿಕೆ ಈ ಚಿತ್ರದ್ದು.

    3. ರಣಧೀರ ಕಂಠೀರವ

    3. ರಣಧೀರ ಕಂಠೀರವ

    ರಣಧೀರ ಕಂಠೀರವ ಹಲವು ಕಾರಣಗಳಿಂದ ಕನ್ನಡದ ಅತ್ಯಂತ ಪ್ರಮುಖ ಚಿತ್ರಗಳಲ್ಲಿ ಒಂದಾಗಿದೆ. ಇದು ಕನ್ನಡದ ನೂರನೆಯ ವಾಕ್ಚಿತ್ರವಾಗಿದ್ದು, ಕನ್ನಡದ ಮೊದಲ ಐತಿಹಾಸಿಕ ಚಿತ್ರವೆಂಬ ಹೆಗ್ಗಳಿಕೆಯನ್ನು ಕೂಡ ಹೊಂದಿದೆ. 'ಕಂಠೀರವ ನರಸಿಂಹರಾಜ ಒಡೆಯರ್-1(1638-1659) ಅವರ ಜೀವನ ಆಧಾರಿತ ಚಿತ್ರ ಇದಾಗಿದೆ. ಇಂದು ಎಲ್ಲಾ ಕಡೆ ಬಯೋಪಿಕ್ ಗಳ ಬಗ್ಗೆ ಮಾತನಾಡುತ್ತಿದ್ದಾರೆ ಆದರೆ ನೆನಪಿಡಿ ಮೊಟ್ಟಮೊದಲ ಬಯೋಪಿಕ್ 1960 ರಲ್ಲಿ 'ರಣಧೀರ ಕಂಠೀರವ'ಮೂಲಕ ಕನ್ನಡ ಸಿನಿಮಾ ರಂಗವೇ ಅಡಿಪಾಯ ಹಾಕಿದ್ದು.ಈ ಚಿತ್ರದ ಮತ್ತೊಂದು ವಿಶೇಷತೆಯೆಂದರೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕನ್ನಡ ಚಲನಚಿತ್ರರಂಗವನ್ನು ಉಳಿಸುವ ನಿಟ್ಟಿನಲ್ಲಿ ರಾಜ್ ಕುಮಾರ್, ಬಾಲಕೃಷ್ಣ ನರಸಿಂಹರಾಜು, ಜಿವಿ ಅಯ್ಯರ್ ಸೇರಿದಂತೆ ಕನ್ನಡ ಸಿನಿಮಾರಂಗ ಕಲಾವಿದರು'ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ' ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದು.ಆದರೆ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಕಲಾವಿದರು ಆರ್ಥಿಕವಾಗಿ ಕೈಸುಟ್ಟುಕೊಂಡರು. ಇದಕ್ಕೆ ಮುಖ್ಯ ಕಾರಣ ಯಾವುದೇ ವಿತರಕರು, ವಿತರಣೆ ಮಾಡಲು ಮುಂದೆ ಬರದೆ ಹೋದದ್ದು. ಆದರೆ ಇದನ್ನು 'ಭಾರತ್' ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದಾಗ ಅಂದಿನ ಕಾಲಕ್ಕೆ ಅತಿ ಹೆಚ್ಚಿನ ಹಣ ಗಳಿಸಿತು.

    4. ಭೂತಯ್ಯನ ಮಗ ಅಯ್ಯು

    4. ಭೂತಯ್ಯನ ಮಗ ಅಯ್ಯು

    ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಾದಂಬರಿ ಆಧಾರಿತ ಎಸ್. ಸಿದ್ದಲಿಂಗಯ್ಯನವರ ನಿರ್ದೇಶನದಲ್ಲಿ ಮೂಡಿ ಬಂದ ಶ್ರೀಮಂತ ಮತ್ತು ವರ್ಗ ವ್ಯವಸ್ಥೆಯ ದಬ್ಬಾಳಿಕೆಯ ಹಿನ್ನೆಲೆಯ ಕಥಾವಸ್ತುವಿನ 'ಭೂತಯ್ಯನ ಮಗ ಅಯ್ಯು' ಕನ್ನಡದ ಅವಿಸ್ಮರಣೀಯ ಸಿನಿಮಾಗಳಲ್ಲಿ ಒಂದು. ವಿಷ್ಣುವರ್ಧನ್ ,ಲೋಕೇಶ್, ಎಂ.ಪಿ.ಶಂಕರ್ ಮುಂತಾದ ಕಲಾವಿದರು ಅಭಿನಯಿಸಿದ ಈ ಚಿತ್ರವನ್ನು ವೀರಸ್ವಾಮಿ, ಚಂದೂಲಾಲ್ ಜೈನ್ ಸಿದ್ದಲಿಂಗಯ್ಯ ಮತ್ತು ವರದಪ್ಪನವರು ಒಟ್ಟಿಗೆ ಕೈಜೋಡಿಸಿ ನಿರ್ಮಾಣ ಮಾಡಿದರು. ಭೂತಯ್ಯ( ಎಂ.ಪಿ. ಶಂಕರ್) ಅಯ್ಯು(ಲೋಕೇಶ್) ಮತ್ತು ಗುಲ್ಲ (ವಿಷ್ಣುವರ್ಧನ್) ಪಾತ್ರಗಳ ಮಧ್ಯೆ ಹೆಣೆಯಲಾದ ಒಂದು ಅದ್ಭುತವಾದ ಕ್ಲಾಸಿಕಲ್ ಸಿನಿಮಾ. ಈ ಸಿನಿಮಾ ಬಗ್ಗೆ ಖ್ಯಾತ ನಟ ಕಮಲಹಾಸನ್ ಹೇಳಿದ ಮಾತು ' ಹಾಲಿವುಡ್ ನಿರ್ದೇಶಕರು ಆಲೋಚಿಸಬಹುದಾದ ಶ್ರೇಣಿಯಲ್ಲಿ ಮೂಡಿ ಬಂದಿರುವ ಭಾರತ ಸಿನಿಮಾರಂಗದ ಒಂದು ಅದ್ಭುತ ದೃಶ್ಯ ಕಾವ್ಯ'. 1974ರಲ್ಲಿ ತೆರೆಕಂಡ ಈ ಚಿತ್ರ ಬಾಕ್ಸಾಫೀಸನ್ನು ಕೂಡ ಕೊಳ್ಳೆ ಹೊಡೆಯಿತು.

    5. ಬಂಧನ

    5. ಬಂಧನ

    ಒಂದು ಸೈಡ್ ಲವ್, ಭಗ್ನಪ್ರೇಮಿ, ಟ್ರಾಜಿಡಿ ಎಂಡಿಂಗ್ ಸಿನಿಮಾಗಳು ಅಂತ ನಾವು ನೋಡಿದರೆ ಅಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಇಂದಿಗೂ ಕೂಡ ಬಂಧನ. ಉಷಾ ನವರತ್ನರಾಮ್ ರವರ ಕಾದಂಬರಿ ಆಧಾರಿತ ಈ ಚಿತ್ರವನ್ನು ಎಸ್. ವಿ.ರಾಜೇಂದ್ರ ಸಿಂಗ್ ಬಾಬು ಅವರು ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯಾದ ರೋಹಿಣಿ ಪಿಚ್ಚರ್ಸ್ ಅಡಿಯಲ್ಲಿ ನಿರ್ಮಿಸಿ, ನಿರ್ದೇಶಿಸಿದರು. ವಿಷ್ಣುವರ್ಧನ್, ಸುಹಾಸಿನಿ, ಜೈಜಗದೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಈ ಚಿತ್ರ ಒಂದು ವರ್ಷಕ್ಕೂ ಹೆಚ್ಚಿನ ಕಾಲ ಪ್ರದರ್ಶನ ಕಂಡಿತು. ಎಂ. ರಂಗರಾವ್ ಅವರ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿನ ಪ್ರತಿಯೊಂದು ಹಾಡು (ಬಣ್ಣ ನನ್ನ ಒಲವಿನ ಬಣ್ಣ, ಈ ಬಂಧನ, ಪ್ರೇಮದ ಕಾದಂಬರಿ, ನೂರೊಂದು ನೆನಪು) ಇಂದಿಗೂ ಅತ್ಯಂತ ಜನಪ್ರಿಯ ಗೀತೆಗಳಾಗಿ ಕನ್ನಡಗರ ಮನಗೆದ್ದಿವೆ. 1984 ರಲ್ಲಿ ತೆರೆಕಂಡ ಈ ಚಿತ್ರ ಆ ಕಾಲದ ಹೆಣ್ಣುಮಕ್ಕಳ ಮೋಸ್ಟ ಫೇವರೆಟ್ ಸಿನಿಮಾ.

    6. ಚಂದವಳ್ಳಿಯ ತೋಟ

    6. ಚಂದವಳ್ಳಿಯ ತೋಟ

    ತ.ರಾ. ಸುಬ್ಬರಾಯರ 'ಚಂದವಳ್ಳಿಯ ತೋಟ"ಕಾದಂಬರಿ ಆಧಾರಿತ ಅದೇ ಹೆಸರಿನ ಚಿತ್ರ. 1964 ರಲ್ಲಿ ಬಿಡುಗಡೆಯಾದ ಟಿ.ವಿ. ಸಿಂಗ್ ಠಾಕೂರ್ ನಿರ್ದೇಶನದ ಈ ಚಿತ್ರಭಾರತದ ಹಳ್ಳಿಗಾಡಿನ ಜೀವನ ವ್ಯವಸ್ಥೆ ಬಡತನ ಮತ್ತು ಅದರ ವಿರುದ್ಧದ ಹೋರಾಟದ ಹಿನ್ನಲೆಯನ್ನು ಗಾಂಧಿ ತತ್ವಗಳ ಜೊತೆಗೂಡಿಸಿ ರೂಪಿಸಿದ ಚಿತ್ರ. ರಾಜ್ ಕುಮಾರ್, ಉದಯಕುಮಾರ್, ಜಯಂತಿ, ಬಾಲಣ್ಣ, ಅಶ್ವಥ್ ಮುಖ್ಯ ತಾರಬಳಗದಲ್ಲಿ ಅಭಿನಯಿಸಿದ್ದಾರೆ. ಚಂದವಳ್ಳಿ ಎಂಬ ಊರಿನ ಅವಿಭಕ್ತ ಕುಟುಂಬವೊಂದರ ವಿಘಟನೆಯ ಕಥಾ ಹಿನ್ನೆಲೆಯೊಂದಿಗೆ, ಕುಟುಂಬದಲ್ಲಿನ ಕೆಲವರ ಸ್ವಾರ್ಥ ಹೇಗೆ ಒಂದು ಕುಟುಂಬವನ್ನು ಮತ್ತೆ ಕೆಲವು ಜನರ ಸ್ವಾರ್ಥ ಒಂದು ಇಡೀ ಹಳ್ಳಿಯನ್ನು ನಾಶಮಾಡುತ್ತದೆ ಅಂತ 'ಚಂದವಳ್ಳಿಯ ತೋಟ' ಮನಮುಟ್ಟುವಂತೆ ನಿರೂಪಿಸಿದೆ. ಈ ಚಿತ್ರ ಕಾಲದ ಗಡಿಯನ್ನು ದಾಟಿ ಇಂದಿಗೂ ಕೂಡ ಪ್ರಸ್ತುತವೆನ್ನಿಸಲು ಮುಖ್ಯಕಾರಣ ಜನರಲ್ಲಿನ ಸ್ವಾರ್ಥದ ಮನೋಭಾವ ಕುಟುಂಬ ಮತ್ತು ವ್ಯವಸ್ಥೆಗಳನ್ನು ಈಗಎಂದಿಗಿಂತಲೂ ಹೆಚ್ಚು ನಾಶ ಮಾಡುತ್ತಿರುವುದು.

    7. ಜೀವನ ಚೈತ್ರ

    7. ಜೀವನ ಚೈತ್ರ

    ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರ ಕಾದಂಬರಿ ಆಧಾರಿತ, ದೊರೈ- ಭಗವಾನ್ ನಿರ್ದೇಶನದ ರಾಜ್ ಕುಮಾರ್, ಮಾಧವಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಈ ಚಿತ್ರವು 1992 ರಲ್ಲಿ ತೆರೆಕಂಡಿತು. ಸಿನಿಮಾ ಸಾಧಾರಣ ಪ್ರೇಕ್ಷಕ ವರ್ಗದ ಮೇಲೆ ಸಿನಿಮಾ ಮಾಡುವ ಪ್ರಭಾವ ಎಂತಹದು ಅಂತ ಹೇಳಬೇಕಾದರೆ ಅದಕ್ಕೊಂದು ಕ್ಲಾಸಿಕಲ್ ಎಕ್ಸಾಂಪಲ್ ಜೀವನ ಚೈತ್ರ. ಅದು ನಿತ್ಯ ಪೂಜೆ ಪುನಸ್ಕಾರ, ದೈವ ಪ್ರಾರ್ಥನೆ, ಅನ್ನದಾನ ಗಳಿಂದ ತುಂಬಿರುವ ಮನೆ. ಆ ಮನೆಯ ಯಜಮಾನತಿ, ತನ್ನ ನೆಚ್ಚಿನ ಮಡದಿ ಮೀನಾಕ್ಷಿಯ ಅಗಲಿಕೆಯಿಂದ ತೀರ್ಥಯಾತ್ರೆಗೆ ಜೋಡಿದಾರ ವಿಶ್ವನಾಥ ಹೊರಟು ಹೋಗುತ್ತಾರೆ. ಕೆಲವು ವರ್ಷ ಅವರು ಹಿಂತಿರುಗದೆ ಹೋದಾಗ ದೇವಾಲಯದಂತಹ ಮನೆಯನ್ನು ವಯಸ್ಸಿಗೆ ಬಂದ ಮೂವರು ಮಕ್ಕಳು ಮತ್ತು ಅವರ ಮಡದಿಯರು ಸೇರಿ ಮದ್ಯಪಾನದ ಅಂಗಡಿಯಾಗಿ ಪರಿವರ್ತಿಸುತ್ತಾರೆ. ಕೆಲವು ವರ್ಷಗಳ ನಂತರ ಮನೆಗೆ ಬಂದು ನೋಡಿದಾಗ ಅಪ್ರಯೋಜಕ ಮಕ್ಕಳು ಕೈಯಲ್ಲಿ ಸಿಲುಕಿ ಮನೆ ಕುಡುಕರ ಅಡ್ಡೆಯಾಗಿ ಪರಿವರ್ತನೆಯಾಗಿದೆ ಎಂಬುವುದನ್ನು ಮನೆಯ ಯಜಮಾನ ಕಣ್ಣಾರೆ ಕಂಡು ದಿಗ್ಬ್ರಾಂತಿ ಗೆ ಒಳಗಾಗುತ್ತಾನೆ. ಮದ್ಯ ಮಾರಾಟ ಮತ್ತು ಇತರ ಅನಿಷ್ಟ ಪದ್ಧತಿಗಳ ವಿರುದ್ಧ ಸಮರ ಸಾರಿ ತನ್ನ ಮಕ್ಕಳನ್ನು ಸರಿದಾರಿಗೆ ತರುವುದರ ಜೊತೆಗೆ ಹಳ್ಳಿಗಾಡಿನಲ್ಲಿ ಮದ್ಯಪಾನದ ವಿರುದ್ಧ ಬೃಹತ್ ಹೋರಾಟವನ್ನು ಮಾಡಿ ಮದ್ಯಪಾನದ ನಿಷೇಧವನ್ನು ಜಾರಿಗೆ ತರುತ್ತಾರೆ. ಜೀವನ ಚೈತ್ರ ಚಿತ್ರದಿಂದ ಪ್ರೇರಣೆಗೊಂಡು ಅನೇಕ ಹಳ್ಳಿಗಳಲ್ಲಿ ಮಹಿಳೆಯರು ಮದ್ಯಪಾನದ ವಿರುದ್ಧ ಹೋರಾಟವನ್ನು ಮಾಡಿ ತಮ್ಮ ಹಳ್ಳಿಗಳಲ್ಲಿ ಮದ್ಯ ನಿಷೇಧವನ್ನು ಕೂಡ ಮಾಡುವುದರಲ್ಲಿ ಯಶಸ್ವಿಯಾದರು. ರಾಜ್ ಕುಮಾರ್ ಅವರಿಗೆ 'ನಾದಮಯ..' ಶ್ರೇಷ್ಠ ಹಿನ್ನೆಲೆ ಗಾಯಕ ರಾಷ್ಟ್ರೀಯ ಪ್ರಶಸ್ತಿಯನ್ನೂ ತಂದುಕೊಟ್ಟಿತು. ಸಾಮಾಜಿಕ ಹೋರಾಟಕ್ಕೆ ಪ್ರೇರಣೆಯಾದ ಚಿತ್ರವಾಗಿ 'ಜೀವನಚೈತ್ರ' ಸದಾ ಕನ್ನಡಿಗರ ಮನಸ್ಸಿನಲ್ಲಿ ಉಳಿಯುತ್ತದೆ.

    8. ಜನುಮದ ಜೋಡಿ

    8. ಜನುಮದ ಜೋಡಿ

    ಖ್ಯಾತ ಗುಜರಾತಿ ಲೇಖಕ ಪನ್ನಾಲಾಲ್ ಪಟೇಲ್ ಅವರ ಕಾದಂಬರಿ ಆಧಾರಿತ ಹಳ್ಳಿಗಾಡಿನ ಜಾತಿವ್ಯವಸ್ಥೆ ಕ್ರೌರ್ಯ ಮುಗ್ಧ ಪ್ರೇಮಿಗಳನ್ನು ಹೇಗೆಲ್ಲ ಕಾಡುತ್ತದೆ ಎಂಬ ಕಥಾ ಹಿನ್ನೆಲೆಯನ್ನು ಹೊಂದಿದೆ. 1996 ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಟಿ.ಎಸ್. ನಾಗಾಭರಣ ನಿರ್ದೇಶಿಸಿದ್ದು ಶಿವರಾಜಕುಮಾರ್, ಶಿಲ್ಪ, ಏಣಗಿ ಬಾಳಪ್ಪ, ಮುಖ್ಯಮಂತ್ರಿ ಚಂದ್ರು ಹೊನ್ನವಳ್ಳಿ ಕೃಷ್ಣ, ಪವಿತ್ರ ಲೋಕೇಶ್ ಮುಂತಾದವರು ಪ್ರಮುಖ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರ ಅಂದಿನ ಕಾಲಘಟ್ಟದಲ್ಲಿ ಮಾಡಿದ ಮೋಡಿ ವರ್ಣಿಸಲು ಅಸಾಧ್ಯ. ನಗರ-ಪಟ್ಟಣಗಳಲ್ಲಿನ ಚಿತ್ರಮಂದಿರಗಳಿಗೆ ಹಳ್ಳಿಗಾಡಿನ ಜನ ಎತ್ತಿನ ಗಾಡಿಗಳಲ್ಲಿ ಕುಟುಂಬ ಸಮೇತರಾಗಿ ಬಂದು ಮುಗಿದು ಬಿದ್ದು ಜನುಮದ ಜೋಡಿ ಯನ್ನು ಕಣ್ಣು ತುಂಬಿಕೊಂಡಿದ್ದರು. ಇನ್ನು ವಿ ಮನೋಹರ್ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳು, ಕನ್ನಡ ಸಿನಿಮಾರಂಗದಲ್ಲಿ ಇದುವರೆಗಿನ ಅತಿ ಹೆಚ್ಚು ಕ್ಯಾಸೆಟ್ ಗಳನ್ನು ಮಾರಾಟ ಮಾಡಿರುವ ದಾಖಲೆಯನ್ನು ಹೊಂದಿದೆ. ಜಾತಿ ವ್ಯವಸ್ಥೆ ಮತ್ತು ಅದರ ಕೌರ್ಯದ ಹಿನ್ನಲೆಯ ಜನುಮದ ಜೋಡಿ ಕನ್ನಡ ಸಿನಿಮಾರಂಗದ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದಾಗಿ ಇಂದಿಗೂ ಪ್ರಸ್ತುತವೆನಿಸುತ್ತದೆ.

    9. ಓಂ

    9. ಓಂ

    ಉಪೇಂದ್ರ ಅವರು ಯಾವ ಸಮಯ ಮತ್ತು ಗಳಿಗೆಯಲ್ಲಿ ಈ ಚಿತ್ರಕ್ಕೆ ಓಂಕಾರ ಬರೆದರೋ ಗೊತ್ತಿಲ್ಲ, ಓಂ ಓಟ ಇಂದಿಗೂ ನಿಂತಿಲ್ಲ. 1995 ರಲ್ಲಿ ಬಿಡುಗಡೆಯಾದ ಚಿತ್ರವು 25 ವರ್ಷಗಳ ನಂತರವೂ ಕೂಡ ಮತ್ತೆ,ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಲೇ ಇದೆ. ಬಿಡುಗಡೆಯಾದ ಪ್ರತಿ ಸಂದರ್ಭದಲ್ಲೂ ಚಿತ್ರ ಪ್ರೇಕ್ಷಕರ ಮನ ಗೆಲ್ಲುತ್ತಲೇ ಬಂದಿದೆ. ಭೂಗತ ಜಗತ್ತಿನ ಹಿನ್ನಲೆಯಲ್ಲಿ ನೈಜವಾದ ಘಟನೆಗಳನ್ನು ಆಧರಿಸಿದ ಈ ಚಿತ್ರ ಜನರಿಗೆ ಭೂಗತ ಜಗತ್ತಿನ ನಿಜವಾದ ಮುಖವನ್ನು ಪರಿಚಯವನ್ನು ಮೊಟ್ಟಮೊದಲ ಬಾರಿಗೆ ಪರಿಚಯಿಸಿತು. ಓಂ ಪ್ರಭಾವದಿಂದ ಕನ್ನಡ ಸಿನಿಮಾರಂಗ ಇಂದಿಗೂ ಕೂಡ ಹೊರಗೆ ಬರಲು ಸಾಧ್ಯವಾಗಿಲ್ಲ. ಶಿವರಾಜ್ ಕುಮಾರ್ ,ಪ್ರೇಮ ಮುಖ್ಯ ತಾರಾಗಣದಲ್ಲಿದ್ದ ಓಂ ಚಿತ್ರಕ್ಕೆ ಪರ್ಯಾಯವಾಗಿ ಮತ್ತೊಂದು ಓಂ ಕನ್ನಡದಲ್ಲಿ ಇಂದಿಗೂ ಬಂದಿಲ್ಲ.

    10 ಮುಂಗಾರುಮಳೆ

    10 ಮುಂಗಾರುಮಳೆ

    ಯಾವುದೇ ಚಿತ್ರಕ್ಕೆ ಕಥೆ ತುಂಬಾ ಪ್ರಮುಖವೆನಿಸುತ್ತದೆ. ಆದರೆ ಕಥೆಗಿಂತ ಅದರ ನಿರೂಪಣೆ ಮತ್ತು ಸಂಭಾಷಣೆಗಳಿಂದಲೇ ಸಿನಿಮಾ ಮಾಡಿ ಗೆದ್ದು ತೋರಿಸಿದ ಯೋಗರಾಜ್ ಭಟ್, ಕನ್ನಡ ಸಿನಿಮಾ ರಂಗದ ದಿಕ್ಕನ್ನು ಈ ಚಿತ್ರದ ಮೂಲಕ ಬದಲಾಯಿಸಿದರು. ಗಣೇಶ್-ಪೂಜಾ ಗಾಂಧಿ ಅಭಿನಯದ, 2006 ರಲ್ಲಿ ಬಿಡುಗಡೆಯಾದ ವಿ. ಮನೋಮೂರ್ತಿಯವರ ಸಂಗೀತ ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಕವಿರಾಜ್ ಹೃದಯಶಿವ ಅವರ ಸಾಹಿತ್ಯ ಸಂಗಮ ಮಾಡಿದ ಮೋಡಿ ಎಂದಿಗೂ ಅತ್ಯದ್ಭುತ. ಹಾಡುಗಳಿಂದಲೇ ಕನ್ನಡೇತರರನ್ನು ಕೂಡ ಕನ್ನಡ ಸಿನಿಮಾ ಕಡೆಗೆ ಮುಖ ಮಾಡುವಂತೆ 'ಮುಂಗಾರುಮಳೆ' ಮಾಡಿತು. ಮುಂಗಾರು ಮಳೆ ಬಿಡುಗಡೆ ಆಗಿದೆ ತಡ ಹೊಸಬರ ಬಗ್ಗೆ ಸದಾ ಅಸಡ್ಡೆ ತೋರುತ್ತಿದ್ದ ಗಾಂಧಿನಗರ ದಿಢೀರಾಗಿ ಬದಲಾಯಿತು. 'ಮುಂಗಾರು ಮಳೆ' ಬಿಡುಗಡೆಯಾದ ಮೇಲೆ ಕನ್ನಡ ಸಿನಿಮಾರಂಗದಲ್ಲಿ ಸಾಹಿತ್ಯಕ್ಕೆ ಒಂದು ಅರ್ಥ, ಹೊಸ ಲೇಖಕರಿಗೆ, ಸಾಹಿತ್ಯಗಳಿಗೆ ಮನ್ನಣೆ ದೊರೆಯಿತು. ಮುಂಗಾರು ಮಳೆಯ ನಂತರ ಅನೇಕ ಯುವ ನಿರ್ದೇಶಕರು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಲು. ಯುವಕರಿಗೆ ಮನ್ನಣೆ ನೀಡಲು ಸಿನಿಮಾರಂಗ ಬದಲಾಗಿದ್ದು ಕೂಡ! ಮುಂಗಾರು ಮಳೆಯ ನಂತರ ಕನ್ನಡ ಸಿನಿಮಾರಂಗದಲ್ಲಿ ಅತಿ ದೊಡ್ಡ ಪ್ರವಾಹದಂತೆ ಯುವಪಡೆ ಸಿನಿಮಾರಂಗದಲ್ಲಿ ಪ್ರವೇಶಿಸಿದರು, ಜೊತೆಗೆ ಸ್ಥಾನಪಡೆದರು. ಹೀಗಾಗಿ ಮುಂಗಾರುಮಳೆ ಕನ್ನಡ ಸಿನಿಮಾರಂಗದಲ್ಲಿ ಒಂದು ಮೈಲಿಗಲ್ಲು ಎಂದರೆ ತಪ್ಪಾಗಲಾರದು.

    ಇದು ಕನ್ನಡ ಫಿಲ್ಮಿಬೀಟ್ ಟಾಪ್ 10 ಕನ್ನಡ ಚಿತ್ರಗಳ ಆಯ್ಕೆ! ನಿಮ್ಮ ಆಯ್ಕೆಯ ಹತ್ತು ಕನ್ನಡ ಚಿತ್ರಗಳು ಯಾವುದು? ಮತ್ತು ಯಾಕೆ? ತಿಳಿಸಿ

    English summary
    Filmibeat Kannada all time Top 10 Kannada Movies List is here.. check it out.
    Wednesday, September 8, 2021, 18:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X