Puneeth Rajkumar: ಛೇ.. ಭೋಜನಪ್ರಿಯ ಅಪ್ಪು ಕಂಡ ಈ ಕನಸು ನನಸಾಗಲೇ ಇಲ್ಲ
ಕಂಡ ಕನಸುಗಳೆಲ್ಲಾ ನನಸಾಗುವ ಮುನ್ನ ಅಭಿಮಾನಿಗಳ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಬಾರದ ಲೋಕಕ್ಕೆ ಹೊರಟುಬಿಟ್ಟರು. ಅಭಿಮಾನಿಗಳ ಮನದಲ್ಲಿ ಅಪ್ಪು ಅಗಲಿಕೆಯ ನೋವು ಇನ್ನು ಕರಗಿಲ್ಲ. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಅಭಿಮಾನಿಗಳ ಭೇಟಿ ನಿಂತಿಲ್ಲ. ಸದ್ಯ ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ 'ಆಚಾರ್ & ಕೋ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.
ಪುನೀತ್ ರಾಜ್‌ಕುಮಾರ್ ಕಥೆ ಕೇಳಿ ಒಪ್ಪಿದ್ದ ಸಿನಿಮಾಗಳಲ್ಲಿ 'ಆಚಾರ್ & ಕೋ' ಕೂಡ ಒಂದು. ಇದೀಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪಿಆರ್‌ಕೆ ಪ್ರೊಡಕ್ಷನ್ಸ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಿಂಧು ಶ್ರೀನಿವಾಸ್ ಮೂರ್ತಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಲವು ವಿಭಾಗಗಳಲ್ಲಿ ಮಹಿಳೆಯರು ಕೆಲಸ ಮಾಡಿದ್ಧಾರೆ. ಇನ್ನು ಸಿನಿಮಾ ಪ್ರಚಾರದ ಭಾಗವಾಗಿ ಇತ್ತೀಚೆಗೆ ಫುಡ್ ಲವರ್ಸ್ ಟಿವಿ ಯೂಟ್ಯೂಬ್ ಚಾನಲ್‌ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಸಿಂಧು ಶ್ರೀನಿವಾಸ್ ಮೂರ್ತಿ ವಿಶೇಷ ಸಂದರ್ಶನ ನೀಡಿದ್ದಾರೆ.

ಭೋಜನ ಪ್ರಿಯ ಅಪ್ಪು ಫುಡ್ ಲವರ್ಸ್ ಟಿವಿ ಯೂಟ್ಯೂಬ್ ಚಾನಲ್ ಅಭಿಮಾನಿ ಆಗಿದ್ದರು. ಕೃಪಾಲ್ ಅಮನ್ನಾ ನಿರೂಪಣೆ ಶೈಲಿ ಮೆಚ್ಚಿಕೊಂಡಿದ್ದರು. 'ಯುವರತ್ನ' ಸಿನಿಮಾ ಪ್ರಚಾರದ ವೇಳೆ ಉತ್ತರಕರ್ನಾಟಕ ಶೈಲಿಯ ಭೋಜನ ಸವಿಯುತ್ತಾ ಅಪ್ಪು, ಕೃಪಾಲ್ ಅಮನ್ನಾ ವಿಶೇಷ ಸಂದರ್ಶನ ನೀಡಿದ್ದರು. ಇದೀಗ 'ಆಚಾರ್ & ಕೋ' ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಚಿತ್ರದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅದೇ ರೀತಿ ಊಟದ ಜೊತೆ ಜೊತೆಗೆ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಅಪ್ಪು ಕೆಫೆ ಕನಸು
ಅಪ್ಪು ನೆನಪುಗಳನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೆಲುಕು ಹಾಕಿದ್ದಾರೆ. ವಿಶೇಷವಾಗಿ ಅಪ್ಪುಗೆ ಇಷ್ಟದ ತಿಂಡಿ ತಿನಿಸುಗಳ ಬಗ್ಗೆ ಮಾತನಾಡಿದ್ದಾರೆ. ಅಪ್ಪುಗೆ ಕೆಫೆ ನಡೆಸುವ ಕನಸ್ಸಿತ್ತು ಎಂದಿದ್ದಾರೆ. ಒಮ್ಮೆ ಸಿನಿಮಾ ಚಿತ್ರೀಕರಣಕ್ಕಾಗಿ ಅಮೆರಿಕಾಗೆ ಹೋಗಿದ್ದಾಗ ಕೆಫೆಯಲ್ಲಿ ಕೊಟ್ಟ ಕಾಫಿ ಪುನೀತ್‌ಗೆ ಬಹಳ ಇಷ್ಟವಾಗಿತ್ತಂತೆ. ಇನ್ನು ಬನ್, ಬನ್ ಮಸ್ಕಾ, ಬನ್ ಜಾಮ್, ಖಾರಾ ಬನ್ ಅಂದರೆ ಬಹಳ ಇಷ್ಟಪಡುತ್ತಿದ್ದರು. ಒಂದು ಕೆಫೆ ಆರಂಭಿಸುವ ಕನಸು ಕಂಡಿದ್ದರು. ಒಂದಲ್ಲ ಒಂದು ದಿನ ಕೆಫೆ ಆರಂಭಿಸುವುದಾಗಿ ಹೇಳುತ್ತಿದ್ದರಂತೆ. ಆದರೆ ಅದು ಈಡೇರಲೇ ಇಲ್ಲ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ನೆನಪಿಸಿಕೊಂಡಿದ್ದಾರೆ.
ಪ್ರತಿ ಭಾನುವಾರ ಕಡುಬು, ಚಿಕನ್ ಕರೀ
"ನಮ್ಮ ಮನೆಯಲ್ಲಿ ರಾಘಣ್ಣ ಬಿಟ್ಟರೆ ಎಲ್ಲರಿಗೂ ಊಟ ಅಂದರೆ ಬಹಳ ಇಷ್ಟ. ನನಗೂ ಸ್ಯ್ನಾಕ್ಸ್ ಅಂದ್ರೆ ಪ್ರೀತಿ. ಮಲೆನಾಡ್ ಅಕ್ಕಿ ರೊಟ್ಟಿ, ಕಡುಬು, ಶಾವಿಗೆ ಬಲು ಇಷ್ಟ. ಮದುವೆ ಆದಮೇಲೆ ಅದನ್ನೆಲ್ಲಾ ಮಾಡಲು ಕಲಿತೆ. ಅಪ್ಪು ಮನೆಯಲ್ಲಿ ಬೇರೆ ಶೈಲಿಯ ಅಡುಗೆ ಮಾಡುತ್ತಿದ್ದರು. ಪ್ರತಿ ಭಾನುವಾರ ಬೇರೆ ಆಯ್ಕೆ ಇರಲಿಲ್ಲ. ಎಲ್ಲರೂ ಕಡುಬು, ಚಿಕನ್ ಕರಿ ತಿನ್ನಬೇಕಿತ್ತು. ಮಕ್ಕಳಿಗೆ ಕೆಲವೊಮ್ಮೆ ಬೇಸರ ಎನಿಸುತ್ತಿತ್ತು. ಆದರೆ ಅಪ್ಪು ಬಹಳ ಇಷ್ಟಪಟ್ಟು ತಿನ್ನುತ್ತಿದ್ದರು. ನನಗೆ ಮೊಸರನ್ನು ಬಹಳ ಇಷ್ಟ" ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದಾರೆ.

ಅವಿಭಕ್ತ ಕುಟುಂಬದಲ್ಲಿ ನಡೆಯುವ ಕಥೆ
60ರ ದಶಕದಲ್ಲಿ ನಡೆಯುವ ಒಂದು ಕಲರ್‌ಫುಲ್ ಕಥೆಯನ್ನು 'ಆಚಾರ್ & ಕೋ' ಚಿತ್ರದಲ್ಲಿ ಹೇಳಲಾಗಿದೆ. ಮಧುಸೂದನ್ ಆಚಾರ್ - ಸಾವಿತ್ರಿ ಆಚಾರ್ ಹಾಗೂ ಅವರ ಹತ್ತು ಜನ ಮಕ್ಕಳ ಸುತ್ತ ನಡೆಯುವ ಕಥೆ ಇದು. ಅವಿಭಕ್ತ ಕುಟುಂಬದಲ್ಲಿ ನಡೆಯುವ ಘಟನೆಗಳನ್ನು ಕಾಮಿಡಿ ಟಚ್ ಕೊಟ್ಟು ತೆರೆಗೆ ತರಲಾಗುತ್ತಿದೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಹಿರಿಯ ನಟ ಅಶೋಕ್, ಸುಧಾ ಬೆಳವಾಡಿ ಮುಖ್ಯ ತಾರಾಗಣದಲ್ಲಿದ್ದಾರೆ.
ಶುಕ್ರವಾರ ಸಿನಿಮಾ ರಿಲೀಸ್
'ಆಚಾರ್ & ಕೋ' ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಇದೆ. ಇನ್ನು ಬಿಂದುಮಾಲಿನಿ ಸಂಗೀತ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಆಶಿಕ್ ಕುಸುಗೊಳ್ಳಿ ಸಂಕಲನ, ತ್ರಿಲೋಕ್ ತ್ರಿವಿಕ್ರಮ ಸಂಭಾಷಣೆ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಸೆಲೆಬ್ರೆಟಿ ಶೋ ಕೂಡ ನಡೆದಿದ್ದು ಹಲವರು ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇದೇ ಶುಕ್ರವಾರ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರ್ತಿದೆ.


Click it and Unblock the Notifications











