India In Oscars ; ಇಲ್ಲಿಯವರೆಗೆ ಆಸ್ಕರ್ ಗೆದ್ದು ಬೀಗಿದ ಭಾರತೀಯರಿವರು..!
ಭಾರತಕ್ಕೊಂದು ಆಸ್ಕರ್ ತರಬೇಕು ಅನ್ನುವ ಕನಸನ್ನ ಇಲ್ಲಿಯವರೆಗೆ ಅನೇಕರು ಕಂಡಿದ್ದಾರೆ. ಆದರೆ ಆ ಕನಸು ಇಲ್ಲಿಯವರೆಗೆ ಮರಿಚೀಕೆಯಾಗಿಯೇ ಉಳಿದಿದೆ.
ನಿಜಾ.. ಸ್ಲಂ ಡಾಗ್ ಮಿಲಿಯನೇರ್ ಚಿತ್ರಕ್ಕೆ ಆಸ್ಕರ್ ಸಿಕ್ಕಿತ್ತು. ಆ ಕ್ಷಣಕ್ಕೆ ಖುಷಿಯನ್ನೂ ಕೊಟ್ಟಿತ್ತು. ಆದರೆ. ಗೆಲುವು ನಮ್ಮದಲ್ಲ. ತಾಂತ್ರಿಕವಾಗಿ ಆ ಸಿನಿಮಾ ಭಾರತೀಯರದ್ದಲ್ಲ. ಯಾಕೆಂದರೆ ಆ ಸಿನಿಮಾದ ನಿರ್ದೇಶಕ ಭಾರತೀಯನಲ್ಲ. ಆ ಕಾಲಕ್ಕೆ ಆ ಚಿತ್ರದ ನಿರ್ದೇಶಕ ಡ್ಯಾನಿ ಬಾಯಲ್ ಖುದ್ದು ಹೇಳಿಕೊಂಡಂತೆ ಸ್ಲಂ ಡಾಗ್ ಮಿಲಿಯನೇರ್ ಬ್ರಿಟಿಷ್ ಸಿನಿಮಾ.

ಹೀಗಾಗಿ ಭಾರತೀಯರು ಮಾಡಿದ ಭಾರತದ ಚಿತ್ರವೊಂದಕ್ಕೆ ಅತ್ಯುತ್ತಮ ಚಿತ್ರ ಎಂಬ ಆಸ್ಕರ್ ಸಿಗಲಿಲ್ಲ ಎಂಬ ಕೊರಗು ಇದ್ದೇ ಇದೆ. ಹಾಗಂಥ ಭಾರತೀಯರಿಗೆ ಆಸ್ಕರ್ ಸಿಕ್ಕಿಯೇ ಇಲ್ಲ ಅಂತೇನು ಇಲ್ಲ. ಯಾಕೆಂದರೆ ಇಲ್ಲಿಯವರೆಗೆ ಹಲವರು ಆಸ್ಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗಿದ್ದರೆ, ಯಾರೆಲ್ಲ ಭಾರತೀಯರು ಆಸ್ಕರ್ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದು ತಿಳಿಯಲು ಮುಂದೆ ಓದಿ.
ಭಾನು ಅಥಾಯ
1983ರಲ್ಲಿ ಮೊದಲ ಬಾರಿ ಆಸ್ಕರ್ ಭಾರತೀಯರ ಕೈ ಸೇರಿತ್ತು. ವಿಶೇಷ ಅಂದರೆ ಈ ಪ್ರಶಸ್ತಿಯನ್ನು ಪುರುಷ ಅಲ್ಲ ಬದಲಿಗೆ ಮಹಿಳೆ ಭಾನು ಅಥಾಯ ತೆಗೆದುಕೊಂಡು ಬಂದಿದ್ದರು. ಈ ಮೂಲಕ ಆಸ್ಕರ್ ಪಡೆದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಡೇವಿಡ್ ಅಟೆನ್‌ಬರೋ ನಿರ್ದೇಶನದ ಗಾಂಧಿ ಚಿತ್ರದಲ್ಲಿನ ವಸ್ತ್ರ ವಿನ್ಯಾಸಕ್ಕೆ ಇವರಿಗೆ ಈ ಪ್ರಶಸ್ತಿಯನ್ನು ನೀಡು ಗೌರವಿಸಲಾಗಿತ್ತು.
ಸತ್ಯಜಿತ್ ರೇ
ತಮ್ಮ ಚಿತ್ರಗಳ ಮೂಲಕವೇ ಭಾರತದಲ್ಲಿ ಹೊಸ ಅಲೆಯನ್ನು ಎಬ್ಬಿಸಿದ, ಭಾರತದ ಅದ್ಭುತ ನಿರ್ದೇಶಕ ಸತ್ಯಜಿತ್ ರೇ ಅವರಿಗೆ ಕೂಡ ಹಾಲಿವುಡ್ ಗೌರವ ನೀಡಿತ್ತು. ಸತ್ಯಜಿತ್ ರೇ ಅವರ ಕಲಾ ಸೇವೆಗೆ ತಲೆ ಬಾಗಿ 1992ರಲ್ಲಿ ಜೀವಮಾನ ಸಾಧನೆಗೆ ಆಸ್ಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಎ.ಆರ್.ರೆಹಮಾನ್ -ಗುಲ್ಜಾರ್ ಮತ್ತು ಪೂಕಟ್ಟಿ
2009 ಭಾರತೀಯ ಚಿತ್ರರಂಗಕ್ಕೆ ತುಂಬಾನೇ ವಿಶೇಷವಾದ ವರ್ಷ. ಯಾಕೆಂದರೆ ಈ ವರ್ಷದಲ್ಲಿ ಒಬ್ಬರಲ್ಲ ಬದಲಿಗೆ ಮೂರು ಭಾರತೀಯರು ಆಸ್ಕರ್‌ಗೆ ಸಿಹಿ ಮುತ್ತನ್ನು ನೀಡಿದರು. ಎ.ಆರ್.ರೆಹಮಾನ್ ತಮ್ಮ ಸಂಗೀತಕ್ಕೆ ಪ್ರಶಸ್ತಿ ಪಡೆದರೆ ಭಾರತದ ಖ್ಯಾತ ಗೀತ ರಚನೆಕಾರ ಗುಲ್ಜಾರ್ ಅತ್ಯುತ್ತಮ ಹಾಡಿನ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಇನ್ನು ಇದೇ ಚಿತ್ರದಲ್ಲಿನ ಸೌಂಡ್ ಮಿಕ್ಸಿಂಗ್‌ಗೆ ಕೇರಳದ ರಸೂಲ್ ಪೂಕಟ್ಟಿ ಅವರಿಗೆ ಆಸ್ಕರ್ ನೀಡಲಾಯ್ತು.
ಕಾರ್ತಿಕಿ ಗೊನ್ಸಾಲ್ವಿಸ್ ಮತ್ತು ಗುನೀತ್ ಮೊಂಗಾ
95ನೇ ಆಸ್ಕರ್ ವೇದಿಕೆಯಲ್ಲಿ ಭಾರತದಿಂದ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದದಲ್ಲಿ 'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷಚಿತ್ರ ಪ್ರಶಸ್ತಿ ಗೆದ್ದಿತ್ತು. ಎಲಿಫೆಂಟ್ ವಿಸ್ಪರರ್ಸ್ ಚಿತ್ರದ ನಿರ್ದೇಶಕ ಕಾರ್ತಿಕಿ ಗೊನ್ಸಾಲ್ವೆಸ್ ಮತ್ತು ನಿರ್ಮಾಪಕಿ ಗುನೀತ್ ಮೊಂಗಾ ಟ್ರೋಫಿ ಎತ್ತಿ ಹಿಡಿದಿದ್ದರು
ಎಂ.ಎಂ.ಕೀರವಾಣಿ ಮತ್ತು ಚಂದ್ರಬೋಸ್
2023ರಲ್ಲಿಯೇ ಆಸ್ಕರ್ ಗೆಲ್ಲುವ ಮೂಲಕ ರಾಜಮೌಳಿ ಮತ್ತು ತಂಡ ಇತಿಹಾಸವನ್ನು ನಿರ್ಮಿಸಿತು. 'ನಾಟು ನಾಟು' ಗೀತೆಗೆ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಪ್ರಶಸ್ತಿಯನ್ನು ಪಡೆದರೆ ಈ ಹಾಡನ್ನು ಒಂದು ವರ್ಷದಿಂದ ತಿದ್ದಿ ತೀಡಿ ಬರೆದ ಸಾಹಿತಿ ಚಂದ್ರಬೋಸ್ ಆಸ್ಕರ್ ಪಡೆದು ನಗು ಬೀರಿದರು.


Click it and Unblock the Notifications











