4 ಹಿಟ್, 7ವರ್ಷ ಜೈಲು ; ಚಿತ್ರರಂಗದಿಂದ ನಿಷೇಧ - ಜೀವನೋಪಾಯಕ್ಕೆ ಗಾರ್ಮೆಂಟ್ ಫ್ಯಾಕ್ಟರಿ ನಡೆಸುತ್ತಿರುವ ನಟ
ಬದುಕು ಹೀಗೆ ಎಂದು ಹೇಳಲು ಸಾಧ್ಯ ಇಲ್ಲ. ಯಾವ ಕ್ಷಣದಲ್ಲಾದರೂ ಬದುಕು ಬದಲಾಗಬಹುದು. ಮೂರಕ್ಕಿಳಿದವರು ಆರಕ್ಕೇರಬಹುದು.ಆರಕ್ಕೇರಿದವರು ಮೂರಕ್ಕಿಳಿಯಬಹುದು. ಇನ್ನೂ ಸುಂದರ ಬದುಕು ತಕ್ಷಣಕ್ಕೆ ಸಿಗುವ ಮಾರುಕಟ್ಟೆಯ ಸರಕಂತೂ ಅಲ್ಲ. ಸುಖ: ಸಂತೋಷ ಇಲ್ಲ ಎಂದು ಸದಾ ಕಾಲ ಕೊರಗುತ್ತಾ ಕುಳಿತರೆ ಸುಂದರ ಬದುಕು ರೂಪಿಸಿಕೊಳ್ಳಲು ಕೂಡ ಸಾಧ್ಯ ಇಲ್ಲ. ಇಲ್ಲಿ ಪ್ರತಿದಿನ.. ಪ್ರತಿ ಗಂಟೆ.. ಪ್ರತಿ ನಿಮಿಷ..
ಎಲ್ಲವೂ ಅತ್ಯಮೂಲ್ಯ. ಒಮ್ಮೆ ಕಳೆದರೆ ಮುಗಿಯಿತು. ಮತ್ತೆ ಯಾವುದೂ ಕೂಡ ಹಿಂತಿರುಗಿ ಬರುವುದಿಲ್ಲ. ಬದುಕು ಅನಿಶ್ಚಿತತೆ ಕೂಡ ಹೌದು. ನವನವೀನ್ ಕೂಡ ಹೌದು. ಮುಂದೇನಾಗುತ್ತೆ ಎನ್ನುವುದು ಯಾರೆಂದರೆ ಯಾರಿಗೂ ತಿಳಿಯದು. ಈ ಕ್ಷಣವೇ ಪರಮ ಪವಿತ್ರ.

ಹೀಗಾಗಿ ಭೂತಕಾಲದ ಬಗ್ಗೆ ಪಶ್ಚತಾಪ ಪಡುವುದಾಗಲಿ.. ಭವಿಷ್ಯದ ಬಗ್ಗೆ ಹಗಲು ಕನಸು ಕಾಣುವುದಾಗಲಿ.. ಎರಡು ತಪ್ಪೆನ್ನುವ ಹಲವರು ಈ ಕ್ಷಣವನ್ನು ಸಂಪೂರ್ಣವಾಗಿ ಅನುಭವಿಸುವುದೇ ಬದುಕು ಎನ್ನುತ್ತಾರೆ. ಕಷ್ಟ.. ನೋವು.. ನಿರಾಸೆ.. ದುಃಖ.. ಎಲ್ಲವು ಎಲ್ಲರಿಗೂ ಇದೆ. ಆದರೆ, ಅವುಗಳ ಮಧ್ಯೆ ಸಂತೋಷದಿಂದ , ತೃಪ್ತಿಯಿಂದ ಬದುಕುವುದೇ ಜೀವನ ಎನ್ನುತ್ತಾರೆ. ಹುಲು ಮಾನವರು ನಾವು ಹೀಗಾಗಿ ಹಸನ್ಮುಖದ ನಡುವೆ ಬದುಕುವುದೇ ಸಾರ್ಥಕ ಜೀವನ ಎಂದು ಹೇಳುತ್ತಾರೆ. ಇದೆಲ್ಲದಕ್ಕೆ ''ಶೈನಿ ಅಹುಜಾ'' ಬದುಕು ಸದ್ಯದ ಉದಾಹರಣೆ.
ಹೌದು, ಶೈನಿ ಅಹುಜಾ. ಒಂದ್ಕಾಲದ ಬಾಲಿವುಡ್ ಸ್ಟಾರ್. ಹೆಂಗಳೆಯರ ಹೃದಯ ಕದ್ದ ಚೋರ ಚಿತ್ತ ಚೋರ. ಸೇನಾ ಹಿನ್ನೆಲೆಯ ಶೈನಿ ಅಹುಜಾ ಬಾಲ್ಯದಿಂದಲೇ ಶಿಸ್ತು ಮತ್ತು ವಿದ್ಯಾಭ್ಯಾಸಕ್ಕೆ ಒತ್ತು ನೀಡಿದ್ದರು. ಶಿಕ್ಷಣ ಪೂರೈಸಿ ಆ ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದರು. ನೋಡ.. ನೋಡುತ್ತಾ.. 40 ಕ್ಕೂ ಅಧಿಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು.
ಆ ಪೈಕಿ ''ಪೆಪ್ಸಿ'' ಜಾಹೀರಾತು ಇವರನ್ನು ಬಾಲಿವುಡ್‌ನ ಹೆಬ್ಬಾಗಿಲವರೆಗೆ ಕರೆದ್ಯೊಯಿತು. ''ಪೆಪ್ಸಿ'' ಜಾಹೀರಾತಿನಲ್ಲಿ ಶೈನಿ ಅವರನ್ನು ನೋಡಿದ ಬಾಲಿವುಡ್‌ನ ಖ್ಯಾತ ನಿರ್ಮಾಪಕ ನಿರ್ದೇಶಕ ''ಸುಧೀರ್ ಮಿಶ್ರಾ'' ತಮ್ಮ ''ಹಜಾರೋನ್ ಖ್ವಾಯಿಷೇ ಐಸಿ'' ಚಿತ್ರಕ್ಕೆ ನಾಯಕನಾಗಿ ಆಯ್ಕೆ ಮಾಡಿಕೊಂಡರು.
ಸಿಕ್ಕ ಈ ಅವಕಾಶವನ್ನು ಎರಡು ಕೈಯಿಂದ ಬಾಚಿಕೊಂಡ ಶೈನಿ ಅಹುಜಾ ಬಾಲಿವುಡ್‌ನಲ್ಲಿ ಮೊದಲ ಪ್ರಯತ್ನದಲ್ಲಿಯೇ ಶೈನ್ ಆದರು. ಪ್ರೇಕ್ಷಕರ ಮತ್ತು ವಿಮರ್ಷಕರ ಹೃದಯ ಗೆದ್ದರು. ಆ ನಂತರ ಶೈನಿಗೆ ಸಿಕ್ಕಿದ್ದು ಒಂದಾದ ಮೇಲೊಂದು ಅವಕಾಶ.

''ಗ್ಯಾಂಗ್‌ಸ್ಟರ್''.. ''ವೋ ಲಮ್ಹೆ''.. ''ಲೈಫ್ ಇನ್ ಎ ಮೆಟ್ರೋ''.. ''ಭೂಲ್ ಭೂಲಯ್ಯಾ''.. ''ಖೋಯಾ ಖೋಯಾ ಚಾಂದ್''.. ''ಹೈಜ್ಯಾಕ್''.. ಹೀಗೆ ನಾಲ್ಕು ವರ್ಷಗಳಲ್ಲಿ ನಿರಂತರ ಕೆಲಸ ಮಾಡಿದ ಚಿತ್ರಗಳನ್ನು ಮಾಡಿದ ಶೈನಿ ಅಹುಜಾ ಬದುಕು 2009ರಲ್ಲಿ ಹಳ್ಳ ಹಿಡಿಯಿತು. ಮನೆ ಕೆಲಸದಾಕೆಯ ಮೇಲೆ ಶೈನಿ ಅತ್ಯಾಚಾರ ಎಸಗಿದ್ದಾರೆ ಎನ್ನುವ ಆರೋಪ ಕೇಳಿ ಬಾಲಿವುಡ್ ಬೆಚ್ಚಿ ಬಿದ್ದಿತ್ತು. ಶೈನಿ ಅಹುಜಾ ಪಾಲಿಗೆ ನಿಂತ ನೆಲ ಅಕ್ಷರಶಃ ಕುಸಿದಂತಾಗಿತ್ತು.
ಜೂನ್ 14-2009ರಲ್ಲಿ ಬಂಧನಕ್ಕೊಳಗಾದ ಶೈನಿ ಅಹುಜಾ ಮೂರು ತಿಂಗಳು ಜೈಲಿನಲ್ಲಿ ಕಾಲ ಕಳೆದರು. ಅಕ್ಟೋಬರ್ 1-2009ರಲ್ಲಿ ಜಾಮೀನು ಪಡೆದು ಹೊರ ಬಂದರು. ಆ ನಂತರ ಈ ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ವರ್ಗಾಯಿಸಲಾಯ್ತು.
2010 ಆಗಸ್ಟ್/ಸೆಪ್ಟೆಂಬರ್‌ನಲ್ಲಿ ಅತ್ಯಾಚಾರದ ಆರೋಪ ಮಾಡಿದ್ದ ಮನೆಕೆಲಸದಾಕೆ ತಾವು ಮಾಡಿರುವ ಆರೋಪ ಎಲ್ಲ ಸುಳ್ಳು, ತಮ್ಮ ಮೇಲೆ ಅತ್ಯಾಚಾರ ನಡೆದೇ ಇಲ್ಲ ಎಂದು ವರಸೆ ಬದಲಿಸಿದರು. ಆದರೆ.. ಅಷ್ಟರಲ್ಲಾಗಲೇ ಶೈನಿ ಅಹುಜಾ ಬದುಕು ಬರ್ಬಾದ್ ಆಗಿ ಹೋಗಿತ್ತು.
2011 ಮಾರ್ಚ್‌ನಲ್ಲಿ ಶೈನಿ ಅಹುಜಾ ವಿರುದ್ಧ ಇದ್ದ ಸಾಕ್ಷ್ಯಗಳನ್ನೆಲ್ಲಾ ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ ಶೈನಿ ಅಹುಜಾ ಅವರಿಗೆ 07 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಸೆಷನ್ಸ್ ಕೋರ್ಟ್ ನೀಡಿದ್ದ ಈ ತೀರ್ಪನ್ನು ಬಾಂಬೈ ಹೈಕೋರ್ಟ್‌ನಲ್ಲಿ ಶೈನಿ ಅಹುಜಾ ಪ್ರಶ್ನೆ ಮಾಡಿದ್ದರು.
ಆ ನಂತರ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ 2011ರ ಏಪ್ರಿಲ್‌ನಲ್ಲಿ ಶೈನಿ ಅಹುಜಾ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಜೈಲಿಂದ ಹೊರ ಬಂದ ನಂತರ ಶೈನಿ ಅಹುಜಾ ಮತ್ತೆ ಬಾಲಿವುಡ್‌ನ ಬಾಗಿಲು ಬಡೆದರು.
ಆದರೆ, ಕಾಲ ಮಿಂಚಿ ಹೋಗಿತ್ತು. ಶೈನಿ ಅಹುಜಾ ಮೇಲೆ ಹಿಂದಿ ಉದ್ಯಮ
ಅಘೋಷಿಯ ನಿಷೇಧ ಹೇರಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ 2015ರಲ್ಲಿ ಬಂದ ''ವೆಲ್ ಕಂ ಬ್ಯಾಕ್'' ಚಿತ್ರ ಹೊರತು ಪಡಿಸಿದರೆ ಶೈನಿ ಅಹುಜಾಗೆ ಬೇರೆ ಯಾವ ಚಿತ್ರದಲ್ಲಿ ಕೂಡ ಅವಕಾಶ ಸಿಗಲಿಲ್ಲ.
ಇಂಥಾ ಶೈನಿ ಅಹುಜಾ ಸದ್ಯ ಬಾಲಿವುಡ್‌ದಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ. ನೆಮ್ಮದಿಯನ್ನು ಅರಸಿಕೊಂಡು ದೂರದ ಫಿಲಿಪೆನ್ಸ್‌ಗೆ ಹೋಗಿದ್ದಾರೆ. ಸದ್ಯ ಶೈನಿ ಅಹುಜಾಗೆ ಈಗ 52 ವರ್ಷ.
ಗುರುತು ಹಿಡಿಯಲಾಗದಷ್ಟು ಬದಲಾಗಿರುವ ಶೈನಿ ಅಹುಜಾ ಫಿಲಿಪೆನ್ಸ್‌ನಲ್ಲಿ ಗಾರ್ಮೆಂಟ್ ಫ್ಯಾಕ್ಟರಿಯನ್ನು ಶುರು ಮಾಡಿದ್ದಾರೆ.
ಶೈನಿ ಅಹುಜಾ ಅವರ ಫೋಟೊವನ್ನು ಇತ್ತೀಚೆಗೆ ಒಬ್ಬರು ಸೆರೆ ಹಿಡಿದು ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಫೋಟೊ ವೈರಲ್ ಆಗಿದೆ. ಶೈನಿ ಅಹುಜಾ ಅವರ ಏರಿಳಿತದ ಈ ಬದುಕು ಈ ಮೂಲಕ ಮತ್ತೊಮ್ಮೆ ಚರ್ಚೆಗೀಡಾಗಿದೆ. ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಎಂಬ ಮಂಕುತಿಮ್ಮನವರ ಕಗ್ಗವನ್ನು ಕೂಡ ಶೈನಿ ಅಹುಜಾ ಅವರ ಈ ಬದುಕು ನೆನಪಿಸುವಂತೆ ಇದೆ.


Click it and Unblock the Notifications











