ತಮ್ಮ ರೂಪ, ಬಣ್ಣ, ಧ್ವನಿಯ ಕಾರಣಕ್ಕೆ ಟೀಕೆ, ಅವಮಾನ ಎದುರಿಸಿದ ಸ್ಟಾರ್ ನಟರಿವರು

ಸಿನಿಮಾ ಅನ್ನೋದು ಬಣ್ಣದ ಲೋಕ. ಇಲ್ಲಿ ಎಲ್ಲವೂ ಚೆಂದವಾಗಿಯೇ ಇರಬೇಕು. ಸಿನಿಮಾ ನಟ, ನಟಿಯರಂತೂ ತೆಳ್ಳಗೆ ಬೆಳ್ಳಗೆ ಇರಬೇಕು ಎನ್ನುವು ಅಲಿಖಿತ ನಿಯಮವೊಂದಿದೆ. ಕೆಲವರು ಒಳ್ಳೆ ಪ್ರತಿಭೆಗಳಾಗಿದ್ದರೂ ತಮ್ಮ ರೂಪದ ಕಾರಣಕ್ಕೆ ಅವಕಾಶ ವಂಚಿತರಾಗಿರುರುತ್ತಾರೆ. ಮತ್ತೆ ಕೆಲವರು ನಟನೆಯ ಗೊತ್ತಿಲ್ಲದಿದ್ದರೂ ಚೆನ್ನಾಗಿ ಕಾಣುತ್ತಾರೆ ಎನ್ನುವ ಕಾರಣಕ್ಕೆ ತೆರೆಮೇಲೆ ಮಿಂಚಿದ್ದಾರೆ.

ಚಿತ್ರರಂಗದಲ್ಲಿ ಬಾಡಿ ಶೇಮಿಂಗ್ ಎನ್ನುವುದು ಹೊಸದೇನು ಅಲ್ಲ. ಇವತ್ತಿನ ಸೂಪರ್ ಸ್ಟಾರ್‌ಗಳು ಕೂಡ ಒಂದು ಕಾಲದಲ್ಲಿ ತಮ್ಮ ರೂಪ, ಬಣ್ಣದ ಕಾರಣಕ್ಕೆ ಅವಮಾನ ಎದುರಿಸಿದ್ದು ಇದೆ. ಎಲ್ಲವನ್ನು ಮೆಟ್ಟಿ ಕೆಲವರು ಸ್ಟಾರ್‌ಗಳಾಗಿದ್ದಾರೆ, ಅಷ್ಟೇ ಯಾಕೆ ಸೂಪರ್ ಸ್ಟಾರ್‌ಗಳಾಗಿದ್ದಾರೆ. ಕಠಿಣ ಪರಿಶ್ರಮದಿಂದ ಗೆದ್ದು ಬೀಗಿದ್ದಾರೆ. ಅದೃಷ್ಟ ಕೂಡ ಅವರ ಕೈ ಹಿಡಿದಿದೆ.

From Dr Rajkumar to Rajinikanth How Talent and Grit Defeated Body Shaming in Cinema

ಡಾ. ರಾಜ್‌ಕುಮಾರ್, ರಜನಿಕಾಂತ್ ರೀತಿಯ ದಿಗ್ಗಜ ಕಲಾವಿದರು ಕೂಡ ತಮ್ಮ ಲುಕ್ಸ್ ಕಾರಣಕ್ಕೆ ಅವಮಾನ ಎದುರಿಸಿದ್ದು ಇದೆ. ಇತ್ತೀಚೆಗೆ ಅಣ್ಣಾವ್ರ ಮೊಮ್ಮಗ ಷಣ್ಮುಖ ನಾಯಕನಾಗಿ ಚಿತ್ರರಂಗಕ್ಕೆ ಬಂದಿದ್ದಾರೆ. 'ನಿಂಬಿಯ ಬನಾದ ಮ್ಯಾಗ' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಆದರೆ ಅವರ ಲುಕ್ಸ್ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ಎದುರಿಸುವಂತಾಯಿತು. ಅಣ್ಣಾವ್ರ ಮೊಮ್ಮಗ ಎನ್ನುವ ಒಂದೇ ಕಾರಣಕ್ಕೆ ಯಾರು ಬೇಕಾದರೂ ಹೀರೊ ಆಗಿಬಿಡಬಹುದಾ? ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದರು.

ಯಾವುದೇ ಟೀಕೆಗೆ ಅಂಜದೇ ಷಣ್ಮುಖ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಕೆಲವರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಪ್ರತಿಭೆ ಮುಖ್ಯ. ದಿಗ್ಗಜರೇ ಹೀಗೆ ಟ್ರೋಲ್ ಎದುರಿಸಿ ಕೊನೆಗೆ ಆಡಿಕೊಂಡವರ ಮುಂದೆಯೇ ಬೆಳೆದು ನಿಂತರು. ಪ್ರತಿಭೆ, ಅದೃಷ್ಟ ಇದ್ದರೆ ಷಣ್ಮುಖ ಗೋವಿಂದರಾಜ್ ಅವರ ಯಶಸ್ಸನ್ನು ಯಾರಿಂದಲೂ ತಡೆಯೋಕೆ ಸಾಧ್ಯವಿಲ್ಲ ಎಂದು ಪರ ವಹಿಸಿ ಪೋಸ್ಟ್ ಮಾಡಿ ಬೆಂಬಲ ಸೂಚಿಸುತ್ತಿದ್ದಾರೆ. ಅಂದಹಾಗೆ ಟೀಕೆ ಎದುರಿಸಿ ಸ್ಟಾರ್‌ಗಳಾದ ನಟರ ಪಟ್ಟಿ ಮುಂದೆ ಇದೆ ಓದಿ.

ರಜನಿಕಾಂತ್

ಸೂಪರ್ ಸ್ಟಾರ್ ರಜನಿಕಾಂತ್ ಕ್ರೇಜ್ ಎಂಥದ್ದು ಎಂದು ಬಿಡಿಸಿ ಹೇಳುವುದು ಬೇಕಿಲ್ಲ. ತಲೈವಾ ತೆರೆಮೇಲೆ ಬಂದರೆ ಸಾಕು ಶಿಳ್ಳೆ, ಚಪ್ಪಾಳೆ ಬೀಳುತ್ತದೆ. ಬೆಂಗಳೂರಿನಲ್ಲಿ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿ ರಾವ್ ಮುಂದೆ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಪಟ್ಟಕ್ಕೇರಿಸಿದ್ದು ಅಂತಿಂಥ ಸಾಧನೆ ಏನಲ್ಲ. ನಿಮಗೆ ಗೊತ್ತಾ ಕಪ್ಪು ಮೈಬಣ್ಣದ ಕಾರಣಕ್ಕೆ ರಜನಿಕಾಂತ್ ಆರಂಭದಲ್ಲಿ ಸಾಕಷ್ಟು ಟೀಕೆ ಎದುರಿಸುವಂತಾಗಿತ್ತು. ಮೊದ ಮೊದಲು ಅವರಿಗೆ ಸಿಕ್ಕಿದ್ದು ನೆಗೆಟಿವ್ ಪಾತ್ರಗಳೇ. ಕೆಲವರು ಅವರನ್ನು ಕರಿಯ ಎಂದು ಕರೆದಿದ್ದು ಇದೆ. ಆದರೆ ಅದನ್ನೆಲ್ಲಾ ಮೀರಿ ತಮಿಳು ಚಿತ್ರರಂಗದಲ್ಲಿ ರಜನಿಕಾಂತ್ ಗೆದ್ದು ಬೀಗಿದರು.

ಮುರಳಿ

ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಪುತ್ರ ಮುರಳಿ ಕೂಡ ತಮ್ಮ ಮೈಬಣ್ಣದ ಕಾರಣಕ್ಕೆ ಟೀಕೆಗೆ ಒಳಗಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಅವಕಾಶಗಳು ಸಿಗಲೇ ಇದ್ದಾಗ ತಮಿಳು ಚಿತ್ರರಂಗ ಪ್ರವೇಶಿಸಿ ಗೆದ್ದಿದ್ದರು. ಹೀಗೆ ಒಂದು ಚಿತ್ರರಂಗದಿಂದ ಮತ್ತೊಂದು ಚಿತ್ರರಂಗಕ್ಕೆ ಹೋಗಿ ಗೆದ್ದಿರುವವವರ ಸಂಖ್ಯೆ ದೊಡ್ಡದಿದೆ.

ಡಾ. ರಾಜ್‌ಕುಮಾರ್

ಅಚ್ಚರಿ ಎನಿಸಿದರೂ ಇದು ಸತ್ಯ. ರಂಗಭೂಮಿ ಹಿನ್ನೆಲೆಯಿಂದ ಬಂದ ಮುತ್ತುರಾಜ್ ನಾಯಕನಾಗಿ ಅವಕಾಶ ಗಿಟ್ಟಿಸಿಕೊಂಡಿದ್ದು ಮುಂದೆ ಸೂಪರ್ ಸ್ಟಾರ್ ಆಗಿ ಮೆರೆದಿದ್ದು ಅಷ್ಟು ಸುಲಭವಾಗಿರಲಿಲ್ಲ. ಆರಂಭದ ದಿನಗಳಲ್ಲೇ ತಮ್ಮ ಉದ್ದ ಮೂಗಿನ ಕಾರಣಕ್ಕೆ ಅಣ್ಣಾವ್ರ ಟೀಕೆ ಎದುರಿಸಿದ್ದರು. 'ಬೇಡರ ಕಣ್ಣಪ್ಪ' ಚಿತ್ರಕ್ಕೆ ಮೊದಲು ಮುತ್ತುರಾಜ್ ಲುಕ್ ಟೆಸ್ಟ್ ಮಾಡಲಾಗಿತ್ತು. ಆಯ್ಕೆ ಕೂಡ ಆಗಿದ್ದರು. ಆದರೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಮೇಯಪ್ಪನ್ ಅವರಿಗೆ ಇದು ಇಷ್ಟವಿರಲಿಲ್ಲ. ಆತನ ಮೂಗು ಉದ್ದ. ನಾಯಕನ ಪಾತ್ರಕ್ಕೆ ಸೂಕ್ತವೇ? ಎನ್ನುವ ಅಳುಕು ಅವರಲ್ಲಿತ್ತು.

'ಬೇಡರ ಕಣ್ಣಪ್ಪ' ಸಿನಿಮಾ ಬಿಡುಗಡೆ ಬಳಿಕ ಕೂಡ ಕೆಲವರು ಅಣ್ಣಾವ್ರ ಮೂಗು ಉದ್ದ ಎಂದು ಮೂದಲಿಸಿದ್ದರಂತೆ. ಆದರೆ ಅದನ್ನೆಲ್ಲಾ ಮೀರಿ ಮುತ್ತುರಾಜ್ ಮುಂದೆ ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ಮೆರೆದರು. ಇನ್ನು ಅಣ್ಣಾವ್ರು ರಂಗಭೂಮಿ ಹಿನ್ನೆಲೆಯಿಂದ ಬಂದವರು, ಅವರ ಮಾತು, ಹಾಡಿನ ಶೈಲಿ ನಾಟಕಗಳಲ್ಲಿ ಇದ್ದಂತೆ ಇರುತ್ತದೆ. ಪೌರಾಣಿಕ, ಐತಿಹಾಸಿಕ ಪಾತ್ರಗಳನ್ನು ಬಿಟ್ಟರೆ ಪ್ಯಾಂಟು ಶರ್ಟ್ ಹಾಕಿ ಸ್ಟೈಲ್ ಮಾಡಿ ಗೆಲ್ಲಲು ಸಾಧ್ಯವೇ ಎಂದು ಕೆಲವರು ಮಾತನಾಡಿದ್ದರು. ಆದರೆ ಅಣ್ಣಾವ್ರು ಜೇಮ್ಸ್ ಬಾಂಡ್ ಶೈಲಿಯ ಸಿನಿಮಾಗಳಲ್ಲೇ ನಟಿಸಿ ಜಾದೂ ಮಾಡಿದ್ದರು. ಇನ್ನು ಸಾಮಾಜಿಕ ಸಿನಿಮಾಗಳಲ್ಲಿ ಅವರ ನಟನೆಯ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ.

ಅಣ್ಣಾವ್ರ ಜೊತೆ ಜೊತೆಗೆ ಕಲ್ಯಾಣ್‌ಕುಮಾರ್, ಉದಯ್‌ ಕುಮಾರ್ ಕೂಡ ಚಿತ್ರರಂಗಕ್ಕೆ ಬಂದರು. ಆದರೆ ಅವರಿಬ್ಬರನ್ನು ಮೀರಿ ಡಾ. ರಾಜ್‌ಕುಮಾರ್ ಸಕ್ಸಸ್ ಕಂಡಿದ್ದರು. ಇನ್ನು ರಾಜೇಶ್, ಗಂಗಾಧರ್, ಕುಮಾರ್ ಬಂಗಾರಪ್ಪ ರೀತಿ ಸುಂದರ ಮುಖಚರ್ಯೆ ಉಳ್ಳ ನಟರು ಚಿತ್ರರಂಗದಲ್ಲಿ ನಾಯಕರಾಗಿ ಬಹಳ ದಿನ ಉಳಿಯಲಿಲ್ಲ.

ಅಮಿತಾಬ್ ಬಚ್ಚನ್

ಬಾಲಿವುಡ್ ಶೆಹನ್ ಶಾ ಅಮಿತಾಬ್ ಬಚ್ಚನ್ ಕಂಚಿನ ಕಂಠದ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೇ. ಅವರ ರಗಡ್ ವಾಯ್ಸ್‌ಗೆ ದೊಡ್ಡ ಅಭಿಮಾನಿ ಬಳಗವಿದೆ. ನಿಮಗೆ ಗೊತ್ತಾ ಇದೇ ವಾಯ್ಸ್ ಒಮ್ಮೆ ರಿಜೆಕ್ಟ್ ಆಗಿತ್ತು. ಚಿತ್ರರಂಗಕ್ಕೆ ಬರುವ ಮುನ್ನ ಆಲ್‌ ಇಂಡಿಯಾ ರೇಡಿಯೋಗೆ ಬಿಗ್‌ಬಿ ಕೆಲಸಕ್ಕೆ ಹೋಗಿದ್ದರು. ಆಗ ಅವರ ಧ್ವನಿ ಸುದ್ದಿ ನಿರೂಪಣೆಗೆ ಸೂಕ್ತವಾಗಿಲ್ಲ ಎಂದುಬಿಟ್ಟಿದ್ದರಂತೆ. ಇನ್ನು ಸಣ್ಣಗೆ ಬಹಳ ಉದ್ದ ಇದ್ದ ಅಮಿತಾಬ್ ಹೀರೊ ಆಗಲು ಸಾಧ್ಯವಿಲ್ಲ, ನಟಿಯರೆಲ್ಲಾ ಅವರ ಎದುರು ಬಗಳ ಕುಳ್ಳಗೆ ಕಾಣುತ್ತಾರೆ ಎಂದು ಕೆಲವರು ಭಾವಿಸಿದ್ದರು. ಆದರೆ ಅದನ್ನೆಲ್ಲಾ ಮೀರಿ ಬಿಗ್‌ಬಿ ತಮ್ಮ ಪ್ರತಿಭೆಯಿಂದ ಗೆದ್ದು ತೋರಿಸಿದರು.

ಕಾಶೀನಾಥ್

ನಟ, ನಿರ್ದೇಶಕ ಕಾಶಿನಾಥ್ ಕೂಡ ಬಹಳ ತೆಳ್ಳಗಿದ್ದರು. ಕೆಲವರು ಹೇಳುವಂತೆ ಹೀರೊ ಆಗಲು ಇರಬೇಕಾದ ರೂಪ, ಮೈಕಟ್ಟು ಅವರದ್ದಾಗಿರಲಿಲ್ಲ. ಆದರೆ ತಮ್ಮ ನ್ಯೂನ್ಯತೆಗಳನ್ನೇ ಪ್ಲಸ್ ಮಾಡಿಕೊಂಡು ಕಾಶಿನಾಥ್ ಗೆದ್ದರು. ತಮಗೆ ಸೂಕ್ತವಾದ ಕಥೆಗಳನ್ನು ಮಾಡಿಕೊಂಡರು.

ಉಪೇಂದ್ರ

ನಿರ್ದೇಶಕ ಉಪೇಂದ್ರ ಹೀರೊ ಆದಾಗ ಕೂಡ ಕಾಶಿನಾಥ್ ರೀತಿಯಲ್ಲೇ ತಮಗೆ ಸೂಕ್ತವಾದ ಕಥೆಗಳನ್ನು ಮಾಡಿಕೊಂಡು ಗೆದ್ದರು. ತಮ್ಮ ಉಬ್ಬು ಹಲ್ಲಿಗೆ ಕ್ಲಿಪ್ ಹಾಕಿಸಿಕೊಂಡು ಸರಿಪಡಿಸಿಕೊಂಡರು. ಬಹಳ ತೆಳ್ಳಗಿದ್ದ ಅವರು ಹೀರೊ ಆಗುವ ವೇಳೆಗೆ ಕೊಂಚ ದಪ್ಪ ಆಗಿದ್ದರು. ಮುಂದೆ ಸ್ಟಾರ್ ನಟರಾಗಿ ಬೆಳೆದಿದ್ದು ಗೊತ್ತೇಯಿದೆ.

ಕುಳ್ಳಗಿದ್ದ ದ್ವಾರಕೀಶ್ ಅದನ್ನೇ ಎನ್‌ಕ್ಯಾಶ್ ಮಾಡಿಕೊಂಡು ಕಾಮಿಡಿ ಹೀರೊ ಆಗಿದ್ದರು. ತಮ್ಮ ಮೈಬಣ್ಣದ ಕಾರಣಕ್ಕೆ ಜಗ್ಗೇಶ್ ಕೂಡ ಆರಂಭದ ದಿನಗಳಲ್ಲಿ ಅವಮಾನ ಎದುರಿಸಿದ್ದರು. ಕಮಲ್ ಹಾಸನ್ ಬೆಳ್ಳಗಿದ್ದರೂ ನೋಡಲು ಅಷ್ಟು ಸುಂದರವಾಗಿಲ್ಲ ಎಂದು ಕೆಲವರು ವ್ಯಂಗ್ಯವಾಡಿದ್ದರು. ಎಡಚ ಎನ್ನುವ ಕಾರಣಕ್ಕೆ ವಿಷ್ಣುವರ್ಧನ್ ಅವರನ್ನು ಕೂಡ ಆರಂಭದ ದಿನಗಳಲ್ಲಿ ಕೆಲವರು ಮೂದಲಿಸಿದ್ದರು.

ಸ್ಟಾರ್ ನಟರ ಅಭಿಮಾನಿಗಳ ನಡುವೆ ಮೊದಲಿನಿಂದಲೂ ಕೆಸರೆರಚಾಟ ಇದ್ದಿದ್ದೇ. ಕೆಲವೊಮ್ಮೆ ತಮ್ಮ ನೆಚ್ಚಿನ ನಟನನ್ನು ಹೊಗಳುವ ಭರದಲ್ಲಿ ಮತ್ತೊಬ್ಬ ನಟನನ್ನು ಹೀಯಾಳಿಸುವುದು ಇದೆ. ಆದರೆ ಸೋಶಿಯಲ್ ಮೀಡಿಯಾ ಜಮಾನದಲ್ಲಿ ಅದು ಹೆಚ್ಚಾಗಿದೆ. ಎಲ್ಲೋ ಕೂತು ಏನೋ ಕಾಮೆಂಟ್ ಹಾಕುವುದು ಬಹಳ ಜನರಿಗೆ ಸುಲಭವಾಗಿಬಿಟ್ಟಿದೆ. ಹಾಗಾಗಿ ಇತ್ತೀಚೆಗೆ ಬಾಡಿ ಶೇಮಿಂಗ್ ಅತಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಯಾರೇ ಫೋಟೊ, ವಿಡಿಯೋ ಹಾಕಿದರೆ ಅದಕ್ಕೆ ಒಂದಾದರೂ ನೆಗೆಟಿವ್ ಕಾಮೆಂಟ್ ಮಾಡುವಂತಾಗಿಬಿಟ್ಟಿದೆ. ಸೆಲೆಬ್ರೆಟಿಗಳ ಬಗ್ಗೆ ಹೀಗೆ ವ್ಯಂಗ್ಯವಾಗಿ ಕಾಮೆಂಟ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

More from Filmibeat

English summary
Rajinikanth, Dr Rajkumar, and Amitabh Bachchan overcame harsh criticism and body shaming to shine in the film industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X