ಚೆಲುವೆಯ ನೋಟ ಚೆನ್ನ; ಅಣ್ಣಾವ್ರು, ವಿಷ್ಣು, ಅಂಬಿ ಕೂಡ ಹಾಕಿದ್ರು ಹೆಣ್ಣಿನ ವೇಷ
ನಾಯಕ ನಟರು ಹೆಣ್ಣಿನ ವೇಷದಲ್ಲಿ ನಟಿಸುವುದು ಹೊಸದೇನು ಅಲ್ಲ. ಒಂದ್ಕಾಲದಲ್ಲಿ ನಾಟಕಗಳಲ್ಲಿ ಮಹಿಳಾ ಪಾತ್ರಗಳನ್ನು ಕೂಡ ಪುರುಷರೇ ನಿಭಾಯಿಸುತ್ತಿದ್ದರು. ಪುರುಷರು ಲೇಡಿ ಗೆಟಪ್ ಹಾಕಿ ನಟಿಸುವುದು ತಮಾಷೆ ವಿಷಯವಲ್ಲ. ಸದ್ಯ '45' ಚಿತ್ರದಲ್ಲಿ ನಟ ಶಿವರಾಜ್‌ಕುಮಾರ್ ಸ್ತ್ರೀವೇಷ ತೊಟ್ಟು ದರ್ಶನ ಕೊಟ್ಟಿದ್ದಾರೆ.
ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದೆ. ಚಿತ್ರದಲ್ಲಿ ಉಪೇಂದ್ರ, ರಾಜ್. ಬಿ ಶೆಟ್ಟಿ ಕೂಡ ನಟಿಸಿದ್ದಾರೆ. ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಶಿವಣ್ಣ ಹಾಗೂ ಉಪ್ಪಿ ಭಿನ್ನ ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಕೊನೆಯಲ್ಲಿ ಶಿವಣ್ಣ ಕಾಲ್ಗೆಜ್ಜೆ ಕಟ್ಟಿಕೊಂಡು, ಸೀರೆಉಟ್ಟು ಹೆಣ್ಣಿನ ವೇಷದಲ್ಲಿ ಮಿಂಚಿದ್ದಾರೆ. ಸಣ್ಣ ಝಲಕ್‌ನಲ್ಲಿ ಕಾಣಿಸಿಕೊಂಡು ಹುಬ್ಬೇರಿಸಿದ್ದು ಸಿನಿಮಾ ನೋಡಲೇಬೇಕು ಎನ್ನುವ ಕುತೂಹಲ ಮೂಡುವಂತಾಗಿದೆ.
ಇದಕ್ಕೂ ಮುನ್ನ 'ಮಿಡಿದಶೃತಿ' ಹಾಗೂ 'ಅಣ್ಣಾವ್ರ ಮಕ್ಕಳು' ಚಿತ್ರಗಳಲ್ಲಿ ಶಿವರಾಜ್‌ಕುಮಾರ್ ಲೇಡಿ ಗೆಟಪ್ ಹಾಕಿದ್ದಾರೆ. ಡಾ. ರಾಜ್‌ಕುಮಾರ್ ಸೇರಿ ಕನ್ನಡ ಸ್ಟಾರ್ ನಟರು ಹೆಣ್ಣಿನ ವೇಷ ತೊಟ್ಟು ತೆರೆಮೇಲೆ ಮಿಂಚಿದ್ದಾರೆ. ಕೆಲವೊಮ್ಮೆ ಹಾಸ್ಯ ಸನ್ನಿವೇಷಗಳಲ್ಲಿ ಸಾಧುಕೋಕಿಲ, ಮುಖ್ಯಮಂತ್ರಿ ಚಂದ್ರು ರೀತಿಯ ಹಾಸ್ಯ ಕಲಾವಿದರು ಸ್ತ್ರೀವೇಷ ಹಾಕಿ ಮೋಡಿ ಮಾಡಿದ್ದಾರೆ.

ಚಂದ್ರಹಾಸ
ಬಿ. ಎಸ್ ರಂಗಾ ನಿರ್ದೇಶನದ 'ಚಂದ್ರಹಾಸ' ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಹಾಗೂ ನರಸಿಂಹರಾಜು ಸ್ತ್ರೀವೇಷ ಹಾಕಿದ್ದರು. ವಿಷಯ ಕುಮಾರಿ(ಲೀಲಾವತಿ)ಯನ್ನು ಪ್ರೀತಿಸಲು ಚಂದ್ರಹಾಸ(ರಾಜ್‌ಕುಮಾರ್) ಹೆಣ್ಣಿನ ವೇಷ ಹಾಕಿ ಶಿಕ್ಷಕಿಯಾಗಿ ಬರುವ ಸನ್ನಿವೇಶವಿದೆ. ನರಸಿಂಹರಾಜು ಕೂಡ ಹೆಣ್ಣಿನ ವೇಷದಲ್ಲಿ ಸಾಥ್ ಕೊಟ್ಟಿದ್ದರು. ಚಿ. ಉದಯಶಂಕರ್ ಜೊತೆ ಸ್ತ್ರೀ ವೇಷದಲ್ಲೇ ಅಣ್ಣಾವ್ರು, ನರಸಿಂಹ ರಾಜು ತೆಗಿಸಿದ್ದ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಹಬ್ಬ
ಡಿ. ರಾಜೇಂದ್ರ ಬಾಬು ನಿರ್ದೇನದ 'ಹಬ್ಬ' ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಶ್, ದೇವರಾಜ್, ಶಶಿಕುಮಾರ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಮಹಾಭಾರತದ ವಿರಾಟಪರ್ವದ ಕಾನ್ಸೆಪ್ಟ್‌ನಲ್ಲಿ ಚಿತ್ರದ ಕಥೆ ಹೆಣೆಯಲಾಗಿತ್ತು. ಸಹೋದರನ ಮದುವೆ ಮಾಡಿಸಲು ಅಣ್ಣಂದಿರೆಲ್ಲಾ ಸೇರಿ ನಾನಾ ವೇಷ ಹಾಕುತ್ತಾರೆ. 'ಮಾಮ ಮಾಮ ಮಸ್ತಿ' ಹಾಡಿನಲ್ಲಿ ವಿಷ್ಣು, ಅಂಬಿ, ದೇವರಾಜ್, ಶಶಿಕುಮಾರ್ ಹೆಣ್ಣಿನ ವೇಷ ಹಾಕಿ ವಿಲನ್‌ಗಳಿಗೆ ಬುದ್ಧಿ ಕಲಿಸುವುದನ್ನು ನೋಡಬಹುದು.

ಜೈಲಲಿತಾ
ಶರಣ್ ಲೇಡಿ ಗೆಟಪ್ ಹಾಕಿ ನಟಿಸಿದ್ದ ಸಿನಿಮಾ ಜೈಲಲಿತಾ. ಇದೇ ಚಿತ್ರದಲ್ಲಿ ಆರ್ಮುರ ರವಿಶಂಕರ್ ಹಾಗೂ ಸಾಧು ಕೋಕಿಲ ಕೂಡ ಹೆಣ್ಣಿನ ವೇಷ ಹಾಕಿದ್ದರು.
ನಾನು ಅವನಲ್ಲ ಅವಳು
ಸಂಚಾರಿ ವಿಜಯ್ ತಮ್ಮ ಅದ್ಭುತ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದ ಸಿನಿಮಾ 'ನಾನು ಅವನಲ್ಲ ಅವಳು'. ಬಿ. ಎಸ್ ಲಿಂಗದೇವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಚಿತ್ರದಲ್ಲಿ ಮಂಗಳಮುಖಿ ಪಾತ್ರಕ್ಕೆ ವಿಜಯ್ ಬಣ್ಣ ಹಚ್ಚಿದ್ದರು. ಸೀರೆ ಉಟ್ಟು ಅದ್ಭುತವಾಗಿ ನಟಿಸಿ ಗಮನ ಸೆಳೆದಿದ್ದರು.

ಬೊಂಬಾಟ್ ಹೆಂಡ್ತಿ
ಪಿ. ಎನ್ ರಾಮಚಂದ್ರ ರಾವ್ ನಿರ್ದೇಶನದ 'ಬೊಂಬಾಟ್ ಹೆಂಡ್ತಿ' ಚಿತ್ರದಲ್ಲಿ ಶ್ರೀಧರ್ ಹೆಣ್ಣಿನ ವೇಷ ಹಾಕಿದ್ದರು. ಬ್ಯಾಚ್ಯುಲರ್ ಹುಡುಗರಿಗೆ ಬಾಡಿಗೆ ಮನೆ ಸಿಗುವುದು ಕಷ್ಟ ಎಂದು ಗೊತ್ತಾದಾಗ ಎಲ್ಲರೂ ಬೇರೆ ಬೇರೆ ವೇಷ ಹಾಕಿ ಒಂದು ಕುಟುಂಬದವರಂತೆ ಬಾಡಿಗೆ ಮನೆ ಸೇರುತ್ತಾರೆ. ಶ್ರೀಧರ್ ಹೆಣ್ಣಿನ ವೇಷ ಹಾಕಿದ್ದರು.
ಇನ್ನುಳಿದಂತೆ 'ಮೇಕಪ್' ಚಿತ್ರದಲ್ಲಿ ಜಗ್ಗೇಶ್, 'ಇಂದ್ರನ ಗೆದ್ದ ನರೇಂದ್ರ' ಚಿತ್ರದಲ್ಲಿ ಪ್ರಣಯರಾಜ ಶ್ರೀನಾಥ್, 'ವೆಂಕಟ ಇನ್ ಸಂಕಟ' ಚಿತ್ರದಲ್ಲಿ ಹಾಸ್ಯನಟ ಉಮೇಶ್, 'ಅನುಕೂಲಕ್ಕೊಬ್ಬ ಗಂಡ' ಚಿತ್ರದಲ್ಲಿ ಪ್ರಕಾಶ್ ರಾಜ್, 'ಕತ್ತೆಗಳು ಸಾರ್ ಕತ್ತೆಗಳು' ಚಿತ್ರದಲ್ಲಿ ಎಸ್. ನಾರಾಯಣ್, ರಮೇಶ್ ಅರವಿಂದ್, ಕೋಮಲ್ ಸ್ತ್ರಿವೇಷ ಹಾಕಿ ನಟಿಸಿದ್ದರು.
ಇತ್ತೀಚೆಗೆ 'ಕಾಂತಾರ- 1' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಚಾವುಂಡಿಯಾಗಿ ರಿಷಬ್ ಶೆಟ್ಟಿ ಅಬ್ಬರಿಸಿದ್ದರು. 'ಸು ಫ್ರಮ್ ಸೋ' ಚಿತ್ರದಲ್ಲಿ ಜೆಪಿ ತುಮ್ಮಿನಾಡ್ ಕೂಡ ಸುಲೋಚನಾ ಆಗಿ ಸೀರೆ ಉಟ್ಟು ಅಬ್ಬರಿಸುವ ಸನ್ನಿವೇಶ ಇತ್ತು.


Click it and Unblock the Notifications











