ಬೇರೆ ಇಂಡಸ್ಟ್ರಿಗಳು ಮುಂದೆ ಹೋಗ್ತಿದ್ರೆ, ಸ್ಯಾಂಡಲ್‌ವುಡ್ ಮಾತ್ರ ಹಿಂದಕ್ಕೆ ಹೋಗ್ತಿದೆ.. ವರ್ಕೌಟ್ ಆಗುತ್ತಾ?
ಚಿತ್ರರಂಗದಲ್ಲೀಗ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಸೂಪರ್ ಹಿಟ್ ಸಿನಿಮಾಗಳ ಕಥೆಯನ್ನು ಮತ್ತೊಂದು ಸಿನಿಮಾದಲ್ಲಿ ಮುಂದುವರೆಸಿ ಬಾಕ್ಸಾಫೀಸ್ ದೋಚುವ ಲೆಕ್ಕಾಚಾರ ಇದೆ. ಅಥವಾ ಒಂದೇ ಕಥೆಯನ್ನು 2 ಭಾಗಗಳಾಗಿ ಹೇಳುವ ಪ್ರಯತ್ನಗಳು ನಡೀತಿದೆ. 'ಬಾಹುಬಲಿ' ಹಾಗೂ 'KGF' ಸರಣಿ ಸಿನಿಮಾಗಳ ಸಕ್ಸಸ್ ಇದಕ್ಕೆ ದೊಡ್ಡದಾಗಿ ಬುನಾದಿ ಹಾಕಿದೆ. ಎಲ್ಲಾ ಇಂಡಸ್ಟ್ರಿಯಲ್ಲೂ ಇದು ಶುರುವಾಗಿದೆ.
ಸ್ಯಾಂಡಲ್‌ವುಡ್‌ನಲ್ಲೂ ಸೀಕ್ವೆಲ್ ಸಿನಿಮಾಗಳಿಗೆ ಭರವಿಲ್ಲ. ದೊಡ್ಡ ಸಿನಿಮಾಗಳಿಂದ ಸಣ್ಣ ಸಿನಿಮಾಗಳವರೆಗೆ ಇಂತಾದೊಂದು ಪ್ರಯೋಗ ಸಾಗುತ್ತಿದೆ. 'KGF' ಸರಣಿಯನ್ನು ಮತ್ತಷ್ಟು ಮುಂದುವರೆಸುವ ಆಸೆಯನ್ನು ಹೊಂಬಾಳೆ ಸಂಸ್ಥೆ ವ್ಯಕ್ತಪಡಿಸಿದೆ. ಸರಣಿಯ ಮುಂದಿನಸ ಸಿನಿಮಾಗಳಲ್ಲಿ ಹೀರೊ ಕೂಡ ಬದಲಾಗಬಹುದು ಎಂದು ಹೇಳಿದೆ. ಈ ಸರಣಿ ಚಿತ್ರಗಳ ಹಿಂದೆ ಬಾಕ್ಸಾಫೀಸ್ ಗಳಿಕೆಯ ಲೆಕ್ಕಾಚಾರ ಇದ್ದರೂ ಕೂಡ ಪ್ರೇಕ್ಷಕರಲ್ಲಿ ಕುತೂಹಲ, ನಿರೀಕ್ಷೆ ಹೆಚ್ಚುವಂತೆ ಮಾಡುವುದು ಸುಳ್ಳಲ್ಲ. ಈ ಪ್ರಯತ್ನದಲ್ಲಿ ಗೆಲ್ಲೋದು ಕೂಡ ಸುಲಭವಲ್ಲ.

ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಸೀಕ್ವೆಲ್ ಸಿನಿಮಾಗಳು ಬರ್ತಿವೆ. ಅದರೆ ಸ್ಯಾಂಡಲ್‌ವುಡ್‌ನಲ್ಲಿ ಮಾತ್ರ ಪ್ರೀಕ್ವೆಲ್ ಸಿನಿಮಾಗಳ ಆರ್ಭಟ ಶುರುವಾಗಿದೆ. ಹೌದು ಸರಿಯಾಗಿ ಗಮನಿಸಿದರೆ ಕನ್ನಡದಲ್ಲಿ ಸೀಕ್ವೆಲ್‌ಗಿಂತ ಪ್ರೀಕ್ವೆಲ್ ಅಂದ್ರೆ ಕಥೆಯನ್ನು ಮುಂದುರೆಸಿ ಮತ್ತೊಂದು ಸಿನಿಮಾ ಮಾಡುವುದಕ್ಕಿಂತ ಒಂದು ಸೂಪರ್ ಹಿಟ್ ಸಿನಿಮಾ ಕಥೆಯ ಹಿಂದಿನ ಕಥೆಯನ್ನು ಹೇಳುವ ಪ್ರಯತ್ನ ನಡೀತಿದೆ. ಇದಕ್ಕೆ ದೊಡ್ಡ ದೊಡ್ಡ ಉದಾಹರಣೆಗಳೇ ಸಿಗುತ್ತದೆ.
'ಕಾಂತಾರ'- 2 ಬರುತ್ತಾ ಎಂದಾಗ ಎಲ್ಲರೂ ರಿಷಬ್ ಶೆಟ್ಟಿ ಕಾಡುಬೆಟ್ಟು ಶಿವನ ಕಥೆಯನ್ನು ಮುಂದುವರೆಸುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ರಿಷಬ್ ಕಾಡುಬೆಟ್ಟು ಶಿವನ ಹಿಂದಿನ ಕತೆ ಅಂದ್ರೆ, ಅವನ ತಂದೆಯ ಕಥೆಯನ್ನು ಹೇಳುವುದಾಗಿ ಹೇಳಿದ್ದಾರೆ. ಇದು ಸಹಜವಾಗಿಯೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ 'ಕಾಂತಾರ' ಸಿನಿಮಾ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಅದಕ್ಕಿಂತ ದೊಡ್ಡಮಟ್ಟದಲ್ಲಿ ಪ್ರೀಕ್ವೆಲ್ ಬರ್ತಿದೆ.
'ಮಫ್ತಿ' ಸಿನಿಮಾ ಸೂಪರ್ ಹಿಟ್ ಆದಾಗಲೇ ಪ್ರೀಕ್ವೆಲ್ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿತ್ತು. ಇತ್ತೀಚೆಗೆ ಗೀತಾ ಪಿಕ್ಚರ್ಸ್ ಸಂಸ್ಥೆ 'ಭೈರತಿ ರಣಗಲ್' ಸಿನಿಮಾ ಘೋಷಿಸಿದೆ. ಈ ಚಿತ್ರದಲ್ಲಿ ನರ್ತನ್ ಮಾಫಿಯಾ ಡಾನ್ ಭೈರತಿ ರಣಗಲ್ ಹಿನ್ನಲೆ ಏನು? ಆತ ಅಷ್ಟೊಂದು ಕ್ರೂರಿ ಆಗಲು ಕಾರಣ ಏನು? ಎನ್ನುವುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು ಮುಂದಿನ ತಿಂಗಳೇ ಸೆಟ್ಟೇರಲಿದೆ.

9 ವರ್ಷಗಳ ನಂತರ ರಕ್ಷಿತ್ ಶೆಟ್ಟಿ 'ಉಳಿದವರು ಕಂಡಂತೆ' ಪ್ರೀಕ್ವೆಲ್ 'ರಿಚರ್ಡ್ ಆಂಟೋನಿ' ಚಿತ್ರಕ್ಕೆ ಕೈ ಹಾಕುತ್ತಿದ್ದಾರೆ. ಹೊಂಬಾಳೆ ಸಂಸ್ಥೆ ಈ ಬಾರಿ ಸಿಂಪಲ್ ಸ್ಟಾರ್ ಬೆನ್ನಿಗೆ ನಿಂತಿದೆ. ಈ ಚಿತ್ರದಲ್ಲಿ ರಿಚ್ಚಿನ ಆ ದಿನಗಳನ್ನು ತೆರೆರೆ ತರುವ ಪ್ರಯತ್ನ ನಡೀತಿದೆ. ಬಾಕ್ಸಾಫೀಸ್‌ನಲ್ಲಿ ಗೆಲ್ಲದೇ ಇದ್ದರೂ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿರುವ 'ಉಳಿದವರು ಕಂಡಂತೆ' ಪ್ರೀಕ್ವೆಲ್‌ಗಾಗಿ ಕನ್ನಡ ಸಿನಿರಸಿಕರು ಕಾತರದಿಂದ ಕಾಯುತ್ತಿದ್ದಾರೆ.
ಇನ್ನು ಸೂರಿ ನಿರ್ದೇಶನದ 'ಕೆಂಡ ಸಂಪಿಗೆ' ಸೀಕ್ವೆಲ್ 'ಕಾಗೆ ಬಂಗಾರ' ಸಿನಿಮಾ ಕೂಡ ಬರೋದು ಬಾಕಿಯಿದೆ. ಏಳೆಂಟು ವರ್ಷಗಳಿಂದ ಈ ಸಿನಿಮಾ ಮಾಡಲು ಸೂರಿ ಕಾಯುತ್ತಿದ್ದಾರೆ. ಪ್ರಶಾಂತ್ ಸಿದ್ಧಿ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಬೇಕಿದೆ. ಆದರೆ ಈ ಚಿತ್ರಕ್ಕೆ ಯಾಕೋ ಕಾಲ ಕೂಡಿ ಬರ್ತಿಲ್ಲ. ಸೂರಿ ನಿರ್ದೇಶನದ 'ಪಾಪ್‌ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲೂ 'ಕಾಗೆ ಬಂಗಾರ' ಚಿತ್ರದ ಪಾತ್ರಗಳು ಬಂದು ಹೋಗಿದ್ದವು. ಆದಷ್ಟು ಬೇಗ 'ಕಾಗೆ ಬಂಗಾರ' ಸಿನಿಮಾ ಶುರುವಾಗಲಿದೆ.
ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲೂ 'ಪಾಪ್ ಕಾರ್ನ್ ಮಂಕಿ ಟೈಗರ್' ಕಥೆ ಬಂದು ಹೋಗುತ್ತಂತೆ. ಒಟ್ನಲ್ಲಿ ಕನ್ನಡ ಚಿತ್ರರಂಗದಲ್ಲಿ ಪ್ರೀಕ್ವೆಲ್ ಸಿನಿಮಾಗಳ ಜಮಾನ ಶುರುವಾಗಿದೆ. ಇಂತಹ ವಿಭಿನ್ನ ಪ್ರಯೋಗ ಮಾಡುವುದಕ್ಕೆ ಧೈರ್ಯ ಬೇಕು. ಈ ಎಲ್ಲಾ ಸಿನಿಮಾಗಳ ಲೆಕ್ಕಾಚಾರ, ಭವಿಷ್ಯ ಏನಾಗುತ್ತೋ ಕಾದು ನೋಡಬೇಕು.


Click it and Unblock the Notifications











