ಐಪಿಎಲ್ ಅಬ್ಬರದ ನಡುವೆಯೂ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್ ಆದ ಸಿನಿಮಾಗಳಿವು..!
ಐಪಿಎಲ್ ಅಂದರೆ ಸಾಕು ಸಂಭ್ರಮ ಸಡಗರದ ವಾತಾವರಣ ಅನೇಕ ಕಡೆ ನಿರ್ಮಾಣವಾಗುತ್ತೆ. ಆರು ವರ್ಷದ ಹುಡುಗರಿಂದ ಹಿಡಿದು ಅರವತ್ತು ವರ್ಷದ ವೃದ್ಧರವರೆಗೆ ಐಪಿಎಲ್ ಕಿಕ್ ಕೊಡುತ್ತೆ. ನಮ್ ತಂಡ ನಿಮ್ಮ ತಂಡ ಅಂತಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನದ ಮೆರವಣಿಗೆ ಶುರುವಾಗುತ್ತೆ.
ಹೀಗಾಗಿಯೇ ಐಪಿಎಲ್ ಬಂದರೆ ಸಾಕು ಸಿನಿಮಾಗಳನ್ನು ಬಿಡುಗಡೆ ಮಾಡಲು ಅನೇಕರು ಹಿಂದೇಟು ಹಾಕುತ್ತಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ಬೇರೆ ಭಾಷೆಯಲ್ಲಿ ಕೂಡ ಬಿಡುಗಡೆ ವಿಚಾರದಲ್ಲಿ ಕವಡೆ ಹಾಕುವರ ಸಂಖ್ಯೆಯೇ ಹೆಚ್ಚಿದೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು ಮಾತ್ರ ಐಪಿಎಲ್ ಸಮಯದಲ್ಲಿ ಕೂಡ ತಮ್ಮ ಚಿತ್ರವನ್ನು ರಿಲೀಸ್ ಮಾಡುವ ಭಂಡ ಧೈರ್ಯ ಮಾಡುತ್ತಾರೆ. ವಿಶೇಷ ಅಂದರೆ ಹೀಗೆ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಿದಾಗ ಚಿತ್ರ ಚೆನ್ನಾಗಿದ್ದಾಗ ಪ್ರೇಕ್ಷಕರು ಆ ಚಿತ್ರದ ಕೈ ಬಿಟ್ಟಿಲ್ಲ. ಐಪಿಎಲ್ ಜ್ವರ ನೆತ್ತಿಗೇರಿದ್ದರೂ ಕೂಡ ಚಿತ್ರಮಂದಿರಕ್ಕೆ ಹೋಗಿ ಚಿತ್ರವನ್ನು ನೋಡಿದ್ದಾರೆ. ಗೆಲ್ಲಿಸಿದ್ದಾರೆ. ಆ ಪೈಕಿ ಕೆಲ ಉದಾಹರಣೆಗಳು ಇಲ್ಲಿವೆ.

ಪೀಕು
ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಇರ್ಫಾನ್ ಖಾನ್ ಅಭಿನಯದ ಪೀಕು ಚಿತ್ರ 2015ರಲ್ಲಿ ಬಿಡುಗಡೆಯಾಗಿತ್ತು. ಐಪಿಎಲ್ ಸೀಸನ್ 8ರ ಸಮಯದಲ್ಲಿ ತೆರಗೆ ಬಂದ ಈ ಚಿತ್ರ ನೂರು, ಇನ್ನೂರು, ಮುನ್ನೂರು ಕೋಟಿಯನ್ನು ಗಳಿಸದಿದ್ದರೂ ಕೂಡ ಗೆಲುವನ್ನು ಕಂಡಿತ್ತು. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಚಿತ್ರ ಹತ್ ಹತ್ರ ₹80 ಕೋಟಿಯನ್ನು ಗಳಿಸಿತ್ತು.
ಕೇಸರಿ
ಅಕ್ಷಯ್ ಕುಮಾರ್ ಗೆ ಅದೃಷ್ಟ ಈಗ ಕೈ ಕೊಟ್ಟಿದೆ. ಸಾಲು ಸಾಲು ಸಿನಿಮಾಗಳು ಸೋಲುತ್ತಿವೆ. ಆದರೆ ಹಿಂದೊಮ್ಮೆ ಅಕ್ಕಿ ಬಾಲಿವುಡ್ ಪಾಲಿಗೆ ಲಕ್ಕಿಯಾಗಿದ್ದರು. ಇವರು ಮುಟ್ಟಿದ್ದೆಲ್ಲವು ಚಿನ್ನವಾಗುತ್ತಿದ್ದ ಕಾಲ ಅದು. ಆ ಕಾಲದಲ್ಲಿ 2019ರ ಐಪಿಲ್ ಶುರುವಾಗಲು ಇನ್ನೇನು ಎರಡೇ ದಿನ ಬಾಕಿ ಇತ್ತು. ಆಗ ಕೇಸರಿ ಚಿತ್ರ ಬಿಡುಗಡೆಯಾಗಿತ್ತು. ಐಪಿಎಲ್ ಅಬ್ಬರದ ನಡುವೆಯೇ ಮೊದಲ ವಾರ ₹40 ಕೋಟಿಯನ್ನು ಗಳಿಸಿದ್ದ ಕೇಸರಿ ಆ ನಂತರ ₹207.09 ಕೋಟಿ ಹಣವನ್ನು ಕೊಳ್ಳೆ ಹೊಡೆದಿತ್ತು.
ಕೆಜಿಎಫ್- 2
ಯಶ್ ಅವರಿಗೆ ಹೆಸರು ಹಣ ಮತ್ತು ಕೀರ್ತಿಯನ್ನು ನೀಡಿದ ಕೆಜಿಎಫ್ ಚಿತ್ರದ ಎರಡನೇ ಭಾಗ ಕೂಡ ಐಪಿಎಲ್ ಸಮಯದಲ್ಲಿಯೇ ಬಿಡುಗಡೆಯಾಗಿತ್ತು. ಐಪಿಎಲ್ ರೋಚಕ ಹಂತ ತಲುಪಿದ್ದ ಸಮಯದಲ್ಲಿ ಏಪ್ರಿಲ್ 14ರಂದು ಬಿಡುಗಡೆಯಾಗಿದ್ದ ಈ ಚಿತ್ರ ಹೊಸ ಇತಿಹಾಸವನ್ನೇ ನಿರ್ಮಾಣ ಮಾಡಿತ್ತು. ಕೇವಲ ಭಾರತದಲ್ಲಿಯೇ ₹817 ಕೋಟಿಯನ್ನು ಗಳಿಸಿತ್ತು.
ದಿ ಕೇರಳ ಸ್ಟೋರಿ
ಅದಾ ಶರ್ಮಾ ಅಭಿನಯದ ದಿ ಕೇರಳ ಸ್ಟೋರಿ ಚಿತ್ರ 2023ರಲ್ಲಿ ಬಿಡುಗಡೆಯಾಗಿತ್ತು. ಐಪಿಎಲ್ 16ನೇ ಸೀಸನ್ ನಡೆಯುತ್ತಿದ್ದ ಸಮಯದಲ್ಲಿ ಬಿಡುಗಡೆಯಾದ ಈ ಚಿತ್ರ ವಿವಾದಗಳಿಂದ ಸುದ್ದಿಯಾಗಿತ್ತು. ಬಾಕ್ಸಾಫೀಸ್‌ನಲ್ಲಿ ಕೂಡ ಸದ್ದು ಮಾಡಿತ್ತು. ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮುನ್ನ ₹221 ಕೋಟಿಯನ್ನು ಕೊಳ್ಳೆ ಹೊಡೆದಿತ್ತು.
2 ಸ್ಟೇಟ್ಸ್
ಅರ್ಜುನ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ 2 ಸ್ಟೇಟ್ಸ್ 2014ರಲ್ಲಿ ಬಿಡುಗಡೆಯಾಗಿತ್ತು. ಚೇತನ್ ಭಗತ್ ಕಾದಂಬರಿಯನ್ನಾಧರಿಸಿದ ಈ ಚಿತ್ರ ಬಿಡುಗಡೆಯಾದಾಗ ಐಪಿಎಲ್ 7ನೇ ಆವೃತ್ತಿ ಶುರುವಾಗಿತ್ತು. ಇನ್ನು ಅರ್ಜುನ್ ಕಪೂರ್ ಅಭಿನಯದ ಚಿತ್ರಗಳು ಗೆದ್ದಿದ್ದು ಕಡಿಮೆ. ಹೀಗಾಗಿ ಅನೇಕರು ಈ ಚಿತ್ರ ಕೂಡ ಸೋಲುತ್ತೆ ಎಂದುಕೊಂಡಿದ್ದರು. ಆದರೆ ಐಪಿಎಲ್ ಭರಾಟೆಯ ನಡುವೆ ಕೂಡ ಈ ಚಿತ್ರ ಆ ಕಾಲಕ್ಕೆ ₹101.75 ಕೋಟಿ ಹಣವನ್ನು ಗಳಿಸಿತ್ತು.
ಭಾರತದಲ್ಲಿ ಮೇಲ್ಕಂಡ ಚಿತ್ರಗಳ ಗಳಿಕೆ
ಚಿತ್ರದ ಹೆಸರು - ಗಳಿಕೆ
ಕೆಜಿಎಫ್ 2 - ₹817 ಕೋಟಿ
ಪೀಕು - ₹78.5 ಕೋಟಿ
ದಿ ಕೇರಳ ಸ್ಟೋರಿ - ₹221 ಕೋಟಿ
ಕೇಸರಿ - ₹187 ಕೋಟಿ
2 ಸ್ಟೇಟ್ಸ್ - ₹101.75 ಕೋಟಿ
ಕೇವಲ ಈ ಚಿತ್ರಗಳು ಮಾತ್ರವಲ್ಲ ಐಪಿಎಲ್ ಸಮಯದಲ್ಲಿ ವಿಕ್ಕಿ ಡೋನರ್, ಪ್ಯಾರ್ ಕಾ ಪಂಚನಾಮ, ತನು ವೆಡ್ಸ್ ಮನು, ಹೌಸ್‌ಫುಲ್ 2, ಇಷ್ಕ್‌ಜಾದೆ, ಚಿತ್ರಗಳು ಕೂಡ ಬಿಡುಗಡೆಗೊಂಡಿವೆ. ಬಾಕ್ಸಾಫೀಸ್‌ನಲ್ಲಿ ಹಣವನ್ನು ಕೂಡ ಗಳಿಸಿವೆ. ಮತ್ತೊಂದು ಕಡೆ ಫ್ಯಾನ್, ತಶನ್, ಗೋ ಗೋವಾ ಗ್ವಾನ್ ಅಂತಹ ಸ್ಟಾರ್‌ಗಳ ಚಿತ್ರಗಳು ಕೂಡ ಐಪಿಎಲ್ ಸಮಯದಲ್ಲಿ ಬಿಡುಗಡೆಗೊಂಡು ಸೋತು ಹೋಗಿವೆ.
ಇನ್ನು ಕೇವಲ ಭಾರತೀಯ ಚಿತ್ರಗಳು ಮಾತ್ರವಲ್ಲ ಐಪಿಎಲ್ ಸಮಯದಲ್ಲಿ ಬಂದ ಹಾಲಿವುಡ್ ಸಿನಿಮಾಗಳನ್ನು ಕೂಡ ಪ್ರೇಕ್ಷಕರು ನೋಡಿದ್ದಾರೆ. ಚಿತ್ರವನ್ನು ಗೆಲ್ಲಿಸಿದ್ದಾರೆ. ಇದಕ್ಕೆ ಅವೆಂಜರ್ಸ್ ಎಂಡ್ ಗೇಮ್ ಒಂದು ಉದಾಹರಣೆ. ಐಪಿಎಲ್ ಸೀಸನ್ 12ರ ಸಮಯದಲ್ಲಿ ಭಾರತದಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ನೋಡಿದ್ದರು. ಪರಿಣಾಮ ಕೇವಲ ಭಾರತದಲ್ಲಿಯೇ ಈ ಚಿತ್ರ ₹373 ಕೋಟಿ ರೂಪಾಯಿಯನ್ನು ಗಳಿಸಿತ್ತು.
ಐಪಿಎಲ್‌ಗೆ ಈ ಬಾರಿ ಸಿಕಂದರ್ ಸವಾಲು !
ಈ ಬಾರಿ ಐಪಿಎಲ್ ಸಮಯದಲ್ಲಿ ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರ ಬಿಡುಗಡೆಯಾಗುತ್ತಿದೆ. ಈದ್ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗುತ್ತಿರುವ ಈ ಚಿತ್ರದ ಮೇಲೆ ಬಾಲಿವುಡ್‌ಗೆ ವಿಪರೀತ ನಿರೀಕ್ಷೆಗಳಿವೆ. ಇನ್ನು, ಈದ್ ಹಬ್ಬದಂದು ಸಲ್ಮಾನ್ ಖಾನ್ ಸಿನಿಮಾಗಳು ತೆರೆಗೆ ಬಂದಾಗೆಲ್ಲ, ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿದಿದೆ. ಈ ಬಾರಿ ಕೂಡ ಐಪಿಎಲ್ ನಡುವೆ ಸಲ್ಮಾನ್ ಖಾನ್ ಮೋಡಿ ಮಾಡ್ತಾರಾ, ಬಾಲಿವುಡ್‌ಗೆ ಬೇಕಿರುವ ಗೆಲುವನ್ನು ತಂದು ಕೊಡುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.
ಮನ ಗೆಲ್ಲುತ್ತಾ ಮನದ ಕಡಲು ..?
ಇನ್ನು ಕನ್ನಡದಲ್ಲಿ ಈ ವಾರ ಮನದ ಕಡಲು ಬಿಡುಗಡೆಯಾಗುತ್ತಿದೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎನ್ನುವ ಮಾತು ಸುಳ್ಳಾಗಿಸುವ ಜವಾಬ್ಧಾರಿ ಈಗ ಯೋಗರಾಜ್ ಭಟ್ ಅವರ ಮೇಲೀದೆ. ಪರಭಾಷಾ ಚಿತ್ರಗಳ ಹಾವಳಿ ನಡುವೆ ಮನದ ಕಡಲು ಪ್ರೇಕ್ಷಕರನ್ನು ತಲುಪಬೇಕಿದೆ. ಇದರ ನಡುವೆ ಐಪಿಎಲ್ ಅಬ್ಬರ ಬೇರೆ.
ಕೇವಲ ಈ ಎರಡು ಚಿತ್ರಗಳು ಮಾತ್ರವಲ್ಲ ಈ ಬಾರಿ ಈದ್ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಬೇರೆ ಬೇರೆ ಭಾಷೆಗಳಲ್ಲಿ ಕೂಡ ಕೆಲವರು ರಿಸ್ಕ್ ತೆಗೆದುಕೊಂಡಿದ್ದಾರೆ. ಐಪಿಎಲ್ ನಡುವೆ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ವೀರ್ ಧೀರ ಶೂರನ್, ಯೆಝು ಕಡಲ್ ಯೆಝು ಮಾಲಾ, ಪೂಚಂಡಿ,
ಓಂ ಕಾಳಿ ಜೈ ಕಾಳಿ ಹೀಗೆ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಐಪಿಎಲ್ ನಡುವೆ ಪ್ರೇಕ್ಷಕರ ಗಮನ ಸೆಳೆಯಲು ಚಿತ್ರತಂಡಗಳು ನಾನಾ ಕಸರತ್ತನ್ನು ಕೂಡ ಮಾಡುತ್ತಿವೆ. ಈ ಎಲ್ಲ ಚಿತ್ರಗಳ ಪೈಕಿ ಈ ಬಾರಿ ಐಪಿಎಲ್‌ಗೆ ಸೆಡ್ಡು ಹೊಡೆದು ಯಾರು ಅತ್ಯಧಿಕ ಹಣವನ್ನು ಗಳಿಸುತ್ತಾರೆ, ಯಾರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳಾ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer ; ಬಾಕ್ಸ್ ಆಫೀಸ್ ಅಂಕಿಅಂಶಗಳನ್ನು ವಿವಿಧ ಮೂಲಗಳು ಮತ್ತು ನಮ್ಮ ಸಂಶೋಧನೆಯಿಂದ ಸಂಗ್ರಹಿಸಲಾಗಿದೆ. ಅಂಕಿಅಂಶಗಳು ಅಂದಾಜು ಆಗಿರಬಹುದು, ಫಿಲ್ಮಿಬೀಟ್ ಕನ್ನಡ ಈ ಡೇಟಾದ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.


Click it and Unblock the Notifications











