ನನಸಾಗದ ರವಿಚಂದ್ರನ್ ಕನಸುಗಳು; ಅರ್ಧಕ್ಕೆ ನಿಂತ ಕ್ರೇಜಿಸ್ಟಾರ್ ಸಿನಿಮಾಗಳ ಲಿಸ್ಟ್ ಇಲ್ಲಿದೆ
ಕ್ರೇಜಿಸ್ಟಾರ್ ರವಿಚಂದ್ರನ್. ಕನ್ನಡ ಚಿತ್ರರಂಗದ ಕನಸುಗಾರ, ಶೋಮ್ಯಾನ್. ತಮ್ಮ ಕನಸುಗಳನ್ನು ದೃಶ್ಯ ರೂಪದಲ್ಲಿ ತೆರೆಮೇಲೆ ತರ್ತಿದ್ದಾರೆ. ಸೋಲು ಗೆಲುವಿನ ಬಗ್ಗೆ ತಲೆ ಕೆಡಿಸಿಕೊಳ್ಳದೇ ಒಳ್ಳೆ ಸಿನಿಮಾ ಮಾಡಬೇಕು ಎನ್ನುವ ಹಠವಾದಿ. ಹೀಗೆ ಹಠಕ್ಕೆ ಬಿದ್ದು ಸಾಕಷ್ಟು ಕಳೆದುಕೊಂಡಿದ್ದಾರೆ. ಆದರೂ ಸಿನಿಮಾ ಮೇಲಿನ ವ್ಯಾಮೋಹ ಕಮ್ಮಿ ಆಗಿಲ್ಲ.
'ಐಯ್ಯಾಮ್ ಗಾಡ್' ಎಂಬ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಕ್ರೇಜಿಸ್ಟಾರ್ ತಯಾರಿ ನಡೆಸಿದ್ದಾರೆ. ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿ ನಿರ್ಮಾಪಕನಾಗಿ ಸಾಕಷ್ಟು ಪ್ರಯೋಗಗಳನ್ನು ಮಾಡಿದವರು ರವಿಚಂದ್ರನ್. ತಮಗೆ ಇಷ್ಟ ಆಗುವವರೆಗೂ ಸಿನಿಮಾವನ್ನು ತಿದ್ದಿ ತೀಡುತ್ತಲೇ ಇರ್ತಾರೆ. ಚೆನ್ನಾಗಿಲ್ಲ ಅನ್ನಿಸಿದರೆ ಅಲ್ಲಿಗೆ ಬಿಟ್ಟುಬಿಡುತ್ತಾರೆ. ನಿಮಗೆ ಗೊತ್ತಾ ರವಿಚಂದ್ರನ್ ಅವರ ಕೆಲ ಸಿನಿಮಾಗಳು ಅರ್ಧಕ್ಕೆ ನಿಂತಿರುವ ಉದಾಹರಣೆಗಳಿವೆ.

ಸಿನಿಮಾ ಅನ್ನೋದು ಗ್ಯಾಂಬ್ಲಿಂಗ್. ಇಲ್ಲಿ ಗೆಲ್ಲುವವರಿಂತ ಸೋಲುವವರೇ ಹೆಚ್ಚು. ಆದರೆ ಕೆಲವರು ಮಾತ್ರ ಪ್ಯಾಷನ್‌ಗಾಗಿ ಸೋಲಿಗೆ ಜಗ್ಗದೇ ಸಿನಿಮಾ ಮಾಡ್ತಾರೆ. ಅದೇ ಸಾಲಿಗೆ ರವಿಚಂದ್ರನ್ ಸೇರುತ್ತಾರೆ. ರವಿಮಾಮನ ಕನಸಿನ 'ಮಂಜಿನ ಹನಿ' ಸಿನಿಮಾ ಇವತ್ತಿಗೂ ತೆರೆಗೆ ಬಂದಿಲ್ಲ. ಮುಂದೆ ಬರುವುದು ಅನುಮಾನ. ಬಹುತೇಕ ಸಿನಿಮಾ ಮುಗಿದಿದ್ದರೂ ಕ್ರೇಜಿಸ್ಟಾರ್ ಯಾರೋ ಆ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಮಾಡ್ತಿಲ್ಲ. ಹೀಗೆ ಸಾಕಷ್ಟು ಉದಾಹರಣೆಗಳಿವೆ.
1. ಸುಂದರಲೋಕ
'ಪ್ರೇಮಲೋಕ', 'ರಣಧೀರ' ಹಾಗೂ 'ಅಂಜದಗಂಡು' ಸಿನಿಮಾಗಳು ಗೆದ್ದ ಬಳಿಕ 'ಸುಂದರಲೋಕ' ಎಂಬ ಚಿತ್ರವನ್ನು ರವಿಚಂದ್ರನ್ ಆರಂಭಿಸಿದ್ದರು. ಬಿ. ಎನ್ ಗಂಗಾಧರ್ ನಿರ್ಮಾಣದಲ್ಲಿ ಸಿನಿಮಾ ನಿರ್ಮಾಣವಾಗಬೇಕಿತ್ತು. ಶಂಕರ್ ನಾಗ್ ಹಾಗೂ ಅನಂತ್ ನಾಗ್ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ತಮಿಳಿನ ರಜಿನಿ ನಾಯಕಿಯಾಗಿ ಆಯ್ಕೆ ಆಗಿದ್ದರು. 100 ದಿನಗಳ ಕಾಲ ಚಿತ್ರೀಕರಣ ನಡೆದಿತ್ತು. ಶಂಕರ್‌ನಾಗ್ ಅಪಘಾತದಲ್ಲಿ ನಿಧನರಾಗಿದ್ದರು. ಶಂಕ್ರಣ್ಣ ಇಲ್ಲದೇ ಸಿನಿಮಾ ಮುಂದುವರೆಸುವುದು ಬೇಡ ಎಂದು ಕೈಬಿಟ್ಟಿದ್ದರು. ಚಿತ್ರದಿಂದ 1 ಕೋಟಿ ರೂ. ನಷ್ಟವಾಗಿತ್ತು ಎಂದು ನಿರ್ಮಾಪಕರು ಹೇಳಿಕೊಂಡಿದ್ದರು.

2. ಶಕುನಿ
ಕೋಟಿ ರಾಮು ನಿರ್ಮಾಣದಲ್ಲಿ ರವಿಚಂದ್ರನ್ 'ಶಕುನಿ' ಎಂಬ ಚಿತ್ರದಲ್ಲಿ ನಟಿಸಿದ್ದರು. 40%ರಷ್ಟು ಚಿತ್ರೀಕರಣ ಸಹ ನಡೆದಿತ್ತು. ಉದ್ದ ಕೂದಲಿನ ಗೆಟಪ್‌ನಲ್ಲಿ ಕ್ರೇಜಿಸ್ಟಾರ್ ಕಾಣಿಸಿಕೊಂಡಿದ್ದರು. ರವೀನಾ ಟಂಡನ್, ನಗ್ಮಾ ಹಾಗೂ ಜ್ಯೂಹಿ ಚಾವ್ಲಾ ಚಿತ್ರದಲ್ಲಿ ನಾಯಕಿಯರಾಗಿ ಮಿಂಚಿಬೇಕಿತ್ತು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಯಾಕೋ ನಿಮ್ಮ ಗೆಟಪ್ ಚೆನ್ನಾಗಿಲ್ಲ, ನಗೆ ಇಷ್ಟವಾಗಲಿಲ್ಲ ಎಂದು ರಾಮು ಹೇಳಿದ್ದರಂತೆ. ಅಲ್ಲಿಗೆ ಆ ಸಿನಿಮಾ ನಿಂತು ಹೋಗಿತ್ತು. ಅದರ ಬದಲು ಅದೇ ಬ್ಯಾನರ್‌ನಲ್ಲಿ 'ಮಲ್ಲ' ಸಿನಿಮಾ ಮಾಡಿ ಗೆದ್ದಿದ್ದರು.
3. ಚಂದಮಾಮ
ರವಿಚಂದ್ರನ್ ಹಾಗೂ ನಾದಬ್ರಹ್ಮ ಹಂಸಲೇಖ ಕಾಂಬಿನೇಷನ್‌ನಲ್ಲಿ 'ಚಂದಮಾಮ' ಎಂಬ ಮತ್ತೊಂದು ಸಿನಿಮಾ ಕೂಡ ಘೋಷಣೆ ಆಗಿತ್ತು. ಸಾಂಗ್ ರೆಕಾರ್ಡಿಂಗ್ ಕೂಡ ನಡೆದಿತ್ತು. ಬಳಿಕ ನಾನಾ ಕಾರಣಾಂತರಗಳಿಂದ ಆ ಸಿನಿಮಾ ಕೂಡ ನಿಂತು ಹೋಗಿತ್ತು.
4. ಮಂಜಿನ ಹನಿ
ರವಿಚಂದ್ರನ್ ಅಭಿಮಾನಿಗಳು ಇವತ್ತಿಗೂ ಕಾಯುತ್ತಿರುವ ಸಿನಿಮಾ 'ಮಂಜಿನ ಹನಿ'. ಎರಡ್ಮೂರು ಬಾರಿ ಸ್ಕ್ರಿಪ್ಟ್ ಚೇಂಜ್ ಮಾಡಿ ಸಿನಿಮಾ ಚಿತ್ರೀಕರಣ ಮಾಡಿದ್ದರು. ಒಂದು ಹಂತದಲ್ಲಿ ನಿರ್ಮಾಪಕ ಸಂದೇಶ್ ನಾಗರಾಜ್ ಹಿಂದೆ ಸರಿದಾಗ ಕ್ರೇಜಿಸ್ಟಾರ್ ತಾವೇ ಸಿನಿಮಾ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದರು. ಹರಿಪ್ರಿಯಾ ಕೂಡ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರವನ್ನು ಮುಗಿಸಲು ರವಿಚಂದ್ರನ್ ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸಿದ್ದು ಇದೆ. ಆ ಮೂಲಕ ಸಿಕ್ಕ ಸಂಭಾವನೆಯನ್ನು ಈ ಸಿನಿಮಾ ಮೇಲೆ ವ್ಯಯಿಸಿದ್ದರು.
5. ಆದಿಶೇಷ
'ಮಲ್ಲ' ಸಿನಿಮಾ ಗೆಲುವಿನ ಬೆನ್ನಲ್ಲೇ 'ಆದಿಶೇಷ' ಎಂಬ ಚಿತ್ರವನ್ನು ರವಿಚಂದ್ರನ್ ಕೈಗೆತ್ತಿಕೊಂಡಿದ್ದರು. ಕನಕಪುರ ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹಾಕಲು ಮುಂದೆ ಬಂದಿದ್ದರು. ಸಾಂಗ್ ರೆಕಾರ್ಡಿಂಗ್ ಕೂಡ ಆಗಿತ್ತು. ತಂದೆ ಮಗನಾಗಿ ದ್ವಿಪಾತ್ರದಲ್ಲಿ ರವಿಚಂದ್ರನ್ ನಟಿಸಬೇಕಿತ್ತು. ತಂದೆಗೆ ಇಬ್ಬರು ಹಾಗೂ ಮಗನಿಗೆ ಮೂವರು ನಾಯಕಿಯರು ಚಿತ್ರದಲ್ಲಿ ಇರಬೇಕಿತ್ತು. ಅದಕ್ಕಾಗಿ ಜೂಹಿ ಚಾವ್ಲಾ, ಖುಷ್ಬು, ಸ್ನೇಹ, ಪ್ರೀತಿ ಜಂಗಿಯಾನಿಯಾ ಅವರನ್ನು ಆಯ್ಕೆ ಮಾಡಿದ್ದರು. ಸಿನಿಮಾ ಮುಹೂರ್ತ ಕೂಡ ನೆರವೇರಿತ್ತು. ಸ್ವತಃ ರವಿಚಂದ್ರನ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು, ಸಂಗೀತ- ಸಾಹಿತ್ಯ ಜವಾಬ್ದಾರಿ ವಹಿಸಿಕೊಂಡಿದ್ದರು. ಕೊನೆಗೆ ಸಿನಿಮಾ ನಿಂತು ಹೋಗಿತ್ತು.
6. ಪ್ರೇಮಲೋಕದಲ್ಲಿ ರಣಧೀರ
ರವಿಚಂದ್ರನ್ ಅಷ್ಟು ದೊಡ್ಡ ನಿರ್ಮಾಪಕ, ನಿರ್ದೇಶಕ ಆಗಿದ್ದರೂ ತಮ್ಮ ಮಕ್ಕಳಿಗೆ ಯಾಕೆ ಸಿನಿಮಾ ಮಾಡಲಿಲ್ಲ ಎಂದು ಕೆಲವರು ಕೇಳುತ್ತಾರೆ. ಪುತ್ರ ಮನೋರಂಜನ್‌ಗಾಗಿ 'ಪ್ರೇಮಲೋಕದಲ್ಲಿ ರಣಧೀರ' ಎಂಬ ಸಿನಿಮಾ ಮುಹೂರ್ತ ಮಾಡಿದ್ದರು. ನೈಸ್ ರಸ್ತೆಯಲ್ಲಿ ಸಿನಿಮಾ ಸೆಟ್ಟೇರಿತ್ತು. ಬಳಿಕ ಯಾಕೋ ಸಿನಿಮಾ ಮುಂದುವರೆಯಲೇ ಇಲ್ಲ.


Click it and Unblock the Notifications