ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣದ ಟಾಪ್ 10 ನಟಿಯರು ಯಾರು?
ಚಿತ್ರರಂಗದಲ್ಲಿ ನಟಿ, ನಟಿಯರ ನಡುವೆ ಬಹಳ ತಾರತಮ್ಯ ಇದೆ. ಮುಖ್ಯವಾಗಿ ಸಂಭಾವನೆ ವಿಚಾರದಲ್ಲಿ ನಟಿಯರಿಗೆ ಅನ್ಯಾಯವಾಗುತ್ತಿದೆ. ಸ್ಟಾರ್ ನಟರಿಗೆ ನೂರಾರು ಕೋಟಿ ಸಂಭಾವನೆ ಕೊಡುತ್ತಾರೆ. ಆದರೆ ನಟಿಯರಿಗೆ ಸಂಭಾವನೆ ಕೊಡಲು ಹಿಂದೇಟು ಹಾಕುತ್ತಾರೆ ಎನ್ನುವುದು ಕೆಲ ನಟಿಯರ ವಾದ.
ಬಾಲಿವುಡ್ ತಾಪ್ಸಿ ಪನ್ನು ಈ ಸಂಭಾವನೆ ತಾರತಮ್ಯದ ಬಗ್ಗೆ ಪದೇ ಪದೆ ಮಾತನಾಡುತ್ತಾರೆ. ಇತ್ತೀಚೆಗೆ ನಟಿ ರಮ್ಯಾ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಸ್ಟಾರ್ ನಟರನ್ನು ನೋಡಲು ಪ್ರೇಕ್ಷಕರ ಚಿತ್ರಮಂದಿರಕ್ಕೆ ಬರುತ್ತಾರೆ. ಅವರ ಸ್ಟಾರ್‌ಡಮ್‌ಗೆ ತಕ್ಕಂತೆ ಸಂಭಾವನೆ ಕೊಡುತ್ತೇವೆ. ಕ್ರೇಜ್‌ಗೆ ತಕ್ಕಂತೆ ನಟಿಯರಿಗೂ ಸಂಭಾವನೆ ಸಿಗುತ್ತದೆ ಎನ್ನುವ ಚರ್ಚೆ ಕೂಡ ಚಿತ್ರರಂಗದಲ್ಲಿದೆ. ನಟ, ನಟಿಯರ ಸಂಭಾವನೆ ಬಗ್ಗೆ ಖಚಿತ ಮಾಹಿತಿ ಸಿಗುವುದು ಕಷ್ಟ. Siasat.com ವೆಬ್‌ಸೈಟ್ ಸೌತ್‌ನಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿಯರ ಬಗ್ಗೆ ವರದಿ ಮಾಡಿದೆ.

ಇತ್ತೀಚಿನ ವರ್ಷಗಳಲ್ಲಿ ದಕ್ಷಿಣದ ನಟಿಯರು ಕೂಡ ಭಾರೀ ಮೊತ್ತದ ಸಂಭಾವನೆ ಪಡೆಯಲು ಆರಂಭಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸೋಕೆ ಬಾಲಿವುಡ್ ಟಾಪ್ ನಟಿಯರನ್ನು ಕರೆತರಲಾಗುತ್ತಿದೆ. ಅವರು ಕೇಳಿದಷ್ಟು ಸಂಭಾವನೆ ಕೊಡಲಾಗುತ್ತಿದೆ. ಸದ್ಯ ತಮಿಳು ನಟಿ ನಯನತಾರ ತೆಲುಗು ಚಿತ್ರಕ್ಕೆ 18 ಕೋಟಿ ಸಂಭಾವನೆ ಕೇಳಿದ್ದಾರೆ ಎನ್ನಲಾಗ್ತಿದೆ. ಇದೇ ವಿಚಾರ ಈಗ ಟಾಕ್ ಆಪ್ ದ ಟೌನ್ ಆಗಿದೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಟಾಪ್-10 ನಟಿಯರು ಯಾರು ಬನ್ನಿ ನೋಡೋಣ.
1. ರಶ್ಮಿಕಾ ಮಂದಣ್ಣ
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲಿ ಕೂಡ ಕಮಾಲ್ ಮಾಡುತ್ತಿದ್ದಾರೆ. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು ಗೆಲ್ಲುತ್ತಿದ್ದಾರೆ. 'ಅನಿಮಲ್' ಸಕ್ಸಸ್ ಬಳಿಕ ಆಕೆಯ ಸಂಭಾವನೆ ದಿಢೀರ್ ಹೆಚ್ಚಾಗಿತ್ತು. ಇನ್ನು 'ಛಾವ' ಸಿನಿಮಾದಲ್ಲಿ ಕೂಡ ನಟಿಸಿ ಸಕ್ಸಸ್ ಕಂಡಿದ್ದರು. ಆದರೆ ಸಲ್ಮಾನ್ ಖಾನ್ ಜೊತೆ ನಟಿಸಿದ 'ಸಿಕಂದರ್' ಸಿನಿಮಾ ಕೈಕೊಟ್ಟಿತ್ತು. ಅಂದಹಾಗೆ ತೆಲುಗಿನ 'ಪುಷ್ಪ'-2 ಚಿತ್ರಕ್ಕೆ ರಶ್ಮಿಕಾ 13 ಕೋಟಿ ರೂ. ಸಂಭಾವನೆ ಪಡೆದಿದ್ದರು ಎನ್ನಲಾಗಿತ್ತು. ದಕ್ಷಿಣದಲ್ಲಿ ಅತಿಹೆಚ್ಚು ಸಂಭಾವನೆ ಪಡೆದ ನಟಿ ರಶ್ಮಿಕಾ ಮಂದಣ್ಣ ಎನ್ನುವ ಚರ್ಚೆ ನಡೀತಿದೆ. ಕನ್ನಡ ಸಿನಿಮಾಗಳಿಂದ ದೂರವೇ ಉಳಿದುಬಿಟ್ಟಿದ್ದಾರೆ.

2. ನಯನತಾರಾ
ದಕ್ಷಿಣದಲ್ಲಿ ಬಹಳ ಕ್ರೇಜ್ ಸೃಷ್ಟಿಸಿಕೊಂಡಿರುವ ನಟಿ ನಯನತಾರ. ಮದುವೆ ಬಳಿಕ ಕೂಡ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸದ್ಯ ಯಶ್ ನಿರ್ಮಿಸಿ ನಟಿಸುತ್ತಿರುವ 'ಟಾಕ್ಸಿಕ್' ಚಿತ್ರದಲ್ಲಿ ಕೂಡ ಆಕೆ ಬಣ್ಣ ಹಚ್ಚಿದ್ದಾರೆ. ಚಿತ್ರವೊಂದಕ್ಕೆ ನಯನತಾರಾ 10 ರಿಂದ 12 ಕೋಟಿ ರೂ. ಸಂಭಾವನೆ ಡಿಮ್ಯಾಂಡ್ ಮಾಡುತ್ತಾರೆ ಎನ್ನಲಾಗ್ತಿದೆ. ಇದೀಗ ಚಿರಂಜೀವಿ ಜೊತೆ ನಾಯಕಿಯಾಗಿ ನಟಿಸೋಕೆ ಬರೋಬ್ಬರಿ 18 ಕೋಟಿ ಕೇಳಿದ್ದಾರೆ ಎನ್ನುವುದು ಹಾಟ್ ಟಾಪಿಕ್ ಆಗಿದೆ.
3. ತ್ರಿಷಾ
ವಯಸ್ಸು 40 ದಾಟಿದರೂ ನಟಿ ತ್ರಿಶಾ ಇವತ್ತಿಗೂ ಛಾರ್ಮ್ ಉಳಿಸಿಕೊಂಡಿದ್ದಾರೆ. ಅಜಿತ್, ಚಿರಂಜೀವಿ, ವಿಜಯ್ ರೀತಿಯ ಸೀನಿಯರ್ ನಟರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರವೊಂದಕ್ಕೆ ತ್ರಿಶಾ ಬರೋಬ್ಬರಿ 10 ಕೋಟಿ ರೂ. ಸಂಭಾವನೆ ಡಿಮ್ಯಾಂಡ್ ಮಾಡುತ್ತಾರಂತೆ. ಒಂದೇ ತಿಂಗಳ ಅಂತರದಲ್ಲಿ ಅಜಿತ್ ಜೊತೆ ಆಕೆ ನಟಿಸಿದ 'ವಿಡಾಮುಯರ್ಚಿ' ಹಾಗೂ 'ಗುಡ್ ಬ್ಯಾಡ್ ಅಗ್ಲಿ' ಚಿತ್ರಗಳು ಬಿಡುಗಡೆಯಾಗಿತ್ತು. 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಭರ್ಜರಿ ಸಕ್ಸಸ್ ಕಂಡಿದೆ.
4. ಸಮಂತಾ
ತೆಲುಗು ನಟಿ ಸಮಂತಾ ರುತ್‌ಪ್ರಭ್ ಇದೀಗ ನಿರ್ಮಾಪಕಿ ಕೂಡ ಆಗಿದ್ದಾರೆ. ಸೌತ್ ಸಿನಿದುನಿಯಾದಲ್ಲಿ ಆಕೆಯ ಕ್ರೇಜ್ ಚೆನ್ನಾಗಿದೆ. ಇತ್ತೀಚೆಗೆ ಕೆಲ ವೈಯಕ್ತಿಕ ಕಾರಣಗಳಿಂದ ಸಮಂತಾ ಬಹಳ ಸುದ್ದಿ ಆಗಿದ್ದರು. ಮಯೊಸೈಟಿಸ್ ಸಮಸ್ಯೆಯಿಂದಲೂ ಬಳಲುತ್ತಿದ್ದು ಸಿನಿಮಾಗಳಲ್ಲಿ ಅಷ್ಟಾಗಿ ನಟಿಸುತ್ತಿಲ್ಲ. 'ಫ್ಯಾಮಿಲಿಮ್ಯಾನ್-2' ಹಾಗೂ 'ಸಿಟಾಡೆಲ್' ವೆಬ್ ಸೀರಿಸ್‌ಗಳಲ್ಲಿ ಕೂಡ ನಟಿಸಿ ಭರ್ಜರಿ ಸಂಭಾವನೆ ಗಿಟ್ಟಿಸಿದ್ದರು. ಅಂದಹಾಗೆ ಚಿತ್ರವೊಂದಕ್ಕೆ ಸ್ಯಾಮ್ 3 ರಿಂದ 8 ಕೋಟಿ ಕೇಳುತ್ತಾರಂತೆ.
5. ಅನುಷ್ಕಾ ಶೆಟ್ಟಿ
'ಬಾಹುಬಲಿ' ಸರಣಿ ಬಳಿಕ ನಟಿ ಅನುಷ್ಕಾ ಶೆಟ್ಟಿ ದೇಹದ ತೂಕ ಹೆಚ್ಚಿಕೊಂಡು ಸಂಕಷ್ಟ ಎದುರಿಸಿದರು. ಇದೇ ಕಾರಣಕ್ಕೆ ಚಿತ್ರಗಳಲ್ಲಿ ನಟಿಸುವುದು ಕಮ್ಮಿ ಮಾಡಿದ್ದಾರೆ. ಸದ್ಯ ತೆಲುಗಿನ 'ಘಾಟಿ' ಹಾಗೂ ಮಲಯಾಳಂನ 'ಕಥನಾರ್' ಚಿತ್ರಗಳಲ್ಲಿ ಸ್ವೀಟಿ ಬಣ್ಣ ಹಚ್ಚಿದ್ದಾರೆ. ಇನ್ನು ಚಿತ್ರವೊಂದಕ್ಕೆ ಅನುಷ್ಕಾ 6 ಕೋಟಿ ರೂ. ತಮ್ಮ ಬ್ಯಾಗಿಗೆ ಇಳಿಸುತ್ತಾರಂತೆ. ಶೀಘ್ರದಲ್ಲೇ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಸ್ವೀಟಿ ಮತ್ತೊಂದು ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ.
6. ಜಾನ್ವಿ ಕಪೂರ್
ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಅದೃಷ್ಟ ಕೈ ಹಿಡಿಯುತ್ತಿಲ್ಲ. ತಾಯಿ ಶ್ರೀದೇವಿ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದ ಚೆಲುವೆಗೆ ದೊಡ್ಡ ಬ್ರೇಕ್ ಸಿಗಲೇ ಇಲ್ಲ. ಇನ್ನು ಬಾಲಿವುಡ್‌ನಲ್ಲಿ ಕಾದು ಪ್ರಯೋಜನವಿಲ್ಲ ಎಂದು ದಕ್ಷಿಣದ ಸಿನಿಮಾಗಳಲ್ಲಿ ನಟಿಸೋಕೆ ಮುಂದಾಗಿದ್ದಾರೆ. ತೆಲುಗಿನ 'ದೇವರ' ಬಳಿಕ ರಾಮ್‌ಚರಣ್ ನಟನೆಯ 'ಪೆದ್ದಿ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ಒಂದು ಚಿತ್ರದಲ್ಲಿ ನಟಿಸೋಕೆ ಜಾನ್ವಿ 5 ಕೋಟಿ ರೂ. ಕೇಳುತ್ತಾರೆ ಎನ್ನುವ ಮಾತಿದೆ.
7. ಸಾಯಿ ಪಲ್ಲವಿ
ತಮ್ಮ ಸಿನಿಮಾಗಳಿಂದ ಮಾತ್ರವಲ್ಲದೇ ವಿವಾದಗಳಿಂದಲೂ ನಟಿ ಸಾಯಿ ಪಲ್ಲವಿ ಸುದ್ದಿ ಆಗುತ್ತಿರುತ್ತಾರೆ. ಸದ್ಯ 'ರಾಮಾಯಣ' ಚಿತ್ರದ ಸೀತೆಯಾಗಿ ಬಾಲಿವುಡ್ ಅಂಗಳಕ್ಕೂ ಜಿಗಿಯುತ್ತಿದ್ದಾರೆ. ಎರಡು ಭಾಗಗಳಾಗಿ ತೆರೆಗೆ ಬರುತ್ತಿರುವ ಈ ಚಿತ್ರಕ್ಕಾಗಿ 18ರಿಂದ 20 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಊಹಾಪೋಹ ಕೇಳಿಬರುತ್ತಿದೆ. ಇನ್ನುಳಿದಂತೆ ದಕ್ಷಿಣದಲ್ಲಿ ನಟಿಸೋಕೆ ಚಿತ್ರವೊಂದಕ್ಕೆ 5 ಕೋಟಿ ರೂ. ಕೇಳುತ್ತಾರೆ ಎನ್ನುವ ಊಹಾಪೋಹವಿದೆ.
8. ತಮನ್ನಾ ಭಾಟಿಯಾ
ಮುಂಬೈ ಬ್ಯೂಟಿ ತಮನ್ನಾಗೆ ಬ್ರೇಕ್ ಸಿಕ್ಕಿದ್ದೆ ದಕ್ಷಿಣ ಸಿನಿಮಾಗಳಲ್ಲಿ. ಇತ್ತೀಚೆಗೆ ಮಿಲ್ಕಿ ಬ್ಯೂಟಿ ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ಐಟಂ ಸಾಂಗ್‌ಗಳಲ್ಲಿ ಕುಣಿಯೋದು ಹೆಚ್ಚಾಗಿದೆ. ಒಂದು ಹಾಡಿಗೆ ಹೆಜ್ಜೆ ಹಾಕಲು 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇತ್ತೀಚೆಗೆ ನಾಯಕಿಯಾಗಿ ಆಕೆಗೆ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ. ಆದರೂ ಚಿತ್ರವೊಂದಕ್ಕೆ 4ರಿಂದ 5 ಕೋಟಿ ರೂ. ಸಂಭಾವನೆ ಕೇಳುತ್ತಾರಂತೆ.
9. ರಕುಲ್ ಪ್ರೀತ್ ಸಿಂಗ್
ದೆಹಲಿ ಚೆಲುವೆ ರಕುಲ್ ಪ್ರೀತ್ ಸಿಂಗ್ ಕೂಡ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದೇ ಹೆಚ್ಚು. ಚಿತ್ರವೊಂದಕ್ಕೆ ಆಕೆ 2 ಕೋಟಿ ರೂ.ಗೂ ಅಧಿಕ ಸಂಭಾವೆನೆ ಕೇಳುತ್ತಾರೆ ಎನ್ನುವುದು ಇಂಡಸ್ಟ್ರಿ ಟಾಕ್. 'ರಾಮಾಯಣ' ಚಿತ್ರದಲ್ಲಿ ಶೂರ್ಪನಖಿಯಾಗಿ ರಕುಲ್ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ.
10. ಪೂಜಾ ಹೆಗ್ಡೆ
ದಕ್ಷಿಣದಲ್ಲಿ ಕ್ರೇಜ್ ಸೃಷ್ಟಿಸಿಕೊಂಡಿರುವ ಮತ್ತೊಬ್ಬ ನಟಿ ಪೂಜಾ ಹೆಗ್ಡೆ. ಆದರೆ ಆಕೆಗೆ ದೊಡ್ಡ ಬ್ರೇಕ್ ಮಾತ್ರ ಸಿಗುತ್ತಿಲ್ಲ. ಕಳೆದ ವಾರ ಬಗ್ಗೆ 'ರೆಟ್ರೋ' ಚಿತ್ರದಲ್ಲಿ ಸೂರ್ಯ ಜೋಡಿಯಾಗಿ ಆಕೆ ನಟಿಸಿದ್ದಾರೆ. ಚಿತ್ರವೊಂದಕ್ಕೆ ಈ ಮುಂಬೈ ಬೆಡಗಿ 2 ಕೋಟಿ ರೂ. ಸಂಭಾವನೆ ಡಿಮ್ಯಾಂಡ್ ಮಾಡುತ್ತಾರೆ. ಅದು ಕೆಲವೊಮ್ಮೆ 5 ಕೋಟಿ ರೂ.ವರೆಗೂ ಹೋಗುತ್ತದೆ ಎನ್ನಲಾಗ್ತಿದೆ.


Click it and Unblock the Notifications











