ಅವತ್ತು ಥಿಯೇಟರ್ ಕ್ಯೂನಲ್ಲಿ ನುಗ್ಗಿ ಹೋಗಿ ಆ ಚಿತ್ರದ 11 ಟಿಕೆಟ್ ತಂದುಕೊಟ್ಟಿದ್ದ ಯಶ್
ರಾಕಿಂಗ್ ಸ್ಟಾರ್ ಯಶ್.. ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್. ಬಸ್ ಡ್ರೈವರ್ ಮಗ ನವೀನ್ ಗೌಡ ಇವತ್ತು ಭಾರತೀಯ ಚಿತ್ರರಂಗದಲ್ಲೇ ನಂಬರ್ 1 ಹೀರೊ ಆಗಿ ಬೆಳೆದು ನಿಂತಿದ್ದಾರೆ. ಕಠಿಣ ಪರಿಶ್ರಮದಿಂದ ಅಸಾಧ್ಯವನ್ನು ಸಾಧಿಸಿ ತೋರಿಸಿದ್ದಾರೆ. ಮುಂದೆ ಮತ್ತಷ್ಟು ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ.
ಚಿಕ್ಕಂದಿನಿಂದ ಸಿನಿಮಾ ಹೀರೊ ಆಗುವ ಕನಸು ಕಂಡ ಯಶ್ ಅದನ್ನು ಸಾಧಿಸಿ ತೋರಿಸಿದ್ದಾರೆ. ಹೀರೊ ಆಗುವುದಕ್ಕೂ ಮೊದಲಿನಿಂದ ಯಶ್ ಪರಿಶ್ರಮವನ್ನು ನಂಬಿಕೊಂಡವರು. ಸದಾ ಉತ್ಸಾಹದ ಚಿಲುಮೆ ಆಗಿದ್ದವರು. ಏನಾದರೂ ಸಾಧಿಸಿ ತೋರಿಸುತ್ತೇನೆ ಎಂದು ಮೊದಲಿನಿಂದ ಹೇಳುತ್ತಾ ಬಂದವರು. ಸದಾ ಗೆಲ್ಲುವ ತುಡಿತ, ಲೆಕ್ಕಾಚಾರ.. 5 ವರ್ಷಗಳಲ್ಲಿ ನಾನು ಈ ಹಂತದಲ್ಲಿ ಇರ್ತೀನಿ. 10 ವರ್ಷದಲ್ಲಿ ಉತ್ತುಂಗಕ್ಕೆ ಏರುತ್ತೇನೆ ಎಂದು ಜಪ ಮಾಡುತ್ತಿದ್ದರಂತೆ. ಆತನ ಮಾತುಗಳನ್ನು ಕೇಳಿ ಆಪ್ತರು ಕೂಡ ಯಾಕೋ ಇದೆಲ್ಲಾ ಅತಿಯಾಯಿತು ಎಂದುಕೊಳ್ಳುತ್ತಿದ್ದರು. ಆದರೆ ಹೇಳಿದಂತೆಯೇ ಮಾಡಿ ತೋರಿಸಿದ್ದಾರೆ.

ರಂಗಭೂಮಿ ಹಿನ್ನೆಲೆಯಿಂದ ಬಂದ ಯಶ್ ಚಿತ್ರ ನಿರ್ಮಾಣದ ಎಲ್ಲಾ ವಿಭಾಗಗಳಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ತಾವು ನಟಿಸುವ ಸಿನಿಮಾ ಆಗಿದ್ದರೂ ತಮ್ಮಿಷ್ಟದಂತೆ ತೆರೆಮೇಲೆ ಬರಬೇಕು. ಚೆನ್ನಾಗಿ ಬರಬೇಕು ಎನ್ನುವ ತುಡಿತ ಇರುವ ನಟ. ಅಂದಹಾಗೆ ಸಾಧಿಸುವ ಛಲ, ಹುಮ್ಮಸ್ಸು ಇಂದು ನಿನ್ನೆಯದ್ದಲ್ಲ. ರಂಗಭೂಮಿ ದಿನಗಳಲ್ಲಿ ಇತ್ತು.. ಧಾರಾವಾಹಿಗಳಲ್ಲಿ ನಟಿಸುವಾಗಲೂ ಇತ್ತು.. ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರೂ ವಿಶ್ರಮಿಸದೇ ಅದೇ ಹುಮ್ಮಸ್ಸಿನಲ್ಲಿ ಮುನ್ನುಗುತ್ತಿದ್ದಾರೆ.
ಇವತ್ತು ಸೂಪರ್ ಸ್ಟಾರ್ ಆಗಿರುವ ಯಶ್ ಒಂದ್ಕಾಲದಲ್ಲಿ ಸಾಮಾನ್ಯ ಪ್ರೇಕ್ಷಕನಂತೆ ಚಿತ್ರಮಂದಿರಗಳಲ್ಲಿ ಕ್ಯೂ ನಿಂತು ಟಿಕೆಟ್ ಖರೀದಿಸಿ ಸಿನಿಮಾ ನೋಡಿದವರು. ಕ್ಯೂ ಜಾಸ್ತಿ ಇದ್ದರೆ ಎಷ್ಟೇ ಜನ ಇದ್ದರೂ ನುಗ್ಗಿ ಒಳಗಡೆ ಹೋಗಿ ಟಿಕೆಟ್ ತರುತ್ತಿದ್ದರು. ಇದೇ ರೀತಿ ಕ್ಯೂನಲ್ಲಿ ನುಗ್ಗಿ 'ಮುಂಗಾರುಮಳೆ' ಚಿತ್ರದ ಟಿಕೆಟ್ ತಂದಿದ್ದರು. ಈ ವಿಚಾರವನ್ನು ಹಿರಿಯ ನಟಿ ಪದ್ಮಜಾ ರಾವ್ ನೆನಪಿಸಿಕೊಂಡಿದ್ದಾರೆ. ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚೆಗೆ ಸಂದರ್ಶನದಲ್ಲಿ ನಟಿ ಪದ್ಮಜಾ ರಾವ್ ಹಾಗೂ ಸುಧಾ ಬೆಳವಾಡಿ ಭಾಗಿ ಆಗಿದ್ದರು. ತಮ್ಮ ಸಿನಿಜೀವನದ ಸಾಕಷ್ಟು ವಿಚಾರಗಳನ್ನು ಮೆಲುಕು ಹಾಕಿದ್ದರು. ಇಬ್ಬರೂ 'ಮುಂಗಾರು ಮಳೆ' ಚಿತ್ರದಲ್ಲಿ ನಟಿಸಿದ್ದರು. ಅಂದು ಆ ಸಿನಿಮಾ ಕ್ರೇಜ್ ಹೇಗಿತ್ತು ಎಂದು ಮಾತನಾಡಿದ್ದಾರೆ. "ಆಗ ಇನ್ನು 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿ ನಡೀತಿತ್ತು. 'ಮುಂಗಾರು ಮಳೆ' ಸಿನಿಮಾ ಹಿಟ್ ಆದ ಬಳಿಕ ವಿನು ಬಳಂಜ ಹಾಗೂ ನಮ್ಮ ತಂಡ ನಾನು ನಟಿಸಿದ್ದೀನಿ ಎನ್ನುವ ಕಾರಣಕ್ಕೆ ಎಲ್ಲರೂ ಸಿನಿಮಾ ನೋಡೋಣ ಎಂದು ನವರಂಗ್ ಚಿತ್ರಮಂದಿರಕ್ಕೆ ಹೋಗಿದ್ದೆವು" ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.
"ಅವತ್ತು ನಾವು 11 ಜನ ನವರಂಗ್ ಚಿತ್ರಮಂದಿರಕ್ಕೆ ಹೋಗಿದ್ವಿ. ಯಶ್, ಅಚ್ಯುತ್ ಕುಮಾರ್, ರಾಜೇಶ್ ನಟರಂಗ್, ನಾನು, ಅಪರ್ಣ ಎಲ್ಲರೂ ಇದ್ವಿ. ಬಹಳ ರಶ್ ಇತ್ತು. ಯಾರು ಹೋಗಿ ತರೋದು ಟಿಕೆಟ್.. ಯಶ್.. ನೀವೆಲ್ಲಾ ಇಲ್ಲಿ ನಿಂತಿರಿ ಎಂದು ಹೇಳಿ ಯಶ್ ಹೋದ.. ಅದು ಏನು ಮಾಡಿದ್ನೋ ಗೊತ್ತಿಲ್ಲ. ಕ್ಯೂನಲ್ಲಿ ನುಗ್ಗಿ ಹೊರಬಂದು ಕೂದಲು ಎಲ್ಲಾ ಕೆದರಿಗೊಂಡು ಬಂದ. ತಗೊಳ್ಳಿ ಟಿಕೆಟ್ ಅಂದ.. ಇವತ್ತಿನ ದಿವಸ ಅವನ ಸಿನ್ಮಾ ನೋಡಲು ಆ ತರ ರಶ್.. ಆತ ಎಲ್ಲದ್ದಕ್ಕೂ ಅರ್ಹ. ಅಷ್ಟು ಕಷ್ಟಪಟ್ಟಿದ್ದಾನೆ.. ಇವತ್ತು ಎಷ್ಟೇ ಬೆಳೆದಿದ್ರು, ಆ ಮಗು ಬಹಳ ಕಷ್ಟಪಟ್ಟಿದೆ. ಆ ಹುರುಪು, ಜೋಶ್ ಆಗಿನಿಂದಲೂ ಇತ್ತು" ಎಂದು ಪದ್ಮಜಾ ರಾವ್ ಹೇಳಿದ್ದಾರೆ.


Click it and Unblock the Notifications











