Year Ender 2024 ; ಈ ವರ್ಷ ಕನ್ನಡ ಚಿತ್ರರಂಗದ ಅತ್ಯುತ್ತಮ ನಾಯಕಿ ಯಾರು ? ನಿಮ್ಮ ಮತ ಯಾರಿಗೆ ?
ಹಿಂದೆಯೆಲ್ಲ ಕನ್ನಡದಲ್ಲಿ ನಾಯಕಿಯರ ಕೊರತೆ ಇದೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಆದರೆ ಈಗ ಪರಿಸ್ಥಿತಿ ಮೊದಲಿನಂತೆ ಇಲ್ಲ. ಇವತ್ತು ನಾಯಕಿಯರು ಕನ್ನಡ ಚಿತ್ರರಂಗದಲ್ಲಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲಿ ಕೂಡ ಮಿಂಚುತ್ತಿದ್ದಾರೆ.
ಆ ಪೈಕಿ ಕೆಲವರು ಹತ್ತಿದ ಏಣಿಯನ್ನು ಒದ್ದು ಹೋದವರು ಇದ್ದಾರೆ. ಇನ್ನೂ ಕೆಲವರಿಗೆ ಆಕಾಶಕ್ಕೆ ಏಣಿ ಹಾಕುವ ಅವಕಾಶ ಇದ್ದರೂ ಕೂಡ ಕನ್ನಡಾಭಿಮಾನದಿಂದ ಕನ್ನಡ ಚಿತ್ರರಂಗದಲ್ಲಿಯೇ ಮುಂದುವರೆಯುತ್ತಿದ್ದಾರೆ. ಇನ್ನೂ ಕೆಲವರು ಹೊರಗಡೆಯಿಂದ ಬಂದು ಇಲ್ಲಿ ಮಿಂಚಿದ್ದಾರೆ. ಆ ಪೈಕಿ ಈ ವರ್ಷ ಕನ್ನಡಿಗರ ಹೃದಯವನ್ನು ತಮ್ಮ ಅಭಿನಯದಿಂದ ಗೆದ್ದ 06 ನಾಯಕಿಯರ ಪಟ್ಟಿ ಕೆಳಗಿದೆ. ಈ 6 ನಾಯಕಿಯರಲ್ಲಿ ಈ ವರ್ಷದ ಅತ್ಯುತ್ತಮ ನಾಯಕಿ ಯಾರು ಎಂದು ಆಯ್ಕೆಯನ್ನು ಕೂಡ ನೀವು ಮಾಡಬಹುದಾಗಿದೆ. ಅದ್ಹೇಗೆ ಎಂದು ತಿಳಿಯಲು ಮುಂದೆ ಓದಿ.

1. ರುಕ್ಮಿಣಿ ವಸಂತ್
ಸಪ್ತಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಸೈಡ್ ಬಿ ಚಿತ್ರಗಳ ಮೂಲಕ ಅಸಂಖ್ಯಾತ ಜನರ ಹೃದಯವನ್ನು ಗೆದ್ದ ರುಕ್ಮಿಣಿ ವಸಂತ್ ಈ ವರ್ಷ ಕೂಡ ಮೋಡಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಆರು ತಿಂಗಳು ಬೆಳ್ಳಿ ತೆರೆಯಿಂದ ದೂರ ಇದ್ದ ರುಕ್ಮಿಣಿ ಈ ವರ್ಷ ಬಘೀರ ಚಿತ್ರದ ಮೂಲಕ ತಮ್ಮ ಖಾತೆಯನ್ನು ತೆರೆದರು. ಡಾ.ಸ್ನೇಹಾ ಪಾತ್ರವನ್ನು ನಿರ್ವಹಿಸಿದರು. ಮೊದಲ ಬಾರಿ ಶ್ರೀಮುರಳಿ ಅವರ ಜೊತೆ ತೆರೆಯನ್ನು ಹಂಚಿಕೊಂಡರು.
ಈ ಚಿತ್ರದ ನಂತರ ರುಕ್ಮಿಣಿ ವಸಂತ್ ಅಭಿನಯದ ಭೈರತಿ ರಣಗಲ್ ಚಿತ್ರ ತೆರೆಗೆ ಬಂತು. ಜನರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಯ್ತು. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ವೈಶಾಲಿ ಪಾತ್ರವನ್ನು ನಿರ್ವಹಿಸಿದ್ದರು. ವಿಶೇಷ ಅಂದರೆ ಕನ್ನಡ ಚಿತ್ರರಂಗದ ದಂತಕತೆ ಡಾ ಶಿವರಾಜ್ ಕುಮಾರ್ ಎದುರು ತಮ್ಮ ಅಭಿನಯದಿಂದ ಎಲ್ಲರ ಗಮನವನ್ನು ರುಕ್ಮಿಣಿ ಸೆಳೆಯುವಲ್ಲಿ ಯಶಸ್ವಿಯಾದರು. ಇನ್ನೂ ವಿಶೇಷ ಅಂದರೆ ಈ ಎರಡು ಚಿತ್ರಗಳು ಕೇವಲ 15 ದಿನಗಳ ಅಂತರದಲ್ಲಿ ತೆರೆಗೆ ಬಂದವು. ಗೆದ್ದವು. ರುಕ್ಮಿಣಿಗೆ ಹೆಸರನ್ನು ನೀಡಿದವು. ಈ ಎರಡಲ್ಲಿ ನಿಮಗೆ ಯಾವ ಚಿತ್ರದಲ್ಲಿ ರುಕ್ಮಿಣಿ ವಸಂತ್ ಅವರ ಅಭಿನಯದ ತುಂಬಾ ಇಷ್ಟವಾಯ್ತು ಎನ್ನುವುದು ನಿಮಗೆ ಬಿಟ್ಟಿದ್ದಾದರೂ ರುಕ್ಮಿಣಿ ಅಭಿನಯಕ್ಕೆ ನೀವು ಮನ ಸೋತಿದ್ದರೆ ಫಿಲ್ಮಿಬೀಟ್ ವೆಬ್‌ಸೈಟ್ ಪೋಲ್‌ನಲ್ಲಿ ನೀವು ವೋಟ್ ಮಾಡಬಹುದು
2. ಸಪ್ತಮಿ ಗೌಡ
ಕಾಂತಾರ ಚಿತ್ರದ ಮೂಲಕ ಭಾರತದೆಲ್ಲೆಡೆ ಮನೆ ಮಾತಾದ ಸಪ್ತಮಿ ಗೌಡ ಈ ವರ್ಷ ಯುವರಾಜ್ ಕುಮಾರ್ ಅಭಿನಯದ ಯುವ ಚಿತ್ರದಲ್ಲಿ ಕಾಣಿಸಿಕೊಂಡರು. ಸಿರಿ ಪಾತ್ರಕ್ಕೆ ಜೀವವನ್ನು ತುಂಬಿದರು. ಚಿತ್ರದಲ್ಲಿ ಮಾಸ್ ಅಂಶಗಳು ಹೆಚ್ಚಿದ್ದರು ಸಿಕ್ಕ ಅವಕಾಶವನ್ನು ಸಪ್ತಮಿ ಗೌಡ ಸಮರ್ಥವಾಗಿ ಬಳಸಿಕೊಂಡರು. ತಮಗೆ ಇದ್ದ ಸ್ಕ್ರೀನ್ ಸ್ಪೇಸ್‌ನಲ್ಲಿ ಅನೇಕರ ಹೃದಯವನ್ನು ಗೆದ್ದರು.
3. ರೀಷ್ಮಾ ನಾಣಯ್ಯ
ಏಕ್ ಲವ್ ಯಾ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ಬೆಂಗಳೂರಿನ ಬೆಡಗಿ ರೀಶ್ಮಾ ನಾಣಯ್ಯ ಈ ವರ್ಷ ಉಪೇಂದ್ರ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಯುಐ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಮೂಲಕ ಭಾರತದೆಲ್ಲೆಡೆ ತಲುಪಿದರು. ಇನ್ನೂ ಈ ಚಿತ್ರದಲ್ಲಿ ರೀಶ್ಮಾ ಕುಣಿ ಕುಣಿದಾಡಿದ ಟ್ರೋಲ್ ಹಾಡು, ವರ್ಷ ಪೂರ್ತಿ ಅನೇಕರ ಬಾಯಲ್ಲಿ ನಲಿದಾಡಿದ್ದು ವಿಶೇಷ.
4. ಚೈತ್ರಾ ಆಚಾರ್
ನೇರ ನಡೆ ನುಡಿಗಳಿಂದ ಹೆಸರುವಾಸಿಯಾದ ಚೈತ್ರಾ ಆಚಾರ್ ಈ ವರ್ಷ ಎರಡು ಚಿತ್ರಗಳಲ್ಲಿ ಕಾಣಿಸಿಕೊಂಡರು. ಎರಡು ಪ್ರಯೋಗಾತ್ಮಕ ಚಿತ್ರಗಳೇ. ಆ ಪೈಕಿ ದೀಕ್ಷಿತ್ ಶೆಟ್ಟಿ ಅಭಿನಯದ, ಶ್ರೀನಿಧಿ ಬೆಂಗಳೂರು ನಿರ್ದೇಶನದ ಬ್ಲಿಂಕ್ ಚಿತ್ರ ಒಂದಾದರೆ ಹ್ಯಾಪಿ ಬರ್ತ್ ಡೇ ಟು ಮಿ ಮತ್ತೊಂದು. ವಿಶೇಷ ಅಂದರೆ ರಾಕೇಶ್ ಖದ್ರಿ ನಿರ್ದೇಶನದ ಈ ಚಿತ್ರ ಚಿತ್ರಮಂದಿರದಲ್ಲಿ ಬಿಡುಗಡೆಯಾಗದೇ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಆಗಿತ್ತು. ಬ್ಲಿಂಕ್ ಚಿತ್ರದಲ್ಲಿ ಇವರ ಪಾತ್ರದ ಹೆಸರು ದೇವಕಿ ಆದರೆ ಹ್ಯಾಪಿ ಬರ್ತ್‌ಡೇ ಟು ಮಿ ಚಿತ್ರದಲ್ಲಿ ಇವರ ಪಾತ್ರದ ಹೆಸರು ಅದಿತಿ,

5. ಮಾಳವಿಕಾ ನಾಯರ್
ಮಲಯಾಳಂ ಚಿತ್ರರಂಗದ ಮನಮೋಹಕ ನಟಿ ಮಾಳವಿಕಾ ನಾಯರ್ ಈ ವರ್ಷ ಕೃಷ್ಣಂ ಪ್ರಣಯ ಸಖಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು. ಕನ್ನಡದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಅನೇಕರ ಹೃದಯವನ್ನು ಗೆದ್ದರು. ಬಹುಶ ತಮ್ಮ ವೃತ್ತಿ ಬದುಕಿನಲ್ಲಿಯೇ ಮಾಳವಿಕಾ ನಾಯರ್ ಕೃಷ್ಣಂ ಪ್ರಣಯ ಸಖಿ ಚಿತ್ರವನ್ನು ಮರೆಯಲಾರರು. ಅಷ್ಟರ ಮಟ್ಟಿಗೆ ಈ ಚಿತ್ರ ಇವರಿಗೆ ಜನಪ್ರಿಯತೆಯನ್ನು ನೀಡಿತು
6. ಅಶ್ವಿನಿ ಅಂಬರೀಶ್
ತಾವೂ ಬೆಳೆಯುತ್ತಲೇ ಬೇರೆಯವರನ್ನು ಬೆಳೆಸುವ ಗುಣ ಹೊಂದಿರುವ ದುನಿಯಾ ವಿಜಯ್ ಈ ಬಾರಿ ಭೀಮ ಚಿತ್ರದ ಮೂಲಕ ಅಶ್ವಿನಿ ಅಂಬರೀಶ್ ಅವರನ್ನು ಕರುನಾಡಿಗೆ ಪರಿಚಯಿಸಿದರು. ಹೇರಳವಾದ ಪಾತ್ರಗಳು ಈ ಚಿತ್ರದಲ್ಲಿದ್ದರು ಕೂಡ ಅಶ್ವಿನಿ ತಮ್ಮ ಅಭಿನಯದಿಂದ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಪಾತ್ರವನ್ನು ಅಚ್ಚು ಕಟ್ಟಾಗಿ ನಿಭಾಯಿಸಿದರು.

ಈ ಆರು ಜನರಲ್ಲಿ ಈ ವರ್ಷ ನಿಮಗೆ ಇಷ್ಟವಾದ ನಟಿ ಯಾರು ? ಫಿಲ್ಮಿಬೀಟ್ ವೆಬ್‌ಸೈಟ್ ಪೋಲ್‌ನಲ್ಲಿ ನೀವು ವೋಟ್ ಮಾಡಿ. ನಿಮ್ಮ ನೆಚ್ಚಿನ ಸಿನಿಮಾ ಯಾವುದು ಎಂದು ಆಯ್ಕೆ ಮಾಡಿ. ನಿಮ್ಮ ಸ್ನೇಹಿತರೊಂದಿಗೆ ಫಿಲ್ಮಿಬೀಟ್ ಪೋಲ್ ಶೇರ್ ಮಾಡಿ ಮತ್ತು ನಿಮ್ಮ ನೆಚ್ಚಿನ ಸಿನಿಮಾ, ಕಲಾವಿದರು, ತಂತ್ರಜ್ಞರನ್ನು ಗೆಲ್ಲಿಸಿ.


Click it and Unblock the Notifications











