ಸೋಲು ಅರಿಯದ ಸಿನಿಮಾ ನಿರ್ದೇಶಕರು ಇವರು; ಕನ್ನಡದ ಇಬ್ಬರಿಗೆ ಸ್ಥಾನ
ಸ್ಟಾರ್ ನಟರು ಚಿತ್ರರಂಗವನ್ನು ಆಳುತ್ತಿದ್ದಾರೆ. ಹೀರೊ ಯಾರು ಎಂದು ನೋಡಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ಟ್ರೆಂಡ್ ಇವತ್ತಿಗೂ ಇದೆ. ಆದರೆ ಕೆಲ ನಿರ್ದೇಶಕರು ಈ ಮಾತನ್ನು ಸುಳ್ಳಾಗಿಸುತ್ತಾ ಬರ್ತಿದ್ದಾರೆ. ತಮ್ಮದೇ ಪ್ರತಿಭೆಯಿಂದ ಸಿನಿಮಾಗಳನ್ನು ಗೆಲ್ಲಿಸುತ್ತಿದ್ದಾರೆ.
ನಿರ್ದೇಶಕನನ್ನು ಕ್ಯಾಪ್ಟನ್ ಆಫ್ ದಿ ಶಿಪ್ ಅಂತಾರೆ. ಒಂದು ಸಿನಿಮಾ ಕಲ್ಪನೆ, ಕಥೆ, ಚಿತ್ರಕಥೆ, ಅದನ್ನು ಕಟ್ಟಿಕೊಡುವ ಮಾಂತ್ರಿಕ ನಿರ್ದೇಶಕ. ಒಂದು ಸಿನಿಮಾದ ಮೊದಲ ಪ್ರೇಕ್ಷಕ. ನಟನ ಸ್ಟಾರ್‌ಡಮ್ ಮೀರಿ ನಿರ್ದೇಶಕರು ಗೆದ್ದಿರುವ ಉದಾಹರಣೆ ಇದೆ. ಸಿನಿಮಾಗಳನ್ನು ಗೆಲ್ಲಿಸಿರುವುದು ನೋಡಿದ್ದೇವೆ. ಚಿತ್ರರಂಗದಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಕೆಲ ನಿರ್ದೇಶಕರು ಸೋತ ಉದಾಹರಣೆಯೇ ಇಲ್ಲ. 100% ಸಕ್ಸಸ್ ರೇಟ್ ಹೊಂದಿದ್ದಾರೆ. ಇವತ್ತಿಗೂ ಅವರ ಸಿನಿಮಾಗಳಿಗೆ ಪ್ರೇಕ್ಷಕರು ಕಾದು ಕೂರುತ್ತಾರೆ.
ಸಿನಿಮಾ ಸಕ್ಸಸ್ ಸೂತ್ರ ಏನು ಎನ್ನುವುದು ಯಾರಿಗೂ ಗೊತ್ತಿಲ್ಲ. ಅದೇ ಕಾರಣಕ್ಕೆ ಎಂಥಹ ದೊಡ್ಡ ಸಿನಿಮಾ ಕೂಡ ಸೋತುಬಿಡುತ್ತದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗುತ್ತಿದೆ. ಆ ಭಾರವನ್ನು ನಿಭಾಯಿಸಿ ಹಿಟ್ ಕೊಡುವುದು ತಮಾಷೆಯ ಮಾತಲ್ಲ. ಅದೇ ಕಾರಣಕ್ಕೆ ನಿರ್ದೇಶಕರು ಅಳೆದು ತೂಗಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಒಂದು ಸಿನಿಮಾ ಮಾಡಲು ಸಾವಿರ ಬಾರಿ ಯೋಚಿಸುತ್ತಾರೆ.
ಕೆಲವರು ಭಿನ್ನ ವಿಭಿನ್ನ ಪ್ರಯೋಗಗಳನ್ನು ಮಾಡಿ ಗೆಲ್ಲುತ್ತಿದ್ದಾರೆ. ಅಂತಿಮವಾಗಿ ಗೆಲುವು ಮುಖ್ಯ. ಪ್ರೇಕ್ಷಕನಿಗೆ ಮನರಂಜನೆ ಅಗತ್ಯ. ಪ್ರೇಕ್ಷಕರ ನಾಡಿಮಿಡಿತ ಅರಿತವರು ಗೆಲ್ಲುತ್ತಾರೆ. ಸಿನಿಮಾ ಬಜೆಟ್, ಸ್ಟಾರ್‌ಕಾಸ್ಟ್ ಯಾವುದು ಇಲ್ಲಿ ಗಣನೆಗೆ ಬರಲ್ಲ. ಸಿನಿಮಾ ಇಷ್ಟ ಆಯ್ತಾ? ಇಲ್ವಾ? ಎನ್ನುವುದೇ ಇಲ್ಲಿ ಮಾನದಂಡ.
ತೆಲುಗು ನಿರ್ದೇಶಕರು
ಭಾರತೀಯ ಚಿತ್ರರಂಗದಲ್ಲೇ ಸೋಲಿಲ್ಲದ ಸರದಾರ ಎನಿಸಿಕೊಂಡಿರುವುದು ಎಸ್. ಎಸ್ ರಾಜಮೌಳಿ. 'ಸ್ಟೂಡೆಂಟ್ ನಂಬರ್ 1' ಚಿತ್ರದಿಂದ ಶುರುಮಾಡಿ 'RRR'ವರೆಗೆ ಜಕ್ಕಣ್ಣ ನಿರ್ದೇಶಿಸಿದ ಯಾವುದೇ ಸಿನಿಮಾ ಸೋತಿಲ್ಲ. 'ಮಗಧೀರ', 'ಬಾಹುಬಲಿ' ರೀತಿಯ ಸೆನ್ಸೇಷನ್ ಸಿನಿಮಾಗಳನ್ನು ಮೌಳಿ ಕಟ್ಟಿಕೊಟ್ಟಿದ್ದಾರೆ. 'ಅರ್ಜುನ್ ರೆಡ್ಡಿ' ಹಾಗೂ 'ಅನಿಮಲ್' ಸಿನಿಮಾಗಳ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಕೂಡ 100 % ಸಕ್ಸಸ್ ರೇಟ್ ಹೊಂದಿದ್ದಾರೆ.
ತಮಿಳು ಫಿಲ್ಮ್ ಮೇಕರ್ಸ್
ಅತ್ತ ಕಾಲಿವುಡ್‌ನಲ್ಲಿ ಲೋಕೇಶ್ ಕನಕರಾಜ್, ಅಟ್ಲಿ, ವೆಟ್ರಿ ಮಾರನ್ ಕೂಡ ಇದೇ ಲಿಸ್ಟ್‌ಗೆ ಸೇರುತ್ತಾರೆ. 'ಜವಾನ್' ಚಿತ್ರದ ಮೂಲಕ ಅಟ್ಲಿ ಬಾಲಿವುಡ್ ಪ್ರವೇಶಿಸಿ ಗೆದ್ದಿದ್ದಾರೆ. ಹಿಟ್ ಸಿನಿಮಾಗಳನ್ನೇ ಕೊಡುತ್ತಾ ಬಂದಿದ್ದ ವೆಟ್ರಿ ಮಾರನ್ 'ವಿಡುತಲೈ'-2 ಮೂಲಕ ನಿರಾಸೆ ಮೂಡಿಸಿದ್ದಾರೆ ಎಂದು ಸಿನಿರಸಿಕರು ಹೇಳುತ್ತಿದ್ದಾರೆ. ಒಂದ್ಕಾಲದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಚಿತ್ರಗಳನ್ನು ಕೊಟ್ಟ ಶಂಕರ್ ಈಗ ಸೋಲಿನ ಸುಳಿಗೆ ಸಿಲುಕಿದ್ದಾರೆ.

ಹಿಂದಿ ನಿರ್ದೇಶಕರ ಪಟ್ಟಿ
ಬಾಲಿವುಡ್ ಸಿನಿಮಾಗಳು ಇತ್ತೀಚೆಗೆ ಅಷ್ಟಾಗಿ ಸದ್ದು ಮಾಡುತ್ತಿಲ್ಲ. ದಕ್ಷಿಣದ ನಿರ್ದೇಶಕರು ಬಾಲಿವುಡ್ ಪ್ರವೇಶಿಸಿ ಹಿಟ್ ಸಿನಿಮಾಗಳನ್ನು ಕೊಡುತ್ತಿದ್ದಾರೆ. ರಾಜ್‌ಕುಮಾರ್ ಹಿರಾನಿ, ಕರಣ್ ಜೋಹರ್, ಸಿದ್ದಾರ್ಥ್ ಆನಂದ್, ಆದಿತ್ಯಾ ಚೋಪ್ರಾ ಬ್ಲಾಕ್‌ಬಸ್ಟರ್ ಸಿನಿಮಾಗಳ ಮೂಲಕ ದಾಖಲೆ ಬರೆದಿದ್ದಾರೆ.
ಸ್ಯಾಂಡಲ್‌ವುಡ್ ಕಿಲಾಡಿಗಳು
ಕನ್ನಡದಲ್ಲಿ ಉಪೇಂದ್ರ ಹಾಗೂ ಪ್ರಶಾಂತ್ ನೀಲ್ ನಿರ್ದೇಶಿಸಿದ ಎಲ್ಲಾ ಸಿನಿಮಾಗಳು ಗೆದ್ದಿವೆ. ಉಪ್ಪಿ ನಿರ್ದೇಶನದ 'ಯುಐ' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. ತಮ್ಮ ವಿಭಿನ್ನ ಚಿತ್ರದಿಂದ ರಿಯಲ್ ಸ್ಟಾರ್ ಮ್ಯಾಜಿಕ್ ಮಾಡಿದ್ದಾರೆ. 'ಉಗ್ರಂ' ಹಾಗೂ 'KGF' ಸರಣಿ ಬಳಿಕ ತೆಲುಗಿನ 'ಸಲಾರ್' ಸಿನಿಮಾ ನಿರ್ದೇಶಿದಿ ನೀಲ್ ಗೆದ್ದಿದ್ದಾರೆ. 'ತರ್ಲೆ ನನ್ಮಗ' ಉಪ್ಪಿ ನಿರ್ದೇಶಿಸಿದ ಮೊದಲ ಚಿತ್ರ. ಬಳಿಕ 'ಶ್', 'ಓಂ', 'ಎ', 'ಉಪೇಂದ್ರ', 'ಸ್ವಸ್ತಿಕ್', 'ಸೂಪರ್', 'ಉಪ್ಪಿ-2' ಹೀಗೆ ಎಲ್ಲವೂ ಗೆಲುವಿನ ದಡ ಸೇರಿದೆ.


Click it and Unblock the Notifications











