ದಕ್ಷಿಣದ ಈ ಸ್ಟಾರ್ ನಟರ ಮಕ್ಕಳನ್ನು ತೆರೆಮೇಲೆ ಹೀರೊ ಆಗಿ ನೋಡಲು ಫ್ಯಾನ್ಸ್ ಕಾತರ
ಹೀರೊ ಮಗ ಹೀರೊನೆ ಆಗಬೇಕಾ? ಸಿನಿಮಾ ಹಿನ್ನೆಲೆ ಇರುವವರೇ ಚಿತ್ರರಂಗಕ್ಕೆ ಬಂದರೆ ಹೊರಗಿನಿಂದ ಬರುವವರ ಕಥೆಯೇನು? ಪ್ರತಿಭೆ ಇಲ್ಲದಿದ್ದರೂ ಅಪ್ಪನ ಮುಖ ನೋಡಿ ಮಕ್ಕಳನ್ನು ಒಪ್ಪಿಕೊಳ್ಳಬೇಕಾ? ನೆಪೊಟಿಸಂ ಸರೀನಾ? ತಪ್ಪಾ? ಹೀಗೆ ಚರ್ಚೆ ನಡೆಯುತ್ತಲೇ ಇದೆ.
ಒಂದ್ಕಾಲದಲ್ಲಿ ನೆಪೊಟಿಸಂ ವಿಚಾರ ಚಿತ್ರರಂಗದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಸುಶಾಂತ್ ಸಿಂಗ್ ರಜಪೂತ್ ಅಗಲಿಕೆ ಬಳಿಕ ಈ ಚರ್ಚೆ ಮತ್ತೆ ಮುನ್ನಲೆಗೆ ಬಂದಿತ್ತು. ನೆಪೊಟಿಸಂ ಬಗ್ಗೆ ಪರ ವಿರೋಧ ಚರ್ಚೆ ಮುಗಿಯದ ಅಧ್ಯಾಯ. ಏನೇ ಸಿನಿಮಾ ಹಿನ್ನೆಲೆ ಇದ್ದರೂ ಪ್ರತಿಭೆ, ಪರಿಶ್ರಮ ಇಲ್ಲದಿದ್ದರೆ ಇಂಡಸ್ಟ್ರಿಯಲ್ಲಿ ಉಳಿಯುವುದು ಕಷ್ಟ ಎನ್ನುವುದು ಕೆಲವರ ವಾದ. ಆರಂಭದಲ್ಲಿ ಒಂದೆರಡು ಅವಕಾಶಗಳು ಸಿಗಬಹುದು ಆದರೆ ಬಳಿಕ ತನ್ನ ಸಾಮರ್ಥ್ಯ ಪ್ರದರ್ಶಿಸಲೇಬೇಕು ಎಂದು ಹೇಳುತ್ತಾರೆ.

ಹೊರಗಿನಿಂದ ಚಿತ್ರರಂಗಕ್ಕೆ ಬರುವವರು ಒಂದು ಅವಕಾಶಕ್ಕಾಗಿ ಸಾಕಷ್ಟು ಕಷ್ಟಪಡಬೇಕು. ಎಷ್ಟೋ ಪ್ರತಿಭೆಗಳು ಅವಕಾಶಗಳು ಸಿಗದೇ ತೆರೆಮರೆಗೆ ಸರಿದು ಬಿಡುತ್ತಾರೆ. ಇನ್ನು ತಮ್ಮ ಮಕ್ಕಳನ್ನು ಬೆಳೆಸಲು ಬೇರೆ ಪ್ರತಿಭೆಗಳನ್ನು ತುಳಿಯುವ ಪ್ರಯತ್ನ ಮಾಡುತ್ತಾರೆ ಎನ್ನುವ ಆರೋಪ ಕೂಡ ಇದೆ. ಆದರೂ ದಶಕಗಳಿಂದ ಅತ್ತ ಬಾಲಿವುಡ್, ಇತ್ತ ಟಾಲಿವುಡ್, ಕಾಲಿವುಡ್, ಸ್ಯಾಂಡಲ್‌ವುಡ್, ಮಾಲಿವುಡ್‌ನದಲ್ಲಿ ಖ್ಯಾತ ನಟರ ಮಕ್ಕಳು ಹೀರೊ ಆಗಿ ಚಿತ್ರರಂಗಕ್ಕೆ ಬಂದಿದ್ದಾರೆ. ಕೆಲವರು ಗೆದ್ದು ಉಳಿದುಕೊಂಡಿದ್ದಾರೆ.
ಬಾಲಿವುಡ್‌ನಲ್ಲಿ ಅಮಿತಾಬ್ ಪುತ್ರ ಅಭಿಷೇಕ್, ಸೈಲ್ ಅಲಿಖಾನ್ ಪುತ್ರ ಅರ್ಜುನ್ ಕಪೂರ್ ಹಾಗೂ ಪುತ್ರಿ ಸಾರಾ ಅಲಿಖಾನ್, ಶ್ರೀದೇವಿ ಪುತ್ರಿ ಜಾನ್ವಿ ಕಪೂರ್, ಜಾಕಿಶ್ರಾಫ್ ಪುತ್ರ ಟೈಗರ್ ಶ್ರಾಫ್, ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್ ಹೀಗೆ ಲಿಸ್ಟ್ ಬೆಳೆಯುತ್ತಾ ಹೋಗುತ್ತದೆ. ಅತ್ತ ತೆಲುಗಿನಲ್ಲಿ ಎನ್‌ಟಿಆರ್ ಮಕ್ಕಳು, ಮೊಮ್ಮಕ್ಕಳು ಅದೇ ರೀತಿ ನಟ ಚಿರಂಜೀವಿ ಸಹೋದರರು, ಮಗ, ಭಾವನ ಮಗ ಅಲ್ಲು ಅರ್ಜುನ್, ಸಹೋದರಿಯ ಮಕ್ಕಳು, ಇನ್ನು ಮೋಹನ್ ಬಾಬು ಮಕ್ಕಳು ಹೀಗೆ ಲಿಸ್ಟ್ ಬೆಳೆಯುತ್ತಾ ಹೋಗುತ್ತದೆ.
ತಮಿಳಿನಲ್ಲಿ ಸ್ಟಾರ್ ನಟರಾದ ವಿಜಯ್, ಸೂರ್ಯ, ಕಾರ್ತಿ, ಧನುಷ್, ಸಿಂಬು ಹೀಗೆ ಎಲ್ಲರೂ ಸಿನಿಮಾ ಹಿನ್ನಲೆ ಇರುವ ಕುಟುಂಬಗಳಿಂದ ಬಂದವರೇ. ವಿಕ್ರಂ ತಮ್ಮ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಮಾಲಿವುಡ್‌ನಲ್ಲಿ ಕೀರ್ತಿ ಸುರೇಶ್, ಪೃಥ್ವಿರಾಜ್ ಸುಕುಮಾರನ್, ದುಲ್ಕರ್ ಸಲ್ಮಾನ್, ಕಲ್ಯಾಣಿ ಪ್ರಿಯದರ್ಶಿನಿ ಹೀಗೆ ಎಲ್ಲರೂ ಚಿಕ್ಕಂದಿನಿಂದ ಚಿತ್ರರಂಗವನ್ನು ಹತ್ತಿರದಿಂದ ನೋಡಿ ಬೆಳೆದವರು.

ಕನ್ನಡದಲ್ಲಿ ಅಣ್ಣಾವ್ರ ಮಕ್ಕಳು, ಮೊಮ್ಮಕ್ಕಳು ಚಿತ್ರರಂಗಕ್ಕೆ ಬಂದು ಯಶಸ್ಸು ಕಂಡಿರುವುದು ಗೊತ್ತೇಯಿದೆ. ಶಿವಣ್ಣ ಇವತ್ತಿಗೂ ತಮ್ಮ ಎನರ್ಜಿ, ನಟನೆ, ಡ್ಯಾನ್ಸ್‌ನಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಪುನೀತ್ ಚಿಕ್ಕಂದಿನಲ್ಲೇ ಸ್ಟಾರ್ ಆಗಿದ್ದವರು. ಅಂಬರೀಶ್ ಪುತ್ರ ಅಭಿಷೇಕ್, ರವಿಚಂದ್ರನ್ ಮಕ್ಕಳು, ದೇವರಾಜ್ ಮಕ್ಕಳು ಹೀಗೆ ಸಾಕಷ್ಟು ಜನ ಚಿತ್ರರಂಗಕ್ಕೆ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ.
ನೆಪೋಟಿಸಂ ವಿಚಾರ ಪಕ್ಕಕ್ಕಿಟ್ಟರೆ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನ ಮಕ್ಕಳು ಚಿತ್ರರಂಗಕ್ಕೆ ಬರಬೇಕು ಎಂದು ಆಸೆಪಡುತ್ತಾರೆ. ಅದು ಕೂಡ ಹೀರೊ, ಹೀರೊಯಿನ್ ಆಗಿಯೇ ನಟಿಸಬೇಕು ಎಂದು ಬಯಸುತ್ತಾರೆ. ನಟರ ಮಕ್ಕಳು ಹೈಸ್ಕೂಲ್‌ನಲ್ಲಿ ಇದ್ದಾಗಲೇ ಮುಂದಿನ ಹೀರೊ, ನಮ್ಮ ಜ್ಯೂ. ಬಾಸ್ ಅಂತೆಲ್ಲಾ ಅಭಿಮಾನ ಪ್ರದರ್ಶಿಸುತ್ತಾರೆ. ನೆಚ್ಚಿನ ನಟ ಹುಟ್ಟುಹಬ್ಬದ ರೀತಿಯಲ್ಲೇ ಅವರ ಮಕ್ಕಳ ಹುಟ್ಟುಹಬ್ಬ ಆಚರಿಸಲು ಆರಂಭಿಸುತ್ತಾರೆ. ಸದ್ಯ ದಕ್ಷಿಣದ ಕೆಲ ಸ್ಟಾರ್ ನಟರ ಮಕ್ಕಳನ್ನು ತೆರೆಮೇಲೆ ಹೀರೊ ಆಗಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ವಿನೀಶ್ ದರ್ಶನ್
ಕನ್ನಡ ನಟ ದರ್ಶನ್ ಪುತ್ರ ವಿನೀಶ್ ಚಿತ್ರರಂಗಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ 'ಐರಾವತ' ಹಾಗೂ 'ಯಜಮಾನ' ಚಿತ್ರಗಳಲ್ಲಿ ವಿನೀಶ್ ಅಪ್ಪನ ಜೊತೆ ಸಣ್ಣ ಸಣ್ಣ ಝಲಕ್‌ನಲ್ಲಿ ಕಾಣಿಸಿಕೊಂಡಿದ್ದಾನೆ. ಆತನ ಹುಟ್ಟುಹಬ್ಬವನ್ನು ಕೂಡ ಅಭಿಮಾನಿಗಳು ಆಚರಿಸುತ್ತಾರೆ. ನಟ ದರ್ಶನ್ ಕೂಡ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸದ್ಯ ವಿನೀಶ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದಾನೆ.
ಆಯುಷ್ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಪುತ್ರ ಆಯುಷ್ ಕೂಡ ಚಿತ್ರರಂಗಕ್ಕೆ ಬರುವ ಆಸೆ ವ್ಯಕ್ತಪಡಿಸಿದ್ದಾನೆ. ಅಪ್ಪನ ಹೆಸರು ಹೇಳಿಕೊಂಡು ಚಿತ್ರರಂಗಕ್ಕೆ ಬರಲ್ಲ. ನಾನು ಸೊನ್ನೆಯಿಂದ ಶುರು ಮಾಡ್ತೀನಿ. ಕಷ್ಟಪಟ್ಟು ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳುತ್ತೀನಿ. ನನಗೆ ಯಾರ ಬೆಂಬಲ ಬೇಡ. ನಟನಾಗಲು ಬೇಕಾದ ಎಫರ್ಟ್ ಹಾಕುತ್ತೇನೆ. ಬರವಣಿಗೆ ಆಸಕ್ತಿ ಕೂಡ ಇದೆ. ನಿರ್ದೇಶಕ ಆಗ್ತಿನೋ ಇಲ್ವೋ ಗೊತ್ತಿಲ್ಲ ಎಂದು ಆಯುಷ್ ಕೆಲ ದಿನಗಳ ಹಿಂದೆ ಮಾಧ್ಯಮಗಳ ಬಳಿ ಹೇಳಿದ್ದ. ಈಗಾಗಲೇ ಉಪ್ಪಿ ಅಣ್ಣನ ಮಗ ನಿರಂಜನ್ ಹೀರೊ ಆಗಿ ಚಿತ್ರರಂಗಕ್ಕೆ ಬಂದಿದ್ದಾರೆ.
ಅಕಿರಾ ನಂದನ್
ತೆಲುಗು ನಟ ಪವನ್ ಕಲ್ಯಾಣ್ ಪುತ್ರ ಅಕಿರಾ ನಂದನ್ ಚಿತ್ರರಂಗಕ್ಕೆ ಬರಬೇಕು ಎನ್ನುವುದು ಅಭಿಮಾನಿಗಳ ಆಸೆ. ಸದ್ಯ ರಾಜಕೀಯರಂಗದಲ್ಲಿ ಪವನ್ ಬ್ಯುಸಿಯಾಗಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಿಲ್ಲ, ಅವರ ಜಾಗವನ್ನು ಪುತ್ರ ಅಕಿರಾ ತುಂಬಬೇಕು ಎಂದು ಸಾಕಷ್ಟು ಜನ ಕೇಳುತ್ತಿದ್ದಾರೆ. ಈ ಬಗ್ಗೆ ಆತನ ತಾಯಿ ರೇಣು ದೇಸಾಯಿ ಬಳಿ ಪದೇ ಪದೆ ಪ್ರಶ್ನೆ ಕೇಳುತ್ತಾರೆ. ನನಗೂ ಮಗನನ್ನು ತೆರೆಮೇಲೆ ನೋಡುವ ಆಸೆ, ಆತ ಚಿತ್ರರಂಗಕ್ಕೆ ಬರಬೇಕು ಎನ್ನುವುದು ನನ್ನ ಬಯಕೆ ಎಂದು ಹೇಳುತ್ತಾ ಬರುತ್ತಿದ್ದಾರೆ. ಆದರೆ ಸದ್ಯಕ್ಕೆ ಆತ ನಟನಾಗುವ ಯಾವುದೇ ಸಾಧ್ಯತೆ ಇಲ್ಲ ಎನ್ನಲಾಗ್ತಿದೆ.
ಮಹೇಶ್ ಪುತ್ರ ಗೌತಮ್
ತೆಲುಗು ನಟ ಮಹೇಶ್ ಪುತ್ರ ಗೌತಮ್ ಕೂಡ ಚಿತ್ರರಂಗಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಅದಕ್ಕಾಗಿ ತಯಾರಿ ಸಹ ಆರಂಭವಾಗಿದೆ ಎನ್ನಲಾಗ್ತಿದೆ. '1 ನೆನೊಕ್ಕಡಿನೆ' ಚಿತ್ರದಲ್ಲಿ ಮಹೇಶ್ ಬಾಬು ಬಾಲ್ಯದ ಪಾತ್ರದಲ್ಲಿ ಗೌತಮ್ ನಟಿಸಿದ್ದನು. ತಾತ ಕೃಷ್ಣ ಕೂಡ ತೆಲುಗು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದಿದ್ದರು. ಹಾಗಾಗಿ ಕುಟುಂಬದಲ್ಲೇ ಸಿನಿಮಾ ಆವರಿಸಿಕೊಂಡಿದೆ. ಇನ್ನು ಮಹೇಶ್ ಬಾಬು ಪುತ್ರಿ ಸಿತಾರಾ ಕೆಲ ಜಾಹೀರಾತುಗಳಲ್ಲಿ ನಟಿಸೋಕೆ ಆರಂಭಿಸಿದ್ದಾಳೆ.
ಮೋಕ್ಷಾಜ್ಞ ಬಾಲಕೃಷ್ಣ
ತೆಲುಗು ನಟ ನಂದಮೂರಿ ಬಾಲಕೃಷ್ಣ ಪುತ್ರ ಮೋಕ್ಷಾಜ್ಞ ಚಿತ್ರರಂಗಕ್ಕೆ ಬರುವ ಸುದ್ದಿ ಬಹಳ ದಿನಗಳಿಂದ ಕೇಳಿ ಬರುತ್ತಲೇ ಇದೆ. ತಾತ ಎನ್ ಟಿ ರಾಮಾರಾವ್ ಭಾರತೀಯ ಚಿತ್ರರಂಗದಲ್ಲೇ ಅದ್ಭುತ ಸಾಧನೆ ಮಾಡಿದವರು. ಬಳಿಕ ತಂದೆ ಹಾದಿಯಲ್ಲೇ ಬಾಲಯ್ಯ ಚಿತ್ರರಂಗಕ್ಕೆ ಬಂದು ಗೆದ್ದಿದ್ದಾರೆ. ಇವತ್ತಿಗೂ ಬಹುಬೇಡಿಕೆಯ ನಟನಾಗಿ ಗುರ್ತಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಮೋಕ್ಷಾಜ್ಞ ಆರಂಗೇಟ್ರಂ ಬಗ್ಗೆ ಭಾರೀ ಚರ್ಚೆ ನಡೀತಿದೆ.
ವಿಜಯ್ ಪುತ್ರ ಸಂಜಯ್
ದಳಪತಿ ವಿಜಯ್ ರಾಜಕೀಯರಂಗದತ್ತ ಮುಖ ಮಾಡಿದ್ದಾರೆ. 'ಜನ ನಾಯಕನ್' ಸಿನಿಮಾ ಬಳಿಕ ಸಿನಿಮಾಗಳಲ್ಲಿ ನಟಿಸೋದು ಅನುಮಾನ ಎನ್ನಲಾಗ್ತಿದೆ. ವಿಜಯ್ ಪುತ್ರ ಜಾಸನ್ ಸಂಜಯ್ ಚಿತ್ರರಂಗಕ್ಕೆ ಬರುತ್ತಾನೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಅಚ್ಚರಿ ಎನ್ನುವಂತೆ ಹೀರೊ ಆಗಿ ನಟಿಸುವ ಬದಲು ನಿರ್ದೇಶಕನಾಗಿ ಸಂಜಯ್ ಸಿನಿಜರ್ನಿ ಆರಂಭಿಸಿದ್ದಾನೆ. ಮುಂದೆ ಹೀರೊ ಆಗಿ ತೆರೆಮೇಲೆ ಬರ್ತಾನಾ? ಕಾದು ನೋಡಬೇಕಿದೆ.
ಇನ್ನು ಸುದೀಪ್ ಸಹೋದರಿ ಮಗ ಸಂಚಿತ್ ಕೂಡ ಹೀರೊ ಆಗಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಮುಂದಾಗಿದ್ದಾರೆ. 'ಮ್ಯಾಂಗೋ ಪಚ್ಚ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಂಚಿತ್ ಎಂಟ್ರಿಗೆ ಸುದೀಪಿಯನ್ಸ್ ಕೂಡ ಕಾಯುತ್ತಿದ್ದಾರೆ.


Click it and Unblock the Notifications











