ದೊಡ್ಮನೆ ಜೊತೆ ದರ್ಶನ್ ಕ್ಲ್ಯಾಶ್‌ಗೆ ಕಾರಣವೇನು? ಭಿನ್ನಾಭಿಪ್ರಾಯ ಶುರುವಾಗಿದ್ದೇಗೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ದರ್ಶನ್ ಸಹವಾಸ ದೋಷವೇ ಆತನನ್ನು ಇಲ್ಲಿಗೆ ತಂದು ನಿಲ್ಲಿಸಿದೆ ಎನ್ನುವ ಆರೋಪಗಳು ಕೇಳಿಬರ್ತಿದೆ. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ದರ್ಶನ್ ಬಹಳ ಸೌಮ್ಯ, ಸರಳ ವ್ಯಕ್ತಿತ್ವದವರಾಗಿದ್ದರು. ಹೋಗ್ತಾ ಹೋಗ್ತಾ ಬದಲಾದರು ಎಂದು ಆತನನ್ನು ಹತ್ತಿರದಿಂದ ಬಲ್ಲವರು ಹೇಳುತ್ತಿದ್ದಾರೆ.
ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಮಗನಾದರೂ ದರ್ಶನ್ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಮಗನಿಗೆ ಅವಕಾಶ ಕೊಡಿಸಲು ತಾಯಿ ಮೀನಾ ತೂಗುದೀಪ ಸಾಕಷ್ಟು ನಿರ್ಮಾಪಕರ ಮನೆ ಬಾಗಿಲಿಗೆ ಹೋಗಿದ್ದರು. ಮೈಸೂರಿನಲ್ಲಿ ಹಸು ಕಟ್ಟಿ ಹಾಲು ಮಾರಿಕೊಂಡಿದ್ದ ದರ್ಶನ್ ಚಿತ್ರರಂಗಕ್ಕೆ ಬಂದು ಗೆದ್ದರು. ಸೂಪರ್ ಸ್ಟಾರ್ ಆಗಿ ಮೆರೆದರು. ಇನ್ನು ದೊಡ್ಮನೆ ಜೊತೆಗೂ ಸಣ್ಣ ಭಿನ್ನಾಭಿಪ್ರಾಯಗಳಿಟ್ಟುಕೊಂಡಿದ್ದರು. ಅದಕ್ಕೆ ಕಾರಣ ಅದೊಂದು ಸಣ್ಣ ಘಟನೆ ಎನ್ನುವುದು ಇದೀಗ ರಿವೀಲ್ ಆಗಿದೆ.

ಹೀರೊ ಆಗುವುದಕ್ಕೂ ಮುನ್ನ ದರ್ಶನ್ ಲೈಟ್‌ಬಾಯ್, ಕ್ಯಾಮರಾ ಅಸಿಸ್ಟೆಂಟ್ ಆಗಿ ಇದ್ದರು. ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಕೆಲಸ ಮಾಡಿದ್ದರು. 'ಜನುಮದ ಜೋಡಿ' ಚಿತ್ರಕ್ಕೂ ಛಾಯಾಗ್ರಾಹಕ ಗೌರಿಶಂಕರ್‌ಗೆ ಸಹಾಯಕರಾಗಿದ್ದರು. ಇದು ಓಪನ್ ಸೀಕ್ರೆಟ್. ಬಳಿಕ ದರ್ಶನ್ ಸಣ್ಣ ಪುಟ್ಟ ಪಾತ್ರಗಳ ಮೂಲಕ ಗುರ್ತಿಸಿಕೊಂಡು ಬಳಿಕ ಹೀರೊ ಆಗಿ ಬಡ್ತಿ ಪಡೆದಿದ್ದರು.
ಅಷ್ಟಕ್ಕೂ ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್‌ನಿಂದ ದರ್ಶನ್ ಹೊರ ಬಂದಿದ್ದು ಯಾಕೆ? ಅಂದು ಪಾರ್ವತಮ್ಮ ಹೇಳಿದ ಮಾತನ್ನು ದರ್ಶನ್ ತಪ್ಪಾಗಿ ಅರ್ಥೈಸಿಕೊಂಡಿದ್ದರು ಎಂದು ಇತ್ತೀಚೆಗೆ ನಿರ್ದೇಶಕ ಪ್ರಕಾಶ್ ರಾಜ್ ಮೇಹು ತಮ್ಮ ಫೇಸ್ಬುಕ್‌ನಲ್ಲಿ ಬರೆದುಕೊಂಡಿದ್ದರು. ಅವರು ಕೂಡ ಅದೇ ಬ್ಯಾನರ್‌ನಲ್ಲಿ ಕೆಲಸ ಮಾಡಿದ್ದರು. ಆ ಘಟನೆಗಳನ್ನೆಲ್ಲಾ ಹತ್ತಿರದಿಂದ ಕಂಡಿದ್ದರು.
ಇದೀಗ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಕೂಡ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಆರ್. ಕನ್ನಡ ಸುದ್ದಿವಾಹಿನಿ ಚರ್ಚೆಯಲ್ಲಿ ಮಾತನಾಡುತ್ತಾ ಚಿತ್ರರಂಗದಲ್ಲಿ ದರ್ಶನ್ ಆರಂಭದ ದಿನಗಳನ್ನು ವಿವರಿಸಿದ್ದಾರೆ. ಆ ವೀಡಿಯೋ ವೈರಲ್ ಆಗುತ್ತಿದೆ. "ನೀನಾಸಂಗೆ ಹೋಗಿ ಬಂದಮೇಲೆ ದರ್ಶನ್‌ಗೆ ಅವಕಾಶಗಳು ಸಿಗಲಿಲ್ಲ. ಆಗ ಗೌರಿಶಂಕರ್ ಬಳಿ ದರ್ಶನ್ ಸಹಾಯಕರಾಗಿ ಸೇರಿಕೊಂಡಿದ್ದರು"

"ಒಂದು ಸಣ್ಣ ಕ್ಲ್ಯಾಶ್ ಅಲ್ಲಿ ಶುರುವಾಯಿತು. ಪಾರ್ವತಮ್ಮ ಒಂದು ಹೊಸ ಕ್ಯಾಮರಾ ತರಿಸಿದ್ದರು. ಅದರ ಇನ್‌ಚಾರ್ಜ್ ದರ್ಶನ್‌ಗೆ ಕೊಡ್ತಾರೆ. ದರ್ಶನ್‌ಗೆ ತಕ್ಷಣ ಶಾಕ್ ಆಗುತ್ತದೆ. ಪುನೀತ್‌ನ ಹೀರೊ ಮಾಡಬೇಕು ಎನ್ನುವ ಕಾರಣಕ್ಕೆ ನನ್ನನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದುಕೊಂಡ್ರು. ಆ ಮೈಂಡ್‌ಸೆಟ್ ಬದಲಾಗಿದ್ದೆ ಹಾಗೆ. ಒಪ್ಪಲಿಲ್ಲ. ನಾನು ಆಕ್ಟ್ ಮಾಡ್ತೀನಿ ಎಂದು ಹೊರಬಂದ್ರು" ಎಂದು ಗಣೇಶ್ ಕಾಸರಗೋಡು ವಿವರಿಸಿದ್ದಾರೆ.
"ಪೂರ್ಣಿಮಾ ಎಂಟರ್‌ಪ್ರೈಸಸ್‌ನಿಂದ ಹೊರಬಂದ ಬಳಿಕ ಧಾರಾವಾಹಿ, ಸಣ್ಣ ಪುಟ್ಟ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಊಟಕ್ಕೆ ಕ್ಯೂ ನಿಂತಾಗ ಯಾರೋ ನೀನು ಎಂದು ದೂರ ತಳ್ಳಿದ್ದರು. ತುಂಬಾ ಕಷ್ಟಪಟ್ಟಿದ್ದಾರೆ. ಅದರಲ್ಲಿ ಅನುಮಾನವಿಲ್ಲ. ಇಂತಹ ಘಟನೆಗಳಿಂದ ಸವಾಲ್ ಹಾಕಿ ಸಾಧಿಸಿ ತೋರಿಸಿದರು" ಎಂದಿದ್ದಾರೆ.
'ಮೆಜೆಸ್ಟಿಕ್' ಚಿತ್ರದಲ್ಲಿ ಹೀರೊ ಆಗಿ ಪರಿಚಿತರಾದ ದರ್ಶನ್ ಬಳಿಕ ಹಿಂತಿರುಗಿ ನೋಡಲಿಲ್ಲ. ಸೋತಾಗಲೆಲ್ಲಾ ಫೀನಿಕ್ಸ್ ರೀತಿ ಎದ್ದು ಬಂದಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆ 13 ವರ್ಷಗಳ ಹಿಂದೆ ಜೈಲಿಗೆ ಹೋಗಿ ಬಂದರೂ ದರ್ಶನ್ ಕ್ರೇಜ್ ಕುಗ್ಗಲಿಲ್ಲ. ಅಲ್ಲಿಂದ ಮುಂದೆ ಮತ್ತಷ್ಟು ದೊಡ್ಡದಾಗಿ ಬೆಳೆದರು. ಆದರೆ ಪದೇ ಪದೆ ವಿವಾದಗಳಿಂದ ಸುದ್ದಿ ಆಗುತ್ತಾ ಬಂದರು. ಇವತ್ತು ಮತ್ತೆ ಪರಪ್ಪನ ಅಗ್ರಹಾಯ ಜೈಲು ಸೇರುವ ಸ್ಥಿತಿಗೆ ಬಂದು ತಲುಪಿದ್ದಾರೆ.


Click it and Unblock the Notifications










