twitter
    For Quick Alerts
    ALLOW NOTIFICATIONS  
    For Daily Alerts

    ಅಂದು ಅಣ್ಣಾವ್ರು-ಇಂದು ಸುದೀಪ್: ಗಣೇಶ್ ಕಾಸರಗೋಡು ನೆನಪಿಸಿದ ಹಿಂದಿವಾಲಾಗಳ ದುರಹಂಕಾರ

    |

    ಹಿಂದಿ ರಾಷ್ಟ್ರಭಾಷೆ ಅಲ್ಲ ಎಂಬ ಸತ್ಯ ಹೇಳಿದ ನಟ ಸುದೀಪ್ ವಿರುದ್ಧ ಅಜಯ್ ದೇವಗನ್ ಹಾಗೂ ಇನ್ನೂ ಕೆಲವು ಹಿಂದಿ ಭಾಷಿಕರು ಮುಗಿಬಿದ್ದಿದ್ದಾರೆ. ಅಜಯ್ ದೇವಗನ್ ಅಂತೂ ನಿಮ್ಮ ಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಏಕೆ ಮಾಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

    ಹಿಂದಿವಾಲಾಗಳ ಭಾಷಾ ಅಜ್ಞಾನ, ದಕ್ಷಿಣ ಭಾರತ ಚಿತ್ರರಂಗದ ನಟ-ನಟಿಯರ ಬಗ್ಗೆ ಅವರಿಗಿರುವ ಉಡಾಫೆ, ಅವರ ಶ್ರೇಷ್ಠತೆಯ ವ್ಯಸನಗಳ ಬಗ್ಗೆ ತೀವ್ರ ಆಕ್ರೋಶವನ್ನು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದವರು ತೀವ್ರ ಪ್ರತಿಭಟನೆ ನಡೆಸಿದ್ದಾರೆ.

    ಗಾಜನೂರಿನ ಮನೆಯಲ್ಲಿ ವಾಸಿಸಬೇಕೆಂಬ ಡಾ.ರಾಜ್‌ಕುಮಾರ್ ಆಸೆ ಈಡೇರಲೇ ಇಲ್ಲ ಗಾಜನೂರಿನ ಮನೆಯಲ್ಲಿ ವಾಸಿಸಬೇಕೆಂಬ ಡಾ.ರಾಜ್‌ಕುಮಾರ್ ಆಸೆ ಈಡೇರಲೇ ಇಲ್ಲ

    ಈ ನಡುವೆ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು, ಈ ಹಿಂದಿವಾಲಾಗಳು ದಕ್ಷಿಣ ಭಾರತದ ನಟರ ವಿರುದ್ಧ, ಭಾಷೆಯ ವಿರುದ್ಧ ತಮ್ಮ ಅಸಹನೆ ವ್ಯಕ್ತಪಡಿಸಿರುವುದು ಇದು ಮೊದಲೇನಲ್ಲ ಎಂದಿದ್ದಾರೆ. ಡಾ ರಾಜ್‌ಕುಮಾರ್ ಬಗ್ಗೆ ಹಿಂದಿಯ ಖ್ಯಾತ ನಟರೊಬ್ಬರ ಕುಮ್ಮಕ್ಕಿನಿಂದ ಹಿಂದಿ ಪತ್ರಿಕೆಯೊಂದು ಹೀನವಾಗಿ ವರದಿ ಮಾಡಿದ್ದು, ಆ ನಂತರ ಆದ ಬೆಳವಣಿಗೆಗಳ ಬಗ್ಗೆ ಗಣೇಶ್ ಕಾಸರಗೋಡು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅದರ ಬರಹದ ಬಹತೇಕ ಯಥಾವತ್ ಭಾಗ ಇಲ್ಲಿದೆ.

    ಒತ್ತಡವಿದ್ದರೂ ಅಣ್ಣಾವ್ರು ರಾಜಕೀಯ ಪ್ರವೇಶ ಮಾಡಿಲ್ಲ ಯಾಕೆ? ಒತ್ತಡವಿದ್ದರೂ ಅಣ್ಣಾವ್ರು ರಾಜಕೀಯ ಪ್ರವೇಶ ಮಾಡಿಲ್ಲ ಯಾಕೆ?

    ''ಇದು 1983ನೇ ಇಸವಿಯ ಸ್ಟೋರಿ. ಗೋಕಾಕ್ ಚಳುವಳಿ ಪರಾಕಾಷ್ಠೆ ತಲುಪಿದ ಸಂದರ್ಭ. ಕನ್ನಡಿಗರ ಆರಾಧ್ಯ ದೈವ ರಾಜಕುಮಾರ್ ಅವರನ್ನು ಇದ್ದಕ್ಕಿದ್ದಂತೆಯೇ ಮುಂಬಯಿಯ ಪತ್ರಿಕೆಯೊಂದು "ಮಿನಿ ಹಿಟ್ಲರ್" ಎಂದು ಆರೋಪಿಸಿತು! ಆ ಪತ್ರಿಕೆಯ ಹಿಂದೆ ಬಾಲಿವುಡ್ ಬಾದ್'ಷಾ ಅಮಿತಾಬ್ ಬಚ್ಚನ್ ಇದ್ದನೆಂಬ ಗುಸುಗುಸು ಸುದ್ದಿ ಹರಡಿತು. ಸುದ್ದಿ ಕಾಡ್ಗಿಚ್ಚಾಯಿತು. ಇಡಿಯ ಕರ್ನಾಟಕ ಹೊತ್ತಿ ಉರಿಯಿತು....ಇದಕ್ಕೆಲ್ಲಾ ಕಾರಣವಾದುದೊಂದು ವರದಿ. ಆ ವರದಿ ಪ್ರಕಟವಾದದ್ದು "ಚಿತ್ರದೀಪ" ಎಂಬ ಹೆಸರಿನ ಸಿನೆಮಾ ಪತ್ರಿಕೆಯಲ್ಲಿ.''

    ದಕ್ಷಿಣದ ಸಿನಿಮಾಗಳ ಮೇಲೆ ಅಸಹನೆ ತೋರಿದ ಅಜಯ್, ದಕ್ಷಿಣದಿಂದ ಕದ್ದಿರುವ ಸಿನಿಮಾಗಳ ಪಟ್ಟಿ ಇಲ್ಲಿದೆದಕ್ಷಿಣದ ಸಿನಿಮಾಗಳ ಮೇಲೆ ಅಸಹನೆ ತೋರಿದ ಅಜಯ್, ದಕ್ಷಿಣದಿಂದ ಕದ್ದಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ

    ''ಗೋಕಾಕ್ ಚಳುವಳಿ ಮುಗಿಲು ಮುಟ್ಟಿದ ದಿನಗಳವು. ಡಾ.ರಾಜಕುಮಾರ್ ಖ್ಯಾತಿ ಉತ್ತುಂಗಕ್ಕೇರಿತ್ತು. ಕರ್ನಾಟಕದಾದ್ಯಂತ ಮಿಂಚಿನ ಸಂಚಾರ ಮಾಡಿ ಕನ್ನಡ ಭಾಷಾ ಜಾಗೃತಿಯುಂಟು ಮಾಡಿದ ವೀರ ಕನ್ನಡಿಗನೆನ್ನುವ ಹಿರಿಮೆ. ಇಡಿಯ ಕನ್ನಡ ಚಿತ್ರರಂಗವೇ ಈ ಹಿರಿಯಣ್ಣನ ಜೊತೆ ಗೋಕಾಕ್ ಚಳುವಳಿಗೆ ಹೆಗಲು ಕೊಟ್ಟಿತ್ತು. ಊರಿಂದೂರಿಗೆ ಪ್ರಯಾಣಿಸುತ್ತಿರುವಾಗ ಜನಜಾತ್ರೆ. ಅದೊಂದು ವೈಭವದ ದಿನಗಳು. ರಾಜಕುಮಾರ ಅಂದರೆ ಮನೆ ಮಾತು. ಹರಸಲು, ಮಾತಾಡಿಸಲು, ಮೈ ಮುಟ್ಟಲು ಬಂದು ಸೇರುವ ಮಂದಿ "ಅಣ್ಣಾವ್ರ"ನ್ನು ದೇವರೆಂದು ನಂಬಿದ ದಿನಗಳವು. ಕೆಲವರಿಗೆ "ಅಣ್ಣ", ಕೆಲವರಿಗೆ "ಕಣ್ಮಣಿ", ಇನ್ನೂ ಕೆಲವರಿಗೆ ಸಾಕ್ಷಾತ್ "ದೇವ್ರು"

    "ಟ್ರೇಡ್ ಗೈಡ್" ಪತ್ರಿಕೆಯಲ್ಲಿ ಪ್ರಕಟವಾಯ್ತು ಸ್ಪೋಟಕ ಸುದ್ದಿ

    ''ಇಂಥಾ ಹೊತ್ತಿನಲ್ಲೇ ಹಿಂದಿ ಚಿತ್ರರಂಗದ ಪ್ರಾತಿನಿಧಿಕ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾದ "ಟ್ರೇಡ್ ಗೈಡ್" ಪತ್ರಿಕೆಯಲ್ಲೊಂದು ಸುದ್ದಿ ಪ್ರಕಟವಾಯಿತು. ಅದೊಂದು ಸ್ಫೋಟಕ ಸುದ್ದಿ. ಆದರೆ ಆ ಪತ್ರಿಕೆಗೆ ಓದುಗರೇ ಇರಲಿಲ್ಲ. ಏಕೆಂದರೆ ಅದು ಹಿಂದಿ ಚಿತ್ರರಂಗದ ವ್ಯಾವಹಾರಿಕ ಪತ್ರಿಕೆ! ಇಂಥಾದ್ದೊಂದು ಪತ್ರಿಕೆ ಪ್ರಕಟವಾಗುತ್ತಿದೆ ಎನ್ನುವ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ! ಅದು ಹಿಂದಿ ಚಿತ್ರರಂಗದ ಇಂಗ್ಲೀಷ್ ಪತ್ರಿಕೆ. ಬಾಲಿವುಡ್'ನ ಆಗುಹೋಗು, ಲಾಭ ನಷ್ಟಗಳ ಲೆಕ್ಕಾಚಾರವನ್ನು ಒಪ್ಪಿಸುವ ಉದ್ಯಮದ ಪತ್ರಿಕೆ. ಹೀಗಾಗಿ ಜನ ಸಾಮಾನ್ಯರಿಗೆ ಅದು ಬೇಕಾಗಿರಲಿಲ್ಲ''

    ಚಿತ್ರ ಕೃಪೆ: ಚಂದನ ನಂದನ ಫೇಸ್ ಬುಕ್ ಪೇಜ್

    "ರಾಜಕುಮಾರ್: ಮಿನಿ ಹಿಟ್ಲರ್" ಎಂದಿದ್ದ ಪತ್ರಿಕೆ

    ''ಆ ಕಾಲವೂ ಕೂಡಿ ಬಂತೆನ್ನಿ! "ಟ್ರೇಡ್ ಗೈಡ್" ಎಂಬ ಈ ಪುಟ್ಟ ಪತ್ರಿಕೆ, ಹೆಚ್ಚು ಸರ್ಕ್ಯುಲೇಶನ್ ಇಲ್ಲದ ಪತ್ರಿಕೆ ಮುಂದೆ ಯಾವ ಮಟ್ಟದಲ್ಲಿ ಸುದ್ದಿ ಮಾಡಿತೆಂದರೆ ಅದನ್ನು ವಿವರಿಸಲು ಪದಗಳಿಲ್ಲ! ಇಷ್ಟಕ್ಕೂ ಆ ಪತ್ರಿಕೆಯಲ್ಲಿ ಪ್ರಕಟವಾದದ್ದಾದರೂ ಏನು? "ರಾಜಕುಮಾರ್: ಮಿನಿ ಹಿಟ್ಲರ್" ಎನ್ನುವ ಟೈಟಲ್'ನಲ್ಲಿ ಪ್ರಕಟವಾದ ಸುದ್ದಿ ಹೀಗಿತ್ತು : "ಗೋಕಾಕ್ ವರದಿ ಜಾರಿ ಹಿನ್ನೆಲೆಯಲ್ಲಿ ನಡೆದ ಚಳುವಳಿಯ ನೇತೃತ್ವ ವಹಿಸಿದ್ದ ಡಾ.ರಾಜಕುಮಾರ್ ಪರಭಾಷಾ ಚಿತ್ರಗಳಿಗೆ ಕಂಟಕಪ್ರಾಯರಾಗಿದ್ದಾರೆ ಮತ್ತು ಅವರು ಸಾಕ್ಷಾತ್ ಮಿನಿ ಹಿಟ್ಲರ್ ಥರ ವರ್ತಿಸುತ್ತಿದ್ದಾರೆ...." ಎನ್ನುವುದು ಆ "ಟ್ರೇಡ್ ಗೈಡ್" ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ಸಾರ. ನಂತರ ತಿಳಿದು ಬಂದ ಅಚ್ಚರಿ ಹುಟ್ಟಿಸುವ ವಿಷಯವೆಂದರೆ ಈ ಸುದ್ದಿಯ ಹಿನ್ನೆಲೆಯಲ್ಲಿ ಮುಂಬಯಿ ಬಾದ್'ಷಾ ಅಮಿತಾಬ್ ಬಚ್ಚನ್ ಇದ್ದಾರೆ ಎನ್ನುವುದು! ಇದಕ್ಕೂ ಒಂದು ಕಾರಣವಿದೆ : "ಟ್ರೇಡ್ ಗೈಡ್" ಪತ್ರಿಕೆಗೂ ಅಮಿತಾಬನಿಗೂ ಅವಿನಾಭಾವ ಸಂಬಂಧವಿದೆ ಮತ್ತು ಈ ಸಂಬಂಧದಿಂದಾಗಿಯೇ ಪರೋಕ್ಷವಾಗಿ ಅದೇ ಅಮಿತಾಬನೇ ನಮ್ಮ ರಾಜಕುಮಾರ್ ವಿರುದ್ಧ ಎತ್ತಿ ಕಟ್ಟಲೆಂದೇ ಈ ಸುದ್ದಿಯನ್ನು ಬರೆಸಿದ್ದಾನೆ ಎನ್ನುವ ವದಂತಿ ಕೂಡಾ ಹರಡಿತು''

    ಚಿತ್ರ ಕೃಪೆ: ಚಂದನ ನಂದನ ಫೇಸ್ ಬುಕ್ ಪೇಜ್

    ಗೋಕಾಕ್ ಚಳವಳಿ ಸಂದರ್ಭ ಪರಭಾಷೆ ಸಿನಿಮಾಗಳಿಗೆ ಸಮಸ್ಯೆಯಾಯಿತು

    ಗೋಕಾಕ್ ಚಳವಳಿ ಸಂದರ್ಭ ಪರಭಾಷೆ ಸಿನಿಮಾಗಳಿಗೆ ಸಮಸ್ಯೆಯಾಯಿತು

    ''ಡಾ.ರಾಜಕುಮಾರ್ ಹೀಗೆ ಕನ್ನಡದ ಗೋಕಾಕ್ ದಂಡಯಾತ್ರೆಗೆ ಹೊರಟಾಗ ಕೆಲವು ಪರಭಾಷಾ ಚಿತ್ರಗಳಿಗೆ ತೊಂದರೆ, ಕಿರಿ ಕಿರಿಯುಂಟಾದದ್ದು ನಿಜ. ಹಿಂದಿ ಮಾತ್ರವಲ್ಲ ತಮಿಳು, ತೆಲುಗು, ಮಲಯಾಳಂ ಚಿತ್ರಗಳಿಗೂ ತೊಂದರೆಯಾಯಿತು. ಕನ್ನಡಕ್ಕಾಗಿ ಹೊರಾಡುವುದೆಂದರೆ ಪರಭಾಷಾ ಚಿತ್ರಗಳನ್ನು ಧಿಕ್ಕರಿಸುವುದೆಂದರ್ಥವಲ್ಲ. ಆದರೆ ಅನಿವಾರ್ಯವಾಗಿ ಇಂಥಾ ಪ್ರಸಂಗಗಳು ನಡೆದು ಬಿಡುತ್ತವೆ. ಇದಕ್ಕೆ ಇಡಿಯ ಹೋರಾಟದ ನೇತೃತ್ವ ವಹಿಸಿದವರೇ ಕಾರಣ ಎಂಬ ತೀರ್ಮಾನಕ್ಕೆ ಬರುವುದು ನ್ಯಾಯ ಸಮ್ಮತವಲ್ಲ. ಕನ್ನಡ ಚಿತ್ರಗಳಿಗೆ ಸಿಗದ ಥಿಯೇಟರುಗಳ ಮೇಲೆ ಚಳುವಳಿಗಾರರು ಕಣ್ಣಿಟ್ಟಿದ್ದರಲ್ಲಿ ಆಶ್ಚರ್ಯವಿಲ್ಲ. ಆದರೆ ಈ ನಡುವೆ ಬೆಂಕಿಗೆ ತುಪ್ಪ ಸುರಿಸುವಂಥಾ ಕೆಲವು ಘಟನೆಗಳು ನಡೆದೇ ಹೋದುವು. ಅಮಿತಾಬ್ ಬಚ್ಚನ್ ಚಿತ್ರ ತೆರೆ ಕಾಣಬೇಕಿದ್ದ ಚಿತ್ರ ಮಂದಿರವೊಂದರಲ್ಲಿ ಡಾ.ರಾಜಕುಮಾರ್ ಅವರ ಚಿತ್ರ ತೆರೆ ಕಂಡದ್ದೇ ಈ ಎಲ್ಲ ಅನಾಹುತಗಳಿಗೆ ಕಾರಣವಾಯಿತು. ಇದು ಉದ್ದೇಶ ಪೂರ್ವಕವಾಗಿ ನಡೆದದ್ದಲ್ಲ. ಅಮಿತಾಬ್ ಬಚ್ಚನ್ ಚಿತ್ರದ ರೀಲುಗಳು ಬಾರದಿರುವುದಕ್ಕೋ ಅಥವಾ ಬೇರೆ ಯಾವುದೋ ಕಾರಣಕ್ಕೋ ರಾಜ್ ಚಿತ್ರ ಆ ಥಿಯೇಟರ್'ನಲ್ಲಿ ತೆರೆ ಕಂಡದ್ದು ನಿಜ. ಗಲಾಟೆ, ದೊಂಬಿ ಶುರುವಾದದ್ದೇ ಇಲ್ಲಿಂದ''

    ಬಚ್ಚನ್ ಪೋಸ್ಟರ್‌ಗಳಿಗೆ ಬೆಂಕಿ ಹಚ್ಚಲಾಯಿತು

    ಬಚ್ಚನ್ ಪೋಸ್ಟರ್‌ಗಳಿಗೆ ಬೆಂಕಿ ಹಚ್ಚಲಾಯಿತು

    ''ಇದನ್ನೆಲ್ಲ ಇಟ್ಟುಕೊಂಡು "ಚಿತ್ರದೀಪ" ಪತ್ರಿಕೆ ಒಂದು ವರದಿಯನ್ನು ಪ್ರಕಟಿಸಿದ್ದೇ ತಡ ಕನ್ನಡದ ಹೋರಾಟಗಾರರಿಗೆ ಒಂದು ಪ್ರಬಲ ಅಸ್ತ್ರ ದೊರೆತಂತಾಯಿತು.. "ಚಿತ್ರದೀಪ" ಮಾರುಕಟ್ಟೆಗೆ ಹೋಯಿತು. ಅಲ್ಲೋಲ ಕಲ್ಲೋಲ. ಕರ್ನಾಟಕದಾದ್ಯಂತ ಹರಡಿಕೊಂಡಿದ್ದ ರಾಜ್ ಅಭಿಮಾನಿಗಳ ಸಂಘದ ಕಾರ್ಯಕರ್ತರು ರೊಚ್ಚಿಗೆದ್ದರು. ತಮ್ಮ "ದೊರೆ"ಯನ್ನು ಈ ರೀತಿ ಹೀಯಾಳಿಸಲು ಆ "ಹಿಂದಿದೊರೆ"ಗೆ ಹೇಗಾದರೂ ಧೈರ್ಯ ಬಂತೋ ಎನ್ನುವ ಉದ್ವೇಗ. ಕ್ರಮೇಣ ಅಲ್ಲಲ್ಲಿ ಚಳುವಳಿಯ ರೂಪುರೇಷೆ ಕಾಣಿಸಿಕೊಂಡಿತು. ಕನ್ನಡ ಸಂಘಟನೆಗಳು ರಾಜ್ ಅಭಿಮಾನಿಗಳ ಸಂಘದ ಜೊತೆ ಕೈ ಜೋಡಿಸಿದುವು. ಆಗ ತಾನೇ ಗೋಕಾಕ್ ವರದಿ ಜಾರಿಯ ವಿಷಯದಲ್ಲಿ ಕರ್ನಾಟಕದಾದ್ಯಂತ ಕನ್ನಡದ ಕಹಳೆ ಊದಿದ ರಾಜ್ ಪರವಾಗಿ ಇಡಿಯ ಕರ್ನಾಟಕದ ಕನ್ನಡಿಗರು ಎದ್ದು ನಿಂತರು. ಅಮಿತಾಬನ ಪೋಸ್ಟರ್'ಗಳಿಗೆ ಸೆಗಣಿ ಹಚ್ಚಲಾಯಿತು! ಬ್ಯಾನರ್ ಚಿಂದಿಯಾದುವು. ಚಿತ್ರಮಂದಿರಗಳಲ್ಲಿ ಅಮಿತಾಬ್ ಸಿನೆಮಾ ನಡೆಯದಂತೆ ತಡೆ ಹಿಡಿಯಲಾಯಿತು. ಎಲ್ಲೆಲ್ಲೂ ಅಮಿತಾಬ್ ವಿರುದ್ದದ ಕೂಗು ಮುಗಿಲು ಮುಟ್ಟಿತು. ಕ್ರಮೇಣ ಇದು ಹಿಂದಿ ಚಿತ್ರಗಳನ್ನು ಬ್ಯಾನ್ ಮಾಡುವ ಮಟ್ಟಕ್ಕೆ ಬಂದು ಮುಟ್ಟಿತು! ಅದರಲ್ಲೂ ಅಮಿತಾಬ್'ನ ಚಿತ್ರಗಳು ಕರ್ನಾಟಕದ ಚಿತ್ರಮಂದಿರಗಳಲ್ಲಿ ತೆರೆ ಕಾಣದಂತೆ ತಡೆ ಹಿಡಿಯಲಾಯಿತು. ಕನ್ನಡ ಜನತೆ ಖಡಾಖಂಡಿತವಾಗಿ ಅಮಿತಾಬ್'ನ ಚಿತ್ರಗಳ ಮೇಲೆ ಬ್ಯಾನ್ ಹೇರಿದರು. ದಿನಪತ್ರಿಕೆಗಳಿಗೆ ಸುದ್ದಿಯ ಗ್ರಾಸ. ಕ್ರಮೇಣ ಈ ಗಲಾಟೆಯ ಬಿಸಿ ಹಿಂದಿ ಚಿತ್ರರಂಗಕ್ಕೆ ತಲುಪಿತು. ಎಲ್ಲರೂ ಜಾಗೃತರಾದರು. ಮೊದಲ ಹಂತವಾಗಿ ಅವರವರಲ್ಲೇ ಮಾತುಕತೆ ನಡೆಯಿತು. ನಂತರ ಅಮಿತಾಬ್'ನನ್ನು ಖುದ್ದಾಗಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ವಿನಂತಿಸಿಕೊಳ್ಳಲಾಯಿತು''

    ಆಗ ಎಂಟ್ರಿ ಕೊಟ್ಟದ್ದೇ ರಾಮನಾಥನ್

    ಆಗ ಎಂಟ್ರಿ ಕೊಟ್ಟದ್ದೇ ರಾಮನಾಥನ್

    ''ಆಗ ಎಂಟ್ರಿ ಕೊಟ್ಟದ್ದೇ ರಾಮನಾಥನ್! ಈ ರಾಮನಾಥನ್ ಬೇರೆ ಯಾರೂ ಅಲ್ಲ : "ರಾಶಿ" ಸೋದರರಲ್ಲಿ ಒಬ್ಬರು. ನಟ ಶರಪಂಜರ ಶಿವರಾಂ ಅವರ ಸೋದರ. ಆಗ ಹಿಂದಿ ಚಿತ್ರರಂಗದಲ್ಲಿ ಇವರದ್ದು ದೊಡ್ಡ ಹೆಸರು.ಅಮಿತಾಬ್ ಬಚ್ಚನ್ ಇವರಿಗೆ ಚೆಡ್ಡಿ ದೋಸ್ತ್ ಥರಾ! ನಿರ್ಮಾಪಕರಾಗಿ, ನಿರ್ದೇಶಕರಾಗಿ ಹಿಂದಿ ಚಿತ್ರರಂಗದ ಮನ ಗೆದ್ದಿರುವ ರಾಮನಾಥನ್ ತಮ್ಮ "ಬಾಂಬೆ ಟು ಗೋವಾ" ಚಿತ್ರದ ಮೂಲಕ ಅಮಿತಾಬನಿಗೊಂದು ಹೊಸ ಇಮೇಜ್ ಸೃಷ್ಟಿಸಿಕೊಟ್ಟಿದ್ದರು. ರಾಮನಾಥನ್ ಹೆಸರು ಕೇಳಿದರೆ ಸಾಕು ಅಮಿತಾಬ್ ಎದ್ದು ನಿಲ್ಲುತ್ತಿದ್ದ ಕಾಲವದು. "ಬಾಂಬೆ ಟು ಗೋವಾ" ಹಿಂದಿ ಚಿತ್ರ ಸಿಲ್ವರ್ ಜೂಬಿಲಿ ಕಂಡಿತ್ತು. ರಾಮನಾಥನ್ ಅವರ "ಗಿರಫ್'ದಾರ್" ಚಿತ್ರದಲ್ಲಿ ಅಮಿತಾಬ್, ರಜನಿಕಾಂತ್, ಕಮಲಹಾಸನ್ ಪಾತ್ರವಹಿಸಿದ್ದರು. ಇದೇ ರಾಮನಾಥನ್ ನಿರ್ಮಿಸಿದ "ಗಂಗಾ ಜಮುನಾ ಸರಸ್ವತಿ" ಚಿತ್ರದಲ್ಲಿ ಅಮಿತಾಬ್, ಮೀನಾಕ್ಷಿ ಶೇಷಾದ್ರಿ, ಮಿಥುನ್ ಚಕ್ರವರ್ತಿ, ಜಯಪ್ರದಾ ಮೊದಲಾದ ಅತಿರಥ ಮಹಾರಥರೆಲ್ಲಾ ನಟಿಸಿದ್ದರು. ಇಂಥಾ ಪ್ರತಿಷ್ಠಿತ ನಿಮಪಕರೊಬ್ಬರು ಕನ್ನಡ ಮತ್ತು ಹಿಂದಿ ಚಿತ್ರರಂಗದ ರಾಯಭಾರಿಯಂತಿದ್ದುದರಿಂದ ಇವರನ್ನೇ ಈ ಭಾಷಾ ಸೂಕ್ಷ್ಮ ವಿಚಾರದ ಗೊಂದಲವನ್ನು ಶಮನಗೊಳಿಸಲು ಉಪಯೋಗಿಸಿಕೊಳ್ಳುವುದೆಂದು ಹಿಂದಿ ಚಿತ್ರರಂಗ ನಿರ್ಧರಿಸಿತು. ಇದು ಅಮಿತಾಬನಿಗೂ ಒಪ್ಪಿಗೆಯಾಯಿತು. ತಕ್ಷಣವೇ ರಾಮನಾಥನ್ ಓಡಿ ಬಂದದ್ದು ರಾಜಾಮಹಲ್ ಗುಟ್ಟಹಳ್ಳಿಯಲ್ಲಿದ್ದ ಚಿತ್ರದೀಪ ಪತ್ರಿಕಾಲಯಕ್ಕೆ. ಇದಕ್ಕೆ ನಾವೆಲ್ಲಾ ಕಣ್ ಸಾಕ್ಷಿಗಳು. ಆಗ ಆರ್.ನರಸಿಂಹ ಸಂಪಾದಕರಾಗಿದ್ದರು. ಓಡಿ ಬಂದ ರಾಮನಾಥನ್ ಸಂಪಾದಕರಲ್ಲಿ ಕೇಳಿದ ಒಂದೇ ಒಂದು ಪ್ರಶ್ನೆಯೆಂದರೆ :' ಈ ದೊಡ್ಡ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳೋಣ? ನಿಮ್ಮ ಸಲಹೆಯನ್ನು ಸ್ವೀಕರಿಸಿ ನಾನು ಖುದ್ದು ನಿಂತು ಈ ಸಮಸ್ಯೆಯನ್ನು ಪರಿಹರಿಸುತ್ತೇನೆ, ಪ್ರಾಮಿಸ್...' - ನರಸಿಂಹ ತಮ್ಮ ಸಲಹೆ ನೀಡಿದರು. ಮೊಟ್ಟ ಮೊದಲು ರಾಜಕುಮಾರ್ ಅವರನ್ನೇ ಸಂಪರ್ಕಿಸುವಂತೆ ಸೂಚಿಸಿದರು''

    ರಾಜ್‌ಕುಮಾರ್ ಅನ್ನು ಕಾಣಲು ಓಡೋಡಿ ಬಂದಿದ್ದ ಬಚ್ಚನ್

    ರಾಜ್‌ಕುಮಾರ್ ಅನ್ನು ಕಾಣಲು ಓಡೋಡಿ ಬಂದಿದ್ದ ಬಚ್ಚನ್

    ''ರಾಜಕುಮಾರ್ ಕುಟುಂಬವನ್ನು ರಾಮನಾಥನ್ ಸಂಪರ್ಕಿಸಿದರು. ಹೀಗೆಲ್ಲಾ ನಡೆಯಬಾರದಿತ್ತು ಎಂದರು. ನಡೆದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. "ಟ್ರೇಡ್ ಗೈಡ್"ಗೂ ಅಮಿತಾಬ್'ಗೂ ಪರಸ್ಪರ ಸಂಬಂಧವೇ ಇಲ್ಲವೆಂದು ಒತ್ತಿ ಹೇಳಿದರು. ಕಣ್ತಪ್ಪಿನಿಂದಾದ ಅನಾಹುತಕ್ಕೆ ಅಮಿತಾಬ್ ಪರವಾಗಿ ಕ್ಷಮೆಯಾಚಿಸಿದರು. ಕೊನೆಯಲ್ಲಿ ಅಮಿತಾಬ್ ಬಚ್ಚನ್ ಡಾ.ರಾಜಕುಮಾರ್ ಅವರನ್ನು ಭೇಟಿ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದರು ಎನ್ನುವ ಸೂಕ್ಷ್ಮವನ್ನು ರಾಜ್ ಕುಟುಂಬಕ್ಕೆ ತಿಳಿಸಿದರು. ಈ ಬಗ್ಗೆ ಒಂದು ದೊಡ್ಡ ಚರ್ಚೆಯೇ ನಡೆದು ಹೋಯಿತು. ರಾಮನಾಥನ್ ಅವರ ರಾಯಭಾರ ಕೆಲಸ ಯಶಸ್ವಿಯಾಯಿತು. ಅಮಿತಾಬ್'ರನ್ನು ಭೇಟಿಯಾಗಲು ರಾಜ್ ಕುಟುಂಬ ಒಪ್ಪಿತು. ಈ ಧನ್ಯ ಮಿಲನ ನಡೆಯುವುದು ಬೆಂಗಳೂರಿನ ಅರಮನೆಯಲ್ಲಿ ಎಂದು ನಿಗದಿಯಾಯಿತು. ವಾರವೊಂದರಲ್ಲೇ ಅಮಿತಾಬ್ ವಿಮಾನದಲ್ಲಿ ಹಾರಿ ಬಂದು ಅರಮನೆ ಸೇರಿಕೊಂಡರು. ಅದೇ ಹೊತ್ತಿಗೆ ರಾಜಕುಮಾರ್, ಪಾರ್ವತಮ್ಮ, ರಾಮನಾಥನ್ ಮತ್ತು ಅಮಿತಾಬ್ ಅವರ ಹಾರ್ಡ್ ಕೋರ್ ಫ್ಯಾನ್ ಆಗಿದ್ದ ಪುಟ್ಟ ಪುನೀತ್ ರಾಜಕುಮಾರ್ ಅಲ್ಲಿಗೆ ಬಂದು ಸೇರಿಕೊಂಡರು. ಕನ್ನಡದ ಕಂದ ರಾಜಕುಮಾರ್ ಮತ್ತು ಹಿಂದಿ ಬಾದ್'ಷಾ ಅಮಿತಾಬ್ ಬಚ್ಚನ್ ಪರಸ್ಪರ ಕೈ ಕುಲುಕಿಕೊಂಡರು. ಹಾರ ಹಾಕಿಕೊಂಡರು. ಸಿಹಿ ಹಂಚಿ ತಿಂದರು. ಫೋಟೋ ಹೊಡೆಸಿಕೊಂಡರು. ಪುಟ್ಟ ಕಂದ ಪುನೀತನನ್ನು ಎತ್ತಿ ಮುದ್ದಾಡಿದರು ಅಮಿತಾಬ್''

    ಚಿತ್ರ ಕೃಪೆ: ಚಂದನ ನಂದನ ಫೇಸ್ ಬುಕ್ ಪೇಜ್

    ಪತ್ರಕರ್ತರಾದ ಗಣೇಶ್ ಕಾಸರಗೋಡು ಹಾಗೂ ಬಿ.ಎನ್.ಸುಬ್ರಹ್ಮಣ್ಯ

    ಪತ್ರಕರ್ತರಾದ ಗಣೇಶ್ ಕಾಸರಗೋಡು ಹಾಗೂ ಬಿ.ಎನ್.ಸುಬ್ರಹ್ಮಣ್ಯ

    ''ಅಂದಹಾಗೆ, ಈಗಲೂ ನಡೆಯುತ್ತಿರುವುದೇನು? ಅದೇ ಭಾಷಾ ವೈಷಮ್ಯ, ಅದೇ ಗಡಿ ತಂಟೆ, ಅದೇ ಗಲಭೆ, ಅದೇ ಗೊಂದಲ. ಬದಲಾಗೋದು ಯಾವಾಗ? ಹಿಂದಿಯ ಅಜಯ್ ದೇವಗನ್ ಎಂಬ ನಟ ಸುಮ್ಮನೇ ಇರಲಾರದೇ ಮೈಮೇಲೆ ಇರುವೆ ಬಿಟ್ಟುಕೊಂಡಿದ್ದಾನೆ! ನಮ್ಮ ಅಭಿಮಾನದ ನಟ ಸುದೀಪ್ ಠಕ್ಕರ್ ಕೊಟ್ಟಿದ್ದಾರೆ. ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಮುಂದೇನಾಗುವುದೋ ಕಾದು ನೋಡಬೇಕಾಗಿದೆ. ಕೊನೆಯಲ್ಲಿ ಒಂದು ಪುಟ್ಟ ಮಾಹಿತಿ ನಿಮಗಾಗಿ : ಅಂದು "ಚಿತ್ರದೀಪ" ಪತ್ರಿಕೆಯಲ್ಲಿ "ಟ್ರೇಡ್ ಗೈಡ್" ಪತ್ರಿಕೆಯ ಸ್ಫೋಟಕ ಸುದ್ದಿಯನ್ನು ಕನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸಿದ್ದು ಬೇರೆ ಯಾರೂ ಅಲ್ಲ, ಅಂದಿನ ಯುವ ಪತ್ರಕರ್ತರಾದ ಮತ್ತು ಇಂದಿನ ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು ಹಾಗೂ ಬಿ.ಎನ್.ಸುಬ್ರಹ್ಮಣ್ಯ''

    ಚಿತ್ರ ಕೃಪೆ: ಗಣೇಶ್ ಕಾಸರಗೋಡು-ಬಿ.ಎನ್.ಸುಬ್ರಹ್ಮಣ್ಯ

    English summary
    Journalist Ganesh Kasargodu writes about Incident when Hindi new papers wrote wrong things about Dr Rajkumar.
    Sunday, May 1, 2022, 10:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X