"ಪುನೀತ್ ಎಷ್ಟು ಕೋಟಿ ಸಿನ್ಮಾ ಮಾಡಿದ್ದಾನೆ ಹೇಳಿ": ಶಿವರಾಜ್‌ಕುಮಾರ್
ಶ್ರೀನಿ ನಿರ್ದೇಶನದ 'ಘೋಸ್ಟ್' ಸಿನಿಮಾ ದಸರಾ ಸಂಭ್ರಮದಲ್ಲಿ ತೆರೆಗಪ್ಪಳಿಸುತ್ತಿದೆ. ಸೆಂಚುರಿ ಸ್ಟಾರ್ ಚಿತ್ರದಲ್ಲಿ 'ಘೋಸ್ಟ್' ಆಗಿ ಅಬ್ಬರಿಸೋಕೆ ಬರ್ತಿದ್ದಾರೆ. ರಿಲೀಸ್ ಡೇಟ್ ಹತ್ತಿರವಾದಂತೆ ಸಿನಿಮಾ ಪ್ರಮೋಷನ್ ಸ್ಪೀಡ್ ಹೆಚ್ಚಿಸಲಾಗಿದೆ. ಶಿವಣ್ಣ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡಿ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾಗಳ ಭರಾಟೆಯಲ್ಲಿ ಈಗ 1000 ಕೋಟಿ ರೂ. ಸಿನಿಮಾಗಳ ಲೆಕ್ಕಾಚಾರ ಹೆಚ್ಚಾಗುತ್ತಿದೆ. ಕನ್ನಡದಲ್ಲಿ 'KGF-2' ಕೂಡ 1200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಹಾಗಾಗಿ ಕನ್ನಡದಲ್ಲೂ 1000 ಕೋಟಿ ರೂ. ಗಳಿಕೆ ಟಾರ್ಗೆಟ್ ಇಟ್ಟುಕೊಂಡು ಸಿನಿಮಾ ಮಾಡುವ ಲೆಕ್ಕಾಚಾರ ಶುರುವಾಗಿದೆ. ದೊಡ್ಡ ಸಿನಿಮಾ ಅಂದಾಗ ಸಹಜವಾಗಿಯೇ 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಅನ್ನೋದು ಶುರುವಾಗುತ್ತದೆ. 'ಘೋಸ್ಟ್' ಸಿನಿಮಾ ವಿಚಾರದಲ್ಲೂ ಇದೇ ಲೆಕ್ಕಾಚಾರ ಇದ್ಯಾ? ಎನ್ನುವ ಪ್ರಶ್ನೆಗೆ ಶಿವಣ್ಣ ಉತ್ತರಿಸಿದ್ದಾರೆ.

ಫಸ್ಟ್ ಡೇ ಫಸ್ಟ್ ಶೋ ಕನ್ನಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಶಿವಣ್ಣ ಮಾತನಾಡಿದ್ದಾರೆ. "ಯಾವುದೇ ಟಾರ್ಗೆಟ್ ಇಟ್ಟುಕೊಳ್ಳಬಾರದು. ಒಳ್ಳೆ ಸಿನಿಮಾ ಮಾಡಬೇಕು ಎನ್ನುವ ಟಾರ್ಗೆಟ್ ಇರಬೇಕು. ನಾವು ಜೀವನದಲ್ಲಿ ಚೆನ್ನಾಗಿರಬೇಕು, ಒಳ್ಳೆ ಸಿನಿಮಾ ಮಾಡ್ಬೇಕು ಎನ್ನುವ ಟಾರ್ಗೆಟ್ ಇರಬೇಕೆ ಹೊರತು ಕಲೆಕ್ಷನ್ ವಿಚಾರದಲ್ಲಿ ಅಲ್ಲ"
"ಸಿನಿಮಾ ಚೆನ್ನಾಗಿ ಇದ್ದಾಗ ಕಲೆಕ್ಷನ್ ಅದಾಗಿಯೇ ಆಗುತ್ತದೆ. ಟಾರ್ಗೆಟ್ ಇಟ್ಟುಕೊಂಡು ಮಾಡೋಕೆ ಹೋದಾಗ ಫೇಲ್ ಆದರೆ ಎಲ್ಲಿರಿಗೂ ಅದೇ ಯೋಚನೆ ಬರುತ್ತದೆ. ಯಾವಾಗಲೂ ಆ ಯೋಚನೆ ಇರಬಾರದು. ನಾನು ಇವತ್ತು ಇರ್ತೀವಾ..? ನಾಳೆ?? ಅದಕ್ಕೆ ಥ್ಯಾಂಕ್ಯೂ ಗಾಡ್ ಎನ್ನಬೇಕೆ ಹೊರತು ಇಷ್ಟು ಅಷ್ಟು ಅನ್ನೋ ಟಾರ್ಗೆಟ್ ಇಡಬಾರದು. 1000 ಕೋಟಿ ರೂ. ಇಟ್ಕೊಂಡು ಏನ್ ಮಾಡ್ತೀರಾ? ಅದು ಆಗಬೇಕು ಅಂದ್ರೆ ಆಗಿಯೇ ಆಗುತ್ತದೆ. ನಾವು ತಡೆಯಲು ಸಾಧ್ಯವಿಲ್ಲ. ಸುನಾಮಿನಾ ತಡೆಯೋಕೆ ಆಗುತ್ತಾ? ಆಗಲ್ಲ. ಹಣೆಬರಹ ಹೇಗಿರುತ್ತೋ ಹಾಗೆ ಆಗುತ್ತದೆ"
"ಒಳ್ಳೆ ಸಿನಿಮಾ ಮಾಡಬೇಕು ಎಂದುಕೊಂಡಾಗ ಮೊದಲೇ 1000 ಕೋಟಿ ರೂ. ಕಲೆಕ್ಷನ್ ಮಾಡಬೇಕು ಎಂದುಕೊಂಡರೆ ಕಷ್ಟ. ಒಳ್ಳೆ ಸಿನ್ಮಾ ಆಗಬೇಕು ಅಂತ ಮಾಡ್ಬೇಕು. 1000 ಕೋಟಿ ರೂ. ಬಿಸ್‌ನೆಸ್ ಆಗಬೇಕು ಅಂತ ಮಾಡ್ತೀರಾ? ನಾನು ಒಳ್ಳೆ ಸಿನಿಮಾ ಮಾಡ್ಬೇಕು. ಒಳ್ಳೆ ಪಾತ್ರ ಮಾಡ್ಬೇಕು, ಅದು ಜನಕ್ಕೆ ಇಷ್ಟ ಆಗ್ಬೇಕು ಅನ್ನಬಾರದು. ಎಷ್ಟು ಸಾವಿರ ಕೋಟಿ ಸಿನಿಮಾ ಮಾಡಿದ ಪಾತ್ರಗಳನ್ನು ಜನ ನೆನಪಿಸಿಕೊಳ್ಳುತ್ತಾರೆ ಹೇಳಿ?
"ಇವತ್ತಿನ ದಿನಗಳಲ್ಲಿ ಒಂದು 'ಬಂಗಾರದ ಮನುಷ್ಯ' ಸಿನಿಮಾ ತೋರಿಸಿಬಿಡಿ ನೋಡೋಣ. 'ಬಂಗಾರದ ಮನುಷ್ಯ' ಚಿತ್ರವನ್ನು ಎಲ್ಲರೂ ಇಂದಿಗೂ ನೆನೆಪಿಸಿಕೊಳ್ಳುತ್ತಾರೆ. ಅದು ಯಾಕೆ? ಆ ಪಾತ್ರ ಆ ರೀತಿ ಇತ್ತು. ಜನರ ಮನಸ್ಸಿನಲ್ಲಿ ಉಳಿಯುವುದೇ ಸಿನಿಮಾ, ಪಾತ್ರ ಅಲ್ಲವೇ? ಈಗ ಪುನೀತ್, ಎಷ್ಟು ಕೋಟಿ ಸಿನಿಮಾ ಮಾಡಿದ್ದಾನೆ. ಎಷ್ಟು ಕೋಟಿ ಕಲೆಕ್ಷನ್ ಮಾಡ್ಬೇಕೋ ಅಷ್ಟೇ ಆಗಿರೋದು. ಆದರೆ ಅವನ ಮನುಷತ್ವ, ಗುಣ, ಅವ್ನ ನೇಚರ್ ಎಲ್ಲಿಯವರೆಗೂ ರೀಚ್ ಆಗಿದೆ. ಕರ್ನಾಟಕ ಬಿಡಿ, ಇಡೀ ಭಾರತ, ಇಡೀ ಪ್ರಪಂಚ ರೀಚ್ ಆಗಿದೆ. ಹಣ ಇಲ್ಲಿ ಮುಖ್ಯ ಆಗಲ್ಲ. ಯಾವ ಸಿನಿಮಾ ಮಾಡಿದ್ದೀವಿ ಅನ್ನೋದು ಮುಖ್ಯ. ಒಳ್ಳೆ ಸಿನಿಮಾ ಮಾಡಬೇಕು. ಜನರಿಗೆ ತಲುಪುಬೇಕು ಅನ್ನೋದು ಮುಖ್ಯ"
"ಈಗ ನಾನು 'ಜೈಲರ್' ಸಿನಿಮಾದಲ್ಲಿ ಮಾಡಿದ್ದೀನಿ. ಬರೀ ಒಂದ್ 10 ನಿಮಿಷ ಅಷ್ಟೇ ಪಾತ್ರ. ಇಡೀ ಭಾರತದ ದೇಶ, ಪ್ರಪಂಚ ಮಾತಾಡ್ತು. ಅದೇನ್ ಸ್ಕ್ರೀನ್ ಪ್ರಸೆನ್ಸೋ ನನಗೆ ಇನ್ನು ಅರ್ಥ ಆಗಲಿಲ್ಲ. ಹೊಗಳಿಕೆ ಅನ್ನೋದು 1000 ಕೋಟಿ ರೂ. ಕಲೆಕ್ಷನ್ ಮಾಡೋದ್ರಲ್ಲಿ ಇಲ್ಲ. ನಾವು ಮಾಡುವ ಕೆಲಸಕ್ಕೆ ತೃಪ್ತಿ ಸಿಕ್ಕರೆ ಅದು ಸಾವಿರ ಕೋಟಿ ಅಲ್ಲ, 10 ಸಾವಿರ ಕೋಟಿಗೆ ಸಮ" ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.


Click it and Unblock the Notifications










