ಅಪ್ಪು ಅಗಲಿಕೆ ಸುದ್ದಿ ಗೊತ್ತಾದಾಗ 'ಕ್ರಾಂತಿ' ಸೆಟ್‌ನಲ್ಲಿ ಏನಾಯ್ತು ಅಂದ್ರೆ?; ಗಿರಿಜಾ ಲೋಕೇಶ್
4 ವರ್ಷಗಳ ಹಿಂದೆ ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎನ್ನುವ ಸುದ್ದಿ ಇಡೀ ರಾಜ್ಯಕ್ಕೆ ಶಾಕ್ ತಂದಿತ್ತು. ಬಹಳ ಆಕ್ಟೀವ್ ಆಗಿದ್ದ ಅಪ್ಪು ಅಷ್ಟು ಬೇಗ ದೂರಾಗುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಸಾಕಷ್ಟು ಜನ ಈ ಸುದ್ದಿಯನ್ನು ಅರಗಿಸಿಕೊಳ್ಳಲು ಕಷ್ಟಪಟ್ಟರು. ಆರಂಭದಲ್ಲಿ ಕೆಲವರು ನಂಬಲೇ ಇಲ್ಲ.
ಅಪ್ಪು ಇನ್ನಿಲ್ಲ ಎನ್ನುವ ಸುದ್ದಿ ಗೊತ್ತಾದಾಗ ನಟ ದರ್ಶನ್ 'ಕ್ರಾಂತಿ' ಸಿನಿಮಾ ಚಿತ್ರೀಕರಣದಲ್ಲಿದ್ದರು. ಅಂದು ನಾನ್‌ವೆಜ್ ಅಡುಗೆ ಮಾಡಿಸಿ ತಂಡದ ಎಲ್ಲರಿಗೂ ಬಡಿಸಲು ಸಿದ್ಧತೆ ನಡೆದಿತ್ತು. ಮಧ್ಯಾಹ್ನ 12 ಗಂಟೆ ಹೊತ್ತಿಗೆ ಅಪ್ಪು ಆಸ್ಪತ್ರೆಗೆ ದಾಖಲು, ಆರೋಗ್ಯ ಸ್ಥಿತಿ ಗಂಭೀರ, ಕೊನೆಗೆ ಅಪ್ಪು ಇಲ್ಲ ಎನ್ನುವ ಸುದ್ದಿ ಕೇಳಿ ಇಡೀ ತಂಡ ಶಾಕ್ ಆಗಿತ್ತು ಎಂದು ಹಿರಿಯ ನಟಿ ಗಿರಿಜಾ ಲೋಕೇಶ್ ನೆನಪಿಸಿಕೊಂಡಿದ್ದಾರೆ.

ವಿ. ಹರಿಕೃಷ್ಣ ನಿರ್ದೇಶನದ 'ಕ್ರಾಂತಿ' ಚಿತ್ರದಲ್ಲಿ ಗಿರಿಜಾ ಲೋಕೇಶ್ ಸಹ ನಟಿಸಿದ್ದರು. ನಾಯಕ ಓದುವ ಶಾಲೆಯ ಶಿಕ್ಷಕಿ ರುಕ್ಕಮ್ಮ ಪಾತ್ರದಲ್ಲಿ ಗಿರಿಜಾ ಲೋಕೇಶ್ ನಟಿಸಿದ್ದರು. ಟಾಕಿಂಗ್ ಪ್ಯಾರೆಟ್ಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಗಿರಿಜಾ ಲೋಕೇಶ್ ಮಾತನಾಡಿದ್ದಾರೆ. ಅಪ್ಪು ಜೊತೆಗಿನ ಒಡನಾಟವನ್ನು ನೆನಪು ಮಾಡಿಕೊಂಡಿದ್ದಾರೆ. ಚಿಕ್ಕಂದಿನಿಂದ ಪುನೀತ್‌ನ ನೋಡಿದ್ದೆ ಎಂದು ತಿಳಿಸಿದ್ದಾರೆ.
"ನನ್ನ ಮಗ ಸೃಜನ್ ಹಾಗೂ ಅಪ್ಪು ಚಿಕ್ಕಂದಿನಲ್ಲಿ ಸಿಕ್ಕಾಪಟ್ಟೆ ಜಗಳ ಮಾಡುತ್ತಿದ್ರು. ಯಾವುದೋ ಸೆಟ್‌ಗೆ ಸೃಜನ್‌ನ ಕರ್ಕೊಂಡ್ ಹೋಗಿದ್ದೆ. ಜಗಳ ನೋಡಿ 'ಬಿಡೋ ಅವ್ನು ರಾಜ್‌ಕುಮಾರ್ ಮಗ' ಎನ್ನುತ್ತಿದ್ದೆ. ಗೋಕಾಕ್ ಚಳುವಳಿ ಸಮಯದಲ್ಲಿ ಪುಟ್ಟ ಹುಡುಗ. ಲೋಹಿತ್ ಎಂದು ಇಂಗ್ಲೀಷ್‌ನಲ್ಲಿ ಬರೀತಿದ್ದ. ಕನ್ನಡದಲ್ಲಿ ಹೆಸರು ಬರೆಸಲು ಪಾರ್ವತಮ್ಮ ಕಲಿಸುತ್ತಿದ್ರು. ಆಗಿನಿಂದ ಆತನನ್ನು ನೋಡಿದ್ದೇನೆ" ಎಂದು ಗಿರಿಜಾ ಲೋಕೇಶ್ ಮೆಲುಕು ಹಾಕಿದ್ದಾರೆ.

ಆ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ. ಹೀರೊ ಆಗಿ ಗೆದ್ದ. ಸಿಕ್ಕಾಗಲೆಲ್ಲಾ ಚೆನ್ನಾಗಿ ಮಾತನಾಡಿಸ್ತಿದ್ದ. ಹೊಸ ಮನೆ ಗೃಹಪ್ರವೇಶಕ್ಕೆ ಹೋಗಿದ್ದೆವು. ಅದೇನೋ ಪುನೀತ್ ಜೊತೆ ಯಾವುದೇ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಅಪ್ಪು ಇನ್ನಿಲ್ಲ ಎನ್ನುವ ಸುದ್ದಿ ಗೊತ್ತಾದಾಗ ನಾನು ದರ್ಶನ್ ಅವ್ರ 'ಕ್ರಾಂತಿ' ಚಿತ್ರದಲ್ಲಿ ನಟಿಸುತ್ತಿದ್ದೆ ಎಂದು ಗಿರಿಜಾ ಲೋಕೇಶ್ ನೆನಪು ಮಾಡಿಕೊಂಡಿದ್ದಾರೆ.
"ಅವತ್ತು 'ಕ್ರಾಂತಿ' ಚಿತ್ರದ ಯೂನಿಟ್ ಹುಡುಗರಿಗೆಲ್ಲಾ ಚಿಕನ್ ಮಾಡ್ಸಿ ಊಟ ಹಾಕಿಸಬೇಕು ಅಂತ 12 ಗಂಟೆಗೆಲ್ಲಾ ಊಟಕ್ಕೆ ಬ್ರೇಕ್ ಕೊಟ್ರು. ಅಪ್ಪು ಇನ್ನಿಲ್ಲ ಎನ್ನುವ ಸುದ್ದಿ ಬರ್ತಿತ್ತು. ನಾನು ಹೋಗಿ ಊಟ ರುಚಿ ನೋಡ್ತಿದ್ದೆ. ನಾನ್‌ವೆಜ್ ಅಂದ್ರೆ ತಂಡವರಿಗೆಲ್ಲಾ ಹಸಿವು ಜಾಸ್ತಿ ಆಗುತ್ತೆ. ಆದರೆ ಅಪ್ಪು ವಿಷಯ ಗೊತ್ತಾಗಿ ಎಲ್ಲರೂ ಹೊರಟುಬಿಟ್ರು. ಆ ಊಟ ಯಾರಿಗೋ ಕೊಟ್ರೊ ಏನಾಯ್ತೋ ಗೊತ್ತಿಲ್ಲ. ದರ್ಶನ್ ಸೇರಿದಂತೆ ಎಲ್ಲರೂ ಹೊರಟುಬಿಟ್ರು. ಬಳಿಕ ನಾವು ಹೊರಟ್ವಿ" ಎಂದು ಗಿರಿಜಾ ಲೋಕೇಶ್ ತಿಳಿಸಿದ್ದಾರೆ.
'ಧೂಮಕೇತು' ಚಿತ್ರದಲ್ಲಿ ಮೊದಲ ಬಾರಿಗೆ ಡಾ. ರಾಜ್‌ಕುಮಾರ್ ಜೊತೆ ಕಾಣಿಸಿಕೊಂಡಿದ್ದನ್ನು ಗಿರಿಜಾ ಲೋಕೇಶ್ ನೆನಪಿಸಿಕೊಂಡಿದ್ದಾರೆ. ನಾನು ಮಾಡುತ್ತಿದ್ದ ತಲೆಮಾಂಸ, ಚಿಕನ್ ಅಂದ್ರೆ ಅಣ್ಣಾವ್ರು, ಪುನೀತ್‌ಗೆ ಬಹಳ ಇಷ್ಟ. ಒಮ್ಮೆ ಇಬ್ಬರೂ ಕನಸ್ಸಿನಲ್ಲಿ ಬಂದಿದ್ರು. ಮರುದಿನ ನಾನ್‌ವೆಜ್ ಮಾಡಿ ಅವ್ರ ಫೋಟೊ ಮುಂದೆ ಎಡೆ ಇಟ್ಟು ಪೂಜೆ ಮಾಡಿದ್ದೆ ಎಂದು ಗಿರಿಜಾ ಲೋಕೇಶ್ ಹೇಳಿದ್ದಾರೆ. ಮದುವೆ ಬಳಿಕ 14 ವರ್ಷ ಚಿತ್ರರಂಗದಿಂದ ದೂರ ಇದ್ದೆ. ಕೊನೆಗೆ 'ಚಿರಂಜೀವಿ ಸುಧಾಕರ' ಚಿತ್ರದಲ್ಲಿ ನಟಿಸಲೇ ಬೇಕು ಎಂದು ಪಾರ್ವತಮ್ಮ ಅವಕಾಶ ಕೊಟ್ಟರು. ಬಳಿಕ ನೂರಾರು ಸಿನಿಮಾಗಳಲ್ಲಿ ನಟಿಸಿದೆ ಎಂದು ವಿವರಿಸಿದ್ದಾರೆ.


Click it and Unblock the Notifications











