ಅಕ್ಕ- ತಂಗಿಯಾಗಿ ಧಾರಾವಾಹಿಯಲ್ಲಿ ನಟಿಸಿ ಮುಂದೆ ನಾಯಕಿಯರಾಗಿ ಗೆದ್ದ ಈ ಕನ್ನಡ ನಟಿಯರು ಯಾರು?
ಮೊಗ್ಗಿನ ಜಡೆ ಅಂದ್ರೆ ಒಂದ್ಕಾಲದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಹೆಣ್ಣು ಮಕ್ಕಳಿಗೆ ಪೋಷಕರು ಸುಂದರವಾಗಿ ಮೊಗ್ಗಿನ ಜಡೆ ಹಾಕಿಸಿ ಖುಷಿ ಪಡುತ್ತಿದ್ದರು. ಸ್ಟುಡಿಯೋಗೆ ಕರೆದುಕೊಂಡು ಫೋಟೊ ತೆಗೆಸುತ್ತಿದ್ದರು. ಇವತ್ತಿನ ಕಾಲದಲ್ಲಿ ಅದನ್ನೆಲ್ಲಾ ಊಹಿಸಿಕೊಳ್ಳುವುದು ಕಷ್ಟ ಬಿಡಿ.
ನಿಮಿಷ ನಿಮಿಷಕ್ಕೂ ಮೊಬೈಲ್ ಕ್ಯಾಮರಾ ತೆಗೆದು ಫೋಟೊ ಕ್ಲಿಕ್ಕಿಸಿಕೊಳ್ಳುವ ಜಮಾನ ಇದು. ಸ್ಟುಡಿಯೋ, ಫೋಟೋಗ್ರಾಫರ್, ಕ್ಯಾಮರಾ ರೀಲ್, 10 ದಿನಗಳ ಬಳಿಕ ಫೋಟೊ ತೊಳೆದು ಕೊಡುವುದು ಇದ್ಯಾವುದು ಇವತ್ತಿನ ಮಕ್ಕಳಿಗೆ ಗೊತ್ತಿಲ್ಲ. 25 ವರ್ಷಗಳ ಹಿಂದೆ ಫೋಟೊ ಹಿಡಿಸುವುದೇ ಒಂದು ಸಂಭ್ರಮ, ಸಾಹಸ ಆಗಿತ್ತು. ಇಷ್ಟ ಬಂದಾಗ ಫೋಟೊ ಕ್ಲಿಕ್ಕಿಸಿಕೊಳ್ಳುವ ಅವಕಾಶ ಇರುತ್ತಿರಲಿಲ್ಲ.

ಇನ್ನು ಗಂಡು ಮಗುವಿಗೆ ಹೆಣ್ಣು ಮಗುವಿನಂತೆ, ಹೆಣ್ಣು ಮಗುವಿಗೆ ಗಂಡು ಮಗುವಿನಂತೆ ಬಟ್ಟೆ ತೊಡಿಸಿ ಸ್ಟುಡಿಯೋಗೆ ಕರೆದುಕೊಂಡು ಹೋಗಿ ಪೋಷಕರು ಫೋಟೊ ಹಿಡಿಸುತ್ತಿದ್ದರು. ಅಕ್ಕ ಪಕ್ಕದ ಮನೆಯ ಮಕ್ಕಳ ಬಟ್ಟೆ ಕೇಳಿ ತಂದು ಹಾಕಿ ಮಕ್ಕಳ ಫೋಟೊ ತೆಗೆಸುತ್ತಿದ್ದರು. ಈ ಫೋಟೊಗಳಲ್ಲಿ ಇರುವ ಇಬ್ಬರೂ ಪುಟಾಣಿಗಳು ಆ ಕಾಲದಲ್ಲಿ ಮೊಗ್ಗಿನ ಜಡೆ ಹಾಕಿಕೊಂಡು ಫೋಟೊ ಹಿಡಿಸಿ ಸಂಭ್ರಮಿಸಿದ್ದರು. ಈಗ ಇವರಿಬ್ಬರು ಜನಪ್ರಿಯ ನಟಿಯರಾಗಿ ನಮ್ಮ ಕಣ್ಮುಂದೆ ಇದ್ದಾರೆ. ಮೊದಲ ನೋಟದಲ್ಲಿ ಈ ಫೋಟೊಗಳನ್ನು ಅವರನ್ನು ಗುರ್ತಿಸುವುದು ಕಷ್ಟ ಎನಿಸಬಹುದು.
ಅಚ್ಚರಿ ಎಂದರೆ ಹೀಗೆ ಬಾಲ್ಯದಲ್ಲಿ ಮೊಗ್ಗಿನ ಜಡೆ ಹಾಕಿಕೊಂಡು ಕ್ಯಾಮರಾ ಮುಂದೆ ನಿಂತಿದ್ದ ಪುಟಾಣಿಗಳಿಬ್ಬರೂ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದರು. ಬಳಿಕ ಒಬ್ಬರು ನಾಯಕಿಯಾಗಿ ಸಕ್ಸಸ್ ಕಂಡರು. ಮತ್ತೊಬ್ಬರು ಕೂಡ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಕಿರುತೆರೆ ನಿರೂಪಕಿಯಾಗಿ ಜನಪ್ರಿಯರಾಗಿದ್ದಾರೆ. ಅಂದ ಹಾಗೆ ಈ ಫೋಟೊದಲ್ಲಿರುವುದು ನಟಿ ರಾಧಿಕಾ ಪಂಡಿತ್ ಹಾಗೂ ನಿರೂಪಕಿ ಶ್ವೇತಾ ಚೆಂಗಪ್ಪ.

ಇಬ್ಬರೂ 'ಕಾದಂಬರಿ' ಎಂಬ ಧಾರಾವಾಹಿಯಲ್ಲಿ ಅಕ್ಕ- ತಂಗಿಯಾಗಿ ನಟಿಸಿದ್ದು ಗೊತ್ತೇಯಿದೆ. ಆ ಧಾರಾವಾಹಿಯಲ್ಲಿ ಶ್ವೇತಾ ನಾಯಕಿಯಾಗಿ ಮಿಂಚಿದ್ರೆ ರಾಧಿಕಾ ಕೆಲ ದಿನಗಳ ಕಾಲ ಶ್ವೇತಾ ಸಹೋದರಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ 'ಮೊಗ್ಗಿನ ಮನಸ್ಸು' ಸಿನಿಮಾ ಮೂಲಕ ನಾಯಕಿಯಾಗಿ ಸಕ್ಸಸ್ ಕಂಡಿದ್ದರು. ಅಲ್ಲಿಂದ ಮುಂದೆ ಹಿಂತಿರುಗಿ ನೋಡಲಿಲ್ಲ. ರಾಕಿಂಗ್ ಸ್ಟಾರ್ ಯಶ್ ಜೋಡಿಯಾಗಿಯೂ ಮಿಂಚಿದ್ದರು. ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದಾರೆ. ಮದುವೆ ಬಳಿಕ ರಾಧಿಕಾ ಸಿನಿಮಾಗಳಿಂದ ಕೊಂಚ ದೂರಾಗಿದ್ದಾರೆ.
ಶ್ವೇತಾ ಚೆಂಗಪ್ಪ ಕೆಲ ದಿನಗಳ ಹಿಂದೆ ಈ ಬಾಲ್ಯದ ಫೋಟೊ ಪೋಸ್ಟ್ ಮಾಡಿ ಮೊಗ್ಗಿನ ಜಡೆ ಹಾಕಿಕೊಂಡಿದ್ದ ಸಂಭ್ರಮ ಹಂಚಿಕೊಂಡಿದ್ದರು. "ನಾನು ಮೊದಲನೇ ಸಲ ಮೊಗ್ಗಿನ ಜಡೆ ಹಾಕಿಸಿಕೊಂಡ ಫೋಟೋ.. ನನ್ನ ಅಮ್ಮ ಹಾಗೂ ನಮ್ಮ ಮನೆಯ ಓನರ್, ಗೌರಮ್ಮ ಅತ್ತೆ, ಇಬ್ರೂ ಸೇರಿಕೊಂಡು ಮೊಗ್ಗಿನ ಜಡೆ ಹಾಕಿ, ಅಮ್ಮನ ಸೀರೆಯನ್ನ ಉಡಿಸಿ, ಸ್ಟುಡಿಯೋಗೆ ಕರೆದು ಕೊಂಡು ಹೋಗಿ ಫೋಟೋ ಕ್ಲಿಕ್ ಮಾಡಿಸಿದ್ರು. ಆ ಸಂಭ್ರಮ ಇನ್ನೂ ನೆನಪಿದೆ. ಜೊತೆಗೆ ಫೋಟೋ ಕ್ಲಿಕ್ ಮಾಡಿಸೋಕ್ಕೆ ಭಯ... ಆ ದಿನಗಳು... ಏನೂ ಅರಿಯದ ದಿನಗಳು. ಮುಗ್ಧ ಮನಸ್ಸು... ಈಗಿನ ಮಕ್ಕಳಿಗೆ ಮೊಗ್ಗಿನ ಜಡೆ ಅಂದ್ರೆ ಏನು ಅಂತನೂ ಗೊತ್ತಿಲ್ಲ ಅನ್ಸುತ್ತೆ ಅಲ್ವಾ?? ಈ ಮುಗ್ಧ ಹುಡುಗಿನ, ಅಂದ್ರೆ ನನ್ನ ನಾನೇ ತುಂಬಾ ಮಿಸ್ ಮಾಡ್ಕೋತಾ ಇದ್ದೀನಿ.. ಈಗಿನ ಪ್ರಪಂಚದಲ್ಲಿ ಮತ್ತೆ ಮುಗ್ಧ ಮನಸ್ಸುಗಳು ಸಿಗೋಕ್ಕೆ ಸಾಧ್ಯಾನಾ" ಎಂದು ಬರೆದುಕೊಂಡಿದ್ದರು.
'ವರ್ಷ' ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಜೊತೆ ನಟಿಸುವ ಅವಕಾಶ ಶ್ವೇತಾ ಚೆಂಗಪ್ಪ ಅವರಿಗೆ ಸಿಕ್ಕಿತ್ತು. ಬಳಿಕ 'ತಂಗಿಗಾಗಿ' ಹಾಗೂ 'ವೇದ' ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಕಿರುತೆರೆಯ ಹಲವು ಕಾರ್ಯಕ್ರಮಗಳ ನಿರೂಪಕಿಯಾಗಿ ಅವರು ಸಕ್ಸಸ್ ಕಂಡಿದ್ದಾರೆ.


Click it and Unblock the Notifications











