ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ನಟ ಹರೀಶ್ ರಾಯ್ ಪಾರಾಗಿದ್ದಿದ್ದು ಹೇಗೆ?
'ಕೆಜಿಎಫ್' ಚಿತ್ರದ ಚಾಚಾ ಖ್ಯಾತಿಯ ನಟ ಹರೀಶ್ ರಾಜ್ ಇಹಲೋಕ ತ್ಯಜಿಸಿದ್ದಾರೆ. ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕಿದ್ವಾಯಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ. 20 ವರ್ಷಗಳ ಹಿಂದೆ ಕೊಲೆ ಪ್ರಕರಣದಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ಕೂಡ ಆಗಿತ್ತು.
50ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ಹರೀಶ್ ರಾಯ್ ನಟಿಸಿದ್ದರು. ಪೋಷಕನಟರಾಗಿ ಮುಖ್ಯವಾಗಿ ಖಳನಟನಾಗಿಯೇ ತೆರೆಮೇಲೆ ಕಾಣಿಸಿಕೊಂಡಿದ್ದು ಹೆಚ್ಚು. ಉಪೇಂದ್ರ ನಿರ್ದೇಶನದ 'ಓಂ' ಚಿತ್ರದಲ್ಲಿ ಡಾನ್ ಆಗಿ ನಟಿಸಿದ್ದ ಅವರು ಮುಂದೆ ಶಿವಣ್ಣ, ಸುದೀಪ್, ದರ್ಶನ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.
ಇತ್ತೀಚೆಗೆ ಮಾರಕ ಕ್ಯಾನ್ಸರ್ ಹರೀಶ್ ರಾಯ್ ಹೊಟ್ಟೆಗೆ ಪಸರಿಸಿ ನೀರು ತುಂಬಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು. ಹಣ ಸಹಾಯಕ್ಕೆ ಮನವಿ ಮಾಡಿದ್ದರು

1992ರಲ್ಲಿ ಉಡುಪಿಯಲ್ಲಿ ನಡೆದಿದ್ದ ಹತ್ಯೆ ಪ್ರಕರಣವೊಂದರಲ್ಲಿ ನಟ ಹರೀಶ್ ರಾಯ್ ಅವರಿಗೆ ಶಿಕ್ಷೆ ಆಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೂಡ ಕೆಲ ದಿನಗಳ ಕಾಲ ಕೈದಿಯಾಗಿ ಇದ್ದರು. ಅದು 34 ವರ್ಷಗಳ ಹಿಂದೆ ಉಡುಪಿಯಲ್ಲಿ ನಡೆದಿದ್ದ ಹತ್ಯೆ ಪ್ರಕರಣ. ಉಡುಪಿ ಜಿಲ್ಲಾ ಸೆಷನ್ ಕೋರ್ಟ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಬಳಿಕ ಹೇಗೆ ಖುಲಾಸೆಯಾಗಿದ್ದೆ ಎಂದು ಟಿವಿ9 ಸಂದರ್ಶನದಲ್ಲಿ ಖುದ್ದಾಗಿ ಹರೀಶ್ ರಾಯ್ ಹೇಳಿಕೊಂಡಿದ್ದರು.
ಹರೀಶ್ ರಾಯ್ ಮಾತನಾಡಿ "302 ಕೇಸ್‌ನಲ್ಲಿ ನನಗೆ ಜೀವಾವಧಿ ಶಿಕ್ಷೆ ಆಗಿತ್ತು. ಬೇರೊಬ್ಬರು ತಪ್ಪು ಮಾಡಿ ನನ್ನ ಮೇಲೆ ಹಾಕಿದ್ರು. ಘಟನೆಯಲ್ಲಿ ಸತ್ತ ವ್ಯಕ್ತಿ ಸಾಯುವ ಮುನ್ನ ನಾನು ಅಲ್ಲಿರಲಿಲ್ಲ ಎಂದು ಹೇಳಿದ್ದ. ಆದರೂ ನನ್ನನ್ನು ಸಿಲುಕಿಸುವ ಪ್ರಯತ್ನ ಮಾಡಿದ್ರು. ಪ್ರಕರಣ ಮುಂದೆ ಸಿಓಡಿ ತನಿಖೆಗೆ ಹೋಯಿತು. ನಾನು ಈ ರಗಳೆ ಬೇಡ ಎಂದು ಚಿತ್ರರಂಗಕ್ಕೆ ಬಂದುಬಿಟ್ಟೆ" ಎಂದು ನೆನಪಿಸಿಕೊಂಡಿದ್ದರು.

ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ಬಳಿಕ ಕೇಸ್ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಬಳಿಕ ಅದು ನನಗೆ ಸಂಕಷ್ಟ ತಂದಿತ್ತು ಎಂದು ಹರೀಶ್ ರಾಯ್ ವಿವರಿಸಿದ್ದರು. "302 ಕೇಸ್ ಯಾವಾಗ ಬಿಗಿಯಾಗುತ್ತೋ ಗೊತ್ತಿಲ್ಲ. ಉಡುಪಿ ಸೆಷನ್ ಕೋರ್ಟ್‌ಗೆ ಕರೆದು ಕೇಸ್‌ನಲ್ಲಿ ಸೋತಿದ್ದೀರಾ, ನಿಮಗೆ ಜೀವಾವಧಿ ಶಿಕ್ಷೆ ಅಂದ್ರು. 2003ರಲ್ಲಿ ಸಿನಿಮಾಗಳ ಬಹಳ ಬ್ಯುಸಿಯಾಗಿದ್ದ ಅವಧೀಯಲ್ಲೇ ಶಿಕ್ಷೆಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದೆ. ಬಳಿಕ ಹೈಕೋರ್ಟ್‌ನಲ್ಲಿ ಕೇಸ್ ಗೆದ್ದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ ನಾನು ಸೆಲೆಬ್ರೆಟಿ ಎನ್ನುವ ಕಾರಣಕ್ಕೆ ಅಲ್ಲಿನ ಸಿಬ್ಬಂದಿ ಕೊಂಚ ಕನಿಕರ ತೋರಿಸಿದ್ದರು" ಎಂದು ಮೆಲುಕು ಹಾಕಿದ್ದರು.
ಹರೀಶ್ ರಾಯ್ ನಿಜವಾದ ಹರೀಶ್ ಆಚಾರ್ಯ. ಉಡುಪಿಯಲ್ಲಿ ಚಿನ್ನದ ಅಂಗಡಿ ಇತ್ತು. ಮನೆಕಡೆ ಯಾವುದೇ ಸಮಸ್ಯೆ ಇರಲಿಲ್ಲ. ತಂದೆ ಜಮೀನ್ದಾರರು. ಆದರೂ ತಾಯಿಯ ಆರೈಕೆ ಇಲ್ಲದೇ ಬೆಳೆಯುವಂತಾಗಿತ್ತು. 10ನೇ ತರಗತಿಯಲ್ಲಿದ್ದಾಗ ಏನೋ ತಪ್ಪು ಮಾಡಿ ಶಿಕ್ಷಕರು ತಂದೆಯನ್ನು ಕರೆದುಕೊಂಡು ಬರಲು ಹೇಳಿದಾಗ ಹೆಸರಿ ಬಾಂಬೆಗೆ ಓಡಿ ಹೋಗಿದ್ದೆ. 2 ವರ್ಷ ಅಲ್ಲೇ ಇದ್ದೆ. ಬಾಂಬೆಯಲ್ಲಿ ನನ್ನ ಮೇಲೆ ಕೇಸ್‌ಗಳಿತ್ತು. 1994ರಲ್ಲಿ ಬೆಂಗಳೂರಿಗೆ ಬಂದೆ ಎಂದು ಹರೀಶ್ ಹೇಳಿಕೊಂಡಿದ್ದರು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಆದರೆ ಇತ್ತೀಚೆಗೆ ಆರೋಗ್ಯ ಕೈ ಕೊಟ್ಟಿತ್ತು.


Click it and Unblock the Notifications











