20ರ ಹರೆಯದಲ್ಲೇ ಪತ್ನಿಯನ್ನು ಕಳೆದುಕೊಂಡಿದ್ದ ರಾಜ್‌ಪಾಲ್ ಯಾದವ್ ; 3 ಮಕ್ಕಳು - ಹಾಸ್ಯ ಚತುರನ 2ನೇ ಪತ್ನಿ ಯಾರು ?
ಬದುಕು ತುಂಬಾನೇ ವಿಚಿತ್ರ. ಸರಿಯಾದ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಇಲ್ಲಿ ಕೆಲ ಅನಿರೀಕ್ಷಿತ ತಿರುವುಗಳು ಎದುರಾಗುತ್ತಾವೆ. ಹೀಗೆ ಎದುರಾಗುವ ಈ ತಿರುವುಗಳಿಂದ ಕೆಲ ಒಮ್ಮೆ ಬದುಕು ಅಲ್ಲೋಲ.. ಕಲ್ಲೋಲವಾಗುತ್ತೆ. ಇನ್ನೂ ಕೆಲ ಒಮ್ಮೆ ಕತ್ತಲೆ ತುಂಬಿದ್ದ ಬದುಕಿನಲ್ಲಿ ಬೆಳಕು ಮೂಡುತ್ತೆ. ಈ ಎರಡು ತಿರುವುಗಳಿಗೆ ಸಾಕ್ಷಿಯಂತೆ ಇರುವುದು ರಾಜ್‌ಪಾಲ್ ಯಾದವ್ ಅವರ ವ್ಯೆಯಕ್ತಿಕ ಬದುಕು.
ಹೌದು, ಅಸಲಿಗೆ ಚಿತ್ರರಂಗದಲ್ಲಿ ಹಾಸ್ಯ ಕಲಾವಿದರಾಗಿ ಹೆಸರು ಮಾಡಿದ ಹಲವರು ನಿಜ ಜೀವನದಲ್ಲಿ ಹೇಳಿಕೊಳ್ಳಲಾರದಂಥ ಸಂಕಟ ಅನುಭವಿಸುತ್ತಿರುತ್ತಾರೆ. ಇದಕ್ಕೆ ತಾಜಾ ಉದಾಹರಣೆಯಂತಿರುವ ರಾಜ್‌ಪಾಲ್ ಯಾದವ್ ಸದ್ಯ ತಿಹಾರದ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಚಿತ್ರರಂಗ ಸದ್ಯ ರಾಜ್‌ಪಾಲ್ ಯಾದವ್ ಅವರಿಗೆ ನೆರವಿನ ಹಸ್ತವನ್ನೂ ಚಾಚುತ್ತಿದೆ. ಚಿತ್ರರಂಗದ ಈ ನಡೆಯಿಂದ ರಾಜ್‌ಪಾಲ್ ಯಾದವ್ ಅವರ ಪತ್ನಿ ರಾಧಾ ಯಾದವ್ ಮೂಕ ವಿಸ್ಮಿತರಾಗಿದ್ದಾರೆ. ಕಷ್ಟಕಾಲದಲ್ಲಿ ಕೈ ಹಿಡಿಯಲು ಮುಂದಾದ ಚಿತ್ರರಂಗಕ್ಕೆ ಶರಣು ಶರಣೆಂದಿದ್ದಾರೆ. ಚಿತ್ರರಂಗ ಸದಾ ಕಾಲ ರಾಜ್‌ಪಾಲ್ ಯಾದವ್ ಅವರ ಜೊತೆ ಇತ್ತು ಮತ್ತು ಇದೆ ಎಂದು ಹೇಳಿದ್ದಾರೆ.
ಇಂಥಾ ರಾಧಾ ಯಾದವ್, ರಾಜ್‌ಪಾಲ್ ಯಾದವ್ ಅವರ ಮೊದಲ ಪತ್ನಿಯಲ್ಲ ಬದಲಿಗೆ ಎರಡನೇ ಪತ್ನಿ ಎನ್ನುವುದು ಬಹುತೇಕರಿಗೆ ಗೊತ್ತಿರದ ವಿಚಾರ. ನಿಮಗೆ ಗೊತ್ತಿರಲಿ.. ಅವು ರಾಜ್‌ಪಾಲ್ ಯಾದವ್ ಅವರ ಕಡುಕಷ್ಟದ ದಿನಗಳು. ಚಿತ್ರರಂಗಕ್ಕೆ ಬರುವ ಮುನ್ನ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ರಾಜ್‌ಪಾಲ್ ಯಾದವ್ ತಮ್ಮ 20ರ ಹರೆಯದಲ್ಲಿ ಮದುವೆಯಾಗಿದ್ದರು.
ಇವರ ಮೊದಲ ಪತ್ನಿಯ ಹೆಸರು ಕರುಣಾ. ತಂದೆಯ ಅಣತಿಯಂತೆ ಕರುಣಾ ಅವರನ್ನು ರಾಜ್‌ಪಾಲ್ ಯಾದವ್ ಮದುವೆ ಏನೋ ಆಗಿದ್ದರು. ಆದರೆ, ವಿಧಿ ಲಿಖಿತ ಬೇರೆಯೇ ಇತ್ತು. ಮದುವೆಯಾದ ಕೆಲವೇ ವರ್ಷದಲ್ಲಿ ಕರುಣಾ ತಮ್ಮ ಮಗಳು ಜ್ಯೋತಿಗೆ ಜನ್ಮ ನೀಡಿದರು. ಆ ನಂತರ ಇಹಲೋಕ ತ್ಯಜಿಸಿದರು.
ಕರುಣಾ ಅವರ ಅಕಾಲಿಕ ನಿಧನದಿಂದ ರಾಜ್‌ಪಾಲ್ ಯಾದವ್ ಭಾವನಾತ್ಮಕವಾಗಿ ಬಹಳ ಕುಗ್ಗಿದ್ದರು.ಇನ್ನೇನು ಬದುಕೇ ಬೇಡ ಎಂದುಕೊಂಡಾಗ ರಾಜ್‌ಪಾಲ್ ಯಾದವ್ ಅವರನ್ನು ಬಣ್ಣದ ಲೋಕ ಅಪ್ಪಿಕೊಂಡಿತ್ತು. 1997ರಲ್ಲಿ ''ಮುಂಗೇರಿ ಕೆ ಭಾಯ್ ನೌರಂಗಿಲಾಲ್'' ಧಾರಾವಾಹಿಯಲ್ಲಿ ರಾಜ್‌ಪಾಲ್ ಯಾದವ್ ಮೊದಲ ಬಾರಿ ಕಾಣಿಸಿಕೊಂಡರು. ಇವರ ಪಾತ್ರ ಹಲವರ ಗಮನ ಸೆಳೆಯಿತು.

ಆದರೆ, ಬಣ್ಣದ ಲೋಕದ ಬಾಗಿಲು ತೆರೆದಿರಲಿಲ್ಲ. 1999ರಲ್ಲಿ ''ದಿಲ್ ಕ್ಯಾ ಕರೇ'' ಚಿತ್ರದಲ್ಲಿ ಶಾಲೆಯ ವಾಚ್‌ಮ್ಯಾನ್ ಪಾತ್ರ ರಾಜ್‌ಪಾಲ್ ಯಾದವ್ ಅವರಿಗೆ ಸಿಕ್ತು. ತುಂಬಾನೇ ಚಿಕ್ಕದಾದ ಪಾತ್ರ ಅದು.
ಆ ನಂತರ ಅದೇ ವರ್ಷ ''ಶೂಲ್'' ಚಿತ್ರದಲ್ಲಿ ಕೂಲಿಯಾಗಿ ಮತ್ತು ರಾಮ್ ಗೋಪಾಲ್ ವರ್ಮಾ ಅವರ ''ಮಸ್ತ್'' ಚಿತ್ರದಲ್ಲಿ ಪ್ಯೂನ್ ಪಾತ್ರದಲ್ಲಿ ರಾಜ್‌ಪಾಲ್ ಯಾದವ್ ಕಾಣಿಸಿಕೊಂಡರು. ಇಲ್ಲಿ ಇವರ ಬದುಕು ಮತ್ತೊಂದು ಮಗ್ಗಲಿನತ್ತ ಹೊರಳಿತ್ತು.
''ಮಸ್ತ್'' ಚಿತ್ರದಲ್ಲಿ ಇವರ ಅಭಿನಯದಿಂದ ಪ್ರಭಾವಿತರಾಗಿದ್ದ ರಾಮ್ ಗೋಪಾಲ್ ವರ್ಮಾ ಮರು ವರ್ಷ ತಮ್ಮ ಮತ್ತೊಂದು ಚಿತ್ರ ''ಜಂಗಲ್''ನಲ್ಲಿ ಅವಕಾಶ ನೀಡಿದರು. ಈ ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ರಾಜ್‌ಪಾಲ್ ಯಾದವ್ ಜೀವ ತುಂಬಿದ್ದರು. ಈ ಪಾತ್ರ ಮತ್ತು ಈ ಚಿತ್ರ ರಾಜ್‌ಪಾಲ್ ಯಾದವ್‌ಗೆ ಹೆಸರು ಮತ್ತು ಬ್ರೇಕ್ ನೀಡಿತ್ತು.
ಇಲ್ಲಿಂದಾಚೆ ರಾಜ್‌ಪಾಲ್ ಯಾದವ್ ಹಿಂದೆ ತಿರುಗಿ ನೋಡಿಲ್ಲ. ''ಪ್ಯಾರ್ ತುನೇ ಕ್ಯಾ ಕಿಯಾ''.. ''ಚಾಂದನಿ ಬಾರ್''.. ''ತುಮ್ಕೋ ನಾ ಭೂಲ್ ಪಾಯೆಂಗೇ''.. ''ಲಾಲ್ ಸಲಾಮ್''.. ''ಕಂಪನಿ'' ..ಹೀಗೆ ಎರಡು ವರ್ಷದಲ್ಲಿ 12 ಚಿತ್ರಗಳಲ್ಲಿ ರಾಜ್‌ಪಾಲ್ ಯಾದವ್ ಕಾಣಿಸಿಕೊಂಡರು.

ಚಿತ್ರರಂಗದಲ್ಲಿ ಕೈ ತುಂಬಾ ಅವಕಾಶಗಳಿದ್ದವು. ಆದರೂ ಒಂಟಿತನ ಇವರನ್ನು ಕಾಡುತ್ತಲೇ ಇತ್ತು. ಆಗ ಇವರ ಬದುಕಿನಲ್ಲಿ ಬಂದಿದ್ದೇ ರಾಧಾ. ಹೌದು, 2001ರಲ್ಲಿ ಸನ್ನಿ ಡಿಯೋಲ್, ಪ್ರೀತಿ ಜಿಂಟಾ ಅಭಿನಯದ ''ದಿ ಹೀರೋ'' ಚಿತ್ರದ ಚಿತ್ರೀಕರಣಕ್ಕಾಗಿ ರಾಜ್‌ಪಾಲ್ ಯಾದವ್ ಕೆನಡಾದಲ್ಲಿದ್ದರು. ಕೆನಡಾದ ಕ್ಯಾಲ್ಗರಿ ನಗರದಲ್ಲಿ ಐಸ್‌ಕ್ರೀಮ್ ಪಾರ್ಲರ್ ಗೆ ಹೋದಾಗ ರಾಧಾರನ್ನು ನೋಡಿದ ರಾಜ್‌ಪಾಲ್ ಯಾದವ್ ಅಲ್ಲಿಯೇ ಮನ ಸೋತಿದ್ದರು. ರಾಧಾ ಸಿನಿಮಾ ಪ್ರೇಮಿಯೂ ಅಲ್ಲ. ಬಾಲಿವುಡ್ ಸ್ಟಾರ್ ಗಳ ಅಭಿಮಾನಿ ಕೂಡ ಆಗಿರಲಿಲ್ಲ.
ಆದರೂ ಹಾಗೂ ಹೀಗೂ ರಾಧಾ ಅವರ ಪರಿಚಯ ಮಾಡಿಕೊಂಡ ರಾಜ್‌ಪಾಲ್ ಯಾದವ್ ಮುಂದಿನ ಹತ್ತು ತಿಂಗಳು ಕುಂತರೂ ನಿಂತರೂ ರಾಧಾ ಧ್ಯಾನವನ್ನೇ ಮಾಡಿದರು. ಫೋನ್‌ನಲ್ಲಿಯೇ ಮದುವೆ ಪ್ರಸ್ತಾವನೆ ಮುಂದಿಟ್ಟರು.
ರಾಜ್‌ಪಾಲ್ ಯಾದವ್ ಅವರ ಪ್ರೇಮ ನಿವೇದನೆ ಒಪ್ಪಿಕೊಂಡ ರಾಧಾ ಕೆನಡಾದಿಂದ ಭಾರತಕ್ಕೆ ಬಂದರು. ಮೇ- 2003ರಲ್ಲಿ ಮದುವೆಯಾದರು. ಇವರ ಮದುವೆಗೆ ಈಗ 23 ವರ್ಷ. ಇಬ್ಬರ ಪ್ರೀತಿಯ ಸಂಕೇತವಾಗಿ ಹರ್ಷಿತಾ ಮತ್ತು ರೆಹಾಂಶಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಜ್ಯೋತಿ ಅವರನ್ನು ಸೇರಿ ರಾಜ್‌ಪಾಲ್ ಯಾದವ್ ಅವರಿಗೆ ಮೂವರು ಹೆಣ್ಣು ಮಕ್ಕಳು.
''ದಿ ಲಲ್ಲನ್‌ಟಾಪ್''ಗೆ ಹಿಂದೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ಮದುವೆ ಮತ್ತು ಪತ್ನಿ ರಾಧಾ ಕುರಿತು ಮಾತನಾಡಿದ್ದ ರಾಜ್‌ಪಾಲ್ ಯಾದವ್ ಕೆನಡಾದಲ್ಲಿ ಹುಟ್ಟಿ ಬೆಳೆದರೂ ಕೂಡ ರಾಧಾ ನನ್ನ ಕುಟುಂಬದ ಜೊತೆ ಬಹುಬೇಗ ಹೊಂದಿಕೊಂಡರು ಎಂದು ಹೇಳಿದ್ದರು. ಸ್ಥಳಿಯ ಭಾಷೆಯನ್ನು ಕಲಿತರು, ನಮ್ಮ ಊರಿನ ಸಂಪ್ರದಾಯಗಳನ್ನು ಕಲಿತರು ಎಂದಿದ್ದರು. ನನ್ನ ಪೋಷಕರಿಗೆ ರಾಧಾ ತುಂಬಾನೇ ಗೌರವ ಕೊಡುತ್ತಾರೆ ಎಂದು ಹೇಳಿದ್ದರು. ನಮ್ಮ ಹಬ್ಬ-ಹರಿದಿನ ನಮ್ಮ ಪದ್ದತಿ, ಸಂಸ್ಕ್ರತಿ, ಎಲ್ಲವನ್ನೂ ರಾಧಾ ಬೇಗನೇ ಕಲಿತರು ಎಂದು ಹೇಳಿದ್ದ ರಾಜ್‌ಪಾಲ್ ಯಾದವ್ 5 ಭಾಷೆಗಳನ್ನು ರಾಧಾ ಮಾತನಾಡಬಲ್ಲರು ಎಂದಿದ್ದರು.
ನನ್ನ ಮೊದಲ ಮಗಳು ಜ್ಯೋತಿಯನ್ನು ತನ್ನ ಮಗಳಂತೆಯೇ ರಾಧಾ ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದ ರಾಜ್‌ಪಾಲ್ ಯಾದವ್ ನನ್ನ ಮಕ್ಕಳನ್ನು ಬೆಳೆಸುವಲ್ಲಿ ಮತ್ತು ಕುಟುಂಬವನ್ನು ಒಟ್ಟಿಗೆ ಇರಿಸುವಲ್ಲಿ ರಾಧಾ ಪಾತ್ರ ದೊಡ್ಡದು ಎಂದು ಹೇಳಿದ್ದರು.
ಅಂದ್ಹಾಗೇ ರಾಜ್‌ಪಾಲ್ ಯಾದವ್ ಮತ್ತು ರಾಧಾ ನಡುವೆ 9 ವರ್ಷಗಳ ಅಂತರ ಇದೆ. ರಾಜ್‌ಪಾಲ್ ಯಾದವ್ ಅವರಿಗೆ 55 ವರ್ಷವಾದರೆ, ರಾಧಾ ಅವರಿಗೆ 46 ವರ್ಷ.


Click it and Unblock the Notifications











