ಬುಲೆಟ್ ರೀತಿ ಸಿಡಿಯುತ್ತಿವೆ 'ಕಾಟೇರ' ಡೈಲಾಗ್ಸ್: ಮಾಸ್ತಿ ಬರೆದ ಅರ್ಥಗರ್ಭಿತವಾದ ಅಷ್ಟೇ ಖಡಕ್ಕಾದ ಡೈಲಾಗ್ಸ್ ಇಲ್ಲಿದೆ
'ಕಾಟೇರ' ಚಿತ್ರ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ತರುಣ್ ಸುಧೀರ್ ನಿರ್ದೇಶನ ಹಾಗೂ ದರ್ಶನ್ ನಟನೆಗೆ ಪ್ರೇಕ್ಷಕರು ಬಹುಪರಾಕ್ ಎನ್ನುತ್ತಿದ್ದಾರೆ. ತರುಣ್ ಜೊತೆ ಸೇರಿ ಜಡೇಶ್ ಹಂಪಿ ಚಿತ್ರಕ್ಕೆ ಕಥೆ, ಚಿತ್ರಕಥೆ ಸಿದ್ಧಪಡಿಸಿದ್ದರು. ಇನ್ನು ಮಾಸ್ತಿ ಉಪ್ಪಾರಳ್ಳಿ ಸಂಭಾಷಣೆ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಚಿತ್ರದ ಡೈಲಾಗ್ಸ್ ಬಗ್ಗೆ ಮಾತನಾಡುತ್ತಿದ್ದಾರೆ.
ಅತಿಯಾದ ಬಿಲ್ಡಪ್ ಅನ್ನಿಸದೇ, ಕಥೆಯಿಂದ ಹೊರಗೂ ಬರದೇ 'ಕಾಟೇರ'ನ ನೋವು ನಲಿವಿನ ಕಥೆಗೆ ಜೀವ ತುಂಬಿರುವುದು ಮಾಸ್ತಿ ಸಂಭಾಷಣೆ. ಅದು ಒನ್‌ಲೈನರ್‌ಗಳೇ ಇರಬಹುದು, ಉದ್ದುದ್ದಲ ಸಾಲುಗಳೇ ಇರಬಹುದು. ಎಲ್ಲವೂ ಸಿನಿರಸಿಕರ ಮನಗೆದ್ದಿದೆ. ಸನ್ನಿವೇಶಕ್ಕೆ ತಕ್ಕಂತೆ ಬಹಳ ಆಳಕ್ಕೆ ಇಳಿದು ಮಾಸ್ತಿ ಪದಗಳನ್ನು ಪೋಣಿಸಿದ್ದಾರೆ. ಹಳ್ಳಿ ಶೈಲಿಯ ಭಾಷೆಯಲ್ಲಿ 70ರ ದಶಕದ ಕಥೆಗೆ ತಕ್ಕಂತೆ ಡೈಲಾಗ್ಸ್ ಬರೆದಿದ್ದಾರೆ.

ಟ್ರೈಲರ್ ಬಿಡುಗಡೆ ಆದಾಗಲೇ ಸಂಭಾಷಣೆ ಎಲ್ಲರ ಮನಗೆದ್ದಿತ್ತು. ಇಡೀ ಸಿನಿಮಾದಲ್ಲಿ ಅಂತಹ ಸಾಕಷ್ಟು ಡೈಲಾಗ್ಸ್ ಇವೆ ಎಂದು ಮಾಸ್ತಿ ಹೇಳಿದ್ದರು. ಸಿನಿಮಾ ಬಿಡುಗಡೆಯಾದಾಗ ಅವರು ಹೇಳಿದ ಮಾತು ನಿಜವಾಗಿತ್ತು. ಬಹಳ ಅರ್ಥಗರ್ಭಿತವಾದ ಸಂಭಾಷಣೆ ಚಿತ್ರದ ಪ್ರತಿ ಸನ್ನಿವೇಶದ ತೂಕ ಹೆಚ್ಚಿಸಿದೆ. ಇನ್ನು ಟ್ರೈಲರ್‌ನಲ್ಲಿದ್ದ ಒಂದು ಡೈಲಾಗ್ ಬಗ್ಗೆ ವಿವಾದ ಸೃಷ್ಟಿಯಾಗಿತ್ತು. ಬಳಿಕ ಚಿತ್ರತಂಡವೇ ಅದನ್ನು ಬದಲಿಸಿತ್ತು. ಹಿರಣ್ಯ ಕಶಿಪು ನಾಟಕ ಸನ್ನಿವೇಶದ ಬಳಿಕ ಬರುವ ಒಂದೇ ಒಂದು ಡೈಲಾಗ್ ಮಾತ್ರ ಕಥೆಯಿಂದ ಹೊರಗೆ ಬಂದಿದೆ ಎನ್ನುವುದು ಬಿಟ್ಟರೆ ಮತ್ಯಾವುದೇ ಡೈಲಾಗ್ ಬಿಲ್ಡಪ್‌ಗಾಗಿ ಬರೆದಿಲ್ಲ ಅನ್ನೋದು ಗೊತ್ತಾಗುತ್ತದೆ.
ಥಿಯೇಟರ್‌ನಲ್ಲಿ ಸಿನಿಮಾ ನೋಡುವಾಗ ಡೈಲಾಗ್‌ಗಳು ಹೀಗೆ ಬಂದು ಹಾಗೆ ಹೋಗಿರುತ್ತದೆ. ಕೆಲವನ್ನು ನೆನಪಿನಲ್ಲಿ ಇಟ್ಟಿಕೊಳ್ಳುವುದಕ್ಕೆ ಸಾಧ್ಯವಾಗದೇ ಇರಬಹುದು. ಇನ್ನು ಅಭಿಮಾನಿಗಳ ಶಿಳ್ಳೆ ಚಪ್ಪಾಳೆ ನಡುವೆ ಕೆಲ ಡೈಲಾಗ್ಸ್ ಕೇಳಿಸದೇ ಇದ್ದಿರಬಹುದು. ಅಂತಹವರಿಗೆ ಸೂಪರ್ ಹಿಟ್ ಡೈಲಾಗ್ಸ್ ಕೇಳುವ ಅವಕಾಶ ನಾವು ಮಾಡಿಕೊಡ್ತೀವಿ. 'ಕಾಟೇರ' ಚಿತ್ರದ ಆಯ್ದ ಡೈಲಾಗ್‌ಗಳನ್ನು ಸ್ವತಃ ಸಂಭಾಷಣೆಕಾರ ಮಾಸ್ತಿ ಬರೆದು ಕಳುಹಿಸಿದ್ದಾರೆ. ಮುಂದೆ ಓದುತ್ತಾ ಹೋಗಿ.
"ನಾಕು ಜನ ಮೆಟ್ಟಿಲು ಹತ್ತುತಾರೆ ಅಂದ್ರೆ ನಾವು ಎರಡು ಮೆಟ್ಟಿಲು ಇಳಿಯಕ್ಕೂ ರೆಡಿ"
"ನಿಮಗೆ ನಂಬಿಕೆ ಇಲ್ಲದೇ ಇರಬಹುದು ನನಗೆ ನಿಯತ್ತಿದೆ"
ಕಾಳೇಗೌಡನ ಎದುರು 'ಕಾಟೇರ' ತಾನು ಮಾಡಿದ ಮಚ್ಚಿನ ತಾಕತ್ತು ತೋರಿಸುವ ಸನ್ನಿವೇಶವೊಂದಿದೆ. ಆ ಪವರ್‌ಫುಲ್ ಸನ್ನಿವೇಶಕ್ಕೆ ಮಾಸ್ತಿ ಬರೆದ ಈ ಸಾಲು ಮತ್ತಷ್ಟು ಖದರ್ ತಂದು ಕೊಟ್ಟಿವೆ.
"ಮಚ್ಚು ಒಡವೆ ಥರ ಇರ್ಬಾರ್ದು ಹೊಡೆಯೋ ಥರ ಇರ್ಬೇಕು.
ಅದರಲ್ಲಿ ಅಲಂಕಾರ ಕಾಣಬಾರದು ಅಹಂಕಾರ ಕಾಣಬೇಕು"
'ಕಾಟೇರ' ಟ್ರೈಲರ್ ಬಂದಾಗಲೇ "ಎಲ್ಲಾ ಹಾವುಗಳೂ ತಲೆ ಎತ್ತುತಾವೆ , ಕಾಳಿಂಗ ಸರ್ಪ ಮಾತ್ರಾನೇ ಹೆಡೆ ಎತ್ತೋದು" ಎನ್ನುವ ಡೈಲಾಗ್ ಸೂಪರ್ ಹಿಟ್ ಆಗಿತ್ತು.
ಹೋಟೆಲ್‌ನಲ್ಲಿ ಕಿಡಿಗೇಡಿಯೊಬ್ಬ ಹುಡುಗಿಯ ಜೊತೆ ಕೆಟ್ಟದಾಗಿ ನಡೆದುಕೊಂಡಾಗ ಆತನಿಗೆ ಎಚ್ಚರಿಕೆ ಕೊಟ್ಟು 'ಕಾಟೇರ' ಹೇಳುವ ಡೈಲಾಗ್ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡಿದೆ. "ಗಂಡಸಾದವ್ನು ಬೆವರು ಸುರಿಸ್ಬೇಕೇ ಹೊರತು ಜೊಲ್ಲು ಸುರಿಸಬಾರದು" ಎಂದು ಹೇಳಿ 'ಕಾಟೇರ' ಹೋಟೆಲ್ ಹೊರಗೆ ಬಂದು ಬೀಡಿ ಹೊತ್ತಿಸಿಕೊಳ್ಳುವ ಸನ್ನಿವೇಶ ಥಿಯೇಟರ್‌ಗಳಲ್ಲಿ ಸಖತ್ ಸದ್ದು ಮಾಡ್ತಿದೆ.

'ಉಳುವವನೆ ಭೂಮಿಯ ಒಡೆಯ' ಕಾಯ್ದೆಯ ಸುತ್ತಾ 'ಕಾಟೇರ' ಚಿತ್ರದ ಕಥೆ ಸುತ್ತುತ್ತದೆ. ರೈತರ ಕುರಿತು ಸಾಕಷ್ಟು ಡೈಲಾಗ್‌ಗಳು ಚಿತ್ರದಲ್ಲಿದೆ.
"ರೈತರ ಬೆಳೆಗೆ ಬೀಳೋ ಹುಳ ಆಗ್ಬೇಡ... ಬೆಳೆಗೆ ಬೇಕಾಗಿರೋ ಎರೆಹುಳ ಆಗು"
"ಅನ್ನಾನ ದ್ಯಾವರು ಅಂತಾರೆ ಅಂತ ದ್ಯಾವರನ್ನ ಸೃಷ್ಟಿ ಮಾಡೋವ್ನು ರೈತ ಮಾತ್ರ"
"ಒಂದು ದೇಶ ಧೈರ್ಯವಾಗಿ ಧ್ವಜ ನೆಡಬೇಕು ಅಂದ್ರೆ ಆ ದೇಶದ ರೈತ ಬೀಜ ಬಿತ್ತಬೇಕು"
ಕಳೆದ ವರ್ಷ ನಟ ದರ್ಶನ್ ಹುಟ್ಟುಹಬ್ಬದ ದಿನ ಟೈಟಲ್ ಸಮೇತ ಚಿತ್ರದ ಮೋಷನ್ ಪೋಸ್ಟರ್ ರಿವೀಲ್ ಆಗಿತ್ತು. ಮೋಷನ್ ಪೋಸ್ಟರ್‌ನಲ್ಲಿದ್ದ "ಮಚ್ಚು ಎರಡು ದಪ ಕೆಂಪಗಾಗ್ತೈತೆ ...ರಕ್ತದಲ್ಲಿ ನೆಂದಾಗ , ಬೆಂಕೀಲಿ ಬೆಂದಾಗ" ಎನ್ನುವ ಡೈಲಾಗ್ ಅಭಿಮಾನಿಗಳ ಮನಗೆದ್ದಿತ್ತು. ಆ ಮಾಸ್ ಡೈಲಾಗ್ ಚಿತ್ರದಲ್ಲೂ ಹೈಲೆಟ್ ಆಗಿದೆ.
"ಮಷಾಣ ಕಾಯೋವ್ನಿಗೆ ಎಲುಬು ಹೊಸದಾ? ಕುಲುಮೇಲಿ ಕಾಯ್ಸೋನಿಗೆ ಮಚ್ಚು ಹೊಸದಾ ?" ಡೈಲಾಗ್ ಕೂಡ ಬಹಳ ಇಷ್ಟವಾಗುತ್ತದೆ. ಇನ್ನು ವಿವಾದಕ್ಕೆ ಕಾರಣವಾಗಿದ್ದ ಡೈಲಾಗ್ ಅನ್ನು "ವಿಸ ಇಲ್ಲ ಅಂದ್ರೆ ಕಾಡಿಗೆ ಬಿಡಬೇಕು, ವಿಸ ಇದ್ರೆ ಹುತ್ತಕ್ ಬಿಡಬೇಕು" ಎಂದು ಬದಲಿಸಿ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ.
'ಕಾಟೇರ' ಚಿತ್ರದ ಮೂಲಕ ಸಮಾಜಕ್ಕೆ ಸಾಕಷ್ಟು ಉತ್ತಮ ವಿಚಾರಗಳನ್ನು ದಾಟಿಸಲಾಗಿದೆ. ದಶಕಗಳ ಹಿಂದೆ ಹಾಸು ಹೊಕ್ಕಾಗಿದ್ದ ಜಾತಿವ್ಯವಸ್ಥೆ, ಮಯಾರ್ದೆ ಹತ್ಯೆಯಂತಹ ಹೀನ ವಿಚಾರಗಳ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದೆ. ಜಾತಿ ವ್ಯವಸ್ಥೆಯ ಬಗ್ಗೆ 'ಕಾಟೇರ' ತಿಳಿ ಹೇಳುವ ಸನ್ನಿವೇಶದಲ್ಲಿ ಬರುವ ಡೈಲಾಗ್ಸ್ ಚಿತ್ರಮಂದಿರಗಳಲ್ಲಿ ಚಪ್ಪಾಳೆ ಗಿಟ್ಟಿಸುತ್ತಿವೆ.
ಕಾಸಿ ಕಮ್ಮಾರನಾದ
ಬೀಸಿ ಮಡಿವಾಳನಾದ
ಮೇಸಿ ಕುರುಬನಾದ
ಉತ್ತಿ ಒಕ್ಕಲಿಗನಾದ
ಓದಿ ಬ್ರಾಹ್ಮಣನಾದ
ಕಸುಬು ಗುರುತಿಸಲು ಮನುಷ್ಯ ಹೊತ್ತಿಸಿದ ಜ್ಯೋತಿ ಈ ಜಾತಿ ಅದರಲ್ಲಿ ಬೆಂಕಿ ಹತ್ತಿಸ್ತಿದಾರೆ .
ಎಲ್ಲಾ ಕುಲಕ್ಕೂ ಶ್ರೇಷ್ಠ ಮಾನವಕುಲ
ಎಲ್ಲಾ ಗೌರವಕ್ಕೂ ಶ್ರೇಷ್ಠ ಆತ್ಮಗೌರವ"
ಎನ್ನುವ ಸಾಲುಗಳು ಪ್ರತಿಯೊಬ್ಬರನ್ನು ಆಲೋಚನೆಗೆ ಹಚ್ಚುತ್ತದೆ.
ಅಂತದ್ದೇ ಮತ್ತೊಂದು ಡೈಲಾಗ್ "ಮೇಲೆ ಅನ್ನುಸ್ಕೊಂಡವರು ಮೇಲ್ಪಂಕ್ತಿ ಆಗಿರಬೇಕು...
ದೊಡ್ಡವರು ಅನ್ನಿಸಿಕೊಂಡವರು ದೊಡ್ದತನ ತೋರಿಸ್ಬೇಕು... ಜಾತಿ ಕುಲನ ನಾಲಿಗೆ, ನಡೆವಳಿಕೆ ಹೇಳಬೇಕೇ ಹೊರತು ಹುಟ್ಟಲ್ಲ ಧಣಿ..." ಸಿನಿರಸಿಕರ ಮನಗೆದ್ದಿದೆ.


Click it and Unblock the Notifications











