ನೋಡಲೇಬೇಕಾದ ಮಹಾತ್ಮಾ ಗಾಂಧಿ ಕುರಿತಾದ ಸಿನಿಮಾಗಳು
ಜಗತ್ತಿಗೆ ಸತ್ಯ, ಅಹಿಂಸೆಯ ಬೆಳಕು ತೋರಿಸಿದ ಮಹಾತ್ಮ ಗಾಂಧಿ ಮೊದಲ ಬಾರಿಗೆ ಬೆಳಕು ನೋಡಿದ ದಿನ ಅಕ್ಟೋಬರ್ 02. ಇಂದು ಮಹಾತ್ಮನ ಹುಟ್ಟುಹಬ್ಬದ ದಿನ.
ಮಹಾತ್ಮ ನಮ್ಮನ್ನು ಅಗಲಿ 72 ವರ್ಷಕ್ಕೂ ಹೆಚ್ಚಾಯಿತು. ಆತನ ಆದರ್ಶಗಳು, ಸತ್ಯ-ಅಹಿಂಸೆಯ ಬೋಧನೆ, ಜೀವನ ಆಚರಣೆ ಗಾಂಧಿಯನ್ನು ಅಜರಾಮರವಾಗಿಸಿವೆ. ಮಹಾತ್ಮನ ಪುಸ್ತಕಗಳು ಆತನ ಹಿರಿಮೆಯನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಲೇ ಬಂದಿವೆ. ಈ ಕಾರ್ಯವನ್ನು ಸಿನಿಮಾಗಳೂ ಸಹ ಮಾಡಿವೆ.
ಮಹಾತ್ಮಾ ಗಾಂಧಿಯ ಜೀವನ ಕುರಿತು ಸಾಕಷ್ಟು ಸಿನಿಮಾಗಳು ಈವರೆಗೆ ಹಲವು ಭಾಷೆಗಳಲ್ಲಿ ತಯಾರಾಗಿವೆ. ಗಾಂಧಿಯ ಜೀವನ, ಆದರ್ಶಗಳನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿವೆ. ಮಹಾತ್ಮಾ ಗಾಂಧಿಯ ಹುಟ್ಟುಹಬ್ಬದ ದಿನವಾದ ಇಂದು, ಗಾಂಧಿ ಕುರಿತಾದ ಕೆಲವು ಉತ್ತಮ ಸಿನಿಮಾಗಳ ಪಟ್ಟಿ ಇಲ್ಲಿದೆ.

ಅಟ್ಟೆನ್‌ಬರೊ ನಿರ್ದೇಶನದ 'ಗಾಂಧಿ'
ಮಹಾತ್ಮಾ ಗಾಂಧಿ ಕುರಿತಾದ ಸಿನಿಮಾಗಳ ಪಟ್ಟಿಯಲ್ಲಿ ಎಲ್ಲದಕ್ಕೂ ಮೊದಲು ಬರುವ ಹೆಸರು, ರಿಚರ್ಡ್ ಅಟೆನ್‌ಬರೋ ನಿರ್ದೇಶಿಸಿ ಬೆನ್ ಕಿಂಗ್ಸಿ ಲೀ ಗಾಂಧಿಯಾಗಿ ಅಭಿನಯಿಸಿದ್ದ 'ಗಾಂಧಿ' ಸಿನಿಮಾ. 1982 ರಲ್ಲಿ ಬಿಡುಗಡೆ ಆದ ಈ ಸಿನಿಮಾವನ್ನು ಮೀರಿಸುವ ಮತ್ತೊಂದು ಗಾಂಧಿ ಕುರಿತಾದ ಸಿನಿಮಾ ಬಂದಿಲ್ಲವೆಂದೇ ಹೇಳಲಾಗುತ್ತದೆ.

ಮೇಕಿಂಗ್ ಆಫ್ ಮಹಾತ್ಮಾ
ಶ್ಯಾಂ ಬೆನಗಲ್ ನಿರ್ದೇಶಿಸಿರುವ 'ಮೇಕಿಂಗ್ ಆಫ್ ಮಹಾತ್ಮಾ' ಸಿನಿಮಾ, ಮಹಾತ್ಮಾ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಕಳೆದ ದಿನಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಹೇಗೆ ಅಹಿಂಸಾವಾದಿಯಾಗಿ ರೂಪುಗೊಳ್ಳುತ್ತಾ ಸಾಗಿದರು ಎಂಬುದು ಸಿನಿಮಾದಲ್ಲಿ ಚರ್ಚಿತವಾಗಿದೆ. ಇದು ಫಾತಿಮಾ ನಾಯರ್ ಅವರ ಪುಸ್ತಕ ಆಧರಿಸಿದ ಸಿನಿಮಾ.

ಗಾಂಧಿ ಮೈ ಫಾದರ್
ಗಾಂಧಿ ಕುರಿತಾಗಿ ಭಾರತದಲ್ಲಿ ವಸ್ತುನಿಷ್ಠವಾಗಿ ತಯಾರಾಗಿರುವ ಸಿನಿಮಾಗಳಲ್ಲಿ ಒಂದು 'ಗಾಂಧಿ ಮೈ ಫಾದರ್'. ಈ ಸಿನಿಮಾ ಗಾಂಧಿಯ 'ಮಹಾತ್ಮ'ತನಕ್ಕಿಂತಲೂ ಹೆಚ್ಚಾಗಿ ತಂದೆಯಾಗಿ ಅವರ ವರ್ತನೆ ಹಾಗೂ ತಂದೆಯಾಗಿ ಅವರ ನಿರ್ಧಾರಗಳು ಹಾಗೂ ಸಮಾಜದ ಬಗ್ಗೆ ಅವರ ದೃಷ್ಟಿಕೋನವನ್ನು ಪಕ್ಕ-ಪಕ್ಕದಲ್ಲಿಟ್ಟು ಗಾಂಧಿಯ ಆದರ್ಶಗಳನ್ನು ನಿಕಷಕ್ಕೆ ಒಳಪಡಿಸುತ್ತದೆ. ಗಾಂಧಿಯ ಮಗನಾಗಿ ಅಕ್ಷಯ್ ಖನ್ನಾ ಅದ್ಭುತ ಅಭಿನಯ ನೀಡಿದ್ದಾರೆ.

ನೈನ್ ಹವರ್ಸ್ ಟು ರಾಮಾ
ನೈನ್ ಹವರ್ಸ್ ಟು ರಾಮಾ ಸಿನಿಮಾವನ್ನು ಮಾರ್ಕ್ ರೋಬ್‌ಸನ್ 1963 ರಲ್ಲಿ ನಿರ್ದೇಶಿಸಿದ್ದಾರೆ. ಗಾಂಧಿ ಹತ್ಯೆ ಆಗುವ ಕೊನೆಯ ಒಂಬತ್ತು ಗಂಟೆ ಬಗ್ಗೆ ಸಿನಿಮಾದಲ್ಲಿ ವಿವರಗಳಿವೆ. ಸಿನಿಮಾ ಬಹುತೇಕ ನಾಥೂರಾಮ್ ಗೋಡ್ಸೆ ಸುತ್ತಲೇ ಇದೆ. ಸಿನಿಮಾದಲ್ಲಿ ಎಲ್ಲಾ ಪಾತ್ರಗಳಲ್ಲೂ ವಿದೇಶಿಗರೇ ನಟಿಸಿದ್ದಾರೆ. ಒಬ್ಬ ಭಾರತೀಯ ನಟನೂ ಇಲ್ಲ.

ಕಮಲ್ ಹಾಸನ್ ನಿರ್ದೇಶನದ ಹೇ ರಾಮ್
ಕಮಲ್ ಹಾಸನ್ ನಿರ್ದೇಶಿಸಿ ನಟಿಸಿದ್ದ ಹೇ ರಾಮ್ ಸಿನಿಮಾ, ಪೂರ್ಣವಾಗಿ ಗಾಂಧಿ ಕುರಿತಾದ ಸಿನಿಮಾ ಅಲ್ಲದೇ ಇದ್ದರೂ ಸಹ ವಿಭಜನೆ, ಗಾಂಧಿ ಹತ್ಯೆ ಈ ವಿಷಯಗಳು ಅವುಗಳ ಜನರ ಮೇಲೆ ಬೀರಿದ ಪರಿಣಾಮಗಳನ್ನು ತೋರಿಸುವ ಪ್ರಯತ್ನ ಸಿನಿಮಾದಲ್ಲಾಗಿದೆ. ಕಮಲ್ ಹಾಸನ್ ಅವರ ಪ್ರಯೋಗಶೀಲತೆಗೆ ಈ ಸಿನಿಮಾ ಒಳ್ಳೆಯ ಉದಾಹರಣೆ, ಸಿನಿಮಾದಲ್ಲಿ ಶಾರುಖ್ ಖಾನ್ ಸಹ ನಟಿಸಿದ್ದಾರೆ.

ಲಗೆ ರಹೋ ಮುನ್ನಾ ಭಾಯಿ
'ಲಗೆ ರಹೋ ಮುನ್ನಾ ಭಾಯಿ', ಗಾಂಧಿಯನ್ನು ಹೊಸತಲೆಮಾರಿಗೆ ಅವರದ್ದೇ ರೀತಿಯಲ್ಲಿ ಪರಿಚಯಿಸುವ ಯತ್ನ ಎನ್ನಬಹುದು. ಇದೊಂದು ಹಾಸ್ಯಮಯ ಸಿನಿಮಾ ಆದರೂ ಸಹ ಗಾಂಧಿ ತತ್ವಕ್ಕೆ ಊನಬಾರದಂತೆ ಹುಷಾರಿನಿಂದ ಶಕ್ತವಾಗಿ ಹೇಳುವ ಪ್ರಯತ್ನ ಸಿನಿಮಾದಲ್ಲಿದೆ. ಪ್ರಕಾಂಡ ಗಾಂಧಿವಾದಿಗಳಿಂದ ಈ ಸಿನಿಮಾ ಸಾಕಷ್ಟು ಟೀಕೆಗೆ ಗುರಿಯಾಯಿತು, ಆದರೆ ಈ ಸಿನಿಮಾ ಸಮಾಜದ ಮೇಲೆ ಬೀರಿದ ಪರಿಣಾಮ ಗಮನಾರ್ಹದ್ದಾಗಿತ್ತು.
Recommended Video

ಕನ್ನಡ ಸಿನಿಮಾ 'ಕೂರ್ಮಾವತಾರ'
ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ್ದ ಪ್ರಶಸ್ತಿ ವಿಜೇತ ಸಿನಿಮಾ ಕೂರ್ಮಾವತಾರ ಗಾಂಧಿ ತತ್ವದ ಆಧಾರದ ಮೇಲೆಯೇ ಇದೆ. ಗಾಂಧಿ ಪಾತ್ರಧಾರಿ ಹಾಗೂ ಗಾಂಧಿ ಆದರ್ಶಗಳ ನಡುವಿನ ತಾಕಲಾಟ ಸಿನಿಮಾದ ವಸ್ತು. ಕನ್ನಡದಲ್ಲಿ ಗಾಂಧಿ ಕುರಿತಾಗಿ ಬಂದಿರುವ ಉತ್ತಮ ಸಿನಿಮಾ ಇದು.


Click it and Unblock the Notifications











