'ಕಿಲಾಡಿ ಕಿಟ್ಟು' ಚಿತ್ರಕ್ಕೆ ವಿಷ್ಣು-ರಜನಿಗೆ ಸಿಕ್ಕ ಸಂಭಾವನೆ ಎಷ್ಟು? ಅಂದು ತಲೈವಾ ಹೇಳಿದ್ದು ಒಂದೇ ಮಾತು
ಬೆಂಗಳೂರಿನಲ್ಲಿ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದ ರಜನಿಕಾಂತ್ ಇವತ್ತು ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಬೆಂಗಳೂರಿನ ಹನುಮಂತನಗರದಲ್ಲಿ ಹುಟ್ಟಿ ಬೆಳೆದ ಶಿವಾಜಿ ರಾವ್ ಗಾಯಕ್‌ವಾಡ್ ಮುಂದೆ ಚಿತ್ರರಂಗಕ್ಕೆ ಬಂದು ಗೆದ್ದು ಬೀಗಿದರು. ತಮ್ಮದೇ ವಿಭಿನ್ನ ಸ್ಟೈಲ್, ಮ್ಯಾನರಿಸಂನಿಂದ ಮೋಡಿ ಮಾಡಿದರು.
ಬಡ ಕುಟುಂಬದ ರಜನಿಕಾಂತ್ ಇವತ್ತು ಚಿತ್ರವೊಂದಕ್ಕೆ 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನುವ ಅಂದಾಜಿದೆ. ನೂರಾರು ಕೋಟಿ ಆಸ್ತಿ ಒಡೆಯರಾಗಿದ್ದಾರೆ. ಆದರೆ ಹಳೆಯದನ್ನು ಎಂದೂ ಮರೆತವರಲ್ಲ. ಇವತ್ತಿಗೂ ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ಎಲ್ಲರಿಗೂ ಮಾದರಿ ಆಗಿದ್ದಾರೆ. ಆರಂಭದ ದಿನಗಳಲ್ಲಿ ಕನ್ನಡದ ಕೆಲ ಸಿನಿಮಾಗಳಲ್ಲಿ ತಲೈವಾ ನಟಿಸಿದ್ದರು.

ಸಾಹಸಸಿಂಹ ವಿಷ್ಣುವರ್ಧನ್ ಕಾಂಬಿನೇಷನ್‌ನಲ್ಲಿ 'ಸಹೋದರರ ಸವಾಲ್', 'ಕಿಲಾಡಿ ಕಿಟ್ಟು', 'ಗಲಾಟೆ ಸಂಸಾರ' ಸಿನಿಮಾಗಳಲ್ಲಿ ರಜನಿಕಾಂತ್ ನಟಿಸಿದ್ದರು. ದಾದಾ- ರಜನಿ ಆತ್ಮೀಯ ಸ್ನೇಹಿತರಾಗಿದ್ದರು. ಆ ಕಾಲದಲ್ಲೇ ರಜನಿಕಾಂತ್ ಏನಾದರೂ ಸಾಧಿಸುವ ಹಂಬಲ, ಭರವಸೆಯಲ್ಲಿ ಇದ್ದರು. ಅದೃಷ್ಟದ ಮೇಲೆ ನಂಬಿಕೆ ಇರಲಿಲ್ಲ ಎಂದು 'ಕಿಲಾಡಿ ಕಿಟ್ಟು' ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿದ್ದ ಸುದರ್ಶನ್ ನೆನಪಿಸಿಕೊಂಡಿದ್ದಾರೆ. ಟೋಟಲ್ ಕನ್ನಡ ಮೀಡಿಯಾ ಯೂಟ್ಯೂಬ್ ಚಾನಲ್‌ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
"ಕಿಲಾಡಿ ಕಿಟ್ಟು ಚಿತ್ರೀಕರಣದ ವೇಲೆ ಚೆಲುವಾಂಬ ಹೋಟೆಲ್ ಬಳಿ ಕಾವೇರಿ ಲಾಡ್ಜ್‌ನಲ್ಲಿ ಕಲಾವಿದರು ತಂತ್ರಜ್ಞರು ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದೆ. ಆ ಚಿತ್ರಕ್ಕಾಗಿ ರಜನಿಕಾಂತ್ ಸರ್‌ಗೆ ಕೊಟ್ಟ ಸಂಭಾವನೆ ಎಷ್ಟು ಎಂದು ಕೇಳಿದರೆ ನೀವು ಅಚ್ಚರಿಗೊಳ್ಳುತ್ತೀರಾ. 1978ರಲ್ಲಿ ಆ ಚಿತ್ರಕ್ಕೆ ರಜನಿಕಾಂತ್‌ಗೆ 15 ಸಾವಿರ ರೂಪಾಯಿ, ವಿಷ್ಣುವರ್ಧನ್‌ಗೆ 35 ಸಾವಿರ ರೂಪಾಯಿ ಸಂಭಾವನೆ ಕೊಟ್ಟಿದ್ದೆವು" ಎಂದು ಸುದರ್ಶನ್ ನೆನಪಿಸಿಕೊಂಡಿದ್ದಾರೆ.
"ಸಂಭಾವನೆ ಬಿಟ್ಟು ಬೇರೆ ಯಾವುದೇ ಹಣ ಕೊಡಲಿಲ್ಲ. ಅವರಿಗೆ ಆಡಿನರಿ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಆಗಿತ್ತು. ಆದರೆ ರಜನಿಕಾಂತ್ ಅವರಿಗೆ ಜೀವನದಲ್ಲಿ ಬಹಳ ಭರವಸೆ ಇತ್ತು. ರಜನಿಕಾಂತ್‌ಗೆ ಒಮ್ಮೆ ನಿರ್ದೇಶಕ ಕೆ. ಎಸ್. ಆರ್ ದಾಸ್ ಒಂದು ಮಾತು ಹೇಳಿದರು. ಚಿತ್ರರಂಗದಲ್ಲಿ ಸಕ್ಸಸ್ ಸಿಗಲು ಅದೃಷ್ಟ ಬೇಕು ಎಂದರು. ಅದೃಷ್ಟ ಇಲ್ಲದೇ ಮೇಲೆ ಬರುವುದು ಕಷ್ಟ ಎಂದರು"

"ನಿರ್ದೇಶಕರ ಮಾತು ಕೇಳಿ ರಜನಿಕಾಂತ್, ಅದೃಷ್ಟ ಗಿದೃಷ್ಟ ಎಲ್ಲಾ ನಾನು ಯಾವುದು ನಂಬಲ್ಲ. ಯಾಕೆಂದರೆ ನನಗೆ ಗೊತ್ತು, ನನ್ನಲ್ಲಿ ಏನು ಸ್ಟಫ್ ಇದೆ, ನಾನು ಹೇಗೆ ಮುಂದೆ ಬರ್ತೀನಿ, ನಾನು ಯಾವ ರೀತಿ ಚಿತ್ರತಂ ಆಳ್ತೀನಿ ಅನ್ನೋದು ನನಗೆ ಗೊತ್ತು ಅಂತ 1978ರಲ್ಲೇ ರಜಿನಿಕಾಂತ್ ಹೇಳಿದ್ದರು. ನಾನು ಅದಕ್ಕೆ ಪ್ರತ್ಯಕ್ಷ ಸಾಕ್ಷಿ. ಅಂತಹ ಸೆಲ್ಫ್ ಕಾನ್ಫಿಡೆನ್ಸ್ ಅವರಿಗಿತ್ತು. ಬಳಿ ಸೀನ್ ಕಟ್ ಮಾಡಿದ್ರೆ, ಈ 45 ವರ್ಷಗದಲ್ಲಿ ಆ ವ್ಯಕ್ತಿ ಎಲ್ಲಿದ್ದಾನೆ ಎನ್ನುವುದನ್ನು ನೀವೇ ನೋಡಿ" ಎಂದು ಸುದರ್ಶನ್ ಹೇಳಿದ್ದಾರೆ.
'ಕಿಲಾಡಿ ಕಿಟ್ಟು' ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದರು. ಲೀಲಾವತಿ, ಪಂಡರಿಬಾಯಿ, ವಜ್ರಮುನಿ, ಶಿವರಾಮ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಮೋಹನ್ ಕುಮಾರ್ ಸಂಗೀತ, ಎಂ. ಡಿ ಸುಂದರ್ ಕಥೆ, ಚಿ. ಉದಯ್ ಶಂಕರ್ ಸಂಭಾಷಣೆ ಚಿತ್ರಕ್ಕಿತ್ತು. ಸದ್ಯ ರಜನಿಕಾಂತ್ 'ವೆಟ್ಟೆಯಾನ್' ಹಾಗೂ 'ಕೂಲಿ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದಸರಾ ಸಂಭ್ರಮದಲ್ಲಿ ಜ್ಞಾನವೇಲ್ ನಿರ್ದೇಶನದ 'ವೆಟ್ಟೆಯಾನ್' ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











