twitter
    For Quick Alerts
    ALLOW NOTIFICATIONS  
    For Daily Alerts

    ಜಗತ್ತು ಗೆದ್ದ ಬಾಲಿವುಡ್‌ಗೆ ದಕ್ಷಿಣ ಭಾರತ ಸಿಗದಂತೆ ಮಾಡಿದ್ದು ಯಾರು? ಹೇಗೆ?

    |

    ಒಂದು ಕಾಲದಲ್ಲಿ ಭಾರತೀಯ ಸಿನಿಮಾ ಅಂದರೆ ಅದನ್ನು ಬಾಲಿವುಡ್ ಅಂತಲೇ ಪರಿಗಣಿಸಲಾಗುತ್ತಿತ್ತು. ಭಾರತದ ಹೊರಗೆ ಕೇವಲ ಹಿಂದಿ ಸಿನಿಮಾಗಳನ್ನು ಭಾರತೀಯ ಸಿನಿಮಾ ಅಂತ ಪರಿಗಣಿಸಿ ಗೌರವಿಸಲಾಗುತ್ತಿತ್ತು. ಇದಕ್ಕೆ ಪೂರಕವೆಂಬಂತೆ ರಾಷ್ಟ್ರೀಯ ಪ್ರಶಸ್ತಿಗಳನ್ನು ನೋಡಿದರು ಸಿಂಹಪಾಲು ಕೇವಲ ಹಿಂದಿ ಚಿತ್ರಗಳಿಗೆ ನೀಡಲಾಗುತ್ತಿತ್ತು. ಅಲ್ಲದೆ ಬಾಲಿವುಡ್ ಸ್ಟಾರ್ ಗಳನ್ನು ತಲೆ ಮೇಲೆ ಇಟ್ಟುಕೊಂಡು ಮೆರೆಸುತ್ತಿದ್ದರು. ಅದು ಅಲ್ಲದೆ ಬಾಲಿವುಡ್ ತಾರೆಗಳು ಕೂಡ ತಾವು ದೇವಲೋಕದಿಂದ ಇಳಿದು ಬಂದವರಂತೆ ಭ್ರಮಿಸುತ್ತಿದ್ದರು. ಒಟ್ಟಾರೆ ಬಾಲಿವುಡ್ ತನ್ನನ್ನು ತಾನು ಭಾರತೀಯ ಸಿನಿಮಾರಂಗದ ದೊಡ್ಡಣ್ಣ ಎಂದು ಭಾವಿಸುತ್ತಿತ್ತು.

    ದಕ್ಷಿಣ ಸಿನಿಮಾಗಳೆಂದರೆ ಅಸಡ್ಡೆ: ಅದೇ ಕಾಲಕ್ಕೆ ಬಾಲಿವುಡ್ ಮಂದಿಗೆ ದಕ್ಷಿಣ ಸಿನಿಮಾಗಳೆಂದರೆ ಒಂದು ರೀತಿಯ ಅಸಡ್ಡೆಯ ಮನೋಭಾವ. ದಕ್ಷಿಣ ಭಾರತೀಯ ಸಿನಿಮಾಗಳನ್ನು ಅದೊಂದು ರಾಜ್ಯಕ್ಕೆ ಮಾತ್ರ ಸೀಮಿತವಾದ ಭಾಷೆಗಳ ಚಿತ್ರಗಳು ಎಂಬ ಭಾವನೆ ಬಾಲಿವುಡ್ ಮಂದಿಯಲ್ಲಿ. ಅಲ್ಲದೆ ಸೌತ್ ಸಿನಿಮಾಗಳೆಂದರೆ ಅದೊಂದು ಮಸಾಲಾ ಚಿತ್ರಗಳು, ತಮ್ಮಂತೆ ಲವ್, ರೋಮ್ಯಾನ್ಸ್ ಚಿತ್ರಗಳು ಫಾರಿನ್ ಲೊಕೇಶನ್ ಗಳು ಇದೆಲ್ಲಾ ದಕ್ಷಿಣ ಸಿನಿಮಾಗಳಲ್ಲಿ ನೋಡಲು ಸಾಧ್ಯವಿಲ್ಲ. ಒಂದು ಅರ್ಥದಲ್ಲಿ ನೇರವಾಗಿ ಹೇಳಬೇಕೆಂದರೆ ಬಾಲಿವುಡ್ ದೃಷ್ಟಿಯಲ್ಲಿ ಅವರು ಬಿಳಿಯ ಚರ್ಮದವರು, ದಕ್ಷಿಣದವರು ಎಂದರೆ ಕರಿ ಚರ್ಮದವರು ಎಂಬಂತೆ, ಹೀಗಾಗಿ ತಮ್ಮ ಚಿತ್ರಗಳೇ ಸರ್ವಶ್ರೇಷ್ಠ ಎಂಬ ಭಾವನೆ ಅಲ್ಲಿ ಬಲವಾಗಿ ಬೇರೂರಿತ್ತು.

    ಬಾಲಿವುಡ್‌ಗೆ ಮಾತ್ರ ಮನ್ನಣೆ ನೀಡುತ್ತಿದ್ದ ಸರ್ಕಾರಗಳು

    ಬಾಲಿವುಡ್‌ಗೆ ಮಾತ್ರ ಮನ್ನಣೆ ನೀಡುತ್ತಿದ್ದ ಸರ್ಕಾರಗಳು

    ನೀವು ಸರಿಯಾಗಿ ಗಮನಿಸಿದರೆ 50 ರಿಂದ 70 ರ ದಶಕದಲ್ಲಿ ಭಾರತ ಸಾಂಸ್ಕೃತಿಕ ಅಂದ್ರೆ ಕಲ್ಚರಲ್ ಎಕ್ಸ್ಚೇಂಜ್ ಅಂತ ನಡೆಯುವ ಸಂದರ್ಭದಲ್ಲಿ ಭಾರತ ಸರ್ಕಾರದ ಜೊತೆಯಲ್ಲಿ ಬಾಲಿವುಡ್ ಪ್ರತಿನಿಧಿಗಳು ಮಾತ್ರ ಹೋಗುತ್ತಿದ್ದರು, ಮತ್ತು ವಿದೇಶಗಳಲ್ಲಿ ಕೇವಲ ಹಿಂದಿ ಚಿತ್ರಗಳ ಪ್ರದರ್ಶನ ಮಾತ್ರ ನಡೆಯುತ್ತಿತ್ತು. ಹೀಗಾಗಿ ಹೊರಗಿನ ಪ್ರಪಂಚಕ್ಕೆ ಒಂದು ಅರ್ಥದಲ್ಲಿ ಭಾರತೀಯ ಸಿನಿಮಾ ಎಂದರೆ ಅದು ಹಿಂದಿ ಎಂಬ ಭ್ರಮೆ ಹೀಗೆ ಉಂಟು ಮಾಡಲಾಗಿತ್ತು. ಭಾರತ ಮತ್ತು ಯುಎಸ್ಎಸ್ಆರ್ ನಡುವಿನ ಸಾಂಸ್ಕೃತಿಕ ವಿನಿಮಯದ ಭಾಗವಾಗಿ ಭಾರತೀಯ ಸಂಸ್ಕೃತಿ ಮತ್ತು ಚಲನಚಿತ್ರಗಳ ಪ್ರದರ್ಶನ ಅಲ್ಲಿ ನಡೆಯುತ್ತಿತ್ತು. ಆಗಲೂ ಅಷ್ಟೇ ಅಲ್ಲಿ ಕೇವಲ ಹಿಂದೂಸ್ತಾನಿ ಸಂಗೀತ ಮತ್ತು ಹಿಂದಿ ಚಿತ್ರಗಳ ಪ್ರದರ್ಶನ.

    ಕರ್ನಾಟಕ ಸಂಗೀತವಾಗಲಿ ದಕ್ಷಿಣ ಭಾರತದ ಯಾವುದೇ ಚಿತ್ರ ಕೂಡ ಅಲ್ಲಿ ಪ್ರದರ್ಶನಕ್ಕೆ ಭಾರತೀಯ ಸಂಸ್ಕೃತಿ ಇಲಾಖೆ ಒಲವನ್ನು ತೋರಿಸುತ್ತಿರಲಿಲ್ಲ. ಹಿಂದಿ ಸಿನಿಮಾ, ಹಿಂದಿ ಹಾಡುಗಳು ಇದೆ ಭಾರತ ಮತ್ತು ಭಾರತದ ಸಂಸ್ಕೃತಿ ಎಂಬಂತೆ ಒಂದು ಅರ್ಥದಲ್ಲಿ ವ್ಯವಸ್ಥಿತವಾದ ಪ್ರಚಾರಕ್ಕೆ ದಕ್ಷಿಣ ಸೇರಿದಂತೆ ಭಾರತದ ಎಲ್ಲಾ ಇತರ ಭಾಷೆಯ ಸಿನಿಮಾಗಳು ಬಲಿಯಾಗಿದ್ದವು. ಸೌತ್ ಸಿನಿಮಾಗಳು ಬಿಡಿ, ಅವರವರ ಪ್ರಾಂತ್ಯದಲ್ಲಿ ಅವರ ಚಿತ್ರಗಳು ಗಟ್ಟಿಯಾಗಿ ನೆಲೆಗೊಂಡಿದ್ದವು. ಆದರೆ ಹಿಂದಿ ಚಿತ್ರಗಳ ಅತಿಕ್ರಮಣದಿಂದ ಮರಾಠಿ, ಅಸ್ಸಾಮಿ, ಬೆಂಗಾಲಿ ಒರಿಯಾ ಇಂತಹ ಚಲನಚಿತ್ರಗಳಿಗೆ ನೆಲೆ ಮತ್ತು ಬೆಲೆ ಕೂಡ ತಮ್ಮ ನೆಲದಲ್ಲೇ ಕಳೆದುಕೊಂಡರು.

    ದಕ್ಷಿಣದ ಮೇಲೆ ಹಿಂದೆ ಬಾಲಿವುಡ್ ದಂಡಯಾತ್ರೆ ನಡೆಯಲಿಲ್ಲ

    ದಕ್ಷಿಣದ ಮೇಲೆ ಹಿಂದೆ ಬಾಲಿವುಡ್ ದಂಡಯಾತ್ರೆ ನಡೆಯಲಿಲ್ಲ

    ಮೊಘಲರು ಇಡೀ ಭಾರತವನ್ನು ಆಕ್ರಮಿಸಿಕೊಂಡರು ದಕ್ಷಿಣದಲ್ಲಿ ಮಾತ್ರ ನೆಲೆ ಕಾಣಲಿಲ್ಲ ಎಂಬಂತೆ ಹಿಂದಿ ಚಿತ್ರಗಳು ಇಡೀ ಭಾರತವನ್ನು ಆಕ್ರಮಿಸಿಕೊಂಡರು ದಕ್ಷಿಣದಲ್ಲಿ ಮಾತ್ರ ಅವು ಅಂದು-ಇಂದು ನೆಲೆ ಕಾಣಲು ಸಾಧ್ಯವಾಗಿಲ್ಲ. ದಕ್ಷಿಣದ 5 ರಾಜ್ಯಗಳಿಗೆ ತನ್ನದೇ ಆದ ಭಾಷೆ ಸಂಸ್ಕೃತಿ -ಸಂಗೀತ ಸಾಂಸ್ಕೃತಿಕ ಪರಿಸರವಿದೆ. ಭಾಷೆ ಬದುಕಿನ ಅವಿಭಾಜ್ಯ ಅಂಗವಾಗಿದೆ, ಸಂಸ್ಕೃತಿ ಜನನಾಡಿಯಲ್ಲಿ, ಜೀವನದಲ್ಲಿ ಹಾಸುಹೊಕ್ಕಾಗಿದೆ.

    ಹೀಗಾಗಿಯೇ ದಕ್ಷಿಣ ಭಾರತೀಯರು ತಮ್ಮ ಭಾಷೆಯ ಚಿತ್ರಗಳಿಗೆ ಮೊದಲ ಆದ್ಯತೆಯನ್ನು ಕೊಟ್ಟರು. ನೀವು ಐವತ್ತು ಅರವತ್ತರ ದಶಕದ ಒಮ್ಮೆ ಅವಲೋಕಿಸಿ ನೋಡಿ ಹಿಂದಿ ಚಿತ್ರರಂಗದಲ್ಲಿ ರಾಜ್ ಕಪೂರ್, ರಿಷಿ ಕಪೂರ್, ದೇವಾನಂದ್, ದಿಲೀಪ್ ಕುಮಾರ್, ರಾಜೇಂದ್ರಕುಮಾರ್ ಸುನಿಲ್ ದತ್ ಅಂತಹ ಪ್ರತಿಭಾವಂತರಿದ್ದರು. ಅಲ್ಲಿ 'ಮದರ್ ಇಂಡಿಯಾ', 'ಮೇರಾ ನಾಮ್ ಜೋಕರ್' 'ಕಾಶ್ಮೀರ್ ಕಿ ಕಲಿ', 'ಗೈಡ್' 'ಜಿಸ್ ದೇಶ್ ಮೆ ಗಂಗ ಬೇಹತ್ತಿ ಹೈ', ಇಂಥ ಅನೇಕ ಸದಾಭಿರುಚಿಯ ಚಿತ್ರಗಳು ಕೂಡ ಮೂಡಿಬಂತು.

    ಅದೇ ನೀವು ದಕ್ಷಿಣಕ್ಕೆ ಬಂದರೆ ಇಲ್ಲಿ

    ಅದೇ ನೀವು ದಕ್ಷಿಣಕ್ಕೆ ಬಂದರೆ ಇಲ್ಲಿ

    ರಾಜ್ ಕುಮಾರ್, ಎನ್ ಟಿ ರಾಮರಾವ್, ನಾಗೇಶ್ವರರಾವ್, ಶಿವಾಜಿಗಣೇಶನ್, ಎಂ.ಜಿ. ರಾಮಚಂದ್ರನ್ ಅಂತಹ ಮೇರು ಪ್ರತಿಭಾವಂತರಿದ್ದಾರೆ. ಈ ದೈತ್ಯ ಪ್ರತಿಭಾವಂತರು ಹಿಂದಿ ನಾಯಕ ನಟರಂತೆ ಸಾಂಸಾರಿಕ ಚಿತ್ರಗಳಲ್ಲಿ ಕೂಡ ಅಥವಾ ಪ್ರೇಮಕಥೆಗಳನ್ನು ಅಭಿನಯಿಸಿದರು. ಬಾಲಿವುಡ್ ಮಂದಿ ಕೈಯಲ್ಲಿ ಆಗದಂತಹ ಒಂದು ಸಾಹಸ ನಮ್ಮ ದಕ್ಷಿಣ ಭಾರತದ ನಾಯಕನಟರು ಮಾಡುತ್ತಿದ್ದರು. ಅದೇ ಪೌರಾಣಿಕ ಐತಿಹಾಸಿಕ ಚಿತ್ರಗಳು.

    ಬಾಲಿವುಡ್ ಸ್ಟಾರ್ಸ್ ವರ್ಸಸ್ ಸೌತ್ ಆಕ್ಟರ್ಸ್

    ಬಾಲಿವುಡ್ ಸ್ಟಾರ್ಸ್ ವರ್ಸಸ್ ಸೌತ್ ಆಕ್ಟರ್ಸ್

    ಆದರೆ ನೀವು ಒಂದು ಕ್ಷಣ ಯೋಚನೆ ಮಾಡಿ ನೋಡಿ, 'ಭಕ್ತ ಪ್ರಹ್ಲಾದ' ಚಿತ್ರದಲ್ಲಿ ರಾಜ್ ಕುಮಾರ್ ಅವರು ಹಿರಣ್ಯಕಶಪುವಿನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಅದರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿ 'ಈ ಕಂಬದಲ್ಲಿ ನಿನ್ನ ಹರಿ ಇರುವನೆ?' ಎಂದು ಪ್ರಶ್ನಿಸುವಾಗ ಆ ದೃಶ್ಯ ನೋಡುವ ಎಂತಹವರಿಗಾದರೂ ಮೈ ಜುಮ್ಮೆನ್ನುತ್ತದೆ. ಇಂತಹದೊಂದು ದೃಶ್ಯ ನೀವು ಎಂದಾದರೂ ರಾಜ್ ಕಪೂರ್ ಅವರ ಸಿನಿಮಾದಲ್ಲಿ ನೋಡಿದ್ದೀರಾ ಅಥವಾ ಇಂತಹದೊಂದು ಅಭಿನಯ ರಾಜ್ ಕಪೂರ್ ಅವರ ಕೈಯಲ್ಲಿ ಮಾಡಲು ಸಾಧ್ಯವಾಗುತ್ತಿತ್ತ? 'ದಾನ ವೀರ ಶೂರ ಕರ್ಣ' ಚಿತ್ರದಲ್ಲಿ ಎನ್ ಟಿ ರಾಮ ರಾವ್ ಅವರು ಒಂದೆಡೆ ಸುಯೋಧನ ಇನ್ನೊಂದೆಡೆ ಕರ್ಣನಾಗಿ ಏಕಕಾಲದಲ್ಲಿ ಅಭಿನಯಿಸುವಾಗ ಸಂಸ್ಕೃತ ಭೂಷಿತ ತೆಲುಗು ಮಾಂಡಲಿಕದ ಮಹಾಜಾಲದ ಪದ ಪಾಂಡಿತ್ಯದ ಘರ್ಜನೆಯನ್ನು ನೀವು ಎಂದಾದರೂ ದೇವಾನಂದ ಚಿತ್ರಗಳಲ್ಲಿ ಕಾಣಲು ಸಿಕ್ಕಿದೆಯೇ?

    ಶಿವಾಜಿ ಗಣೇಶನ್ ಅವರ 'ವೀರಪಾಂಡ್ಯ ಕಟ್ಟಬೊಮ್ಮನ್ ' ಪಾತ್ರದೊಳಗೆ ಅಭಿನಯ ಒಬ್ಬ ಬಾಲಿವುಡ್ ನಟ ಅಭಿನಯಿಸಿರುವುದು ನೀವು ಎಂದಾದರೂ ನೋಡಿದ್ದೀರಾ? ಹೀಗಾಗಿಯೇ ಹಿಂದಿ ನಟರು ಪ್ರತಿಭಾವಂತರಾಗಿದ್ದರು ಆದರೆ ದಕ್ಷಿಣದ ನಟರು ದೈತ್ಯಪ್ರತಿಭೆಗಳಾಗಿಯೇ ಜಗತ್ತಿನ ಮುಂದೆ ಅನಾವರಣಗೊಂಡವರು. ಹೀಗಾಗಿ ಎಷ್ಟೇ ಹಿಂದಿ ಚಿತ್ರಗಳು ಅದರ ಸಿನಿಮಾ ಹಾಡುಗಳು ಜನಪ್ರಿಯವಾದರೂ ಕೂಡ ದಕ್ಷಿಣದಲ್ಲಿ ಜನರಿಗೆ ಬೇಕಾಗಿದ್ದ ಎಂಟರ್ಟೈನ್ಮೆಂಟ್ ಹಸಿವನ್ನು ನೀಗಿಸುವದರಲ್ಲಿ ಅದಕ್ಕೆ ಎಂದಿಗೂ ಸಾಧ್ಯವಾಗಲಿಲ್ಲ. ಅವರಿಗೆ ಬೇಕಿದ್ದ ಎಂಟರ್ಟೈನ್ಮೆಂಟ್ ಹಸಿವನ್ನು ನೀಗಿಸುವ ಶಕ್ತಿ ಕೇವಲ ಅವರ ಪ್ರಾಂತ್ಯದ ಸಿನಿಮಾ ಕಲಾವಿದರಿಗೆ ಮಾತ್ರ ಇತ್ತು.

    ಹಿಂದಿ ಜನರ ಆಡು ಭಾಷೆ ಆಗಿಲ್ಲ

    ಹಿಂದಿ ಜನರ ಆಡು ಭಾಷೆ ಆಗಿಲ್ಲ

    ಮತ್ತೊಂದು ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಆಂಧ್ರ-ತೆಲಂಗಾಣ ಮತ್ತು ಕರ್ನಾಟಕದಲ್ಲಿ ಬಹುತೇಕ ಮಂದಿಗೆ ಹಿಂದಿ ಚೆನ್ನಾಗಿ ಅರ್ಥ ಆಗುತ್ತೆ. ಆದರೆ ತಮಿಳುನಾಡು ಮತ್ತು ಕೇರಳದಲ್ಲಿ ಹಿಂದಿ ಹೆಚ್ಚಾಗಿ ಜನಕ್ಕೆ ಅರ್ಥವಾಗುವುದಿಲ್ಲ. ಒಟ್ಟಿನಲ್ಲಿ ಒಂದಷ್ಟು ರಾಜ್ಯಗಳಲ್ಲಿ ಹಿಂದಿ ಅರ್ಥವಾಗುವುದಿಲ್ಲ, ಒಂದಷ್ಟು ಪ್ರದೇಶಗಳಲ್ಲಿ ಹಿಂದಿ ಅರ್ಥವಾಗುತ್ತೆ ಆದರೆ ಹಿಂದಿಯನ್ನು ಮಾತನಾಡುವ ಪ್ರಶ್ನೆ ಬಂದಾಗ ಯಾವುದೇ ದಕ್ಷಿಣ ಭಾರತದ ಪ್ರದೇಶಗಳಲ್ಲಿ ಹಿಂದಿ ಆಡುಭಾಷೆ ಅಲ್ಲ, ಜನ ಅದನ್ನು ಸುಲಭವಾಗಿ ಮಾತನಾಡುವುದಕ್ಕೆ ಬರುವುದಿಲ್ಲ. ಹೀಗಾಗಿಯೇ ಹಿಂದಿ ಚಿತ್ರಗಳು ಜನಸಾಮಾನ್ಯರನ್ನು ಸೆಳೆಯುವುದರಲ್ಲಿ ಅಂತಹ ಯಶಸ್ಸನ್ನು ಕಂಡಿಲ್ಲ. ಹಿಂದಿನಿಂದಲೂ ಒಂದಷ್ಟು ಸುಶಿಕ್ಷಿತ ಮಂದಿ ಬೆಂಗಳೂರು- ಚೆನ್ನೈ- ಹೈದರಾಬಾದ್ ಅಂತ ನಗರಗಳಲ್ಲಿ ಅಷ್ಟೇ ಹಿಂದಿ ಚಿತ್ರಗಳನ್ನು ನೋಡುತ್ತಿದ್ದರು. ಆದರೆ ಜನಸಾಮಾನ್ಯರು ಮಾತ್ರ ತಮ್ಮ ಪ್ರಾದೇಶಿಕ ಭಾಷೆಯ ಸಿನಿಮಾದ ಸೊಗಡಿಗೆ ಮನಸೋತವರು. ತಮ್ಮ ತಾರೆಯರನ್ನು ಆರಾಧ್ಯದೈವ ಗಳಂತೆ ಆರಾಧಿಸಿದರು.

    ದಕ್ಷಿಣ ಭಾರತದಲ್ಲಿ ಗಟ್ಟಿ ಸಿನಿಮಾಗಳ ನಿರ್ಮಾಣ

    ದಕ್ಷಿಣ ಭಾರತದಲ್ಲಿ ಗಟ್ಟಿ ಸಿನಿಮಾಗಳ ನಿರ್ಮಾಣ

    ಭಾರತದ ಇತರ ಭಾಷೆಗಳಿಗೆ ಹೋಲಿಸಿದರೆ ದಕ್ಷಿಣ ಭಾರತದ ಸಿನಿಮಾರಂಗ ಹಿಂದಿಯಷ್ಟೇ ಬಲವಾಗಿ ಬೆಳೆಯುತ್ತಿತ್ತು. ಗಟ್ಟಿತನದ ಕಥಾವಸ್ತು ಮತ್ತು ಜನಸಾಮಾನ್ಯರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಅಂತಹ ಅದರ ಸಾಂಸಾರಿಕ -ಜನಪದ - ಪೌರಾಣಿಕ ಕಥಾವಸ್ತುಗಳ ಹಂದರ ಮತ್ತು ವೈವಿಧ್ಯತೆ ಕೂಡ ಹಿಂದಿ ಚಿತ್ರಗಳಲ್ಲಿ ಕಾಣಸಿಗುತ್ತಿರಲಿಲ್ಲ. ಜೊತೆಗೆ ಎಲ್ಲಾ ಭಾಷೆಯ ಚಿತ್ರಗಳಲ್ಲಿ ಕೂಡ ಸುಮಧುರವಾದ ಗೀತೆಗಳು ಇರುತ್ತಿತ್ತು. ನವಿರಾದ ಹಾಸ್ಯ ಪ್ರಸಂಗಗಳು ಜನರನ್ನು ಹಿಡಿದಿಟ್ಟುಕೊಳ್ಳುತ್ತಿತ್ತು. ಹೀಗಾಗಿ ಸಹಜವಾಗಿಯೇ ಜನರು ತಮ್ಮ ಸೊಗಡಿನ ಭಾಷಾ ಸಂಸ್ಕೃತಿಯ ಬೇರುಗಳಿಂದ ಕೂಡಿದ ಸಿನಿಮಾಗಳನ್ನು ಹೆಚ್ಚಿಗೆ ಇಷ್ಟಪಟ್ಟು, ಒಪ್ಪಿಕೊಂಡು, ಅಪ್ಪಿಕೊಂಡರು. ಎಲ್ಲೋ ಒಂದೆಡೆ ಹಿಂದಿ ಸಿನಿಮಾಗಳನ್ನು ತಮ್ಮ ಬೇರಿನ ಭಾಷಾ ಚಿತ್ರದಂತೆ ನೋಡಲು ಸಾಧ್ಯವಾಗಲಿಲ್ಲ. ಹೀಗಾಗಿಯೇ ಹಿಂದಿ ಚಿತ್ರಗಳು ದಕ್ಷಿಣ ಭಾರತದಲ್ಲಿ ದೊಡ್ಡ ಪ್ರಭಾವವನ್ನು ಅಂದಿನ ಕಾಲದಲ್ಲೂ ಸಹ ಬೀರಲು ಸಾಧ್ಯವಾಗಲಿಲ್ಲ.

    ಹಿಂದಿ ಮಾರುಕಟ್ಟೆ ಬೆಳೆದರೂ ದಕ್ಷಿಣ ಕೈಗೆ ಸಿಗಲಿಲ್ಲ

    ಹಿಂದಿ ಮಾರುಕಟ್ಟೆ ಬೆಳೆದರೂ ದಕ್ಷಿಣ ಕೈಗೆ ಸಿಗಲಿಲ್ಲ

    ಹಿಂದಿ ಸಿನಿಮಾಗಳ ಮಾರುಕಟ್ಟೆ 90ರ ದಶಕದಲ್ಲಿ ಅಗಾಧವಾಗಿ ಬೆಳೆಯಿತು. ವಿದೇಶಗಳಲ್ಲಿ ಕೂಡ ಉತ್ತಮ ಗಳಿಕೆಯನ್ನು ಕಾಣಲು ಆರಂಭಿಸಿದವು. ಚೀನಾ ಅಂತಹ ದೇಶದಲ್ಲಿ ಕೂಡ ಡಬ್ಬಿಂಗ್ ಮಾಡಿ ಚಿತ್ರಗಳನ್ನು ಬಿಡುಗಡೆ ಮಾಡಲಾಯಿತು. ವರ್ಷಕ್ಕೆ ಸಾವಿರ ಚಿತ್ರಗಳನ್ನು ನಿರ್ಮಾಣ ಮಾಡುವ ಹಂತಕ್ಕೂ ಕೂಡ ಬಾಲಿವುಡ್ ಬಂದು ನಿಂತಿತು. ನಾಯಕನಟರು ಕೋಟ್ಯಾಂತರ ರೂಪಾಯಿಗಳನ್ನು ನೋಡಲು ಮತ್ತು ಸಿನಿಮಾಗಳು ಅಷ್ಟೇ ಪ್ರಮಾಣದಲ್ಲಿ ಹಣಗಳಿಕೆ ಮಾಡುವುದರಲ್ಲಿ ಕೂಡ ಯಶಸ್ಸು ಕಂಡಿತು. ಆಗಲೂ ಕೂಡ ಬಾಲಿವುಡ್ ಕೈಗೆ ದಕ್ಷಿಣ ಭಾರತ ಸಿಗಲೇ ಇಲ್ಲ. 90ರ ದಶಕದ ಹೊತ್ತಿಗೆ ರಜನಿಕಾಂತ್, ಚಿರಂಜೀವಿ, ಕಮಲಹಾಸನ್, ಮಮ್ಮುಟ್ಟಿ, ಮೋಹನ್ ಲಾಲ್, ವಿಷ್ಣುವರ್ಧನ್, ಅಂಬರೀಶ್ ಹೀಗೆ ದಕ್ಷಿಣದ ಪ್ರತಿ ಪ್ರಾಂತ್ಯದಲ್ಲೂ ಅವರದೇ ಆದ ನಾಯಕರುಗಳು ಬಲವಾಗಿ ಬೆಳೆದು ನಿಂತಿದ್ದರು. ತಮ್ಮ ಪ್ರಾಂತೀಯ ಭಾಷೆಯ ಸಿನಿಮಾವನ್ನು ಮತ್ತಷ್ಟು ಗಟ್ಟಿಗೊಳಿಸಿದರು. ರಜನಿಕಾಂತ್, ಚಿರಂಜೀವಿ ಅಂತ ನಾಯಕನಟರು ಬಾಲಿವುಡ್ ನಟರಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು. ಇವರ ಜನಪ್ರಿಯತೆಯ ಮುಂದೆ ಬಾಲಿವುಡ್ ಮಂದಿ ಕೂಡ ಮಂಕಾಗಿದ್ದರು.


    ಬಾಲಿವುಡ್‌ನ ದೊಡ್ಡ ಸೂಪರ್ ಸ್ಟಾರ್ ಚಿತ್ರ ಬಿಡುಗಡೆಯಾದರೂ ಕೂಡ ದಕ್ಷಿಣದಲ್ಲಿ ಅದರ ಯಾವುದೇ ತರದ ಪ್ರಭಾವ ಇರುತ್ತಿರಲಿಲ್ಲ. ಬಾಲಿವುಡ್ ನ ಒಂದಷ್ಟು ಚಿತ್ರಗಳು ದಕ್ಷಿಣದಲ್ಲೂ ಕೂಡ ಒಳ್ಳೆ ಗಳಿಕೆಯನ್ನು ಆದರೆ ಅವು ದಕ್ಷಿಣದ ಚಿತ್ರಗಳ ಗಳಿಕೆಯ ಎಷ್ಟು ಉತ್ತಮವಾಗಿಲ್ಲ. ಜೊತೆಗೆ ದಕ್ಷಿಣದ ಚಿತ್ರಗಳು ತಮ್ಮ ಸಾಂಸ್ಕೃತಿಕ ಬೇರಿನ ಜೊತೆಯಲ್ಲಿ ಗಟ್ಟಿಯಾಗಿದ್ದವು, ಗಟ್ಟಿಯಾಗಿವೆ ಹೀಗಾಗಿಯೇ ಜನರು ತಮ್ಮ ಪ್ರಾಂತ್ಯದ ಸಿನಿಮಾಗಳನ್ನು ತಮ್ಮ ಬದುಕಿನ ಭಾಗವಾಗಿ ಸ್ವೀಕರಿಸಿದ್ದಾರೆ. ಆದರೆ ಹಿಂದಿಯ ಜೊತೆ ಅಂತಹ ಭಾವನಾತ್ಮಕ ಸಂಬಂಧ ಬೆಳೆದೇ ಇಲ್ಲ.

    ಕಾಲವಾದರೂ ದಕ್ಷಿಣದ ಕಲಾವಿದರು ಅಮರ

    ಕಾಲವಾದರೂ ದಕ್ಷಿಣದ ಕಲಾವಿದರು ಅಮರ

    ಸೌತ್ ಸಿನಿಮಾಗಳನ್ನು ಕಡಿಮೆ ಮಾಡಿ ನೋಡಿದರೂ ಕೂಡ ಬಾಲಿವುಡ್ನ ಒಬ್ಬನೇ ಒಬ್ಬ ನಟ ಕೂಡ ಇದುವರೆಗೆ ದಕ್ಷಿಣಭಾರತದ ಜನರ ಹೃದಯದಲ್ಲಿ ಸ್ಥಾನ ಪಡೆದಿಲ್ಲ. ಹಿಂದಿ ಸಿನಿಮಾ ನಟರನ್ನು ತಮ್ಮವರೆಂದು ದಕ್ಷಿಣದವರು ಒಪ್ಪಿಕೊಂಡಿದ್ದು ಇಲ್ಲ. ಸೌತ್ ಸಿನಿಮಾನಟರು ಕೇವಲ ನಟರು ಅಷ್ಟೇ ಅಲ್ಲ ಅವರು ಸಾಂಸ್ಕೃತಿಕ ಪ್ರತಿನಿಧಿಗಳು ಮತ್ತು ಜನಸಾಮಾನ್ಯರ ಜೀವನದ ಒಂದು ಭಾಗವಾಗಿದ್ದಾರೆ. ಅನೇಕ ಸೌತ್ ಸಿನಿ ಹಿರಿಯ ನಟರು ನಿರ್ಗಮಿಸಿದ್ದರು ಜನಮಾನಸದಲ್ಲಿ ಇಂದಿಗೂ ಅಜರಾಮರರಾಗಿದ್ದಾರೆ.

    ರಾಜ್ ಕಪೂರ್ ಅವರನ್ನು ಬಾಲಿವುಡ್ ಶೋ ಮ್ಯಾನ್ ಅಂತ ಕರೆಯುತ್ತಿದ್ದರು. ಅವರು ಜನಪ್ರಿಯ ನಟರು ಆಗಿದ್ದರು ಆದರೆ ಇಂದು ರಾಜ್ ಕಪೂರ್ ಅವರನ್ನು ನಿತ್ಯದ ಬದುಕಿನಲ್ಲಿ ನೆನೆಸಿಕೊಳ್ಳುವ ಮಂದಿಗೆ ಎಷ್ಟಿದ್ದಾರೆ? ಅದೇ ರಾಜ್ ಕುಮಾರ್ ಅವರನ್ನು ತೆಗೆದುಕೊಂಡರೆ ಜನ ಈಗಲೂ 'ಅಣ್ಣಾವ್ರು...'ಅಂತ ಪ್ರೀತಿಯಿಂದ ಈಗಿನ ತಲೆಮಾರಿನ ಹುಡುಗರು ಕೂಡ ಸಂಬೋಧಿಸುತ್ತಾರೆ. ಕರ್ನಾಟಕದ ಯಾವುದೇ ಮೂಲೆಗೆ ಹೋದರೂ ಅವರ ಪ್ರತಿಭೆಗಳಿವೆ, ರಸ್ತೆಗಳಿಗೆ ಹೆಸರು ಇಡಲಾಗಿದೆ, ಅವರ ಸಮಾಧಿಯ ದರ್ಶನಕ್ಕೆ ಜನ ಇಂದಿಗೂ ಕೂಡ ಹರಿದು ಬರುತ್ತಲೇ ಇದ್ದಾರೆ. ಇಂತಹ ಒಂದೇ ಒಂದು ಘಟನೆಯಾದರೂ ನೀವು ರಾಜ್ ಕಪೂರ್ ವಿಷಯದಲ್ಲಿ ಹೇಳೋದು ಸಾಧ್ಯವೇ?
    ಅಪ್ಪು ಅಂತಿಮದರ್ಶನಕ್ಕೆ 25 ಲಕ್ಷ ಮಂದಿ!

    ಅಪ್ಪು ಅಂತಿಮದರ್ಶನಕ್ಕೆ 25 ಲಕ್ಷ ಮಂದಿ!

    ಎಂ. ಜಿ. ರಾಮಚಂದ್ರನ್ ತೀರಿಕೊಂಡ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಸಾವಿರಾರು ಜನ ಆತ್ಮಹತ್ಯೆ ಮಾಡಿಕೊಂಡರು, ಲಕ್ಷಾಂತರ ಜನ ಅವರ ಅಂತಿಮ ದರ್ಶನಕ್ಕಾಗಿ ಗಂಟೆಗಟ್ಟಲೇ ಎದುರು ನೋಡಿದರು. ತೀರ ಇತ್ತೀಚೆಗೆ ತೀರಿಕೊಂಡ ಬಾಲಿವುಡ್‌ನ ದೊಡ್ಡ ನಟ ದಿಲೀಪ್ ಕುಮಾರ್ ಸತ್ತ ಸಂದರ್ಭದಲ್ಲಿ ಎಷ್ಟು ಜನ ಸೇರಿದ್ದರು? ಎಷ್ಟು ಜನ ಕಣ್ಣೀರು ಹಾಕಿದರು? ಎನ್. ಟಿ. ರಾಮರಾವ್ ಕೇವಲ 9 ತಿಂಗಳಲ್ಲಿ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತಂದರು. ಇಂತಹ ಸಾಮರ್ಥ್ಯ ಯಾವುದಾದರೂ ಒಂದು ಬಾಲಿವುಡ್ ನಟನಿಗಿದೆ? ಇಷ್ಟೆಲ್ಲಾ ಯಾಕೆ ಇತ್ತೀಚಿಗೆ ನಮ್ಮನ್ನು ಅಗಲಿದ ಪ್ರೀತಿಯ ಪುನೀತ್ ರಾಜಕುಮಾರ್ ಅವರ ಅಂತಿಮದರ್ಶನಕ್ಕೆ 25 ಲಕ್ಷ ಜನ ಸೇರಿದ್ದರು.

    ಸುನಿಲ್ ದತ್, ದೇವಾನಂದ, ಶಮ್ಮಿಕಪೂರ್, ರಿಷಿ ಕಪೂರ್ , ಸುನಿಲ್ ದತ್ ದೇವಾನಂದ, ಶಮ್ಮಿಕಪೂರ್, ರಾಜೇಶ್ ಖನ್ನ ಇವರೆಲ್ಲ ಒಂದು ಕಾಲದ ಒಂದು ಕಾಲದಲ್ಲಿ ದೊಡ್ಡ ಬಾಲಿವುಡ್ ಸ್ಟಾರ್ ಗಳು. ಆದರೆ ಇವತ್ತು ಇವರನ್ನು ನೆನೆಸಿಕೊಳ್ಳುವ ಮಂದಿ ಎಷ್ಟು ಇದ್ದಾರೆ? ಎಷ್ಟು ಇವರ ಪ್ರತಿಭೆಗಳು ಸ್ಥಾಪನೆಯಾಗಿದೆ? ಎಷ್ಟು ರಸ್ತೆಗಳಿಗೆ ಇವರ ಹೆಸರು ಇಡಲಾಗಿದೆ? ಜನಮಾನಸದಲ್ಲಿ ಇವರನ್ನು ಪ್ರೀತಿಸುವ ಜನ ಎಷ್ಟಿದ್ದಾರೆ? ಬಾಲಿವುಡ್ ನಲ್ಲಿ ಸಿನಿಮಾ ಯಶಸ್ಸು ಸಿಗುವವರೆಗೂ ಅಷ್ಟೇ ನಾಯಕನಿಗೆ ಬೆಲೆ. ಅದೇ ದಕ್ಷಿಣದಲ್ಲಿ ಒಂದು ಸಲ ನಾಯಕನನ್ನು ಒಪ್ಪಿಕೊಂಡರೆ ಅವನು ಸತ್ತರು ಅಭಿಮಾನಿಗಳ ಹೃದಯದಲ್ಲಿ ಅಜರಾಮರ. ಅದಕ್ಕೆ ಅದು ಶಿವಾಜಿಗಣೇಶನ್ ಆಗಬಹುದು, ನಾಗೇಶ್ವರಾವ್, ಶೋಬನ್ ಬಾಬು, ಶಂಕರ್ ನಾಗ್, ವಿಷ್ಣುವರ್ಧನ್, ಅಂಬರೀಶ್ ಇವರೆಲ್ಲ ಇಂದಿಗೂ ದಕ್ಷಿಣ ಭಾರತದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವುದು.

    ಹಿಂದಿ ಕೋಟೆ ಮೇಲೆ ದಕ್ಷಿಣದ ಧ್ವಜ

    ಹಿಂದಿ ಕೋಟೆ ಮೇಲೆ ದಕ್ಷಿಣದ ಧ್ವಜ

    ಬದಲಾದ ಕಾಲಘಟ್ಟದಲ್ಲಿ ಮಾತ್ರ ಹಿಂದಿ ಪ್ರದೇಶದವರು ದಕ್ಷಿಣದ ಚಿತ್ರಗಳ ಮೇಲೆ ಪ್ರಭಾವ ಇರುವುದಕ್ಕಿಂತ ಈಗ ದಕ್ಷಿಣ ಚಿತ್ರಗಳು ಹಿಂದಿ ಕೋಟೆಯಲ್ಲಿ ನುಗ್ಗುತ್ತಿವೆ.ಬಾಲಿವುಡ್ ಗಿಂತ ಹೆಚ್ಚಿಗೆ ಈಗ ಉತ್ತರ ಭಾರತೀಯರಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಮೇಲೆ ಆಸಕ್ತಿ ಮತ್ತು ಕ್ರೇಜ್ ದಿನೇದಿನೆ ಹೆಚ್ಚುತ್ತಿದೆ. ಸೌತ್ ಸಿನಿಮಾ ಒಂದು ಫುಲ್ ಮೀಲ್ಸ್ ಚಿತ್ರವಿದ್ದಂತೆ. ಇಲ್ಲಿ ತಾಂತ್ರಿಕ ಶ್ರೀಮಂತಿಕೆ ಇದೆ ಹಾಸ್ಯವಿದೆ, ಆಕ್ಷನ್ ಇದೆ ಗಟ್ಟಿಯಾದ ಕಥೆ ಇದೆ, ರೊಮ್ಯಾನ್ಸ್ ಇದೆ ಎಲ್ಲದಕ್ಕಿಂತ ಹೆಚ್ಚಾಗಿ ಜನರನ್ನು ಭಾವನಾತ್ಮಕವಾಗಿ ಸೆಳೆಯುವಂತಹ ಶಕ್ತಿಯಿದೆ. ಹಿಂದಿ ಚಿತ್ರಗಳಲ್ಲಿ ಇದರ ಕೊರತೆ ಈಗಂತೂ ಬಹಳಷ್ಟಿದೆ. ಬಾಹುಬಲಿ, 2.0, ಸಾಹೋ, ಕೆಜಿಎಫ್, ಪುಷ್ಪ ಬಾಲಿವುಡ್ ಕೋಟೆ ಒಳಗೆ ನುಗ್ಗಿ ತಮ್ಮ ಯಶಸ್ಸಿನ ಧ್ವಜವನ್ನು ಹಾರಿಸಿವೆ.

    ಇನ್ನು ಆರ್ ಆರ್ ಆರ್, ರಾಧೇಶ್ಯಾಮ್, ಕೆಜಿಎಫ್-2 , ಮೇಜರ್, ಲೆಗರ್ ಹೀಗೆ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳು ಕೂಡ ಹಿಂದಿ ಜನರನ್ನು ಆಕರ್ಷಿಸಲು ಸಿದ್ಧವಾಗಿವೆ. ಹಿಂದಿ ಸಿನಿಮಾಗಳು ಕೂಡ ಈಗ ಸೌತ್ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದರು ದಕ್ಷಿಣದಲ್ಲಿ ಹಿಂದಿ ಚಿತ್ರಗಳಿಗೆ ಯಶಸ್ಸು ಕೈಗೆಟುಕದ ಹುಳಿ ದ್ರಾಕ್ಷಿಯಂತೆ ಇದೆ. ಒಟ್ಟಾರೆ ಬಾಲಿವುಡ್ ಇಂದಿಗೂ ಸೌತ್ ರಂಗದಲ್ಲಿ ತನ್ನ ನೆಲೆ ಕಂಡುಕೊಳ್ಳಲು ಸಾಧ್ಯವಾಗದೆ ಇರುವುದಕ್ಕೆ ಮುಖ್ಯ ಎರಡು ಕಾರಣಗಳು: ಇಲ್ಲಿನ ಕಲಾವಿದರನ್ನು ಭಾಷೆ ಮತ್ತು ಸಾಂಸ್ಕೃತಿಕ ಪ್ರತಿನಿಧಿಗಳಾಗಿ ಜನ ನೋಡುತ್ತಿರುವುದು, ಇಲ್ಲಿನ ಜನರ ಭಾಷಾ ಅಭಿಮಾನ ಮತ್ತು ಕಲಾ ಪ್ರೀತಿಯಲ್ಲಿ ತಮ್ಮತನಕ್ಕೆ ಹೆಚ್ಚಿನ ಒತ್ತುಕೊಡುವುದು...

    English summary
    How and who stopped Bollywood for conquering South India, Mainly each south filmy Industry have it's own superstars, who ever, are more popular than Bollywood stars in their respective states.
    Thursday, January 6, 2022, 18:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X