ಅಣ್ಣಾವ್ರನ್ನು ದ್ವೇಷಿಸುತ್ತಿದ್ದ ವಿಷ್ಣು ಅಭಿಮಾನಿ ನಿರ್ದೇಶಕ ವೀರೇಂದ್ರ; ಬೆಂಗಳೂರಿಗೆ ಬಂದಮೇಲೆ ಏನಾಯ್ತು?

ಸ್ಯಾಂಡಲ್‌ವುಡ್‌ನಲ್ಲಿ ಫ್ಯಾನ್ಸ್ ವಾರ್ ಅನ್ನೋದು ಇಂದು ನಿನ್ನೆಯದ್ದಲ್ಲ. ಅಣ್ಣಾವ್ರು, ವಿಷ್ಣುವರ್ಧನ್ ಕಾಲದಿಂದಲೂ ಇದೆ. ಸ್ಟಾರ್ ನಟರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲದಿದ್ದರೂ ನಮ್ಮ ಹೀರೊ ಗ್ರೇಟ್ ಎನ್ನುವ ಭರದಲ್ಲಿ ಸುಖಾ ಸುಮ್ಮನೆ ಫ್ಯಾನ್ಸ್ ನಡುವೆ ತಿಕ್ಕಾಟ ನಡೆಯುತ್ತಿರುತ್ತದೆ. ಒಂದ್ಕಾಲದಲ್ಲಿ ಡಾ. ರಾಜ್‌ಕುಮಾರ್ ಹಾಗೂ ಸಾಹಸಿಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ನಡುವೆ ಘರ್ಷಣೆ ನಡೆದ ಉದಾಹರಣೆಗಳಿವೆ.

'ಪ್ರೀತಿ ಗೀತಿ ಇತ್ಯಾದಿ' ಸಿನಿಮಾ ನಿರ್ದೇಶಕ ವೀರೇಂದ್ರ ಮಲ್ಲಣ್ಣ ಕೂಡ ಸಾಹಸಸಿಂಹನ ದೊಡ್ಡ ಅಭಿಮಾನಿ ಆಗಿದ್ದರಂತೆ. ಅಣ್ಣಾವ್ರ ಬಗ್ಗೆ ಅವರಿಗೆ ಭಾರೀ ವಿರೋಧಾಭಿಪ್ರಾಯ ಇತ್ತಂತೆ. ಟೀ. ನರಸೀಪುರದ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು ವೀರೇಂದ್ರ. ದಶಕಗಳ ಹಿಂದೆ ತಮ್ಮ ಊರಿನಲ್ಲಿ ಡಾ. ರಾಜ್‌ ಹಾಗೂ ವಿಷ್ಣು ಅಭಿಮಾನಿಗಳ ನಡುವೆ ತಿಕ್ಕಾಟ ಹೇಗಿತ್ತು? ತಾವು ಏಕೆ ಅಣ್ಣಾವ್ರ ಬಗ್ಗೆ ತಪ್ಪು ಅಭಿಪ್ರಾಯ ಬೆಳೆಸಿಕೊಂಡರು? ಬೆಂಗಳೂರಿಗೆ ಬಂದ ಮೇಲೆ ಆ ಅಭಿಪ್ರಾಯ ಬದಲಾಗಿದ್ದು ಹೇಗೆ? ಎನ್ನುವುದನ್ನು ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ.

How being Vishnuvardhan fan Director Veerendra Mallanna become dr Rajkumar devotee?

ವಿಷ್ಣು ಅಭಿಮಾನಿಯ ದೃಷ್ಣಿಯಲ್ಲಿ ರಾಜಣ್ಣ

ತೊಂಬತ್ತರ ದಶಕದ ನಮ್ಮೂರಲ್ಲಿ ಎರಡು ದೊಡ್ಡ ಬಣ. ರಾಜಕುಮಾರ್ ಫ್ಯಾನ್ಸು, ವಿಷ್ಣುವರ್ಧನ್ ಫ್ಯಾನ್ಸು. ಇಪ್ಪತ್ತೆರಡು ಮನೆಗಳಿದ್ದ ಆ ಸಣ್ಣ ಊರಿನಲ್ಲಿ ಮೂರನೆದ್ದು ಬೆರಳೆಣಿಕೆಯಷ್ಟು ಮಂದಿಯ ಅಂಬಿಪಡೆ. ನಾನು ವಿಷ್ಣುವರ್ಧನ್ ಅಭಿಮಾನಿಗಳ ಬಣ. ರಾಜಕುಮಾರ್ ಅಂದರೆ ಅಷ್ಟಕ್ಕಷ್ಟೆ..! ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೋಡುತ್ತಿದ್ದೆನಾದರೂ, ಆ ಸಿನಿಮಾಗಳಲ್ಲಿ ನನಗೆ ರಾಜ್‌ಕುಮಾರ್ ಕಾಣ್ತಾ ಇರಲಿಲ್ಲ. ಅವರು ಸಿನಿಮಾಗಳಲ್ಲಿ ಎಂದಿಗೂ ರಾಜ್‌ಕುಮಾರ್ ಆಗಿ ಕಾಣಿಸಿಕೊಳ್ಳದೆ ಕಥೆಯ ಪಾತ್ರವಾಗಿದ್ದರಿಂದ ನನ್ನಂತ ಅದೆಷ್ಟೋ ಬೇರೆ ನಟರ ಅಭಿಮಾನಿಗಳಿಂದಲೂ ರಾಜ್‌ಕುಮಾರ್ ಅವರ ಸಿನಿಮಾಗಳು ನೋಡಿಸಿಕೊಳ್ಳುತ್ತಿದ್ದವು ಅನ್ನಿಸುತ್ತದೆ.

ರಾಜ್‌ಕುಮಾರ್ ಅವರ ಬಗ್ಗೆ ನಮ್ಮ ಮನಸ್ಸಲ್ಲಿ ವಿರೋಧಾಭಿಪ್ರಾಯ ಹುಟ್ಟಲು ಕಾರಣವಾಗಿದ್ದು ಶಂಕರ್‌ನಾಗ್ ಸಾವಿನಲ್ಲಿ ರಾಜ್‌ಕುಮಾರ್ ಅವರ ಕೈವಾಡ ಇದೆ ಎಂದು ಹಬ್ಬಿದ್ದ ಸುಳ್ಳು. ಶಂಕರ್‌ನಾಗ್ ಅವರ ಸಾವಿನ ಬಗ್ಗೆ ಸ್ಪಷ್ಟ ಚಿತ್ರಣವೇ ಸಿಗದಿದ್ದ ಕಾಲದಲ್ಲಿ ಅದೊಂದು ಸುಳ್ಳು ನಮ್ಮನ್ನು ಸತ್ಯವೆಂಬಂತೆ ಆವರಿಸಿಕೊಂಡಿತ್ತು. ನಮ್ಮೂರಿನ ರಾಜ್‌ಕುಮಾರ್ ಅಭಿಮಾನಿಗಳು ವಿಷ್ಣು ಅವರನ್ನು ಎಡಗೈ ಕಾರಣಕ್ಕೆ ರೇಗಿಸುವುದು, ಹಾಗೆ ರೇಗಿಸಿದಾಗಲೆಲ್ಲ ಅವರ ಮೇಲೆ ಹುಟ್ಟಿದ ನಮ್ಮ ಸಿಟ್ಟು ರಾಜಕುಮಾರ್ ಕಡೆಗೇ ಹೋಗ್ತಿತ್ತು.

ಊರಲ್ಲಿ ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಟೌನಿಂದ ಟಿವಿ, ವಿಸಿಆರ್ ಹಾಗೂ ಕ್ಯಾಸೆಟ್ಸ್ ತಂದು ಬೀದಿಯಲ್ಲಿ ಸಿನಿಮಾ ಹಾಕುವ ಸಂಪ್ರದಾಯವಿತ್ತು. ರಾಜ್‌ಕುಮಾರ್ ಅಭಿಮಾನಿಗಳು ಅವರ ಸಿನಿಮಾ ಕ್ಯಾಸೆಟ್ ತಂದರೆ, ನಾವು ವಿಷ್ಣುವರ್ಧನ್ ಅಭಿಮಾನಿಗಳು ಕಾಸು ಜೋಡಿಸಿ ವಿಷ್ಣು ಸಿನಿಮಾ ಕ್ಯಾಸೆಟ್ ತರುತ್ತಿದ್ದೆವು. ಅಂಬಿ ಅಭಿಮಾನಿಗಳು ಅಂಬರೀಶ್ ಅವರ ಸಿನಿಮಾದ ಕ್ಯಾಸೆಟ್ ತರುವುದು. ಊರಿನ ಜನರೆಲ್ಲಾ ಬೀದಿಯಲ್ಲಿ ಚಾಪೆ ಹಾಸಿಕೊಂಡು, ರಗ್ಗು ಹೊದ್ದು ಕುಳಿತು ಸಿನಿಮಾ ನೋಡುವುದು. ನಿದ್ರೆ ಬಂದಾಗ ಕೆಲವರು ಅಲ್ಲಲ್ಲೇ ಉರುಳಿಕೊಳ್ಳುತ್ತಿದ್ದರು. ಇನ್ನು ಕೆಲವರು ಎದ್ದು ವಾಲಾಡಿಕೊಂಡು ಮನೆಗಳಿಗೆ ಹೋಗುತ್ತಿದ್ದರು. ಯಾರ ಅಭಿಮಾನಿಗಳು ಬೆಳಕರಿಯುವತನಕ ಎಚ್ಚರವಾಗಿರುತ್ತಾರೆ ಎಂಬುವ ಮೂಲಕ ಅಭಿಮಾನದ ಸಾಮರ್ಥ್ಯ ಸಾಬೀತುಪಡಿಸಬೇಕಾಗಿತ್ತು. ಅದೆಷ್ಟೇ ನಿದ್ರೆ ಬಂದರೂ ಎರಡು ಬಣಗಳ ಕೆಲವರು ಬಲವಂತವಾಗಿ ಕಣ್ಣು ಬಿಟ್ಟು ಕುಳಿತಿರುತ್ತಿದ್ದರು. ಬಿಟ್ಟ ಕಣ್ಣು ಕೆಂಪಗಾಗಿರುವುದರಲ್ಲೇ ತಿಳಿಯುತ್ತಿತ್ತು ಅವರ ಮೆದುಳು ಮಧ್ಯರಾತ್ರಿ ಹೊತ್ತಿಗೆ ಮಲಗಿದೆ ಎಂದು.

How being Vishnuvardhan fan Director Veerendra Mallanna become dr Rajkumar devotee?

ರಾಜ್ಕುಮಾರ್ ಅವರ 'ಒಡಹುಟ್ಟಿದವರು' ಸಿನಿಮಾ ಹಾಕಿದಾಗ ಆ ಬಣದವರು ಟಿವಿ ಮುಂದೆ ಕರ್ಪೂರ ಹಚ್ಚಿದ್ದರು. ಅವರು ಹಚ್ಚಿದ್ದಕ್ಕಿಂತ ಜಾಸ್ತಿ ಕರ್ಪೂರ ಹಚ್ಚಬೇಕು ಅಂತ ನಾವು ವಿಷ್ಣುವರ್ಧನ್ ಅವರ 'ಮೋಜುಗಾರ ಸೊಗಸುಗಾರ' ಸಿನಿಮಾ ಹಾಕಿದಾಗ ಬೊಗಸೆ ತುಂಬುವಷ್ಟು ಕರ್ಪೂರವನ್ನು ಟಿವಿ ಮುಂದೆ ಇಟ್ಟು ಹಚ್ಚಿದ್ವಿ. ಬೆಂಕಿಯ ತಾಪಕ್ಕೆ ಟಿವಿ ಮುಂದಿನ ಪ್ಲಾಸ್ಟಿಕ್ ಪ್ಯಾನಲ್ ಸುಟ್ಟು ಕರಕಲಾಯ್ತು. ಬಾಡಿಗೆಗೆ ತಂದ ಟಿವಿ ಡ್ಯಾಮೇಜ್ ಕಾಸು ನಾವುಗಳೇ ಕಟ್ಟಿಕೊಡಬೇಕಾಯ್ತು. ಮಿಡ್ಲ್ ಸ್ಕೂಲ್ ಓದುವ ವಯಸ್ಸಿನ ನಮ್ಮ ಬಳಿ ಅಷ್ಟೊಂದು ಕಾಸು ಎಲ್ಲಿಂದ ಬರಬೇಕು? ನಮ್ಮ ನಮ್ಮ ಮನೆಗಳವರು ಕೊಡಬೇಕು. ನನ್ನ ಅವ್ವ ನನಗೆ ಆಜನ್ಮ ಈಜನ್ಮಗಳಿಗೆ ಸಾಕಾಗುವಷ್ಟು ಬೈದು, ನನ್ನ ಪಾಲಿನ ಹಣ ಕೊಟ್ಟಿದ್ದಳು.

ಟೌನ್ ಟಾಕೀಸುಗಳಲ್ಲಿ ಸಿನಿಮಾಗಳು ಬಿಡುಗಡೆ ಆದಾಗಲೂ, ಸುತ್ತ ಮುತ್ತಲಿನ ಊರಿನ ಅಭಿಮಾನಿಗಳು ಬಿದಿರು-ಗಳು ಬಳಸಿ 'ಸ್ಟಾರ್' ಮಾಡಿಕೊಂಡು, ಅದಕ್ಕೆ ತಮ್ಮ ಮೆಚ್ಚಿನ ನಟರ ಪೇಪರ್ ಕಟಿಂಗ್ ಹಾಗೂ ಫೋಟೋಗಳನ್ನು ಅಂಟಿಸಿ ತಂದು ಟಾಕೀಸಿನಲ್ಲಿ‌ ಕಟ್ಟುವ ಅಭ್ಯಾಸ ಇತ್ತು. ರಾಜ್‌ಕುಮಾರ್ ಸಿನಿಮಾ ಬಿಡುಗಡೆ ಆದಾಗ ನಮ್ಮೂರಿನ ರಾಜ್ ಬಣದವರು ಕಟ್ಟಿದ್ದಕ್ಕಿಂತ ದೊಡ್ಡ ಸ್ಟಾರ್ ವಿಷ್ಣು ಸಿನಿಮಾಗೆ ಕಟ್ಟುವ ಹಠ ನಮಗೆ. ಹಾಗೆ ದೊಡ್ಡದೊಂದು ಸ್ಟಾರ್ ಸಿದ್ಧಪಡಿಸಿ ಅದನ್ನು ತೆಗೆದುಕೊಂಡು ಟೌನಿಗೆ ಹೋಗುವ ದಾರಿಯಲ್ಲೇ ಕಟ್ಟು ಕಳಚಿ ಮುರಿದು ಬಿದ್ದಿತ್ತು. ನಮ್ಮ ಮನಸ್ಸಿಗೆ ಬಹಳ ನೋವಾಗಿತ್ತು.

ಅಂತಹ ಕಟ್ಟರ್ ವಿಷ್ಣು ಅಭಿಮಾನಿಯಾದ ನನಗೆ ರಾಜ್‌ಕುಮಾರ್ ಅವರ ಬಗೆಗಿದ್ದ ಅಭಿಪ್ರಾಯ ಬದಲಾಗಿದ್ದು ಹಾಗೂ ಅವರ ಮೇಲಿನ ಗೌರವ ಹೆಚ್ಚಾಗಿದ್ದು "ರಾಜಣ್ಣನನ್ನು ವೀರಪ್ಪನ್ ಅಪಹರಿಸಿಕೊಂಡು ಹೋದಾಗ..!" ಕನ್ನಡ ಕಂಠೀರವನ ಅಪಹರಣವಾಗಿದ್ದು ಅದ್ಯಾಕೋ ಅಂದಿಗೆ ನನಗೂ ಬಹಳ ನೋವುಂಟು ಮಾಡಿತ್ತು. ಅದರ ಹಿನ್ನೆಲೆಯಲ್ಲಿ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಬುಗಿಲೆದ್ದ ಪ್ರತಿಭಟನೆ, ಅಭಿಮಾನಿಗಳ ಗೋಳು, ನಮ್ಮೂರಿನ ರಾಜ್ ಬಣದ ಒಬ್ಬ ವೀರಾಭಿಮಾನಿ "ಅಣ್ಣಾವ್ರು ವಾಪಸ್ ಬರೋತನಕ ಊಟ ಮಾಡೋದಿಲ್ಲ..!" ಅಂತ ಉಪವಾಸ ಕೂತು, ವಾರಗಟ್ಟಲೆ ಊಟ ಮಾಡದೆ ನಿತ್ರಾಣನಾಗಿ ಆಸ್ಪತ್ರೆಗೆ ಸೇರಿದ್ದ.

ಪತ್ರಿಕೆಗಳಲ್ಲಿ ರಾಜ್‌ಕುಮಾರ್ ಕುರಿತಾಗಿ ಬರುತ್ತಿದ್ದ ಎಲ್ಲ ಸುದ್ದಿಗಳನ್ನು ಓದುತ್ತಿದ್ದೆ. ರಾಜ್‌ಕುಮಾರ್ ಅವರು ಪಾತ್ರಗಳ ಮೂಲಕ, ಅವರ ವ್ಯಕ್ತಿತ್ವದ ಮೂಲಕ, ರಸಮಂಜರಿ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಕೊಟ್ಟ ಕೊಡುಗೆಗಳು. ಕನ್ನಡ ನುಡಿಗೆ, ಪ್ರಾದೇಶಿಕತೆಗೆ ರಾಜಣ್ಣ ಎಷ್ಟು ಪ್ರಾಮುಖ್ಯತೆ ಕೊಟ್ಟರು ಮತ್ತು ರಾಜಣ್ಣನಿಂದ ಕನ್ನಡ ಹಾಗೂ ಕನ್ನಡತನಕ್ಕೆ ಸಿಕ್ಕ ಗೌರವ. ಗೋಕಾಕ್ ಚಳುವಳಿಗೆ ರಾಜಣ್ಣನ ಪ್ರವೇಶದಿಂದ ಸಿಕ್ಕ ಜನಬೆಂಬಲ, ಶಂಕರ್‌ನಾಗ್ ಅವರ ಸಾವಿನ ಹಿನ್ನೆಲೆಯಲ್ಲಿ ರಾಜಣ್ಣನ ಹೆಸರು ಅಪಪ್ರಚಾರ ಆದದ್ದು, ಇತ್ಯಾದಿ., ಅದೆಲ್ಲವೂ ರಾಜ್‌ಕುಮಾರ್ ಬಗ್ಗೆ ನನ್ನ ಅಭಿಪ್ರಾಯ ಬದಲಾಗಲು ಕಾರಣವಾಯ್ತು. ಆ ನಂತರ ಹೆಚ್ಚೆಚ್ಚು ರಾಜ್‌ಕುಮಾರ್ ಸಿನಿಮಾಗಳನ್ನು ನೋಡತೊಡಗಿದೆ.

ಬೆಂಗಳೂರಿಗೆ ಬಂದ ನಂತರ ಅವರನ್ನು ಭೇಟಿ ಮಾಡಬೇಕು ಅಂತನ್ನಿಸಿತ್ತು. ಊರಿಗೆ ಹೊಸಬ. ಊರು ಗೊತ್ತಿಲ್ಲ, ದಾರಿ ಗೊತ್ತಿಲ್ಲ. "ಹುಡುಕಿಕೊಂಡು ಹೋದರು, ಅವರು ನಮಗೆ ಕಾಣಿಸಿಕೊಳ್ಳುವುದು ಸಾಧ್ಯವೇ?" ಅಂತಂದುಕೊಂಡು ರಾಜ್‌ಕುಮಾರ್ ಅವರನ್ನು ಕಾಣುವ ಪ್ರಯತ್ನವನ್ನೇ ಮಾಡಲಿಲ್ಲ. ನಂತರದ ದಿನಗಳಲ್ಲಿ ರಾಜ್‌ಕುಮಾರ್ ಅವರನ್ನು ಹತ್ತಿರದಿಂದ ಬಲ್ಲವರು ರಾಜಣ್ಣನ ಬಗ್ಗೆ ಹೇಳಿದ್ದನ್ನೆಲ್ಲಾ ಕೇಳುವಾಗ "ರಾಜಣ್ಣ ಮನುಷ್ಯನೇ ಅಲ್ಲ, ದೇವರು" ಅಂತನ್ನಿಸಿದ್ದು ಸತ್ಯ.‌

ರಾಜಣ್ಣ ತೀರಿಕೊಂಡ ಸಮಯದಲ್ಲಿ ನಾನು ಕೇಬಲ್‌ ನೆಟ್‌ವರ್ಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದೆ. ಎಲ್ಲ ಚಾನೆಲ್ಲುಗಳ‌ ಪ್ರಸಾರ ನಿಲ್ಲಿಸಿ, ಕನ್ನಡ ಚಾನೆಲ್ಲುಗಳನ್ನು ಮಾತ್ರ ಪ್ರಸಾರ ಮಾಡಲಾಗಿತ್ತು. ಆ ಎಲ್ಲ‌ ಕನ್ನಡ ಚಾನೆಲ್ಲುಗಳಲ್ಲಿ ಅಂದು ದೇವರು ಭೂಮಿಯಿಂದ ಹೊರಟಿದ್ದ ಅಂತಿಮಯಾತ್ರೆ. ಇಡೀ ದಿನ ಆಫೀಸಿನಲ್ಲಿ ಟಿವಿ ಮುಂದೆ ಕುಳಿತ ನನ್ನ ಕಣ್ಣುಗಳು ತುಂಬಿಕೊಂಡು ಒಣಗುತ್ತಿತ್ತು, ಒಣಗಿ ಮತ್ತೆ ತುಂಬಿಕೊಳ್ಳುತ್ತಿತ್ತು. (ಅಪ್ಪು ಸರ್ ಹೊರಟಾಗ ಎರಡು ದಿನಗಳು ಮತ್ತೆ ರಾಜಣ್ಣನ್ನನ್ನು ಕಳೆದುಕೊಂಡಷ್ಟೇ ದುಃಖ ಆಗಿತ್ತು.‌) ಆದರೆ, ರಾಜಣ್ಣನ್ನನ್ನು ಭೌತಿಕವಾಗಿಯಷ್ಟೇ ಕಳೆದುಕೊಂಡಿದ್ದೇವೆ, ಕನ್ನಡತನ ಇರುವತನಕ ರಾಜಣ್ಣ ಜೀವಂತವೇ ಇರುತ್ತಾರೆ. ಪ್ರತಿ ದಿನ ಯಾವುದಾದರೊಂದು ರೂಪದಲ್ಲಿ ನಮ್ಮ ಮನಸ್ಸಿನಲ್ಲಿ ಮೂಡುವ ಹೆಸರು ಅಥವ ನೆನಪುಗಳಲ್ಲಿ ಒಂದು ರಾಜಣ್ಣ" ಎಂದು ಪೋಸ್ಟ್ ಮಾಡಿದ್ದಾರೆ.

More from Filmibeat

English summary
Diretor Veerendra Mallanna interesting comments on Dr Rajkumar and Vishnuvardhan Fan war;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X