ದರ್ಶನ್ ಪಾಲಿನ 'ವಿಜಯ'ಲಕ್ಷ್ಮಿ; ಕೆಲಸ, ಸಿಕ್ಕ ಅವಕಾಶಗಳು ಬಿಟ್ಟು ಪತಿ ಜೊತೆ ನಿಂತಿದ್ದ ವಿಜಿ
ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಜೈಲು ಸೇರಿದ್ದಾರೆ. ಪತಿಯನ್ನು ಸಂಕಷ್ಟದಿಂದ ಪಾರು ಮಾಡಲು ವಿಜಯಲಕ್ಷ್ಮಿ ಹರಸಾಹಸ ಪಡುತ್ತಿದ್ದಾರೆ. ಸಾಕಷ್ಟು ದೇವಸ್ಥಾನಗಳಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸುತ್ತಿದ್ದಾರೆ. ಆಗಾಗ್ಗೆ ಜೈಲಿಗೆ ತೆರಳಿ ಪತಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ನಟ ದರ್ಶನ್ ಪ್ರತಿ ಬಾರಿ ಸಂಕಷ್ಟಕ್ಕೆ ಸಿಲುಕಿದಾಗ ಬೆಂಬಲಕ್ಕೆ ನಿಂತವರು ಪತ್ನಿ ವಿಜಯಲಕ್ಷ್ಮಿ. ಒಂದು ಹಂತದಲ್ಲಿ ದರ್ಶನ್ ಆಕೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಆಗ ವಿಜಯಲಕ್ಷ್ಮಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಕೌಟುಂಬಿಕ ಕಿರುಕುಳ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದರು. ಬಳಿಕ ಅಂಬರೀಶ್ ರಾಜಿ ಸಂಧಾನ ಮಾಡಿದ್ದರು. ವಿಜಯಲಕ್ಷ್ಮಿ ಎಲ್ಲಾ ಮರೆತು ಕೇಸ್ ವಾಪಸ್ ಪಡೆದಿದ್ದರು.

'ಸಾರಥಿ' ಸಿನಿಮಾ ಬಿಡುಗಡೆ ಆಗಿ ಹಿಟ್ ಆಗಿತ್ತು. ಪ್ರೇಕ್ಷಕರು ದರ್ಶನ್ ವೈಯಕ್ತಿಕ ಜೀವನದ ವಿಚಾರ ಪಕ್ಕಕ್ಕಿಟ್ಟು ಸಿನಿಮಾ ನೋಡಿ ಗೆಲ್ಲಿಸಿದರು. ದಾಸನಿಗೆ ಮರುಹುಟ್ಟು ಸಿಕ್ಕಂತಾಗಿತ್ತು. ಅಂದು ದಂಪತಿ ನಡುವೆ ನಿಖಿತಾ ತುಕ್ರಾಲ್ ಬಂದು ಅಷ್ಟೆಲ್ಲಾ ರಾದ್ಧಾಂತವಾಗಿತ್ತು. ಎಲ್ಲಾ ಸರಿ ಹೋಯಿತು ಎನ್ನುವಾಗ ದರ್ಶನ್ ಬದುಕಿಗೆ ಪವಿತ್ರಾ ಗೌಡ ಎಂಟ್ರಿ ಆಗಿತ್ತು. ಆದರೂ ಕೂಡ ವಿಜಯಲಕ್ಷ್ಮಿ ಸಹಿಸಿಕೊಂಡು ಇದ್ದರು.
ಅದೇ ಪವಿತ್ರಾ ಗೌಡ ಕಾರಣಕ್ಕೆ ಇವತ್ತು ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರುವಂತಾಗಿದೆ. ಆದರೂ ವಿಜಯಲಕ್ಷ್ಮಿ ಮಾತ್ರ ಪತಿಯ ಪರ ನಿಂತಿದ್ದಾರೆ. ಹೇಗಾದರೂ ಮಾಡಿ ಅವರನ್ನು ಹೊರಗೆ ಕರೆದುಕೊಂಡು ಬರಬೇಕು ಎಂದು ಓಡಾಡುತ್ತಿದ್ದಾರೆ. ವಕೀಲರ ಮೂಲಕ ಜಾಮೀನು ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. 2003 ಮೇ 19ರಂದು ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಮದುವೆ ನಡೆದಿತ್ತು.
ಅದಾಗಲೇ ಇಂಜಿನಿಯರಿಂಗ್ ಓದುತ್ತಿದ್ದ ಸಮಯದಲ್ಲಿ ವಿಜಯಲಕ್ಷ್ಮಿ ಕಿರುತೆರೆ ನಿರೂಪಕಿ ಕೆಲಸ ಮಾಡುತ್ತಿದ್ದರು. ಬಳಿಕ ದರ್ಶನ್ ಪರಿಚಯ, ಸ್ನೇಹ ಶುರುವಾಗಿ ಇಬ್ಬರೂ ಮದುವೆ ಆಗಿದ್ದರು. ದಂಪತಿಗೆ ಒಬ್ಬ ಮಗ ಕೂಡ ಇದ್ದಾರೆ. ಮದುವೆ ಬಳಿಕ ವಿಜಯಲಕ್ಷ್ಮಿ ಕುಟುಂಬದ ಜವಾಬ್ದಾರಿ ವಹಿಸಿಕೊಂಡಿದ್ದರು. ಅದಕ್ಕಾಗಿ ಮಾಡುತ್ತಿದ್ದ ಕೆಲಸ ಕೂಡ ಬಿಟ್ಟಿದ್ದರು. ಆಗಷ್ಟೆ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳುತ್ತಿದ್ದ ದರ್ಶನ್‌ಗೆ ಬೆಂಬಲವಾಗಿ ನಿಂತರು.

ಇಡೀ ಕುಟುಂಬದ ಜವಾಬ್ದಾರಿ ವಹಿಸಿಕೊಂಡು ದರ್ಶನ್ ತಮ್ಮ ನಟನೆ ಕಡೆ ಗಮನ ಹರಿಸಲು ವಿಜಯಲಕ್ಷ್ಮಿ ಸಹಕಾರ ನೀಡಿದ್ದರು. ದರ್ಶನ್ 'ಮೆಜೆಸ್ಟಿಕ್' ಚಿತ್ರದಲ್ಲಿ ನಟಿಸುವ ಮುನ್ನವೇ ವಿಜಯಲಕ್ಷ್ಮಿ ಪರಿಚಯವಾಗಿ ಮದುವೆ ಆಗಲು ಇಬ್ಬರೂ ತೀರ್ಮಾನಿಸಿದ್ದರು. ವಿಜಯಲಕ್ಷ್ಮಿಗೆ ಒಳ್ಳೆ ಕೆಲಸ ಇತ್ತು. ಕೆಮಿಕಲ್ ಎಂಜಿನೀಯರಿಂಗ್ ಪದವೀಧರೆ. ಹಾಗಾಗಿ ಕೆಲ ಕಂಪೆನಿಗಳಿಂದ ಅವಕಾಶಗಳು ಬಂದಿತ್ತು. ಮನಸ್ಸು ಮಾಡಿದ್ದರೆ ನಟಿಯಾಗುವ ಅವಕಾಶವೂ ಇತ್ತು ಎಂದು ಸ್ನೇಹಿತೆ, ಗಾಯಕಿ ಶಮಿತಾ ಮಲ್ನಾಡ್ ಹಿಂದೆ ಸಂದರ್ಶನದಲ್ಲಿ ಹೇಳಿದ್ದರು.
ವಿಜಯಲಕ್ಷ್ಮಿ ಹಾಗೂ ಶಮಿತಾ ಇಬ್ಬರೂ ಕಿರುತೆರೆಯಲ್ಲಿ ನಿರೂಪಕಿಯರಾಗಿ ಕೆಲಸ ಮಾಡಿದ್ದರು. ಆಗಿನಿಂದಲೂ ಇಬ್ಬರ ನಡುವೆ ಸ್ನೇಹವಿದೆ. ಆರಂಭದ ದಿನಗಳಲ್ಲಿ ವಿಜಯಲಕ್ಷ್ಮಿ ತಾವು ದುಡಿದ ಹಣವನ್ನು ಮನೆಗೆ ಕೊಟ್ಟಿದ್ದು ಇದೆ. ಮನೆ, ಗಂಡ, ಮಗ ಅಂದ್ರೆ ಬಹಳ ಅಕ್ಕರೆ. ಹಾಗಾಗಿ ಫ್ಯಾಮಿಲಿಗೆ ಸಮಯ ಕೊಡಲು ಕೆಲಸ ಬಿಟ್ಟಿದ್ದರು. ಅವರಿಬ್ಬರ ನಡುವೆ ಅಪಾರ ಪ್ರೀತಿಯಿದೆ. ಹಾಗಾಗಿ ಇವತ್ತಿಗೂ ವಿಜಯಲಕ್ಷ್ಮಿ ಪತಿಯನ್ನು ಬಿಟ್ಟುಕೊಟ್ಟಿಲ್ಲ ಎಂದು ಶಮಿತಾ ಹೇಳಿದ್ದರು.
ವಿಜಯಲಕ್ಷ್ಮಿ ಬುದ್ದಿವಂತೆ. ಅದೇ ಕಾರಣಕ್ಕೆ ಬ್ಯುಸಿನೆಸ್(ಮೈ ಫ್ರೆಶ್ ಬಾಸ್ಕೆಟ್ ಇನ್') ಸಹ ಮಾಡುತ್ತಿದ್ದಾರೆ. ಮದುವೆ ಆಗಿದ್ದ ಹೊಸತರಲ್ಲಿ ದರ್ಶನ್‌ಗೆ ಒಳ್ಳೆ ಅವಕಾಶಗಳು ಸಿಗುತ್ತಿತ್ತು. ಅಂತಹ ಸಮಯದಲ್ಲಿ ವಿಜಯಲಕ್ಷ್ಮಿ ಕುಟುಂಬದ ಜವಾಬ್ದಾರಿ ವಹಿಸಿಕೊಂಡರು. ಹಾಗಾಗಿ ತಮ್ಮ ಕರಿಯರ್ ಕನಸು ಅಲ್ಲಿಗೆ ಬಿಟ್ಟರು ಎಂದು ಶಮಿತಾ ವಿವರಿಸಿದ್ದರು.


Click it and Unblock the Notifications











