ಮೇಯರ್ ಮುತ್ತಣ್ಣ ಚಿತ್ರಕ್ಕೆ ಡಾ.ರಾಜ್ ಕುಮಾರ್ ಅವರನ್ನ ಒಪ್ಪಿಸಿದ್ಹೇಗೆ ದ್ವಾರಕೀಶ್ ..?
ಸಿನಿಮಾವನ್ನೇ ಉಸಿರಾಗಿಸಿಕೊಂಡು, ದುಡಿಮೆಯಿಂದ ಬಂದದ್ದನ್ನೆಲ್ಲಾ ಚಿತ್ರನಿರ್ಮಾಣಕ್ಕೆ ವ್ಯಯಿಸಿದವರು ದ್ವಾರಕೀಶ್. ಸಿನಿಮಾಗಳಿಂದ ಅಪಾರವಾಗಿ ಗಳಿಸಿದ ಮತ್ತು ಎಲ್ಲವನ್ನೂ ಕಳೆದುಕೊಂಡು ಬರಿದಾಗಿ, ಪಡಬಾರದ ಪಾಡು ಪಡುತ್ತಾ ಬಂದ ದ್ವಾರಕೀಶ್, ನಿರ್ಮಾಪಕರಾದಾಗ ಅವರ ವಯಸ್ಸು ಕೇವಲ 25.
ಕೇವಲ 25ರ ಪ್ರಾಯದಲ್ಲಿಯೇ ನಿರ್ಮಾಪಕನ ಸ್ಥಾನವನ್ನ ಅಲಂಕರಿಸಿದ ದ್ವಾರಕೀಶ್, ಮಮತೆಯ ಬಂಧನ ಚಿತ್ರವನ್ನ ಮೊದಲು ನಿರ್ಮಾಣ ಮಾಡಿದರು. ಇನ್ನೂ.. ದ್ವಾರಕೀಶ್, ಸ್ವತಂತ್ರ್ಯ ನಿರ್ಮಾಪಕರಾಗಿದ್ದು ಮೇಯರ್ ಮುತ್ತಣ್ಣ ಚಿತ್ರದ ಮೂಲಕ. ಹಾಗಂಥ.. ಡಾ.ರಾಜ್ ಕಾಲ್ ಶೀಟ್ ದ್ವಾರಕೀಶ್ ಅವರಿಗೆ ಸುಲಭಕ್ಕೆ ಸಿಗಲಿಲ್ಲ. ಆ ಕಾಲಕ್ಕೆ.. ಡಾ.ರಾಜ್ ಕುಮಾರ್ ಕಾಲ್ ಶೀಟ್ ಪಡೆಯಲು, ದ್ವಾರಕೀಶ್ ಹರಸಾಹಸವನ್ನೇ ಮಾಡಿದ್ದರು. ಅದಾಗಲೇ ಡಾ.ರಾಜ್ ಕುಮಾರ್ ಅವರ ಜೊತೆ ತೆರೆ ಹಂಚಿಕೊಂಡಿದ್ದ ದ್ವಾರಕೀಶ್, ಡಾ.ರಾಜ್ ಕುಮಾರ್ ಎಲ್ಲಿಯೇ ಹೋದರು ಅವರ ಹಿಂದೆಯೇ ಹೋಗಲು ಶುರು ಮಾಡಿದರು. ಅವರು ಕುಂತರೂ.. ನಿಂತರೂ.. ನನ್ನ ನಿರ್ಮಾಣದ ಚಿತ್ರಕ್ಕೆ ನೀವೇ ಹೀರೋ, ಕಾಲ್ ಶೀಟ್ ಕೊಡಿ ಎಂದು ದುಂಬಾಲು ಬಿದ್ದರು. ಕೇವಲ ಅಣ್ಣಾವ್ರನ್ನಷ್ಟೇ ಅಲ್ಲ ಡಾ.ರಾಜ್ ನೆರಳಾಗಿದ್ದ ವರದಪ್ಪನವರನ್ನೂ ದ್ವಾರಕೀಶ್ ಬೆನ್ನು ಹತ್ತಿದ್ದರು.

ಇದೇ ಸಮಯದಲ್ಲಿ ಕನ್ನಡದ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾದ ಸಿದ್ದಲಿಂಗಯ್ಯ, ಆ ಕಾಲದ ಖ್ಯಾತ ನಿರ್ಮಾಪಕ ವಿಠ್ಠಲಾಚಾರ್ಯ ಅವರ ಕಂಪನಿಯಲ್ಲಿ ಅಸೊಸಿಯೇಟ್ ಡೈರೆಕ್ಟರ್ ಆಗಿ ಕೆಲಸವನ್ನ ಮಾಡುತ್ತಿದ್ದರು. ಡಾ.ರಾಜ್ ಅವರ ಅನೇಕ ಚಿತ್ರಗಳನ್ನ ಇವರು ನಿರ್ಮಾಣವನ್ನೂ ಮಾಡುತ್ತಿದ್ದರು. ಈ ಕಾರಣಕ್ಕೆ.. ಸಿದ್ಧಲಿಂಗಯ್ಯ ಹಾಗೂ ವರದಪ್ಪ ಅವರ ನಡುವೆ ಸ್ನೇಹವೆಂಬ ಮಧುರ ಭಾಂದವ್ಯ ಚಿಗುರೊಡೆದಿತ್ತು.
ಇದನ್ನೇ ಎನ್ ಕ್ಯಾಶ್.. ಮಾಡಿಕೊಳ್ಳುವ ಆಲೋಚನೆಯನ್ನ ಮಾಡಿದ ದ್ವಾರಕೀಶ್, ಲಗ್ನ ಪತ್ರಿಕೆ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದ್ದ ಸಮಯದಲ್ಲಿ ಸಿದ್ದಲಿಂಗಯ್ಯ ಅವರನ್ನ ಭೇಟಿಯಾದರು. ಸಿದ್ದಲಿಂಗಣ್ಣ ನೀನೆ ನನ್ನ ಮುಂದಿನ ಚಿತ್ರದ ನಿರ್ದೇಶಕ ಎಂದು ಕೂಡಲೇ ಒಂದು ರೂಪಾಯಿಯ ಅಡ್ವಾನ್ಸ್‌ನ್ನೂ ಸಿದ್ದಲಿಂಗಯ್ಯಗೆ ಕೊಟ್ಟಿದ್ದರು ದ್ವಾರಕೀಶ್.
ಆ ನಂತರ ಸೀದಾ ವರದಪ್ಪನವರ ಬಳಿ ತೆರಳಿದ ದ್ವಾರಕೀಶ್, ಸಿದ್ದಲಿಂಗಯ್ಯ ಕೈಯಲ್ಲಿ ಸಿನಿಮಾ ಮಾಡಿಸ್ತಿದ್ದೇನೆ ಎಂದು ಹೇಳಿದರು. ರಾಜ್ ಕುಮಾರ್ ಅವರ ಡೇಟ್ ಕೊಡಿಸಿ ಎಂದು ಕೇಳಿದರು. ಸಿದ್ದಲಿಂಗಯ್ಯ ಅವರ ಹೆಸರನ್ನ ಕೇಳಿ ವರದಪ್ಪ ಅವರು ಮರು ಮಾತನಾಡದೇ ಸಮ್ಮತಿಯನ್ನ ಸೂಚಿಸಿದರು. ಆ ಶ್ರೀರಾಮ ಚಂದ್ರನ ದರ್ಶನಕ್ಕೆ ಶಬರಿ ಕಾದಂತೆ, ಡಾ.ರಾಜ್ ಕುಮಾರ್ ಗಾಗಿ ಒಂದು ವರ್ಷ ಕಾದರು ದ್ವಾರಕೀಶ್.
ಒಂದು ವರ್ಷದ ನಂತರ ಡಾ.ರಾಜ್ ಸಿನಿಮಾ ಮಾಡಲು ಒಪ್ಪಿದರು. ಆದರೆ.. ಕಥೆ..? ಯಾಕೆಂದರೆ.. ಡಾ.ರಾಜ್ ಹಾಗೂ ವರದಪ್ಪ ಇಬ್ಬರ ಹೃದಯವನ್ನ ಕಥೆ ಹೇಳಿ ಗೆಲ್ಲುವುದು ಆ ಕಾಲಕ್ಕೆ ಸುಲಭವಾಗಿರಲಿಲ್ಲ. ಈ ಕಾರಣಕ್ಕೆ ಬಾಸುಮಣಿ ಎಂಬ ಬರಹಗಾರರನ್ನ ಕರೆದುಕೊಂಡು ದ್ವಾರಕೀಶ್ ಬಂದಾಗ, ಕಣ್ಣಿಗೆ ಕಂಡಿದ್ದು ಒಂದು ಕ್ಯಾಲೆಂಡರ್. ಆ ಕ್ಯಾಲೆಂಡರ್ ನಲ್ಲಿ ಹಳ್ಳಿಯ ಯುವಕ ಮೇಯರ್ ಆದ ಫೋಟೋ ಇತ್ತು. ಆ ಭಾವ ಚಿತ್ರವನ್ನೇ ಸ್ಫೂರ್ತಿಯನ್ನಾಗಿ ತೆಗೆದುಕೊಂಡ ದ್ವಾರಕೀಶ್.. ಆ ನಂತರ ನಿರ್ಮಾಣ ಮಾಡಿದ ಸಿನಿಮಾನೇ ಮೇಯರ್ ಮುತ್ತಣ್ಣ

ಇನ್ನೂ ಆ ಕಾಲದಲ್ಲಿ ಡಾ.ರಾಜ್ ಕುಮಾರ್ ಮತ್ತು ಭಾರತಿ ಅವರದ್ದು ಬ್ಲಾಕ್ ಬಸ್ಟರ್ ಜೋಡಿ. ಕರುನಾಡಿನ ಮನೆ-ಮನವನ್ನೂ ಈ ಜೋಡಿ ತಲುಪಿತ್ತು. ಈ ಕಾರಣಕ್ಕೆ.. ಭಾರತಿ ಅವರನ್ನೇ ತಮ್ಮ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿದ ದ್ವಾರಕೀಶ್ ಆ ಕಾಲಕ್ಕೆ ಮೇಯರ್ ಮುತ್ತಣ್ಣ ಚಿತ್ರಕ್ಕೆ ಖರ್ಚು ಮಾಡಿದ್ದು ಒಂದು ಲಕ್ಷದ ಹತ್ತು ಸಾವಿರ ರೂಪಾಯಿಗಳನ್ನಷ್ಟೇ
ಇಂಥ ಮೇಯರ್ ಮುತ್ತಣ್ಣ, ಬಿಡುಗಡೆಗೂ ಮೊದಲೇ ಮಾರಾಟವಾದ ಮೊದಲ ಕನ್ನಡ ಚಿತ್ರ ಅನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. ವಿತರಕ ಮುತ್ತುಕೃಷ್ಣ ಅವರಿಗೆ 50.000 ಲಾಭದ ಜೊತೆ ದ್ವಾರಕೀಶ್ ಮಾರಿದರು. ಬಹುಶಃ ದ್ವಾರಕೀಶ್ ಮೊದಲು ಎಡವಿದ್ದು ಇಲ್ಲಿಯೇ. ಯಾಕೆಂದರೆ.. 50.000 ಲಾಭಕ್ಕಷ್ಟೇ ದ್ವಾರಕೀಶ್ ಆ ಚಿತ್ರವನ್ನ ಮಾರದೇ ಇದ್ದಿದ್ದರೆ, ಹಕ್ಕು ತಮ್ಮ ಬಳಿಯೇ ಇಟ್ಟುಕೊಂಡಿದ್ದರೆ ಕಡಿಮೆ ಅಂದರೂ ಹತ್ತು ಲಕ್ಷ ಹಣ ದ್ವಾರಕೀಶ್ ಕೈಯಲ್ಲಿ ಇರುತ್ತಿತ್ತು. ಯಾಕೆಂದರೆ.. ಮೇಯರ್ ಮುತ್ತಣ್ಣ, ಆ ಕಾಲದ ಬಹುದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾ.
ಮೇಯರ್ ಮುತ್ತಣ್ಣ ಚಿತ್ರಕ್ಕೆ ಕನ್ನಡಿಗರು ಎಷ್ಟರ ಮಟ್ಟಿಗೆ ಮನಸ್ಸು ಸೋತಿದ್ದರು ಅಂದರೆ, ತ್ರಿವೇಣಿ ಚಿತ್ರಮಂದಿರದಲ್ಲಿ ತೆರೆ ಬಂದಾಗ ದ್ವಾರಕೀಶ್ ಅವರನ್ನ ಎತ್ತಿಕೊಂಡು ಮುದ್ದಾಡಿದ್ದರು ಕನ್ನಡಿಗರು.


Click it and Unblock the Notifications











