'ಗಾಳಿಪಟ' ಚಿತ್ರಕ್ಕೆ ಅಪ್ಪುಗೆ ಸಂಭಾವನೆ ಆಫರ್ ಮಾಡಿದ್ದೆಷ್ಟು? ಗಣೇಶ್ ಪಡೆದಿದ್ದೆಷ್ಟು?
ಯೋಗರಾಜ್ ಭಟ್ ನಿರ್ದೇಶನದಲ್ಲಿ ಗಣೇಶ್ ನಟಿಸಿದ್ದ 'ಗಾಳಿಪಟ' ಸಿನಿಮಾ ಸೂಪರ್ ಹಿಟ್ ಆಗಿತ್ತು. 'ಮುಂಗಾರುಮಳೆ' ಬ್ಲಾಕ್‌ಬಸ್ಟರ್ ಹಿಟ್ ಬಳಿಕ ಭಟ್ರು-ಗಣಿ ಕಾಂಬಿನೇಷನ್‌ನಲ್ಲಿ ಬಂದಿದ್ದ ಸಿನಿಮಾ ಜನಮನ ಗೆದ್ದಿತ್ತು. ಈ ಸಿನಿಮಾ ಮೇಕಿಂಗ್ ಹಿಂದೆ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳಿವೆ.
ಪುನೀತ್ ರಾಜ್‌ಕುಮಾರ್ ಅವರಿಗೆ 'ಗಾಳಿಪಟ' ಕಥೆ ಹೇಳಲಾಗಿತ್ತು. ಕಥೆ ಕೇಳಿ ಇಷ್ಟಪಟ್ಟಿದ್ದರು. ಆದರೆ ಕಾರಣಾಂತರಗಳಿಂದ ಅದು ಗಣೇಶ್ ಪಾಲಾಗಿತ್ತು. 'ಮುಂಗಾರುಮಳೆ' ನಂತರ ಯೋಗರಾಜ್ ಭಟ್ ಹಾಗೂ ಗಣೇಶ್ ನಡುವೆ ಬಿರುಕು ಮೂಡಿತ್ತು. ಆದರೂ ಮನಸ್ಥಾಪ ಬದಿಗಿಟ್ಟು ಇಬ್ಬರೂ ಸಿನಿಮಾ ಮಾಡಿ ಗೆದ್ದಿದ್ದರು. ಚಿತ್ರಕ್ಕಾಗಿ ಇಬ್ಬರಿಗೂ ಭರ್ಜರಿ ಸಂಭಾವನೆ ಸಿಕ್ಕಿತ್ತು. ಅಷ್ಟಕ್ಕೂ ಈ ಸಿನಿಮಾ ಶುರುವಾಗಿದ್ದು ಹೇಗೆ? ಅಪ್ಪು ಬದಲು ಗಣೇಶ್ ಹೀರೊ ಆಗಿ ಆಯ್ಕೆ ಆಗಿದ್ದು ಹೇಗೆ ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದ ದಯಾಳ್ ಪದ್ಮನಾಭನ್ ನೆನಪಿಸಿಕೊಂಡಿದ್ದಾರೆ.

ಭಟ್ರು- ಗಣೇಶ್ ಕಾಂಬಿನೇಷನ್‌ನಲ್ಲಿ 'ಗಾಳಿಪಟ' ಸಿನಿಮಾ ಶುರುವಾಗಲು ಸೂತ್ರಧಾರನೇ ನಿರ್ದೇಶಕ ದಯಾಳ್ ಪದ್ಮನಾಭನ್. ತೆಲುಗು ನಿರ್ಮಾಪಕ ಸೂರ್ಯಪ್ರಕಾಶ್ ರಾವ್ ಎಂಬುವವರನ್ನು ಕನ್ನಡಕ್ಕೆ ಕರೆತಂದು ಆ ಸಿನಿಮಾ ನಿರ್ಮಾಣ ಆಗುವಂತೆ ಮಾಡಿದ್ದರು. ಅವತ್ತಿನ ಕಾಲಕ್ಕೆ ಭಾರೀ ಸಂಭಾವನೆಯನ್ನು ಎಲ್ಲರಿಗೂ ಕೊಟ್ಟು ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗಿತ್ತು. 'ಗಾಳಿಪಟ' ಜೋರಾಗಿಯೇ ಹಾರಿತ್ತು. ಭಟ್ರ ನಿರ್ದೇಶನ ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿತ್ತು. ಗಣಿ ಜೊತೆ ದಿಗಂತ್, ರಾಜೇಶ್ ಕೃಷ್ಣನ್ ನಟಿಸಿದ್ದರಯ. ಡೈಲಿ ಮಾಧ್ಯಮ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಆ ಸಿನಿಮಾ ಶುರುವಾದ ಬಗೆಯನ್ನು ದಯಾಳ್ ವಿವರಿಸಿದ್ದಾರೆ.
ದಯಾಳ್ ಮೂಲಕ 'ಮುಂಗಾರುಮಳೆ' ರೀಮೆಕ್ ರೈಟ್ಸ್ ಖರೀದಿಸಿದ್ದ ಸೂರ್ಯಪ್ರಕಾಶ್ ರಾವ್ ಭರ್ಜರಿ ಬೆಲೆಗೆ ಮಾರಾಟ ಮಾಡಿದ್ದರು. ಆ ಸಿನಿಮಾ ಹಿಟ್ ಆದ ಬಳಿಕ ಅದೇ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡಲು ನಿರ್ಮಾಪಕರು ಬಯಸಿದ್ದರು. ಆಗ ದಯಾಳ್ ಅಖಾಡಕ್ಕೆ ಇಳಿದಿದ್ದರು. "ಯೋಗರಾಜ್ ಭಟ್ ಅವರನ್ನು ಕೇಳಿದರೆ ನಾನು ಸದ್ಯಕ್ಕೆ ಕನ್ನಡದಲ್ಲಿ ಸಿನಿಮಾ ಮಾಡಲ್ಲ, ತೆಲುಗು, ಹಿಂದಿ ಆಫರ್ ಇದೆ ಎನ್ನುತ್ತಿದ್ದರು. ಅವರ ಕ್ರೇಜ್ ಆ ರೀತಿ ಇತ್ತು. ಒಮ್ಮೆ ಇದ್ದಕ್ಕಿದಂತೆ ಸರ್, ನೀವು ತೆಲುಗಿಗೆ ಹೋದರೆ ಎಷ್ಟು ಸಂಭಾವನೆ ಕೊಡ್ತಾರೆ? ಎಂದೆ. ಒಂದು ಕೋಟಿ ಕೊಡ್ತಾರೆ ಕಣ್ರೀ ಅಂದ್ರು. ಅವತ್ತಿ ಕಾಲಕ್ಕೆ ಅದು ದೊಡ್ಡ ಮೊತ್ತ. ಕೂಡಲೇ ನಾನು ಸರ್, 1 ಕೋಟಿ 40 ಲಕ್ಷ ರೂ. ಕೊಡಿಸ್ತೀನಿ, ಇನ್ನೊಂದು ಸಿನಿಮಾ ಮಾಡಿ ಎಂದೆ" ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಮುಂದೆ 'ಗಾಳಿಪಟ' ಕಥೆ ಯಾಕೆ ಮೊದಲು ಪುನೀತ್ ಬಳಿ ಹೋಯಿತು ಎನ್ನುವುದನ್ನು ದಯಾಳ್ ಹೇಳಿದ್ದಾರೆ. "ಅದಾಗಲೇ ಯೋಗರಾಜ್ ಭಟ್ ಅವ್ರು ಅಪ್ಪು ಜೊತೆ ಒಂದು ಸಿನಿಮಾ ಮಾಡಬೇಕು ಆಹ್ವಾನ ಬಂದಿತ್ತು. ಹಾಗಾಗಿ ಅವರೊಟ್ಟಿಗೆ ಸಿನಿಮಾ ಮಾಡೋಣ ಎಂದು ಅವರ ಮನೆಗೆ ಹೋಗಿ 'ಗಾಳಿಪಟ' ಕಥೆ ಹೇಳಿದ್ದೆವು. ಪಾರ್ವತಮ್ಮ, ರಾಘಣ್ಣ, ಅಪ್ಪು ಎಲ್ಲರೂ ಒಪ್ಪಿದ್ದರು. ಬಳಿಕ ಎರಡ್ಮೂರು ದಿನ ಕಳೆದರೂ ಪ್ರತಿಕ್ರಿಯೆ ಬರಲಿಲ್ಲ. ಅಂತ ಸಮಯದಲ್ಲೇ ನಾನು ಒಂದು ಎಡವಟ್ಟು ಮಾಡಿದ್ದೆ" ಎಂದು ದಯಾಳ್ ಮೆಲುಕು ಹಾಕಿದ್ದಾರೆ.
"ಆಗ ಅಪ್ಪು ಅವರಿಗೆ ಎನ್.ಎಸ್ ರಾಜ್‌ಕುಮಾರ್ ಮ್ಯಾನೇಜರ್ ಆಗಿದ್ದರು. ಸದ್ಯ ಪುನೀತ್ ಸರ್ ಈಗ 'ಬಿಂದಾಸ್' ಸಿನಿಮಾ ಮಾಡ್ತಿದ್ದಾರೆ, ಆಮೇಲೆ 'ಗಾಳಿಪಟ' ಚಿತ್ರಕ್ಕೆ ಡೇಟ್ಸ್ ಎಂದ್ರು. ನಾವು ಒಪ್ಪಲಿಲ್ಲ. ಬಳಿಕ ಒಮ್ಮೆ ನಾನು ಎನ್. ಎಸ್ ರಾಜ್‌ಕುಮಾರ್ ಅವರಿಗೆ ಒಂದು ಮೆಸೇಜ್ ಹಾಕಿ 60 ಲಕ್ಷ ರೂ. ಸಿಂಗಲ್ ಪೇಮೆಂಟ್ ಮಾಡ್ತೀನಿ" ಎಂದೆ. ಆಗ ಅಪ್ಪು ಸರ್ ಸಂಭಾವನೆ 25-30 ಲಕ್ಷ ರೂ. ಇತ್ತು. ನಂತರ ಕರೆದು ಎಷ್ಟು ಧೈರ್ಯ ಇದ್ದರೆ ಅಪ್ಪು ಸರ್‌ಗೆ ಆ ರೀತಿ ಹೇಳ್ತೀರಾ ಅಂತ ಮ್ಯಾನೇಜರ್ ಕೇಳಿದ್ರು. ಕೊನೆಗೆ ಈಗ ಆಗಲ್ಲ, ಕಾಯುವಂತಿದ್ದರೆ ಕಾಯಿರಿ, ಇಲ್ಲದಿದ್ದರೆ ಬೇಡ ಎಂದ್ರು. ಸರಿ ಅಂತ ನಾನು ಗಣೇಶ್ ಜೊತೆ ಮಾಡೋಣ ಎಂದುಕೊಂಡೆ" ಎಂದು ದಯಾಳ್ ವಿವರಿಸಿದ್ದಾರೆ.
ಗಣೇಶ್ ಹಾಗೂ ಯೋಗರಾಜ್ ಭಟ್ ನಡುವೆ ಮನಸ್ತಾಪ ಇತ್ತು. ನಾನೇ ಭಟ್ರ ಬಳಿ ಸರ್, ಸುಮ್ನೆ ಮುನಿಸು ಯಾಕೆ? ಇಬ್ಬರೂ ಸೇರಿ ಒಳ್ಳೆ ದುಡ್ಡು ಮಾಡಿಕೊಳ್ಳಬಹುದು. ಒಟ್ಟಿಗೆ ಸಿನಿಮಾ ಮಾಡಿ ಎಂದೆ. ಏಟ್ರಿಯಾ ಹೋಟೆಲ್‌ಗೆ ಇಬ್ಬರನ್ನು ಕರೆದು ರಾಜಿ ಮಾಡಿಸಿದೆ. ಆಗ 'ಗಾಳಿಪಟ' ಚಿತ್ರಕ್ಕೆ ಗಣೇಶ್‌ಗೆ 72 ಲಕ್ಷ ರೂ. ಸಂಭಾವನೆ ಕೊಟ್ಟಿದ್ದೆವು. ಆಗಿನ್ನು ಗಣೇಶ್ 10ರಿಂದ 12 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದರು. ಅಪ್ಪುಗೆ ಹೇಳಿದ್ದಕ್ಕಿಂತ 12 ಲಕ್ಷ ರೂ. ಹೆಚ್ಚು ಕೊಟ್ಟಿದ್ದೆವು" ಎಂದು ದಯಾಳ್ ತಿಳಿಸಿದ್ದಾರೆ.


Click it and Unblock the Notifications











