ಬಪ್ಪಿ ಲಹರಿ ಧರಿಸುತ್ತಿದ್ದ ಬಂಗಾರದ ಬೆಲೆ ಎಷ್ಟು ಗೊತ್ತೆ?
ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಬಪ್ಪಿ ಲಹರಿ ಇಂದು ನಿಧನ ಹೊಂದಿದ್ದಾರೆ. ತಮ್ಮ ಅನನ್ಯ ಸಂಗೀತದಿಂದ ರಾಷ್ಟ್ರದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಬಪ್ಪಿ ಲಹರಿ ಹೊಂದಿದ್ದರು.
ಭಾರತೀಯ ಸಿನಿಮಾಕ್ಕೆ ಡಿಸ್ಕೊ ಮಾದರಿ ಹಾಡುಗಳನ್ನು ಮೊದಲು ಪರಿಚಯಿಸಿದ ಬಪ್ಪಿ ಲಹರಿ ತಮ್ಮ ಹಾಡುಗಳಿಂದ ಮಾತ್ರವೇ ಅಲ್ಲ ಅವರು ಧರಿಸುತ್ತಿದ್ದ ಚಿನ್ನದಿಂದಲೂ ಗಮನ ಸೆಳೆದಿದ್ದರು.
ದಡೂತಿ ದೇಹದ, ಸದಾ ಕನ್ನಡಕ ಹಾಕುತ್ತಿದ್ದ, ಬಣ್ಣ-ಬಣ್ಣದ ಹೊಳೆವಂತಹಾ ಅಂಗಿಗಳನ್ನು ತೊಡುತ್ತಿದ್ದ ಬಪ್ಪಿ ಲಹರಿ ಕೊರಳು, ಕೈ ತುಂಬ ಚಿನ್ನದ ಆಭರಣಗಳು ಸದಾ ಇರುತ್ತಿದ್ದವು. ಕೆಲವು ದಶಗಳಿಂದ ಚಿನ್ನದ ಆಭರಣವಿಲ್ಲದ ಬಪ್ಪಿ ಲಹರಿಯನ್ನು ಯಾರೂ ನೋಡಿದಂತಿಲ್ಲ. ಬಪ್ಪಿ ಲಹರಿಗೆ ಚಿನ್ನದ ಮೇಲೆ ಏಕಷ್ಟು ಪ್ರೀತಿ? ಎಷ್ಟು ಗ್ರಾಂ ಚಿನ್ನವನ್ನು ಅವರು ಧರಿಸುತ್ತಿದ್ದರು? ಅವರ ಮರಣಾನಂತರ ಆ ಚಿನ್ನ ಯಾರಿಗೆ ಸೇರಲಿದೆ? ಎಲ್ಲದಕ್ಕೂ ಉತ್ತರ ಮುಂದಿದೆ.

ತಾಯಿ ಮತ್ತು ಪತ್ನಿಯಿಂದ ಚಿನ್ನದ ಮೇಲೆ ಪ್ರೀತಿ
ಬಪ್ಪಿ ಸಂದರ್ಶನವೊಂದರಲ್ಲಿ ಹೇಳಿದ್ದಂತೆ ಅವರಿಗೆ ಚಿನ್ನದ ಮೇಲಿನ ಪ್ರೀತಿ ಪ್ರಾರಂಭವಾಗಿದ್ದು 1975ರ ಸುಮಾರಿಗೆ. 'ಝಕ್ಮಿ' ಸಿನಿಮಾಕ್ಕಾಗಿ ಹಾಡೊಂದನ್ನು ರೆಕಾರ್ಡ್ ಮಾಡಿದಾಗ ಬಪ್ಪಿಗೆ ಅವರ ತಾಯಿ ಚಿನ್ನದ ಸರವೊಂದನ್ನು ಉಡುಗೊರೆಯಾಗಿ ನೀಡಿದ್ದರಂತೆ ಆ ಚೈನ್‌ನಲ್ಲಿ ದೇವರ ಹೆಸರು ಕೆತ್ತಲಾಗಿತ್ತಂತೆ. ಬಳಿಕ ಬಪ್ಪಿ ಮದುವೆಯಾದಾಗ ಪತ್ನಿ ಸಹ ಚಿನ್ನದ ಸರ ನೀಡಿದರಂತೆ. ಚಿನ್ನದಿಂದ ಒಳ್ಳೆಯದಾಗುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಹಾಗೆ ಬಪ್ಪಿಗೆ ಸಹ ಚಿನ್ನದಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಬಲವಾಗುತ್ತಾ ಸಾಗಿದಂತೆ ಅವರ ಮೈಮೇಲಿನ ಚಿನ್ನದ ಆಭರಣಗಳ ಸಂಖ್ಯೆಯೂ ಹೆಚ್ಚಾಗುತ್ತಾ ಸಾಗಿತಂತೆ.

''ಗಣೇಶನ ಮೂರ್ತಿ ಇರುವ ಸರವನ್ನು ತೆಗೆಯುವುದಿಲ್ಲ''
''ನಾನು ಹಲವು ಚಿನ್ನದ ಆಭರಣಗಳನ್ನು ಧರಿಸುತ್ತೇನೆ ಆದರೆ ಗಣೇಶನ ಮೂರ್ತಿ ಹೊಂದಿದ ಚಿನ್ನದ ಸರವನ್ನು ಎಂದಿಗೂ ನಾನು ತೆಗೆಯುವುದಿಲ್ಲ. ಅದು ನನ್ನನ್ನು ಕಾಪಾಡುತ್ತದೆ ಎಂಬ ನಂಬಿಕೆ ನನ್ನದು. ಚಿನ್ನದ ಆಭರಣಗಳನ್ನು ಧರಿಸಲು ಪ್ರಾರಂಭಿಸಿದ ಬಳಿಕ ನನಗೆ ಅದೃಷ್ಟ ಖುಲಾಯಿಸಿದೆ ಎಂಬುದು ನನ್ನ ನಂಬಿಕೆ. ಈಗಂತೂ ನನ್ನನ್ನು ನನ್ನ ಆಭರಣಗಳಿಂದಲೇ ಗುರುತಿಸುತ್ತಾರೆ. ನನ್ನ ಚಿನ್ನದ ಪ್ರೀತಿಯ ಬಗ್ಗೆ ಆಡಿಕೊಳ್ಳುವವರೂ ಇದ್ದಾರೆಂದು ನನಗೆ ಗೊತ್ತು. ಆದರೆ ನನಗೆ ಚಿನ್ನದ ಮೇಲಿನ ಪ್ರೀತಿ ಕಡಿಮೆ ಆಗುವುದಿಲ್ಲ. ನನ್ನ ಸಂಗೀತ, ಹಾಡುಗಳಂತೆ ಅದೂ ಸಹ ನನ್ನ ಗುರುತಾಗಿಬಿಟ್ಟಿದೆ'' ಎಂದಿದ್ದರು ಬಪ್ಪಿ ದಾ ಅಲಿಯಾಸ್ ಬಪ್ಪಿ ಲಹರಿ.

2014 ರಲ್ಲಿ 750 ಗ್ರಾಂ ಚಿನ್ನವಿತ್ತು ಬಪ್ಪಿ ದಾ ಬಳಿ
ಬಪ್ಪಿ ಲಹರಿ 2014ರಲ್ಲಿ ಪಶ್ಚಿಮ ಬಂಗಾಳ ರಾಜ್ಯದ ಶ್ರೀರಾಮ್‌ಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಅವರು ಸೋತರು ಸಹ. ಆದರೆ ನಾಮಪತ್ರ ಸಲ್ಲಿಸುವಾಗ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ತಮ್ಮ ಬಳಿ 750 ಗ್ರಾಂ ಚಿನ್ನ ಇರುವುದಾಗಿ ಹೇಳಿದ್ದರು. 8 ವರ್ಷಗಳ ಹಿಂದೆಯೇ ಬಪ್ಪಿ ಲಹರಿ ಬಳಿ 750 ಗ್ರಾಂ ಚಿನ್ನವಿತ್ತು. ಹಿಂದಿಯ ಕೆಲವು ಮಾಧ್ಯಮಗಳು ವರದಿ ಮಾಡಿರುವಂತೆ ಅವರ ಬಳಿ ಒಂದು ಕೆಜಿಗೂ ಹೆಚ್ಚು ತೂಕದ ಚಿನ್ನದ ಆಭರಣಗಳ ಸಂಗ್ರಹವಿತ್ತಂತೆ. ಒಂದು ಕೆಜಿ ಚಿನ್ನದ ಆಭರಣದ ಈಗಿನ ಮೌಲ್ಯ 50 ಲಕ್ಷಕ್ಕೂ ಹೆಚ್ಚಾಗುತ್ತದೆ.

ಬಪ್ಪಿ ಲಹರಿ ಮೊಮ್ಮಗನಿಗೆ ಎಲ್ಲ ಚಿನ್ನ?
ಬಪ್ಪಿ ಲಹರಿಗೆ ಪತ್ನಿ, ಇಬ್ಬರು ಮಕ್ಕಳು ಹಾಗೂ ಮೊಮ್ಮಗ ಇದ್ದಾನೆ. 1977 ರ ಸಮಯದಲ್ಲಿ ಬಪ್ಪಿ ಲಹರಿ, ಚಿತ್ರಾಣಿ ಲಹರಿಯವರನ್ನು ವಿವಾಹವಾದರು. ಅವರಿಗೆ ರೀಮಾ ಲಹರಿ ಹಾಗೂ ಬಪ್ಪ ಲಹರಿ ಎಂಬ ಇಬ್ಬರು ಮಕ್ಕಳಿದ್ದಾರೆ. ಬಪ್ಪಿ ಲಹರಿಗೆ ಕ್ರಿಶ್ ಲಹರಿ ಹೆಸರಿನ ಮೊಮ್ಮಗ ಸಹ ಇದ್ದು ಕ್ರಿಶ್ ಸಹ ಹಾಡುಗಾರರಾಗಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ರಿಯಾಲಿಟಿ ಶೋ ಒಂದರಲ್ಲಿ ಹಾಡು ಹಾಡಿದ್ದರು ಕ್ರಿಶ್. ಬಪ್ಪಿ ಲಹರಿಯ ಚಿನ್ನದ ಖಜಾನೆ ಮೊಮ್ಮಗನಿಗೆ ಸೇರಲಿದೆ.


Click it and Unblock the Notifications











