Yash First Salary : ಯಶ್‌ಗೆ ಸಿಕ್ಕ ಮೊದಲ ಸಂಬಳವೆಷ್ಟು? ಆ ಹಣದಲ್ಲಿ ಈಗ ಅರ್ಧ ಲೀಟರ್ ಪೆಟ್ರೋಲ್ ಬರೊಲ್ಲ!
ನಟ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್, 'ಕೆಜಿಎಫ್ 2' ಬಿಡುಗಡೆ ಬಳಿಕ ಪ್ಯಾನ್ ವರ್ಲ್ಡ್ ಸ್ಟಾರ್ ಆಗುವ ಸಾಧ್ಯತೆಯೂ ಇದೆ. ಆದರೆ ಚಿತ್ರಜಗತ್ತಿನ ಪಯಣದ ಆರಂಭ ಯಶ್‌ರಿಗೆ ಸುಲಭವಾಗಿಯೇನೂ ಇರಲಿಲ್ಲ.
ಆರಂಭದಲ್ಲಿ ಯಶ್ ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ, ನಂತರ ಸಿನಿಮಾಗಳಲ್ಲಿ ನಟಿಸಿ ಇಂದಿನ ಈ ಹಂತಕ್ಕೆ ಏರಿದವರು. ಸಾಮಾನ್ಯ ಬಡ ಮಧ್ಯಮ ವರ್ಗದ ಕುಟುಂಬದಿಂದ ಬಂದ ಯಶ್ ಇಂದು ಏರಿರುವ ಎತ್ತರ ಸಾಮಾನ್ಯವಾದುದಲ್ಲ.
ಯಶ್ ಅವರ ತಂದೆ ಬಿಎಂಟಿಸಿ ಡ್ರೈವರ್ ಆಗಿದ್ದರು ಎಂಬ ವಿಷಯ ಬಹುತೇಕರಿಗೆ ಗೊತ್ತಿರುವುದೇ. ಯಶ್ ನಟಿಸಿದ ಧಾರಾವಾಹಿಗಳು, ಆರಂಭದ ಸಿನಿಮಾಗಳ ವಿಷಯವೂ ಅಭಿಮಾನಿಗಳಿಗೆ ಗೊತ್ತಿಲ್ಲದೇ ಏನಿಲ್ಲ. ಆದರೆ ಯಶ್ ನಟನಾಗುವ ಹುಮ್ಮಸ್ಸಿನಿಂದ ಬೆಂಗಳೂರಿಗೆ ಬಂದಾಗ ಅವರು ಎದುರಿಸಿದ ಸಮಸ್ಯೆಗಳು, ಅವರ ಮನೋಭಾವ, ಅವರಿಗೆ ಸಿಕ್ಕ ಸಂಬಳ ಎಷ್ಟು ಗೊತ್ತೆ? ಇಲ್ಲಿದೆ ಮಾಹಿತಿ...

ನಟನಾಗಬೇಕು ಎಂಬುದೊಂದೇ ಗುರಿ
ಬಹಳ ಸಣ್ಣ ವಯಸ್ಸಿನಲ್ಲಿದ್ದಾಗಲೇ ಯಶ್ ತಾವು ನಟನೇ ಆಗಬೇಕೆಂದು ನಿಶ್ಚಯಿಸಿಬಿಟ್ಟಿದ್ದರಂತೆ. ಜೀವನದ ಯಾವ ಹಂತದಲ್ಲೂ ಅವರು ನಟನಾಗುವ ಅಥವಾ ಸ್ಟಾರ್ ಆಗುವುದನ್ನು ಬಿಟ್ಟು ಬೇರೆಯದರ ಬಗ್ಗೆ ಯೋಚನೆ ಸಹ ಮಾಡಲಿಲ್ಲ. ಆದರೆ ನಟನಾಗುವುದು ಎಷ್ಟು ಕಷ್ಟವಿದೆ ಎಂಬುದು ಯಶ್‌ಗೆ ಗೊತ್ತಾಗಿದ್ದು ಅವರು ಬೆಂಗಳೂರಿಗೆ ಬಂದ ನಂತರವೇ. ಈ ಬಗ್ಗೆ 'ಕೆಜಿಎಫ್ 2' ಸಿನಿಮಾದ ಪ್ರಚಾರದ ಸಮಯದಲ್ಲಿ ಸಂದರ್ಶನವೊಂದರಲ್ಲಿ ಯಶ್ ಮಾತನಾಡಿದ್ದಾರೆ.

ರಂಗಭೂಮಿಯಲ್ಲಿ ಯಶ್‌ಗೆ ಸಿಗುತ್ತಿದ್ದ ಹಣವೆಷ್ಟು?
''ಮನೆಯವರು ಹೆದರಿಕೊಂಡೆ ನನ್ನನ್ನು ಬೆಂಗಳೂರಿಗೆ ಕಳಿಸಿದರು. ಸಣ್ಣ ಟೌನ್ ನಿಂದ ಬಂದಿದ್ದ ನನಗೆ ಬೆಂಗಳೂರು ನೋಡಿ ಗಾಬರಿ ಆಗಿಬಿಟ್ಟಿತ್ತು. ಏನಪ್ಪ ಇದು ಇಷ್ಟು ದೊಡ್ಡದಾಗಿದೆ. ಜನರೆಲ್ಲ ಎಷ್ಟು ಬ್ಯುಸಿ ಇದ್ದಾರೆ. ಎಷ್ಟು ವೇಗವಾಗಿ ಓಡುತ್ತಿದ್ದಾರೆ ಎನಿಸಿತು. ಆದರೆ ನನಗೆ ಜೀವನದ ಎಲ್ಲ ಹಂತಗಳಲ್ಲೂ ಒಬ್ಬರಲ್ಲ ಒಬ್ಬರ ನೆರವು ಸಿಕ್ಕಿದೆ. ಹಾಗೆಯೇ ಬೆಂಗಳೂರಿಗೆ ಬಂದಾಗ ಬೇಗನೆ ನಾನು 'ಬೆನಕ' ನಾಟಕ ತಂಡ ಸೇರಿಕೊಂಡೆ. ಅಲ್ಲಿ ತೆರೆಯ ಹಿಂದೆ ಕೆಲಸ ಮಾಡಲು ಆರಂಭಿಸಿದೆ. ಆಗ ನನಗೆ 50 ರುಪಾಯಿಗಳನ್ನಷ್ಟೆ ನೀಡುತ್ತಿದ್ದರು'' ಎಂದು ನೆನಪು ಮಾಡಿಕೊಂಡಿದ್ದಾರೆ ಯಶ್.

ಬೆಂಗಳೂರಿಗೆ ಬಂದಾಗ ಇದ್ದಿದ್ದು 300 ರುಪಾಯಿ
''ಯಾವುದೇ ಕಾಸ್ಮೊಪಾಲಿಟಿನ್ ಸಿಟಿಯಲ್ಲಿ ಜೀವನ ಕಳೆಯುವುದು ಸುಲಭವಾಗಿರಲಿಲ್ಲ. ಬೆಂಗಳೂರಿನಲ್ಲೂ ಅಷ್ಟೆ. ಬೆಂಗಳೂರಿಗೆ ಬಂದಾಗ ನನ್ನ ಬಳಿ 300 ರುಪಾಯಿಗಳಿದ್ದವು. ನನಗೆ ಆಗಾಗಿ ರಂಗಭೂಮಿಯಿಂದ 50 ರುಪಾಯಿ ಹಣ ಸಿಗುತ್ತಿದ್ದು, ಇರಲು ಸೂಕ್ತವಾದ ಜಾಗವಿರಲಿಲ್ಲ. ಆದರೆ ಹೇಗೋ ನಾನು ನಿಭಾಯಿಸುತ್ತಿದ್ದೆ. ನಾನು ಮೊದಲಿಗೆ ವೇದಿಕೆ ಏರಿದ್ದು ಮುಂಬೈನಲ್ಲಿಯೇ. ಬೆನಕ ತಂಡದೊಂದಿಗೆ ಮುಂಬೈನ ಕನ್ನಡ ಸಂಘ ಆಯೋಜಿಸಿದ್ದ ನಾಟಕಕ್ಕೆ ಬಂದಿದ್ದೆ. ನಮ್ಮ ನಿರ್ದೇಶಕ ನಾಗಾಭರಣ ಅವರು ಯಾವುದೋ ಒಂದು ಪಾತ್ರ ಮಾಡಬೇಕಾಗಿದ್ದವರು ಬಂದಿರಲಿಲ್ಲ, ಆ ಪಾತ್ರ ಮಾಡುವಂತೆ ಕೇಳಿದರು ನಾನು ಮಾಡುತ್ತೇನೆ ಎಂದು. ಮೊದಲು ಅವರು ತಡೆದರಾದರೂ ನಂತರ ನಾನು ಅವರನ್ನು ಒಪ್ಪಿಸಿದೆ'' ಎಂದು ಹಳೆಯ ನೆನಪುಗಳಿಗೆ ಜಾರಿದರು ಯಶ್.

ಧಾರಾವಾಹಿಯಲ್ಲಿ ಪಡೆದ ಸಂಭಾವನೆ ಎಷ್ಟು?
''ನಾಟಕಗಳಲ್ಲಿ ನನ್ನ ನಟನೆ ನೋಡಿದ ಯಾರೋ ಧಾರಾವಾಹಿಗೆ ಕರೆದರು. ಮೊದಲು ನಾನು ಧಾರಾವಾಹಿ ಮಾಡುವುದಿಲ್ಲ ಎಂದಿದ್ದೆ. ಧಾರಾವಾಹಿಯಲ್ಲಿ ಡ್ಯಾನ್ಸು, ಫೈಟ್ ಇರಲ್ಲ ಎಂಬ ಕಾರಣಕ್ಕೆ ನಾನು ಬೇಡ ಎಂದಿದ್ದೆ. ಆದರೆ ನಾನು ಹಣ ಸಂಪಾದನೆ ಮಾಡಬೇಕಿತ್ತು, ಅದಕ್ಕಾಗಿ ಧಾರಾವಾಹಿಯನ್ನು ಒಪ್ಪಿಕೊಳ್ಳಲೇ ಬೇಕಾಯ್ತು. ಧಾರಾವಾಹಿ ಒಪ್ಪಿಕೊಂಡೆ ಆಗ ನನಗೆ ದಿನಕ್ಕೆ 500 ರುಪಾಯಿ ನೀಡಲು ಆರಂಭಿಸಿದರು. ಹದಿನೈದು ವರ್ಷದ ಹಿಂದೆ ದಿನಕ್ಕೆ 500 ರುಪಾಯಿ ನನ್ನ ಪಾಲಿಗೆ ಒಳ್ಳೆಯ ಮೊತ್ತವೇ ಆಗಿತ್ತು'' ಎಂದು ತಾವು ಪಡೆದ ಸಂಬಳ ನೆನಪು ಮಾಡಿಕೊಂಡಿದ್ದಾರೆ ಯಶ್.


Click it and Unblock the Notifications











