twitter
    For Quick Alerts
    ALLOW NOTIFICATIONS  
    For Daily Alerts

    ರಿಯಾಲಿಟಿ ಶೋಗಳು ವೀಕ್ಷಕರ ಅಭಿರುಚಿ ಕೆಡಿಸುತ್ತಿವೆಯೇ?

    |

    ರಿಯಾಲಿಟಿ ಶೋಗಳು ಇಂದು ಭಾರತೀಯ ಟಿವಿ ಲೋಕದ ಅವಿಭಾಜ್ಯ ಅಂಗವಾಗಿವೆ. ಒಂದಕ್ಕಿಂತಲೂ ಒಂದು ಅದ್ಧೂರಿ, ಭಿನ್ನ ಪರಿಕಲ್ಪನೆಯ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿವೆ. ಒಟಿಟಿಗಳ ಮೂಲಕ ದಿನದ 24 ಗಂಟೆಯೂ ಕೆಲವು ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿವೆ. ರಿಯಾಲಿಟಿ ಶೋಗಳು ಟಿವಿ, ಒಟಿಟಿಗಳ ಪಾಲಿಗೆ ಹಣ ತಂದುಕೊಡುವ ಅಕ್ಷಯ ಪಾತ್ರೆಗಳಾಗಿವೆ.

    ದಶಕಗಳಿಂದಲೂ ಇರುವ ಧಾರಾವಾಹಿಗಳು, ಅದೇ ಅತ್ತೆ-ಸೊಸೆ, ಮಹಿಳೆಯರ ಕಷ್ಟ-ಕಾರ್ಪಣ್ಯದ ವೈಭವೀಕರಣ. ಸವೆದುಹೋದ ಪಾತ್ರಗಳು, ಒಂದೇ ಮಾದರಿ ನಿರೂಪಣೆ, ಕಥಾ ಪ್ರಕಾರಗಳಿಂದಾಗಿ ನಿಂತ ನೀರಾಗಿವೆ. ದಶಕಗಳು ಕಳೆದರು ಧಾರಾವಾಹಿ ಪ್ರಕಾರದಲ್ಲಿ ಬದಲಾವಣೆ ಆಗಿಲ್ಲ. ಆದರೆ ರಿಯಾಲಿಟಿ ಶೋಗಳು ಹಾಗಲ್ಲ, ಸದಾ ಹೊಸ-ಹೊಸ ಪರಿಕಲ್ಪನೆಗಳೊಂದಿಗೆ ಕಾಲಕಾಲಕ್ಕೆ ಸ್ವರೂಪ ಬದಲಿಸಿಕೊಂಡು ಜನರ ಮುಂದೆ ಬರುತ್ತಿವೆ.

    ರಿಯಾಲಿಟಿ ಶೋಗಳಿಗೆ ಬೇಡಿಕೆ ಅದೆಷ್ಟು ಮಟ್ಟಿಗಿದೆಯೆಂದರೆ ಸಿನಿಮಾ ಲೋಕದ ತಾರೆಯರನ್ನೇ ರಿಯಾಲಿಟಿ ಶೋ ನಿರೂಪಿಸಲು ಎಳೆದು ತರಲಾಗುತ್ತಿದೆ. ಟಿವಿ ಚಾನೆಲ್‌ಗಳ ನಡುವೆ ರಿಯಾಲಿಟಿ ಶೋ ವಾರ್‌ಗಳು ಸಹ ನಡೆಯುತ್ತಿದೆ. ಆದರೆ ಸ್ಪರ್ಧೆ ಹೆಚ್ಚಾದಂತೆ ರಿಯಾಲಿಟಿ ಶೋಗಳ ಗುಣಮಟ್ಟ ಕಡಿಮೆ ಆಗುತ್ತಿದೆ. ಕೆಲವು ರಿಯಾಲಿಟಿ ಶೋಗಳಂತೂ ಜನಪ್ರಿಯತೆಗಾಗಿ ಕೀಳು ತಂತ್ರಗಳನ್ನು ಸಹ ಬಳಸುತ್ತಿವೆ. ಆ ಮೂಲಕ ವೀಕ್ಷಕರ ಅಭಿರುಚಿಯನ್ನು ಕೆಡಿಸಿ, 'ಭ್ರಷ್ಟ'ಗೊಳಿಸುತ್ತಿವೆ.

    ಡಬ್ಬಲ್ ಮೀನಿಂಗ್ ಡೈಲಾಗ್‌ಗಳು ಅವೆಷ್ಟೋ!

    ಡಬ್ಬಲ್ ಮೀನಿಂಗ್ ಡೈಲಾಗ್‌ಗಳು ಅವೆಷ್ಟೋ!

    ರಿಯಾಲಿಟಿ ಶೋಗಳು ಟಿಆರ್‌ಪಿಗಾಗಿ ತೀರ ಕೆಳಮಟ್ಟಕ್ಕೆ ಜಾರಿರುವುದಕ್ಕೆ ಕನ್ನಡ ಕಿರುತೆರೆಯಲ್ಲಿಯೇ ಹಲವು ಉದಾರಣೆಗಳು ಸಿಗುತ್ತವೆ. ರಿಯಾಲಿಟಿ ಶೋ ಒಂದರಲ್ಲಿ ಹೆಣ್ಣಿನ ವೇಷ ಧರಿಸಿರುವ ಗಂಡಸೊಬ್ಬ, ಗಣೇಶ್ -ಅಮೂಲ್ಯ ನಟನೆಯ 'ಚೆಲುವಿನ ಚಿತ್ತಾರ' ಸಿನಿಮಾದ ಹಾಡೊಂದನ್ನು ಅಪಭ್ರಂಷಗೊಳಿಸಿ ಹಾಡುತ್ತಾ, 'ನನ್ನಾಟವು ನೀ, ನನ್ ಪಾಠವು ನೀ..'' ಎಂದು ಮುಂದೆ ಅಸಭ್ಯ ಮಾತೊಂದನ್ನು ಹೇಳುವಂತೆಯೇ ಬಂದು 'ನನ್ ಶಾ..ಲೆಯು ನೀ' ಎನ್ನುತ್ತಾನೆ. ಆತ ಏನು ಹೇಳಲು ಉದ್ದೇಶಿಸಿದ್ದ ಎಂಬುದು ಎಲ್ಲರಿಗೂ ಗೊತ್ತಾಗುತ್ತಾದೆ, ಖ್ಯಾತ ನಟಿಯೂ ಸೇರಿದಂತೆ ಶೋನ ಜಡ್ಜ್‌ಗಳು, ನಿರೂಪಕ, ಇತರೆ ಸ್ಪರ್ಧಾರ್ಥಿಗಳೆಲ್ಲರೂ ಬಿದ್ದು-ಬಿದ್ದು ನಗುತ್ತಾರೆ. ಇದು ಒಂದು ಉದಾಹರಣೆ ಮಾತ್ರವೇ ಇಂಥಹಾ ಡಬಲ್‌ ಮೀನಿಂಗ್ ಡೈಲಾಗ್‌ಗಳು ರಿಯಾಲಿಟಿ ಶೋಗಳಲ್ಲಿ ತೀರಾ ಸಾಮಾನ್ಯ. ಅದರಲ್ಲಿ ಮಹಿಳಾ ಸ್ಪರ್ಧಿಗಳಿಂದಲೇ ಡಬಲ್ ಮೀನಿಂಗ್ ಡೈಲಾಗ್ ಹೇಳಿಸುವುದು ಇತ್ತೀಚಿನ ಟ್ರೆಂಡ್. ಮಕ್ಕಳು ಸಹ ಟಿವಿ ನೋಡುತ್ತಾರೆ ಎಂಬುದನ್ನೂ ಮರೆತೇ ಬಿಟ್ಟಿರುತ್ತಾರೆ ಈ ರಿಯಾಲಿಟಿ ಶೋ ಆಯೋಜಕರು.

     ಜಗಳ ನಡೆದಷ್ಟೂ ಚಾನೆಲ್‌ಗಳಿಗೆ ಲಾಭ!

    ಜಗಳ ನಡೆದಷ್ಟೂ ಚಾನೆಲ್‌ಗಳಿಗೆ ಲಾಭ!

    ಡಬಲ್‌ ಮೀನಿಂಗ್ ಕತೆ ಒಂದೆಡೆಯಾದರೆ ರಿಯಾಲಿಟಿ ಶೋಗಳಲ್ಲಿ ಜಗಳಗಳದ್ದು ದೊಡ್ಡ ಅಧ್ಯಾಯವೇ ಇದೆ. ಬಿಗ್‌ಬಾಸ್‌ನಲ್ಲಿ ಜಗಳಗಳು, ಹೊಡೆದಾಟಗಳು ತೀರಾ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಕಾನೂನಿಗೂ ಹೆದರದೆ, ಒಬ್ಬರ ಮೇಲೊಬ್ಬರು ಕೈಬೀಸುತ್ತಿರುತ್ತಾರೆ. ಬಿಗ್‌ಬಾಸ್, ರೋಡೀಸ್, ಫಿಯರ್ ಫ್ಯಾಕ್ಟರ್‌, ಕತರೋಂಕೆ ಖಿಲಾಡಿ ಇಂಥಹಾ ಇನ್ನು ಕೆಲವು ರಿಯಾಲಿಟಿ ಶೋಗಳು ಜಗಳವನ್ನೇ ನಂಬಿಕೊಂಡ ರಿಯಾಲಿಟಿ ಶೋಗಳಾಗಿವೆ. ಇತ್ತೀಚೆಗಂತೂ ಸಂಗೀತ, ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲೂ ಜಗಳಗಳು! ಜಡ್ಜ್‌ಗಳು ಸ್ಪರ್ಧಿಗಳೊಟ್ಟಿಗೆ ಜಗಳ, ಸ್ಪರ್ಧಿಗಳು ಸಹಸ್ಪರ್ಧಿಗಳೊಟ್ಟಿಗೆ, ಒಮ್ಮೊಮ್ಮೆ ಜಡ್ಜ್‌ಗಳೊಟ್ಟಿಗೆ ಜಗಳ. ನಿರೂಪಕರು ಸ್ಪರ್ಧಿಗಳೊಟ್ಟಿಗೆ ಜಗಳ. ಜಗಳ ಆದಷ್ಟು ಟಿಆರ್‌ಪಿ ಹೆಚ್ಚು ಎಂಬುದು ಚಾನೆಲ್‌ಗಳಿಗೆ ಗೊತ್ತಿದೆ. ಅಲ್ಲದೆ, ಶೋನಲ್ಲಿ ಜಗಳ ನಡೆದರೆ ಅದರ ಪ್ರೋಮೊ ಕಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು 'ತಪ್ಪದೆ ವೀಕ್ಷಿಸಿ' ಎಂದು ಟ್ಯಾಗ್‌ ಲೈನ್ ನೀಡಿ ಭರ್ಜರಿಯಾಗಿ ಜಾಹೀರಾತು ಮಾಡಬಹುದು. ಲೈಕ್ಸ್, ಕಾಮೆಂಟ್ಸ್ ಹೆಚ್ಚಿಸಿಕೊಳ್ಳಬಹುದು. ಈ ಎಲ್ಲ ಕಾರಣಕ್ಕೆ ರಿಯಾಲಿಟಿ ಶೋಗಳಲ್ಲಿ ಜಗಳಗಳಿಗೆ ಎಲ್ಲಿಲ್ಲದ ಮಾನ್ಯತೆ. ಸುಮಧುರ ಹಾಡು ಕೇಳಲು ನಿರೀಕ್ಷೆಯಿಂದ ಟಿವಿ ಮುಂದೆ ಕೂತ ಪ್ರೇಕ್ಷಕನಿಗೆ ರಿಯಾಲಿಟಿ ಶೋಗಳು ಜಗಳ ನೋಡಲು ನೀಡಿದರೆ ಅದು ಅವನ ನಿರೀಕ್ಷೆಗೆ ನೀಡುವ ಪೆಟ್ಟು, ಹಾಡು ಕೇಳುವ ಅವನ ಅಭಿರುಚಿಗೆ ಮಾಡಿದ ಮೋಸವಲ್ಲವೆ?

     ರಿಯಾಲಿಟಿ ಶೋಗಳಲ್ಲಿ ರೊಮ್ಯಾನ್ಸ್

    ರಿಯಾಲಿಟಿ ಶೋಗಳಲ್ಲಿ ರೊಮ್ಯಾನ್ಸ್

    ಜಗಳ, ಡಬಲ್‌ ಮೀನಿಂಗ್ ಜೊತೆಗೆ ರಿಯಾಲಿಟಿ ಶೋಗಳು ಟಿಆರ್‌ಪಿಗಾಗಿ ರೊಮ್ಯಾನ್ಸ್‌ ಅನ್ನೂ ಸಹ ಬಳಸಿಕೊಳ್ಳುತ್ತವೆ. ಬಿಗ್‌ಬಾಸ್‌ನಲ್ಲಿ ಈಗಾಗಲೇ ಹಲವು ಲವ್‌ ಸ್ಟೋರಿಗಳು ಆಗಿ ಹೋಗಿವೆ. ಕೆಲವು ಜೋಡಿಗಳಂತೂ ರೊಮ್ಯಾನ್ಸ್ ಹೆಸರಲ್ಲಿ ಲವ್‌ಗಿಂತಲೂ ಮುಂದೆ ಹೋದ ಉದಾಹರಣೆಯೂ ಹಿಂದಿ ಬಿಗ್‌ಬಾಸ್‌ನಲ್ಲಿ ಇದೆ. ಸನ್ನಿ ಲಿಯೋನ್ ಅನ್ನು ಕರೆತಂದು ಸ್ನಾನ ಮಾಡಿಸಿದ್ದು, ಹಾಲಿವುಡ್‌ ಚೆಲುವೆ ಪಮೇಲಾ ಆಂಡರ್ಸನ್‌ ಅನ್ನು ಕರೆತಂದು ಕುಣಿಸಿದ್ದು, ಶೋನಲ್ಲಿ ಹಾಟ್‌ನೆಸ್‌ ತುಂಬಲೆಂದೇ ಎಂಬುದು ಗುಟ್ಟಲ್ಲ. ವೀಣಾ ಮಲ್ಲಿಕ್ ಮಾಡಿದ್ದ ಮಸಾಜ್ ಮರೆಯುವುದುಂಟೆ? ಬಿಗ್‌ಬಾಸ್ ಕತೆ ಬಿಡಿ, ಬೇರೆ ರಿಯಾಲಿಟಿ ಶೋಗಳೂ ಸಹ ರೊಮ್ಯಾನ್ಸ್ ಅನ್ನು ಟಿಆರ್‌ಪಿ ಟೂಲ್ ಆಗಿ ಬಳಸಿವೆ. ಇಂಡಿಯನ್ ಐಡಲ್‌ ಗಾಯನ ಶೋನಲ್ಲಿ ನಿರೂಪಕ ಆದಿತ್ಯ ನಾರಾಯಣ್ (ಉದಿತ್ ನಾರಾಯಣ್ ಪುತ್ರ) ಸದಾ ಜಡ್ಜ್‌ ನೇಹಾ ಕಕ್ಕರ್‌ ಮೇಲೆ ಲೈನ್ ಹೊಡೆಯುತ್ತಿರುತ್ತಾನೆ. ಒಮ್ಮೆಯಂತೂ ಸ್ವತಃ ಉದಿತ್ ನಾರಾಯಣ್ ಹಾಗೂ ಕುಟುಂಬ ಶೋಗೆ ಬಂದು ಉದಿತ್ ಹಾಗೂ ನೇಹಾಗೆ ಮದುವೆ ಸಹ ಮಾಡಿಸುತ್ತಾರೆ! ಆದರೆ ಶೋ ಮುಗಿದ ಮೇಲೆ ಇಬ್ಬರೂ ತಮ್ಮತಮ್ಮ ಪ್ರೀತಿ ಪಾತ್ರರನ್ನು ವಿವಾಹವಾದರು. ಕನ್ನಡದ ರಿಯಾಲಿಟಿ ಶೋ ಒಂದರಲ್ಲಿ ನಿರೂಪಕಿ ಅನುಶ್ರೀ, ಅರ್ಜುನ್ ಜನ್ಯಗೆ ಲೈನ್ ಹೊಡೆಯುವುದು ಸಹ ಟಿಆರ್‌ಪಿ ಕಾರಣಕ್ಕಲ್ಲದೆ ಮತ್ತಿನ್ನೇನಕ್ಕೆ? ಇಂಥಹಾ ಉದಾಹರಣೆಗಳು ಹಲವು ರಿಯಾಲಿಟಿ ಶೋನಲ್ಲಿ ಸಿಗುತ್ತವೆ.

     ಹುಸಿ ಕರುಣಾಜನಕ ಕತೆ

    ಹುಸಿ ಕರುಣಾಜನಕ ಕತೆ

    ಸ್ಪರ್ಧಿಗಳ ಗಾಯನ, ನಟನೆ, ಹಾಸ್ಯ, ನೃತ್ಯ ಪ್ರತಿಭೆಯನ್ನು ಒರೆಗೆ ಹಚ್ಚಬೇಕಿರುವುದು ರಿಯಾಲಿಟಿ ಶೋಗ ಮುಖ್ಯ ಧ್ಯೇಯವಾಗಬೇಕಿತ್ತು. ಆದರೆ ಇಂದಿನ ರಿಯಾಲಿಟಿ ಶೋಗಳಿಗೆ ಗಾಯನ, ನೃತ್ಯ, ನಟನೆ ಇವೆಲ್ಲವೂ ನೆಪಕ್ಕಷ್ಟೆ ಅವುಗಳ ನಿಜವಾದ ಫೋಕಸ್, ಕರುಣಾಜನಕ ಕತೆ ಇಲ್ಲವೇ ಅನವಶ್ಯಕ ಜಗಳ, ಮುಜುಗರ ಮೂಡಿಸುವ ರೊಮಾನ್ಸ್, ಅಸಭ್ಯ ಡಬಲ್ ಮೀನಿಂಗ್ ಡೈಲಾಗ್‌. ಸ್ಪರ್ಧಿಗೆ ಕರುಣಾಜನಕ ಕತೆಯೊಂದು ಇಲ್ಲವೆಂದರೆ ಆತ ಅಥವಾ ಆಕೆ ಎಷ್ಟೆ ಚೆನ್ನಾಗಿ ಹಾಡುತ್ತಿರಲಿ ಅವರಿಗೆ ಅವಕಾಶ ಸಿಗುವುದಿಲ್ಲ. ಅವರು ಹೇಳುವ ಕತೆಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಸುಳ್ಳು ಕತೆಗಳೇ ಆಗಿರುತ್ತವೆ! ಈ ಬಗ್ಗೆ ಹಲವು ಅವಕಾಶ ವಂಚಿತರು ಬಹಿರಂಗವಾಗಿ ಆರೋಪ ಮಾಡಿದ್ದಾರೆ ಆದರೆ ರಿಯಾಲಿಟಿ ಶೋಗಳಿಗೆ ಅವುಗಳಗಳೆಲ್ಲ ಲೆಕ್ಕಕ್ಕಿಲ್ಲ. ಅವುಗಳಿಗೆ ಟಿಆರ್‌ಪಿ ಮುಖ್ಯ, ಟಿಆರ್‌ಪಿ ತಂದುಕೊಡುವ ರಂಗುರಂಗಿನ ಕರುಣಾಜನಕ ಕತೆಗಳು ಮುಖ್ಯ, ಪ್ರತಿಭೆ ಅಲ್ಲ.

     'ಎದೆ ತುಂಬಿ ಹಾಡುವೆನು' ನೆನಪಿಸಿಕೊಳ್ಳಿ

    'ಎದೆ ತುಂಬಿ ಹಾಡುವೆನು' ನೆನಪಿಸಿಕೊಳ್ಳಿ

    'ಎದೆ ತುಂಬಿ ಹಾಡುವೆನು' ಹೆಸರಿನ ರಿಯಾಲಿಟಿ ಶೋ ಅನ್ನು ಎಸ್‌ಪಿ ಬಾಲಸುಬ್ರಹ್ಮಣ್ಯಂ ಕೆಲ ವರ್ಷಗಳ ಹಿಂದೆ ನಡೆಸಿಕೊಡುತ್ತಿದ್ದರು. ಆ ಶೋನಲ್ಲಿ ಸ್ಪರ್ಧಿಗಳು ತಮ್ಮ ಹೆಸರು, ಊರು, ಹಾಡಲು ಆಯ್ಕೆ ಮಾಡಿಕೊಂಡಿರುವ ಹಾಡು, ಮೂಲ ಗಾಯಕ, ಸಂಗೀತ ನಿರ್ದೇಶಕನ ಹೆಸರು ಹೇಳಿ ಸುಶ್ರಾವ್ಯವಾಗಿ ಹಾಡು ಹಾಡಿ ವೇದಿಕೆ ಇಳಿಯುತ್ತಿದ್ದರು. ಎಸ್‌ಪಿಬಿ ಅವರು ಸಹ ಹಾಡಿನ ಸ್ವರ, ತಾಳ, ಲಯ, ಟೆಂಪೊ ಇತ್ಯಾದಿಗಳ ಬಗ್ಗೆ ಸರಳವಾಗಿ, ಉದಾಹರಣೆ ಸಮೇತ ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಮಾಹಿತಿ ನೀಡುತ್ತಿದ್ದರು. ಆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಅತಿಥಿಗಳು ಸಹ ಸರಳವಾಗಿ ಬಂದು ಕೂತು, ಎಲ್ಲರಂತೆ ಹಾಡು ಕೇಳಿ, ಸ್ಪರ್ಧಿಗಳಿಗೆ ಶುಭಾಶಯ ಕೋರಿ ಹೋಗುತ್ತಿದ್ದರು. ನಿರೂಪಕರ ಅನವಶ್ಯಕ ಹೊಗಳುವಿಕೆ, ಅನವಶ್ಯಕ ಆಡಂಭರ, ಅಬ್ಬರ ಅಲ್ಲಿರಲಿಲ್ಲ. ಅಲ್ಲಿ ಹಾಡೇ ಪ್ರಧಾನವಾಗಿತ್ತು ಉತ್ಪ್ರೇಕ್ಷೆಯ ಸಣ್ಣ ಸುಳಿವೂ ಇರುತ್ತಿರಲಿಲ್ಲ. ಆದರೆ ಇಂದಿನ ಬಹುತೇಕ ಗಾಯನ ರಿಯಾಲಿಟಿ ಶೋ ಗಳಲ್ಲಿ ಗಾಯನಕ್ಕೆ ಅಂತಿಮ ಆದ್ಯತೆ! ಕಲೆ, ವ್ಯಕ್ತಿ ಗೌರವಕ್ಕಿಂತಲೂ ಯಾಂತ್ರಿಕ ಸಂಖ್ಯೆಗಳು, ಟಿಆರ್‌ಪಿಗಳು ಮುಖ್ಯ ಎಂದುಕೊಂಡಾಗ ಶೋಗಳು ಪ್ರೇಕ್ಷಕರ ಕ್ರಿಯಾಶೀಲತೆಯನ್ನು, ಅಭಿರುಚಿಯನ್ನು ಭ್ರಷ್ಟಗೊಳಿಸುತ್ತವೆಯೇ ಹೊರತು ಅವಕ್ಕೆ ಇಂಬನ್ನಂತೂ ನೀಡುವುದಿಲ್ಲ.

    English summary
    How present reality shows corrupting viewers intrest on arts. In the name of entertainment reality shows giving dubble meaning dailoges, ugly fights, romance etc.
    Tuesday, July 19, 2022, 17:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X