ಶನಿವಾರ ಸರ್ ಬೇಡ ಬೇಡ ಅಂದ್ರು ಆ ನಟ ನಾನ್ ವೆಜ್ ತಿನ್ನುವಂತೆ ಮಾಡಿದ್ದ ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ತೆರೆಮೇಲೆ ಮಾತ್ರವಲ್ಲ ತೆರೆಹಿಂದೆ ಕೂಡ ಹೀರೋನೇ. ಎಷ್ಟೇ ಎತ್ತರಕ್ಕೆ ಏರಿದರೂ ಹಳೆಯದನ್ನು ಮರೆಯುವುದಿಲ್ಲ. ತಮ್ಮ ಸರಳ ವ್ಯಕ್ತಿತ್ವದಿಂದ ಎಲ್ಲರಿಗೂ ಮಾದರಿ ಆಗಿದ್ದಾರೆ. ಇನ್ನು ಮಹಾನ್ ದೈವಭಕ್ತರಾಗಿರುವ ರಜನಿಕಾಂತ್ ಆಗಾಗ್ಗೆ ಹಿಮಾಲಯಕ್ಕೆ ತೆರಳಿ ಧ್ಯಾನ, ತಪಸ್ಸು ಮಾಡುತ್ತಿರುತ್ತಾರೆ. ಬಾಬಾನಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ.
ರಜನಿಕಾಂತ್ ಸದಾ ತೆರೆದ ಪುಸ್ತಕದಂತೆ ಇರುತ್ತಾರೆ. ಎಲ್ಲವರನ್ನು ವಿಶ್ಲೇಷಿಸಿ ಮಾತನಾಡುತ್ತಾರೆ. ಸುಮ್ಮನೆ ಎಲ್ಲವನ್ನು ನಂಬುವವರಲ್ಲ. ತಮ್ಮದೇ ಒಂದಷ್ಟು ಸಿದ್ದಾಂತಗಳನ್ನು ರೂಢಿಸಿಕೊಂಡಿದ್ದಾರೆ. ಏನೇ ಆದರೂ ಅದನ್ನು ಮೀರುವವರಲ್ಲ. ಅದನ್ನೇ ತಮ್ಮ ಆಪ್ತರಿಗೂ ಹೇಳುತ್ತಿದ್ದರು. ತಮ್ಮ ಮದ್ಯಪಾನ, ಧೂಮಪಾನ ಅಭ್ಯಾಸದ ಬಗ್ಗೆಯೂ ರಜನಿಕಾಂತ್ ಬಹಿರಂಗವಾಗಿಯೇ ಮಾತನಾಡಿದ್ದಾರೆ.

ಮಾಂಸಾಹಾರ ಸೇವನೆ ವಿಚಾರದಲ್ಲಿ ಕೆಲವರು ಒಂದಷ್ಟು ಪದ್ಧತಿಗಳನ್ನು ರೂಢಿಸಿಕೊಂಡಿದ್ದಾರೆ. ಸೋಮವಾರ, ಶನಿವಾರ ತಿನ್ನಲ್ಲ ಎಂದು ಕೆಲವರು ಹೀಗೆ ಗುರುವಾರ ಶನಿವಾರ ತಿನ್ನಲ್ಲ ಎಂದು ಹೇಳುವವರು ಇದ್ದಾರೆ. ಬುಧವಾರ ಮಾಂಸಾಹಾರಕ್ಕೆ ದೂರ ಎನ್ನುವವರನ್ನು ನೋಡಬಹುದು. ಆದರೆ ಇದನ್ನೆಲ್ಲಾ ರಜನಿಕಾಂತ್ ಫಾಲೋ ಮಾಡುವವರಲ್ಲ. ಈ ಬಗ್ಗೆ ಖ್ಯಾತ ನಟನಿಗೆ ಒಮ್ಮೆ ರಜನಿಕಾಂತ್ ತಿಳಿ ಹೇಳಿದ್ದರಂತೆ. ತಲೈವಾ ಮಾತು ಕೇಳಿ ಆ ನಟ ಕೂಡ ತಮ್ಮ ಅಭ್ಯಾಸ ಬದಲಿಸಿಕೊಂಡಿದ್ದರು.
ಬಹುಭಾಷಾ ನಟ ಸುಮನ್ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ತುಳು ಮಾತನಾಡುವ ಬಿಲ್ಲವ ಕುಟುಂಬದಲ್ಲಿ ಹುಟ್ಟಿದವರು ಸುಮನ್. 70ರ ದಶಕದ ಕೊನೆಗೆ ಅವರು ಚಿತ್ರರಂಗಕ್ಕೆ ಬಂದರು. ರಜನಿಕಾಂತ್ ಜೊತೆಗೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹಳ ವರ್ಷಗಳ ಬಳಿಕ 'ಶಿವಾಜಿ' ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು. ರಜನಿಕಾಂತ್ ಎದುರು ಖಡಕ್ ಪಾತ್ರದಲ್ಲಿ ಮಿಂಚಿದ್ದರು. ಅವರ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ಅಂದಹಾಗೆ 'ಶಿವಾಜಿ' ಚಿತ್ರದ ಮೊದಲ ದಿನ ಚಿತ್ರೀಕರಣದ ವೇಳೆ ನಡೆಗ ಘಟನೆಯನ್ನು ಸುಮನ್ ಹಿಂದೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. ಆ ವೀಡಿಯೋ ಈಗ ವೈರಲ್ ಆಗುತ್ತಿದೆ. ಚಿತ್ರದ ಮೊದಲ ದಿನ ಚಿತ್ರೀಕರಣದ ವೇಳೆ ರಜನಿಕಾಂತ್ ಸರ್ ಮಧ್ಯಾಹ್ನ ಒಟ್ಟಿಗೆ ಊಟ ಮಾಡೋಣ, ನಮ್ಮ ಕ್ಯಾರವಾನ್‌ಗೆ ಬನ್ನಿ ಅಂದರು. ಅವರ ಮಾತು ಮೀರಲು ಸಾಧ್ಯವಾಗದೇ ಅಲ್ಲಿಗೆ ಹೋಗಿದ್ದೆ ಎಂದು ಆ ವಿಚಾರವನ್ನು ನೆನಪಿಸಿಕೊಂಡಿದ್ದರು.
ಅವತ್ತು ನಾವು ಊಟಕ್ಕೆ ಕುಳಿತಾಗ ರಜನಿ ಸರ್ ಬಾಕ್ಸ್ ಓಪನ್ ಮಾಡಲು ಹೇಳಿದರು. ತೆಗೆದರೆ ನಾನ್‌ವೆಜ್ ಐಟಂಗಳು ಇದ್ದವು. ಬನ್ನಿ ಊಟ ಮಾಡೋಣ ಅಂದರು. ಇಲ್ಲ ಸರ್ ಇವತ್ತು ಶನಿವಾರ ನಾನು ನಾನ್‌ವೆಜ್ ತಿನ್ನಲ್ಲ ಅಂದೆ. ಶನಿವಾರ ಆದರೆ ನಾಳೆ ಭಾನುವಾರ. ಅದಕ್ಕೂ ಇದಕ್ಕೂ ಏನ್ ಸಂಬಂಧ ಎಂದರು. ಅಲ್ಲ ಸರ್ ನಾನು ವೆಂಕಟೇಶ್ವರ ಸ್ವಾಮಿ ಆರಾಧಕ. ಹಾಗಾಗಿ ಶನಿವಾರ ಮಾಂಸಾಹಾರ ತಿನ್ನಲ್ಲ ಎಂದು ವಿವರಿಸಿದೆ.

ಬಳಿಕ ರಜನಿಕಾಂತ್ ಹೇಳಿದ ಮಾತು ನನ್ನ ಮನಸ್ಸನ್ನು ಬದಲಿಸಿತು ಎಂದು ಸುಮನ್ ವಿವರಿಸಿದ್ದರು. ಶನಿವಾರ ನಾನ್ ವೆಜ್ ತಿನ್ನಬೇಡ ಎಂದು ವೆಂಕಟೇಶ್ವರ ಸ್ವಾಮಿ ನಿನಗೆ ಫೋನ್ ಮಾಡಿದ್ದಾರಾ? ಎಂದು ಕೇಳಿದರು. ಇಲ್ಲ ಬಹಳ ಜನ ಅನುಸರಿಸುತ್ತಾರಲ್ಲ ಎಂದೆ. ಅವರು ಮಾಡಿದ್ದನ್ನೆಲ್ಲಾ ನೀನು ಮಾಡ್ತೀಯಾ? ನಾನು ತಿನ್ನುತ್ತಿದ್ದೀನಿ. ನನ್ನನ್ನು ನೋಡಿ ನಿನಗೂ ತಿನ್ನಬೇಕು ಎನಿಸುತ್ತಿರಬಹುದಲ್ಲ ಅಂದ್ರು, ಹೌದು ಎಂದೆ.
ಆಗ ರಜನಿ ಸರ್ ಹೇಳಿದ್ರು "ನೀನು ತಿನ್ನುವುದು ನಾನ್‌ವೆಜ್ ಆಗಿದ್ದರೆ ಪರವಾಗಿಲ್ಲ. ಮನಸ್ಸು ವೆಜಿಟೇರಿಯನ್ ಆಗಿರಬೇಕು. ಮನಸ್ಸಿನಲ್ಲಿ ಯಾವುದೇ ಕೆಟ್ಟ ಭಾವನೆ ಇರಬಾರದು. ಕೆಟ್ಟದ್ದನ್ನು ಮನಸ್ಸಿನಲ್ಲಿಟ್ಟುಕೊಂಡು ನೀನು ವೆಜ್ ತಿಂದರೆ ಏನು ಪ್ರಯೋಜನ? ನಿನ್ನ ದೇಹವೇ ಮಾಂಸದ ಮುದ್ದೆ. ಒಂದು ದಿನ ನಾನ್‌ವೆಜ್ ಬಿಟ್ಟ ಮಾತ್ರಕ್ಕೆ ನಿನ್ನ ದೇಹ ವೆಜಿಟೇರಿಯನ್ ಆಗಿಬಿಡಲ್ಲ.
ಎಲ್ಲರಿಗೂ ಒಳ್ಳೆಯದನ್ನು ಬಯಸುವ ಮನಸ್ಸಿದರೆ ಅದೇ ವೆಜಿಟೇರಿಯನ್. ಆಹಾರದಲ್ಲಿ ಅಂತಹ ಯಾವುದೇ ನಿಯಮಗಳು ಬೇಡ. ಬೇಕಿದ್ದರೆ ಹಬ್ಬ ಹರಿದಿನಗಳಲ್ಲಿ ಅಥವಾ ಮನೆಯಲ್ಲಿ ಏನಾದರೂ ಪೂಜೆ ಇದ್ದಾಗ ನೀನು ಮಾಂಸಾಹಾರ ಬಿಡು. ಹೀಗೆ ವಾರ ನೋಡಿ ತಿನ್ನಲ್ಲ ಎಂದು ಹೇಳಬೇಡ ಎಂದರು. ಅದೇ ದಿನ ನಾನು ನನ್ನ ನಿಯಮ ಬದಲಿಸಿಕೊಂಡೆ. ಶನಿವಾರವೂ ನಾನ್‌ವೆಜ್ ತಿನ್ನಲು ಆರಂಭಿಸಿದೆ ಎಂದು ಸುಮನ್ ವಿವರಿಸಿದ್ದರು.
ಇನ್ನು ಸುಮನ್ 'ಅನ್ನಮಯ್ಯ' ಚಿತ್ರದಲ್ಲಿ ವೆಂಕಟೇಶ್ವರ ಸ್ವಾಮಿ ಪಾತ್ರದಲ್ಲಿ ಕೂಡ ನಟಿಸಿದ್ದಾರೆ. 'ಶಿವಾಜಿ' ಚಿತ್ರದಲ್ಲಿ ಸುಮನ್ ಮಾಡಿದ್ದ ಆದಿಶೇಷನ್ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ಚಿತ್ರದ ಚಿತ್ರೀಕರಣ ನಡೆದಿತ್ತು. ಈ ವೇಳೆ ರಜನಿಕಾಂತ್ ತಮ್ಮೊಟ್ಟಿಗೆ ಹಂಚಿಕೊಂಡಿದ್ದ ಸಂಗತಿಗಳನ್ನು ಸುಮನ್ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದರು.


Click it and Unblock the Notifications











