ಕನ್ನಡ ನಟಿ ರಮ್ಯಾಗೆ 'ಮೋಹಕ ತಾರೆ' ಎಂಬ ಬಿರುದು ಕೊಟ್ಟಿದ್ದ ಬಾಲಕ ಯಾರು?
ಸ್ಟಾರ್ ನಟ, ನಟಿಯರಿಗೆ ಬಿರುದುಗಳು ಹೊಸದೇನು ಅಲ್ಲ. ಡಾ. ರಾಜ್‌ಕುಮಾರ್ ಆದಿಯಾಗಿ ಎಲ್ಲಾ ಜನಪ್ರಿಯ ಕಲಾವಿದರಿಗೆ ಅಭಿಮಾನಿಗಳಿಗೆ ಬಿರುದುಗಳು ಸಿಕ್ಕಿವೆ. ಕೆಲವರು ಇಂತಹ ಬಿರುದುಗಳು ಬೇಡ ಎನ್ನುವುದು ಇದೆ. ಅಂದಹಾಗೆ ನಟಿ ರಮ್ಯಾ ಅವರನ್ನು ಅಭಿಮಾನಿಗಳು ಮೋಹಕ ತಾರೆ ಎಂದು ಕರೆಯುತ್ತಾರೆ.
'ಅಭಿ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ರಮ್ಯಾ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ ಇದೇ ಜನಪ್ರಿಯತೆ ಬಳಸಿಕೊಂಡು ರಾಜಕೀಯರಂಗಕ್ಕೂ ಎಂಟ್ರಿ ಕೊಟ್ಟಿದ್ದರು. ಮಂಡ್ಯ ಸಂಸದೆಯಾಗಿ ಒಮ್ಮೆ ಗೆದ್ದು ಬಳಿಕ ಸೋತಿದ್ದರು. ನಂತರ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ತಂಡದ ಮುಖ್ಯಸ್ಥರಾಗಿ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಕೆಲ ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ರಮ್ಯಾ ಇತ್ತೀಚೆಗೆ ಸಿಹಿಸುದ್ದಿ ಕೊಟ್ಟಿದ್ದರು. ಬಳಿಕ ಮತ್ತೆ ನಿರಾಸೆ ಮೂಡಿಸಿದ್ದರು.

ನಿರ್ಮಾಪಕಿಯಾಗಿ ನಟಿಯಾಗಿ ಕಂಬ್ಯಾಕ್ ಮಾಡಿದ್ದ ರಮ್ಯಾ ಯಾಕೋ ಬಳಿಕ ಹಿಂದಡಿ ಇಟ್ಟರು. ಇವತ್ತಿಗೂ ಮೋಹಕ ತಾರೆಯನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ವಯಸ್ಸು 40 ದಾಟಿದ್ರು ರಮ್ಯಾ ಚೆಲುವು, ಛಾರ್ಮ್ ಕಮ್ಮಿ ಆಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ರಮ್ಯಾ ಫೋಟೊ, ವೀಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿರುತ್ತಾರೆ.
'ಸ್ವಾತಿ ಮುತ್ತಿನ ಮಳೆಹನಿಯೇ' ಚಿತ್ರದಲ್ಲಿ ನಾಯಕಿಯಾಗಿ ನಟಿಸುವುದಾಗಿ ಹೇಳಿದ್ದ ರಮ್ಯಾ ಬಳಿಕ ಹಿಂದೆ ಸರಿದಿದ್ದರು. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಬಳಿಕ ತಮ್ಮ ಸನ್ನಿವೇಶಗಳನ್ನು ಬಳಸಿಕೊಳ್ಳದಂತೆ ಚಿತ್ರತಂಡಕ್ಕೆ ತಾಕೀತು ಮಾಡಿದ್ದರು. ಈ ಸಂಬಂಧ ಕೋರ್ಟ್ ಮೆಟ್ಟಿಲು ಏರಿದ್ದರು.
ಅಂದಹಾಗೆ ರಮ್ಯಾ ಅವರಿಗೆ ಮೋಹಕ ತಾರೆ ಎನ್ನುವ ಬಿರುದು ಕೊಟ್ಟಿದ್ದು ಕನ್ನಡ 'ಸರಿಗಮಪ ಲಿಟಲ್ ಚಾಂಪ್ಸ್- 4' ಸ್ಪರ್ಧಿ ಮನೋಜವಂ ಆತ್ರೇಯ. ಮೋಹಕವಾಗಿ ಮೋಡಿ ಮಾಡುವ ನಟಿಯರಿಗೆ ಮೋಹಕ ತಾರೆ ಎಂದು ಕರೆಯುತ್ತಾರೆ. ಆದರೆ ರಮ್ಯಾ ಅವರನ್ನು ಹೀಗೆ ಮೊದಲು ಕರೆದಿದ್ದು ಬಾಲ ಪ್ರತಿಭೆ ಮನೋಜವಂ. ಅದಕ್ಕೆ ಸಂಬಂಧಿಸಿದ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 2008ರಲ್ಲಿ 'ಅಂತೂ ಇಂತೂ ಪ್ರೀತಿ ಬಂತು' ಚಿತ್ರದಲ್ಲಿ ನಟಿ ರಮ್ಯಾ ನಟಿಸಿದ್ದರು. ಚಿತ್ರದ ಪ್ರಚಾರಕ್ಕಾಗಿ ಸರಿಗಮಪ ವೇದಿಕೆಗೆ ಬಂದಿದ್ದರು.
ಅಂದು ಮನೋಜವಂ ಆತ್ರೇಯ 'ಗೌರಮ್ಮ' ಚಿತ್ರದ 'ಕೊಲ್ತಾಳಲ್ಲಪ್ಪೋ' ಹಾಡನ್ನು ಹಾಡಿದ್ದ. ಹಾಡನ್ನು ಹಾಡಲು ವೇದಿಕೆಗೆ ಬಂದಾಗ "ಇವತ್ತು ನಾನು ಮೋಹಕ ತಾರೆ ರಮ್ಯಾ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ 'ಗೌರಮ್ಮ' ಚಿತ್ರದ ಹಾಡು ಹಾಡುತ್ತೇನೆ" ಎಂದಿದ್ದ. ಅಲ್ಲಿಂದ ಮುಂದೆ ರಮ್ಯಾ ಅವರನ್ನು ಅಭಿಮಾನಿಗಳು ಮೋಹಕ ತಾರೆ ಎಂದೇ ಕರೆಯಲು ಆರಂಭಿಸಿದ್ದರು. ಸಿನಿಮಾಗಳ ಟೈಟಲ್ ಕಾರ್ಡ್‌ನಲ್ಲಿ ಕೂಡ ಇದೇ ಬಿರುದು ಸೇರಿಕೊಂಡಿತ್ತು.
ಅವತ್ತು ವೇದಿಕೆಯಲ್ಲಿ ಮನೋಜವಂ ಬಹಳ ಚೆನ್ನಾಗಿ 'ಕೊಲ್ತಾಳಲ್ಲಪ್ಪೋ' ಹಾಡನ್ನು ಹಾಡಿದ್ದ. ರಾಜೇಶ್ ಕೃಷ್ಣನ್ ಮೆಚ್ಚುಗೆ ಪಡೆದಿದ್ದ. ಯೂಟ್ಯೂಬ್‌ನಲ್ಲಿ ಈ ವೀಡಿಯೋ ಸಖತ್ ಸದ್ದು ಮಾಡ್ತಿದೆ. 9 ವರ್ಷಗಳ ಹಿಂದೆ ಯೂಟ್ಯೂಬ್‌ಗೆ ಅಪ್‌ಲೋಡ್ ಆಗಿರುವ ಆಡಿಯೋ ಸಾಂಗ್ 3.2 ಮಿಲಿಯನ್ ವೀವ್ಸ್ ಸಾಧಿಸಿದೆ. ಆದರೆ 8 ವರ್ಷಗಳ ಹಿಂದೆ ಪೋಸ್ಟ್ ಆಗಿದ್ದ ಮನೋಜವಂ ಹಾಡು ಹಾಡಿರುವ ಈ ವೀಡಿಯೋ 3.3 ಮಿಲಿಯನ್ ವೀವ್ಸ್ ಸಾಧಿಸಿದೆ.
2005ರಲ್ಲಿ ಬಂದಿದ್ದ 'ಗೌರಮ್ಮ' ಸಿನಿಮಾ ಹಿಟ್ ಆಗಿತ್ತು. ಎಸ್. ಎ ರಾಜ್‌ಕುಮಾರ್ ಸಂಗೀತದ ಈ ಹಾಡಿಗೆ ಉಪೇಂದ್ರ ಸಾಹಿತ್ಯ ಬರೆದಿದ್ದರು. ಶಂಕರ್ ಮಹದೇವನ್ ಹಾಡು ಹಾಡಿದ್ದರು.


Click it and Unblock the Notifications











