ಸಲ್ಮಾನ್ ಖಾನ್ ಕೆಂಗಣ್ಣಿಗೆ ಗುರಿಯಾಗಿ ಕೆಲಸ ಇಲ್ಲದೇ ಪರದಾಡಿದ್ದ ಈ ವ್ಯಕ್ತಿ ಇಂದು ₹1200 ಕೋಟಿ ಸಾಮ್ರಾಜ್ಯದ ಅಧಿಪತಿ...!
ಬದುಕೇ ಹಾಗೆ ... ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ನಾನು ಅಂತಾ ಮೆರೆಯುವವರನ್ನು ನಡುಬೀದಿಗೆ ಬಿಡಬಹುದು; ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನೋ ಇದೆ ಅಂದುಕೊಳ್ಳುವುದರ ಜೊತೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಂಡವನು, ಮತ್ತದನ್ನು ಹೊರತೆಗೆಯುವಲ್ಲಿ ಶ್ರಮಿಸಿದವನು ಎಂಥ ಎತ್ತರಕ್ಕೆ ಬೇಕಾದರೂ ಏರಬಹುದು. ಇದಕ್ಕೆ ವಿವೇಕ್ ಒಬೆರಾಯ್ ಅತ್ಯುತ್ತಮ ಉದಾಹರಣೆ.
ಹೌದು, ವಿವೇಕ್ ಒಬೆರಾಯ್.. ಒಂದ್ಕಾಲದ ಸುರಸುಂದರಾಂಗ. ಚೆಲುವೆಯರ ಡ್ರೀಮ್ ಬಾಯ್. ಕಂಪನಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ವಿವೇಕ್ ಒಬೆರಾಯ್ ಹಾಗೇ ನೋಡಿದರೆ ಇವತ್ತು ಬಾಲಿವುಡ್‌ನ ನಾಯಕರಲ್ಲಿ ಮುಂಚೂಣಿಯಲ್ಲಿರಬೇಕಿತ್ತು. ಆದರೆ, ಹಿಂದಿ ಚಿತ್ರರಂಗದ ರಾಜಕೀಯ, ಷಡ್ಯಂತ್ರ, ಪಿತೂರಿ, ವಿವೇಕ್ ಓಬೆರಾಯ್ ಬೆಳವಣಿಗೆಗೆ ಅಡ್ಡಗಾಲು ಆದವು.

ಹಾಗಂಥ ವಿವೇಕ್ ಒಬೆರಾಯ್ ಕಣ್ಣೀರು ಹಾಕುತ್ತಾ ಕೂರಲಿಲ್ಲ. ತಲೆ ಮೇಲೆ ಕೈ ಹೊತ್ತು ಕೂರಲಿಲ್ಲ. ಐಶ್ವರ್ಯ ರೈ ಜೊತೆ ಬ್ರೇಕಪ್ ಆ ನಂತರ ಸಲ್ಮಾನ್ ಖಾನ್ ಜೊತೆಯ ಮನಸ್ತಾಪದಿಂದ ಅವಕಾಶಗಳ ಬರ ಎದುರಿಸಿದರು ಕೂಡ ವಿವೇಕ್ ಒಬೆರಾಯ್ ಯಾರನ್ನೂ ದೂಷಿಸಲಿಲ್ಲ. ಬದಲಿಗೆ ಪಾಲಿಗೆ ಬಂದಿದ್ದು ಪಂಚಾಮೃತ ಎಂದುಕೊಂಡು ಸಿಕ್ಕ ಚಿತ್ರ ಮತ್ತು ಪಾತ್ರಗಳನ್ನು ಕಣ್ಣಿಗೊತ್ತಿಕೊಂಡು ಕೆಲಸ ಮಾಡಿದರು. ಬಾಲಿವುಡ್ ಬೇಡ ಎಂದು ದೂರ ತಳ್ಳಿದ ನಂತರ ತೆಲುಗು ಮತ್ತು ಮಲಯಾಳಂ ಚಿತ್ರರಂಗಕ್ಕೆ ಬಂದರು. ಆ ನಂತರ ಇನ್‌ಸೈಡ್ ಎಡ್ಜ್ ವೆಬ್ ಸರಣಿಯನ್ನು ಮಾಡಿದರು.
ಇವತ್ತು ಕೂಡ ವಿವೇಕ್ ಒಬೆರಾಯ್ ಬಳಿ ಹೇಳಿಕೊಳ್ಳುವಂತಹ ಅವಕಾಶಗಳಿಲ್ಲ. ಇಂಡಿಯನ್ ಪೊಲೀಸ್ ಫೋರ್ಸ್ ಹೊರತು ಪಡಿಸಿದರೆ ಎರಡು ವರ್ಷದಿಂದ ವಿವೇಕ್ ಓಬೆರಾಯ್ ಯಾವ ಚಿತ್ರಕ್ಕೂ ಬಣ್ಣವನ್ನು ಹಚ್ಚಿಲ್ಲ. ಆದರೂ ಕೂಡ ವಿವೇಕ್ ಒಬೆರಾಯ್ ಹಿಂದಿ ಚಿತ್ರರಂಗದ ಆಗರ್ಭ ಶ್ರೀಮಂತ. ಅಚ್ಚರಿ ಎನಿಸಿದರೂ ಇದು ನಿಜಾ.
ಹೌದು, ಪ್ರಿಯಾಂಕ ಆಳ್ವ ಅವರನ್ನು ಮದುವೆಯಾಗುವ ಸಮಯದಲ್ಲಿ ಅವಕಾಶಗಳಿಲ್ಲದೇ ಸಂಪೂರ್ಣ ಖಾಲಿ ಕುಳಿತುಕೊಂಡಿದ್ದ ವಿವೇಕ್ ಒಬೆರಾಯ್ ಈಗ 1200 ಕೋಟಿಯ ಒಡೆಯ. ವಿವೇಕ್ ಓಬೆರಾಯ್ ಅವರ ಈ ಆಸ್ತಿ-ಅಂತಸ್ತಿನ ಮುಂದೆ ವಿವೇಕ್ ಒಬೆರಾಯ್ ಮುಂದೆ ಬಂದು ಆ ನಂತರ ಮೆರೆದಾಡಿದ ರಣ್ಭೀರ್ ಕಪೂರ್ ಕೂಡ ಬಡವನಂತೆ ಕಾಣಿಸುತ್ತಾರೆ. ದಿ ಸ್ಟೇಟ್ಸ್‌ಮನ್ ಸೇರಿದಂತೆ ಅನೇಕ ವರದಿಗಳ ಪ್ರಕಾರ ಅಲ್ಲು ಅರ್ಜುನ್ ಮತ್ತು ಪ್ರಭಾಸ್ ಅವರಿಗಿಂತ ಹೆಚ್ಚಿನ ಹಣ ವಿವೇಕ್ ಒಬೆರಾಯ್ ಬಳಿ ಇದೆ.
ಇಂಥಾ ವಿವೇಕ್ ಒಬೆರಾಯ್ ಮೊನ್ನೆಯಷ್ಟೇ ವಿಶ್ವದ ಮೊದಲ ಲಕ್ಷುರಿ ರೋಲ್ಸ್ ರಾಯ್ಸ್ ಕಲಿನನ್ ಕಾರು ಖರೀದಿ ಮಾಡಿದ್ದಾರೆ. ಇದಕ್ಕೆ ಇವರು ಖರ್ಚು ಮಾಡಿದ್ದು ಬರೋಬ್ಬರಿ ಹನ್ನೆರಡು ಕೋಟಿ. ಹೀಗಾಗಿ ಚಿತ್ರರಂಗದಿಂದ ದೂರ ಇದ್ದರು ಕೂಡ ವಿವೇಕ್ ಒಬೆರಾಯ್ ಇಷ್ಟೊಂದು ಹಣ ಗಳಿಸಿದ್ಹೇಗೆ ಎನ್ನುವ ಪ್ರಶ್ನೆ ಅನೇಕರನ್ನು ಈಗ ಕಾಡುತ್ತಿದೆ. ವಿವೇಕ್ ಓಬೆರಾಯ್ ಸಂಪತ್ತಿನ ಕುರಿತು ಚರ್ಚೆಯಾಗುತ್ತಿದೆ.
ಆದರೆ ಬಹುತೇಕರಿಗೆ ಗೊತ್ತಿರದ ವಿಚಾರ ಅಂದರೆ ಆಕ್ಟಿಂಗ್ ಮೊದಲಿಂದ ವಿವೇಕ್ ಒಬೆರಾಯ್ ಪಾಲಿಗೆ ಆಸಕ್ತಿಯಾಗಿತ್ತು. ಹಣ ಗಳಿಸುವ ಮಾರ್ಗ ಆಗಿರಲಿಲ್ಲ. ಹೀಗಾಗಿಯೇ ವ್ಯಾಪಾರ-ವ್ಯವಹಾರದ ಕಡೆ ಮೊದಲಿಂದ ಒಲವು ಹೊಂದಿದ್ದ ವಿವೇಕ್ ಓಬೆರಾಯ್ ಬಾಲಿವುಡ್ ದೂರ ತಳ್ಳಿದಾಗ ಬಿಸಿನೆಸ್ ಕಡೆ ಗಮನ ವಹಿಸಿದ್ದರು. ಸದ್ದಿಲ್ಲದೇ ಕರ್ಮ ಇನ್ಪ್ರಾಸ್ಟ್ರಕ್ಚರ್ ಎಂಬ ರಿಯಲ್ ಎಸ್ಟೇಟ್ ಕಂಪನಿ ಶುರು ಮಾಡಿದ್ದರು. ಮೆಗಾ ಎಂಟ್ರಟೈನ್ಮೆಂಟ್ ಎಂಬ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯನ್ನು ಕೂಡ ಆರಂಭ ಮಾಡಿದರು. ಸ್ವರ್ನಿಮ್ ವಿಶ್ವವಿದ್ಯಾಲಯದ ಸಹ ಸಂಸ್ಥಾಪಕರು ಆದರು. ಇಷ್ಟೇ ಅಲ್ಲ ಸ್ಟಾರ್ಟ್‌ಅಪ್ ಕನಸು ಕಾಣುತ್ತಿದ್ದ ಅನೇಕರಿಗೆ ವಿವೇಕ್ ಒಬೆರಾಯ್ ಆಸರೆಯಾದರು ಹಣವನ್ನು ಹೂಡಿದರು. ಇದೆಲ್ಲದರ ಪರಿಣಾಮ ಇವತ್ತು ವಿವೇಕ್ ಒಬೆರಾಯ್ ದೇಶದ ಹತ್ತು ಶ್ರೀಮಂತರ ಪಟ್ಟಿಯಲ್ಲಿ ಸ್ಥಾನವನ್ನು ಅಲಂಕರಿಸಿದ್ದಾರೆ. 1200 ಕೋಟಿಯ ಸಾಮ್ರಾಜ್ಯ ಕಟ್ಟಿದ್ದಾರೆ.


Click it and Unblock the Notifications