ದೊಡ್ಮನೆಯಲ್ಲಿ ದೀಪಾವಳಿ ಸಂಭ್ರಮ ಹೇಗಿರ್ತಿತ್ತು? ಅಣ್ಣಾವ್ರ ಇಷ್ಟದ ಪಟಾಕಿ ಯಾವ್ದು?
ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಡಗರ ಶುರುವಾಗುತ್ತಿದೆ. ಮನೆ-ಮನಗಳಲ್ಲಿ ದೀಪದ ಬೆಳಕು ನೂರ್ಮಡಿಸುವ ಸಮಯ ಹತ್ತಿರವಾಗಿದೆ. ನಿಧಾನವಾಗಿ ಪಟಾಕಿ ಸದ್ದು ಕೇಳಿಸುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಕೂಡ ಹಬ್ಬದ ಸಂಭ್ರಮ ಮನೆ ಮಾಡಿದೆ. ತಾರೆಯರ ಮನೆಗಳಲ್ಲಿ ಹಬ್ಬ ಆಚರಣೆಗೆ ಸಿದ್ಧತೆ ನಡೀತಿದೆ.
ಕನ್ನಡ ಚಿತ್ರರಂಗದ ದೊಡ್ಮೆನೆಯಲ್ಲಿ ಎಲ್ಲಾ ಹಬ್ಬಗಳನ್ನು ಜೋರಾಗಿ ಆಚರಿಸಲಾಗುತ್ತಿತ್ತು. ಇತ್ತೀಚೆಗೆ ಆ ಆಡಂಬರ ಕೊಂಚ ಕಮ್ಮಿ ಆಗಿರುವುದು ಸುಳ್ಳಲ್ಲ. ಅಣ್ಣಾವ್ರ ಕಾಲದಿಂದಲೂ ಮನೆ ಮಂದಿಯೆಲ್ಲಾ ಒಂದು ಕಡೆ ಸೇರಿ ಹಬ್ಬಗಳನ್ನು ಆಚರಿಸುತ್ತಿದ್ದರು. ದೀಪಾವಳಿ ಸಡಗರ ಕೊಂಚ ಜೋರಾಗಿಯೇ ಇರುತ್ತಿತ್ತು. ಅಣ್ಣಾವ್ರಿಗೂ ಪಟಾಕಿ ಹೊಡೆಯುವುದು ಎಂದರೆ ಬಲು ಇಷ್ಟ.

ಅಣ್ಣಾವ್ರ ಬಳಿಕ ಶಿವಣ್ಣ, ರಾಘಣ್ಣ ಹಾಗೂ ಪುನೀತ್ ಮನೆಯಲ್ಲಿ ದೀಪಾವಳಿ ಹಬ್ಬದ ಆಚರಣೆ ಜೋರಾಗಿ ಇರುತ್ತಿತ್ತು. ಒಂದೊಂದು ದಿನ ಒಬ್ಬೊಬ್ಬರ ಮನೆಯಲ್ಲಿ ಹಬ್ಬ. ಕೊನೆಯ ದಿನ ಶಿವಣ್ಣ ಮನೆಯಲ್ಲಿ ಕೊಂಚ ಜೋರಾಗಿ ದೀಪಾವಳಿ ಪಾರ್ಟಿ ಆಯೋಜಿಸಲಾಗುತ್ತಿತ್ತು. ಅಂದು ಮನೆಮಂದಿ, ನೆಂಟರು, ಸ್ನೇಹಿತರು ಎಲ್ಲರೂ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿರುವ ಶ್ರೀಮುತ್ತು ನಿವಾಸದಲ್ಲಿ ಸೇರುತ್ತಿದ್ದರು. ಹಾಡು ಹಾಡಿ, ಕುಣಿದು ಸಂಭ್ರಮಿಸುತ್ತಿದ್ದರು.
ಬಡಕುಟುಂಬದಿಂದ ಬಂದು ಡಾ. ರಾಜ್‌ಕುಮಾರ್ ದೊಡ್ಡಮಟ್ಟದಲ್ಲಿ ಯಶಸ್ಸು ಗಳಿಸಿದವರು. 20 ರೂಪಾಯಿ ಬಾಡಿಗೆ ಮನೆಯಲ್ಲಿ ವಾಸವಿದ್ದ ದಿನಗಳು ಇವೆ. ಮುಂದೆ ಕೋಟಿ ಕೋಟಿ ನೋಡಿದ್ದು ಇದೆ. ಆಯಾ ಕಾಲಕ್ಕೆ ತಕ್ಕಂತೆ ಮನೆಯಲ್ಲಿ ಹಬ್ಬದ ಆಚರಣೆ ಇರುತ್ತಿತ್ತು. ಇನ್ನು ದೀಪಾವಳಿ ಅಂದಾಕ್ಷಣ 'ಮುದ್ದಿನ ಮಾವ' ಚಿತ್ರಕ್ಕಾಗಿ ಅಣ್ಣಾವ್ರು ಹಾಡಿನ 'ದೀಪಾವಳಿ ದೀಪಾವಳಿ' ಹಾಡು ನೆನಪಾಗುತ್ತದೆ. 'ನಾ ನಿನ್ನ ಮರೆಯಲಾರೆ' ಚಿತ್ರದ 'ಸಿಹಿಮುತ್ತು ಸಿಹಿಮುತ್ತು' ಹಾಡಿನಲ್ಲೂ ಪಟಾಕಿ ಸದ್ದು ಕೇಳಿಸುತ್ತದೆ.

ಅಪ್ಪು ಅಗಲಿಕೆ ಬಳಿಕ ದೊಡ್ಮನೆಯಲ್ಲಿ ಹಬ್ಬದ ಸಂಭ್ರಮ ತುಸು ಕಮ್ಮಿ ಆಗಿರುವುದು ಸುಳ್ಳಲ್ಲ. ಈ ಹಿಂದೆ ಪುನೀತ್ ರಾಜ್‌ಕುಮಾರ್ ತಮ್ಮ ಮನೆಗೆ ದೀಪಾವಳಿ ಹಬ್ಬದ ಸಡಗರದ ಬಗ್ಗೆ ಮಾತನಾಡಿದ್ದರು. ಸುವರ್ಣ ನ್ಯೂಸ್ ವಾಹಿನಿ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ದೀಪಾವಳಿ ಹಬ್ಬ ಅಂದರೆ ಬಲುಜೋರು. ಪೂಜೆ ಪುನಸ್ಕಾರದ ಜೊತೆಗೆ ಹಬ್ಬದ ಊಟವೂ ಚೆನ್ನಾಗಿರುತ್ತಾರೆ. ಒಂದು ದಿನ ವೆಜ್ ಬಳಿಕ ನಾನ್ ವೆಜ್ ಊಟ ಎಂದಿದ್ದರು.
ಅಣ್ಣಾವ್ರ ಕಾಲದ ದೀಪಾವಳಿ ಹಬ್ಬದ ಬಗ್ಗೆಯೂ ಪುನೀತ್ ಮಾತನಾಡಿದ್ದರು. "ಅಪ್ಪಾಜಿ ಇರುವಾಗ ಬಹಳ ಸಡಗರದಿಂದ ದೀಪಾವಳಿ ಆಚರಿಸುತ್ತಿದ್ದೆವು. ನಾನು ಮೂರ್ನಾಲ್ಕು ಗಂಟೆ ಪಟಾಕಿ ಹಚ್ಚುವವರೆಗೆ ತಂದೆ ಹೊರಗಡೆ ಕೂತು ನೋಡುತ್ತಿದ್ದರು. ಅವರಿಗೆ ಪಟಾಕಿ ಅಷ್ಟು ಹುಚ್ಚು. ಮಕ್ಕಳು, ಮೊಮ್ಮಕ್ಕಳು ಪಟಾಕಿ ಹೊಡೆಯುವುದನ್ನು ಆನಂದಿಸುತ್ತಿದ್ದರು. ಅಪ್ಪಾಜಿಗೆ ಸರ ಪಟಾಕಿ ಅಂದ್ರೆ ಬಹಳ ಹಚ್ಚುಮೆಚ್ಚಾಗಿತ್ತು" ಎಂದು ಅಪ್ಪು ನೆನಪಿಸಿಕೊಂಡಿದ್ದರು.
ನನಗೂ ಮೊದಲು ಪಟಾಕಿ ಹೊಡೆಯುವ ಹುಚ್ಚು ಇತ್ತು. ಬಳಿಕ ಅದು ಕಮ್ಮಿ ಆಯಿತು. ಇತ್ತೀಚೆಗೆ ನಾನು ಪಟಾಕಿ ಹಚ್ಚಲು ಹೋಗುವುದಿಲ್ಲ ಎಂದು ಪುನೀತ್ ಹೇಳಿದ್ದರು. ವರ್ಷವೆಲ್ಲಾ ಹಬ್ಬ ಆಚರಿಸುತ್ತಲೇ ಇರ್ತೀವಿ. ಆದರೆ ಹಬ್ಬ ಅಂದಾಕ್ಷಣ ಮನೆಮಂದಿ ಎಲ್ಲರೂ ಸೇರುವುದೇ ಬಹಳ ಖುಷಿಯ ವಿಷಯ. ಪಟಾಕಿ ಹಚ್ಚುವಾಗ ಬಟ್ಟೆ ಸುಟ್ಟುಕೊಂಡಿರುವ ಉದಾಹರಣೆಗಳು ಇವೆ ಎಂದು ಅಪ್ಪು ವಿವರಿಸಿದ್ದರು.
ನಮ್ಮ ಮಕ್ಕಳಿಗೂ ಪಟಾಕಿ ಅಂದರೆ ಇಷ್ಟ. ನನ್ನಷ್ಟು ಅವರಿಗೆ ಪಟಾಕಿ ಅಂದರೆ ಭಯವಿಲ್ಲ ಎಂದು ಹೇಳಿ ಪುನೀತ್ ರಾಜ್‌ಕುಮಾರ್ ನಕ್ಕಿದ್ದರು. ಇನ್ನು ಆಪ್ತರ ಜೊತೆ ಅಪ್ಪು ದೀಪಾವಳಿ ಹಬ್ಬದ ಸಂಭ್ರಮದಲ್ಲಿ 'ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು' ಹಾಡು ಹಾಡಿದ್ದ ವೀಡಿಯೋ ವೈರಲ್ ಆಗುತ್ತಿದೆ. ಐದಾರು ವರ್ಷಗಳ ಹಿಂದೆ ದೀಪಾವಳಿ ಶುಭಾಶಯ ಕೋರಿದ್ದ ವೀಡಿಯೋವನ್ನು ಸೋಶಿಯಲ್ ಮೀಡಿಯಾ ನೆನಪಿಸುತ್ತಿದೆ.


Click it and Unblock the Notifications











