13 years of Hudugaru: 'ಹುಡುಗರು' ನೋಡಿ ಸಮುದ್ರ ಖನಿ ಹೇಳಿದ್ದಿದ್ದೇನು?
ಪುನೀತ್ ರಾಜ್‌ಕುಮಾರ್ ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಪಟ್ಟಿಗೆ ಸೇರುವ ಮತ್ತೊಂದು ಸಿನಿಮಾ 'ಹುಡುಗರು'. ಚಕ್ರೇಶ್ವರಿ ಕಂಬೈನ್ಸ್ ಬ್ಯಾನರ್‌ನಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಸಿನಿಮಾ ನಿರ್ಮಿಸಿದ್ದರು. ಕೆ. ಮಾದೇಶ್ ಆಕ್ಷನ್ ಕಟ್ ಹೇಳಿದ್ದರು.
ತಮಿಳಿನ 'ನಾಡೊಡಿಗಳ್' ಸಿನಿಮಾ ನೋಡಿ ಪುನೀತ್ ರಾಜ್‌ಕುಮಾರ್ ಇಷ್ಟಪಟ್ಟಿದ್ದರು. ಈ ಚಿತ್ರವನ್ನು ಕನ್ನಡದಲ್ಲಿ ಮಾಡಬೇಕು ಎಂದುಕೊಂಡಿದ್ದರು. ಲೂಸ್ ಮಾದ ಯೋಗಿ ಹಾಗೂ ಶ್ರೀನಗರ ಕಿಟ್ಟಿ ಸಾಥ್ ನೀಡಿದರು. ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿಬಂದಿತ್ತು. ಮೇ 5, 2011ರಂದು ಬಿಡುಗಡೆಯಾಗಿದ್ದ ಸಿನಿಮಾ 13 ವರ್ಷ ಪೂರೈಸಿದೆ.

ರೀಮೆಕ್ ಸಿನಿಮಾ ಆಗಿದ್ದರೂ ಕನ್ನಡ ನೇಟಿವಿಟಿಗೆ ತಕ್ಕಂತೆ ಒಂದಷ್ಟು ಬದಲಾವಣೆ ಮಾಡಿಕೊಳ್ಳಲಾಗಿತ್ತು. ವಿ. ಹರಿಕೃಷ್ಣ ಮ್ಯೂಸಿಕ್‌ನಲ್ಲಿ ಆಲ್ಬಮ್ ಹಿಟ್ ಆಗಿ ಚಿತ್ರಕ್ಕೆ ಪ್ಲಸ್ ಆಗಿತ್ತು. ರಾಧಿಕಾ ಪಂಡಿತ್, ಅಭಿನಯ, ರಮ್ಯಾ ಬಾರ್ನಾ, ರಂಗಾಯಣ ರಘು ಚಿತ್ರದ ತಾರಾಗಣದಲ್ಲಿದ್ದರು. ಸ್ನೇಹಿತನ ಪ್ರೀತಿಗೆ ಸಹಾಯ ಮಾಡಲು ಹೋಗಿ ಸ್ನೇಹಿತರು ಪಡುವ ಪಾಡು ಎಂಥದ್ದು ಎನ್ನುವುದು ಸಿನಿಮಾ ಒನ್‌ಲೈನ್ ಸ್ಟೋರಿ.
ಸ್ನೇಹಿತರು ಪ್ರಾಣವನ್ನೇ ಪಣಕ್ಕಿಟ್ಟು ಪ್ರೇಮಿಗಳನ್ನು ಒಂದು ಮಾಡುತ್ತಾರೆ. ಆದರೆ ಅವರಿಬ್ಬರು ತಮ್ಮ ಈಗೋ ಕಾರಣಕ್ಕೆ ದೂರಾಗುತ್ತಾರೆ. ಅವರ ಪ್ರೀತಿಗೆ ಸಹಾಯ ಮಾಡಿದ ಸ್ನೇಹಿತರೇ ಕೊನೆಗೆ ಅವರಿಗೆ ಬುದ್ಧಿ ಕಲಿಸುವ ಕಥೆ ಚಿತ್ರದಲ್ಲಿತ್ತು. ಸಿಂಪಲ್ ಕಥೆಗೆ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಬರೆಸಿ ತೆರೆಗೆ ತರಲಾಗಿತ್ತು. ಹೀರೊಯಿಸಂ ಕಮ್ಮಿ ಮಾಡಿ ಸೀದಾ ಸಾದಾ ಕಥೆಯನ್ನು ಕಟ್ಟಿಕೊಡಲಾಗಿತ್ತು.
ಪ್ರಭು(ಪುನೀತ್ ರಾಜ್‌ಕುಮಾರ್)ಗೆ ಸರ್ಕಾರಿ ಉದ್ಯೋಗ ಸಿಕ್ಕರೆ ಮಗಳನ್ನು ಕೊಡ್ತೀನಿ ಎನ್ನುವ ಮಾವ. ಸಿದ್ಧ(ಯೋಗಿ)ನಿಗೆ ದುಬೈಗೆ ಹೋಗಿ ಕೆಲಸ ಮಾಡಿ ಕುಟುಂಬವನ್ನು ಪೋಷಿಸುವ ಕನಸು. ಬ್ಯಾಂಕ್‌ನಲ್ಲಿ ಸಾಲ ಮಾಡಿ ಕಂಪ್ಯೂಟರ್ ಸೆಂಟರ್ ತೆರೆಯುವ ಲೆಕ್ಕಾಚಾರದಲ್ಲಿರುವ ಚಂದ್ರ(ಕಿಟ್ಟಿ). ಪ್ರಭು ಸ್ನೇಹಿತ ಸುಧೀರ್ ಪ್ರೀತಿಗೆ ಸಹಾಯ ಮಾಡಲು ಹೋಗಿ ಮೂವರು ಸಮಸ್ಯೆಗಳಿಗೆ ಸಿಲುಕುತ್ತಾರೆ. ಅದರಿಂದ ಹೊರಬರುವ ವೇಳೆ ಮದುವೆ ಆಗಿದ್ದ ಸುಧೀರ್-ಸುಷ್ಮಾ ದೂರಾಗುತ್ತಾರೆ. ಅಲ್ಲಿಂದ ಕೊನಗೆ ಕ್ಲೈಮ್ಯಾಕ್ಸ್.

ಫ್ಯಾಮಿಲಿ ಆಡಿಯನ್ಸ್‌ಗೂ 'ಹುಡುಗರು' ಸಿನಿಮಾ ಇಷ್ಟವಾಗಿತ್ತು. ಅಂದಹಾಗೆ ಚಿತ್ರಕ್ಕೆ ಮೊದಲು ಚಿತ್ರತಂಡ ಬೇರೆ ಬೇರೆ ಟೈಟಲ್‌ಗಳ ಪರಿಶೀಲನೆಯಲ್ಲಿತ್ತು. 'ಪಟಾಲಂ' ಹಾಗೂ 'ದೋಸ್ತ್' ಇವೆರಡರಲ್ಲಿ ಒಂದನ್ನು ಫೈನಲ್ ಮಾಡುವ ಲೆಕ್ಕಾಚಾರದಲ್ಲಿತ್ತು. ಅಷ್ಟರಲ್ಲಿ ನಿರ್ದೇಶಕ ಯೋಗರಾಜ್ ಭಟ್ 'ಹುಡುಗರು' ಟೈಟಲ್ ಕೊಟ್ಟಿದ್ದರು. ಚಿತ್ರತಂಡಕ್ಕೂ ಅದೇ ಇಷ್ಟವಾಗಿ ಕೊನೆಗೆ ಅದೇ ಫಿಕ್ಸ್ ಆಗಿತ್ತು.
'ಹುಡುಗರು' ಚಿತ್ರದ ಎಲ್ಲಾ ಹಾಡುಗಳು ಹಿಟ್ ಲಿಸ್ಟ್ ಸೇರಿತ್ತು. ಯೋಗರಾಜ್ ಭಟ್ ಬರೆದ 'ತೊಂದ್ರೆ ಇಲ್ಲ ಪಂಕಜಾ' ಇವತ್ತಿಗೂ ಪಡ್ಡೆ ಹುಡುಗರ ಹಾಟ್ ಫೇವರಿಟ್. ಜಯಂತ್ ಕಾಯ್ಕಿಣಿ ಬರೆ ನೀರಲ್ಲಿ 'ಸಣ್ಣ ಅಲೆಯೊಂದು' ಪ್ರೇಮಿಗಳಿಗೆ ಇಷ್ಟವಾಗುತ್ತದೆ. ಇನ್ನು ನಾಗೇಂದ್ರ ಪ್ರಸಾದ್ ಸಾಹಿತ್ಯದ 'ಏನ್ ಚೆಂದಾನೇ ಹುಡುಗಿ' ಹಾಗೂ 'ಶಂಭೋ ಶಿವ ಶಂಭೋ' ಕೂಡ ಸಖತ್ ಸದ್ದು ಮಾಡಿತ್ತು.
'ಹುಡುಗರು' ಸಿನಿಮಾ 13 ವರ್ಷ ಪೂರೈಸಿರುವ ಬಗ್ಗೆ ಚಿತ್ರದ ನಿರ್ದೇಶಕ ಕೆ. ಮಾದೇಶ್ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. "ಬಹಳ ಅದ್ಧೂರಿಯಾಗಿ ಸಿನಿಮಾ ಬಂದಿತ್ತು. ನಾನು ಕೇಳಿದ್ದನ್ನೆಲ್ಲಾ ನಿರ್ಮಾಪಕರು ಕೊಟ್ಟರು. ಅಪ್ಪು ಸರ್, ಯೋಗಿ, ಕಿಟ್ಟಿ ಎಲ್ಲರೂ ಚೆನ್ನಾಗಿ ನಟಿಸಿದ್ದರು. ತಮಿಳಿಗಿಂತ ಒಂದಷ್ಟು ಬದಲಾವಣೆ ಮಾಡಿ ಕನ್ನಡದಲ್ಲಿ ಸಿನಿಮಾ ಮಾಡಿದ್ದೆವು"
"ಯಾರೇ ಕೂಗಾಡಲಿ' ಸಿನಿಮಾ ಮಾಡಲು ಬಂದಾಗ ಖುದ್ದು ತಮಿಳು ನಿರ್ದೇಶಕ ಸಮುಗ್ರ ಖನಿ ನಮ್ಮ ಸಿನಿಮಾ ಬಗ್ಗೆ ಮಾತನಾಡಿದ್ದರು. ಬಹಳ ಹೊತ್ತು ನನ್ನ ಜೊತೆ 'ಹುಡುಗರು' ಸಿನಿಮಾ ಬಗ್ಗೆ ಚರ್ಚಿಸಿದ್ದರು. ನಮಗಿಂತ ಚೆನ್ನಾಗಿ ಮಾಡಿದ್ದೀರಾ? ಈ ಸಿನಿಮಾ ನೋಡುತ್ತಿದ್ದರೆ ಮತ್ತೊಮ್ಮೆ ಚಿತ್ರವನ್ನು ತಮಿಳಿಗೆ ರೀಮೆಕ್ ಮಾಡಬೇಕು ಎನಿಸುತ್ತಿದೆ ಎಂದು ಹೇಳಿದ್ದರು" ಎಂದು ಮಾದೇಶ್ ತಿಳಿಸಿದ್ದಾರೆ.


Click it and Unblock the Notifications











