twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಸಿನಿಮಾರಂಗ ಪ್ಯಾನ್ ಇಂಡಿಯಾ ಸಿನಿಮಾಗಳ ಬೆನ್ನತ್ತಿದರೆ ಮೊದಲಿಗೆ ಮೋಸ!

    |

    ಈಗ ಯಾವುದೇ ಒಂದು ದೊಡ್ಡ ಬಂಡವಾಳ ಹೂಡಿಕೆಯ ಚಿತ್ರ ಅದು ಒಂದು ಭಾಷೆಯ ಚಿತ್ರವಾಗಿ ಉಳಿದಿಲ್ಲ, ಬದಲಾಗಿ ಅದಕ್ಕೆ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಟ್ಯಾಗ್ ಲೈನ್ ಅಂಟಿಕೊಂಡಿರುತ್ತದೆ. ಪ್ಯಾನ್ ಇಂಡಿಯಾ ಸಿನಿಮಾ ಅಂದರೆ ಈಗ ಬಜೆಟ್ ಬರೋಬ್ಬರಿ ಇನ್ನೂರರಿಂದ ಮುನ್ನೂರು ಕೋಟಿ ಖಂಡಿತ ಬೇಕಾಗುತ್ತದೆ. ಇನ್ನು ಇದೇ ಜನವರಿ 7ರಂದು ಬಿಡುಗಡೆಯಾಗುತ್ತಿರುವ 'ಆರ್ ಆರ್ ಆರ್' ಚಿತ್ರದ ಬಜೆಟ್ ಕೂಡ ಸುಮಾರು 400 ಕೋಟಿ. ಇದರ ಒಟ್ಟು ಥಿಯೇಟ್ರಿಕಲ್ ರೈಟ್ಸ್ ಮಾರಾಟವಾಗಿರುವುದು ಸುಮಾರು 570 ಕೋಟಿಗೆ! ಅಂದರೆ ಡಿಸ್ಟ್ರಿಬ್ಯೂಟರ್ ಗಳ ಪಾಲಿಗೆ ಈ ಚಿತ್ರ ಲಾಭ ಮಾಡಬೇಕಾದರೆ ಸುಮಾರು 650-700 ಕೋಟಿ ರು ಗಳಿಕೆ ಮಾಡಬೇಕು.

    ಅದೇ ರೀತಿ 'ರಾಧೇಶ್ಯಾಮ್' ಚಿತ್ರದ ಬಜೆಟ್ ಕೂಡ ಸುಮಾರು 300 ಕೋಟಿ ಇದರ ಥಿಯೇಟರ್ ಸುಮಾರು 400 ಕೋಟಿ ರು ಗೆ ಮಾರಾಟವಾಗಿದೆ ಈ ಚಿತ್ರ ಸುಮಾರು 500 ಕೋಟಿ ವ್ಯಾಪಾರ ಮಾಡಿದರೆ ಮಾತ್ರ ಹಾಕಿದ ಬಜೆಟ್ ವಾಪಸ್ ಬಂದಂತೆ. ಈಗ ಕೆಲವು ನಿರ್ದೇಶಕರು ಪ್ಯಾನ್ ವರ್ಲ್ಡ್ ಸಿನಿಮಾ ಅಂತ ಹೊರಟಿದ್ದಾರೆ ಅದರಲ್ಲಿ ಸಂದೀಪ್ ರೆಡಿ ವಂಗಾ ನಿರ್ದೇಶನದ ಸ್ಪಿರಿಟ್ ಸುಮಾರು 550 ಕೋಟಿ ಬಜೆಟ್. ಇನ್ನು ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಪ್ರಾಜೆಕ್ಟ್- ಕೆ' ಚಿತ್ರದ ಬಜೆಟ್ ಸುಮಾರು 700 ಕೋಟಿ. ಇನ್ನು ಈ ಚಿತ್ರಗಳ ಥಿಯೇಟ್ರಿಕಲ್ ರೈಟ್ಸ್ ಎಷ್ಟು ಆಗಬಹುದು ಮತ್ತು ಈ ಚಿತ್ರಗಳು ಎಷ್ಟು ವ್ಯವಹಾರ ಮಾಡಿದರೆ ಹೂಡಿದ ಬಂಡವಾಳ ವಾಪಸ್ ಬರುತ್ತದೆ ಅಂತ ನೀವೇ ಯೋಚಿಸಿ? ಇಷ್ಟಕ್ಕೂ ಪ್ರತಿ ಪ್ಯಾನ್ ಇಂಡಿಯಾ ಸಿನಿಮಾ ಕೂಡ ಅಷ್ಟು ದೊಡ್ಡ ಮಟ್ಟದ ಹಣವನ್ನು ನಿರ್ಮಾಪಕರುಗಳಿಗೆ ರಿಟರ್ನ್ಸ್ ಕೊಡಲು ಸಾಧ್ಯವೇ?

    ಪ್ಯಾನ್ ಸಿನಿಮಾ ಆದರೂ ಮೂಲದಲ್ಲಿ ತಯಾರಾಗುವುದು ಒಂದೇ ಭಾಷೆಯಲ್ಲಿ

    ಪ್ಯಾನ್ ಸಿನಿಮಾ ಆದರೂ ಮೂಲದಲ್ಲಿ ತಯಾರಾಗುವುದು ಒಂದೇ ಭಾಷೆಯಲ್ಲಿ

    ನೀವು ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಅಂತ ತೆಗೆದುಕೊಂಡರು ಅದು ಅನೇಕ ಭಾಷೆಗಳಲ್ಲಿ ಬಿಡುಗಡೆಯಾದರೂ ಸಹ ಅದರ ಮೂಲ ಚಿತ್ರೀಕರಣದ ಭಾಷೆ ಮಾತ್ರ ಒಂದೇ. 'ಕೆಜಿಎಫ್' ಚಿತ್ರ ಎಷ್ಟೇ ಭಾಷೆಗಳಲ್ಲಿ ಬಿಡುಗಡೆಯಾದರೂ ಅದರ ಮೂಲ ಭಾಷಾ ಚಿತ್ರೀಕರಣ ನಡೆದಿರುವುದು ಕನ್ನಡದಲ್ಲಿಯೇ. 'ಆರ್ ಆರ್ ಆರ್' ಚಿತ್ರದಲ್ಲಿ ಎಷ್ಟೇ ಬಾಲಿವುಡ್ ನಟ-ನಟಿಯರು ಅಭಿನಯಿಸಿದರು ಅದು ಮೂಲದಲ್ಲಿ ತೆಲುಗು ಚಿತ್ರವೇ. '83' ಚಿತ್ರವನ್ನು ಎಷ್ಟೇ ದಕ್ಷಿಣ ಭಾರತದಲ್ಲಿ ಡಬ್ ಮಾಡಿ ಬಿಡುಗಡೆ ಮಾಡಿದರು ಅದು ಮೂಲದಲ್ಲಿ ಹಿಂದಿ ಚಿತ್ರವೇ ಆಗಿರುತ್ತದೆ. ಹೀಗಾಗಿ ಪ್ರತಿ ಪ್ಯಾನ್ ಇಂಡಿಯಾ ಸಿನಿಮಾ ಕೂಡ ಒಂದಲ್ಲ ಒಂದು ಭಾಷೆಯಿಂದಲೇ ಬೆಳೆದು ಇತರ ಕಡೆಗೆ ಹೊರಡುತ್ತದೆ. ಹೀಗಾಗಿ ಅದು ಮೂಲ ಭಾಷೆಯಲ್ಲಿ ತಯಾರಾಗುವ ಕಡೆ ಹೆಚ್ಚಿನ ವ್ಯವಹಾರ ಮಾಡಬೇಕಾಗುತ್ತೆ. ಅದು ಅಲ್ಲಿ ಗೆದ್ದರೆ ಮಾತ್ರವೇ ಉಳಿದ ಕಡೆ ಅದರ ಇಂಪ್ಯಾಕ್ಟ್ ಕ್ರಿಯೇಟ್ ಆಗುತ್ತದೆ.

    ಎಲ್ಲಾ ಚಿತ್ರಗಳು ಬಾಹುಬಲಿ- ಕೆಜಿಎಫ್ ಆಗಲ್ಲ

    ಎಲ್ಲಾ ಚಿತ್ರಗಳು ಬಾಹುಬಲಿ- ಕೆಜಿಎಫ್ ಆಗಲ್ಲ

    'ಬಾಹುಬಲಿ-2' ಹಿಂದಿ ವರ್ಷನ್ ಅದರ ಮೂಲ ಭಾಷೆಯಾದ ತೆಲುಗು ವರ್ಷನ್ ಗಿಂತ ಹೆಚ್ಚಿನ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಹಿಂದಿ ಚಿತ್ರ 'ಬಾಹುಬಲಿ- 2'! ಅದರ ಥಿಯೇಟರ್ ಬಿಸಿನೆಸ್ ಒಟ್ಟು 550 ಕೋಟಿ ಆಗಿದೆ. ಅದರ ಹತ್ತಿರಕ್ಕೂ ಕೂಡ ಯಾವುದೇ ನೇರ ಹಿಂದಿ ಚಿತ್ರ ಬರುತ್ತಿಲ್ಲ. ಇನ್ನು 'ಕೆಜಿಎಫ್-2' ಚಿತ್ರ ಕೂಡ ನೇರ ಹಿಂದಿ ಚಿತ್ರಗಳಿಗಿಂತ ಹೆಚ್ಚಿನ ಗಳಿಕೆ ಮಾಡುವ ಎಲ್ಲಾ ಅವಕಾಶಗಳಿವೆ. ಹಾಗಂತ ದಕ್ಷಿಣದಿಂದ ಹೋಗುವ ಎಲ್ಲಾ ಪ್ಯಾನ್ ಇಂಡಿಯಾ ಸಿನಿಮಾಗಳು ಬಾಹುಬಲಿ -ಕೆಜಿಎಫ್ ಚಿತ್ರಗಳಂತೆ ಭಾರಿ ಗಳಿಕೆ ಮಾಡಲು ಸಾಧ್ಯವಾಗುವುದಿಲ್ಲ. 'ಬಾಹುಬಲಿ-2' ಅಂತೆ 'ಆರ್ ಆರ್ ಆರ್' ಚಿತ್ರದ ಗಳಿಕೆ ಮಾಡಲು ಸಾಧ್ಯ ಅಂತ ನೀವು ಯೋಚಿಸುತ್ತೀರಾ?. ಸಾಧ್ಯವೇ ಇಲ್ಲ, 'ಬಾಹುಬಲಿ-2' ಅಷ್ಟು ಯಶಸ್ವಿಯಾಗಲು ಮುಖ್ಯಕಾರಣ 'ಬಾಹುಬಲಿ-1' ಚಿತ್ರದಲ್ಲಿ 'ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ?' ಎಂಬ ಸಸ್ಪೆನ್ಸ್. ಅದೊಂದು ರಾಷ್ಟ್ರೀಯ ವಿದ್ಯಮಾನದಂತೆ ಅನೇಕ ತಿಂಗಳುಗಳ ಕಾಲ ಈ ದೇಶದಲ್ಲಿ ಚರ್ಚೆ ಆಯಿತು ಹಾಗಾಗಿಯೇ 'ಬಾಹುಬಲಿ 2' ಚಿತ್ರಕ್ಕೆ ಅಂತ ಕ್ರೇಜ್ ಸಿಕ್ಕಿದ್ದು.

    ಇನ್ನು 'ಕೆಜಿಎಫ್ -2' ಚಿತ್ರದ ಒಂದೇ ಒಂದು ವಿಡಿಯೋ ಇಡೀ ಪ್ರಪಂಚವನ್ನು ಅಲುಗಾಡಿಸಿದೆ. ಹಾಲಿವುಡ್ ಮಾದರಿಯ ಮೇಕಿಂಗ್ ಅಲ್ಲಿ ಗಮನ ಸೆಳೆಯುತ್ತಿದ್ದು 'ಕೆಜಿಎಫ್-2'ಚಿತ್ರ ನೋಡಲೇಬೇಕು ಅಂತ ಪ್ರತಿಯೊಬ್ಬರು ಕಾದು ನೋಡುವಂತೆ ಅದು ಮಾಡಿದೆ. ಹಾಗಂತ ಎಸ್ಎಸ್ ರಾಜಮೌಳಿ ಅವರ 'ಆರ್ ಆರ್ ಆರ್ 'ಅಥವಾ ಪ್ರಶಾಂತ್ ನೀಲ್ ಅವರ 'ಸಲಾರ್' ಚಿತ್ರಗಳು ಇದೇ 'ಬಾಹುಬಲಿ-2' ಮತ್ತು 'ಕೆಜಿಎಫ್ -2'ಚಿತ್ರಗಳ ಇಂಪ್ಯಾಕ್ಟ್ ಕ್ರಿಯೇಟ್ ಮಾಡುವುದರಲ್ಲಿ ಯಶಸ್ವಿಯಾಗಿದೆಯೇ ಅಂತ ಯೋಚಿಸಿ ನೋಡಿ?

    ಸೋತಿವೆ ಸಾಲುಸಾಲು ಪ್ಯಾನ್ ಇಂಡಿಯಾ ಸಿನಿಮಾಗಳು

    ಸೋತಿವೆ ಸಾಲುಸಾಲು ಪ್ಯಾನ್ ಇಂಡಿಯಾ ಸಿನಿಮಾಗಳು

    'ಬಾಹುಬಲಿ -2 'ಚಿತ್ರದ ಬಿಡುಗಡೆಯ ನಂತರ ಪ್ರಭಾಸ್ ಕ್ರೇಜ್ ದೇಶದಲ್ಲಿ ಯಾವ ಮಟ್ಟಿಗೆ ಇದೆ ಅಂತ ಬಿಡಿಸಿ ಹೇಳಬೇಕಾಗಿಲ್ಲ. 'ಬಾಹುಬಲಿ-2' ಬಿಡುಗಡೆಯ ನಂತರ ಬಂದಂತಹ ಪ್ರಭಾಸ್ ಅಭಿನಯದ 'ಸಾಹೋ' ಚಿತ್ರ ಏನಾಯ್ತು? ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಹಿಂದಿ ಬೆಲ್ಟ್ ನಲ್ಲಿ ಯಾವುದೇ ತರದ ಇಂಪ್ಯಾಕ್ಟ್ ಕ್ರಿಯೇಟ್ ಮಾಡಲೇ ಇಲ್ಲ. ಹಿಂದಿಯಲ್ಲಿ ದೊಡ್ಡಮಟ್ಟದಲ್ಲಿ ಬಿಡುಗಡೆಯಾದ ರಜನಿಕಾಂತ್ ಅಭಿನಯದ 'ಕಬಾಲಿ' ಇನ್ನಿಲ್ಲದಂತೆ ನೆಲಕಚ್ಚಿತ್ತು. 'ಪುಷ್ಪ' ತಕ್ಕ ಮಟ್ಟಿಗೆ ಯಶಸ್ಸನ್ನು ಕಂಡಿದೆ ಆದರೆ ಅದರ ಹಿಂದಿಯಲ್ಲಿ ಗಳಿಕೆ ಬರೋಬ್ಬರಿ 30 ಕೋಟಿವರೆಗೆ ಬರಬಹುದು. 'ಪುಷ್ಪ'ದ ಬಹುತೇಕ ಗಳಿಕೆ ಬಂದಿರುವುದು ತೆಲುಗು ಅವತರಣಿಕೆಯಿಂದ. 'ಪುಷ್ಪ' ಅಂತಲೇ ಅಲ್ಲ ಯಾವುದೇ ಒಂದು ಸಿನಿಮಾ ತೆಗೆದುಕೊಂಡರು ಅದರ ಮೂಲ ಅವತರಣಿಕೆಯಿಂದ ಸಿನಿಮಾ ಹೆಚ್ಚಿನ ಹಣ ಗಳಿಸಬೇಕಾಗುತ್ತದೆ. ಈಗ ರಾಜಮೌಳಿ ಅವರ ಮುಂದಿನ ಚಿತ್ರ 'ಆರ್ ಆರ್ ಆರ್' ತೆಗೆದುಕೊಂಡರು ಅದು ಹೆಚ್ಚಿನ ಗಳಿಕೆ ಮಾಡುವುದು, ಮಾಡಬೇಕಾದದ್ದು ಕೂಡ ಮೂಲ ಅವತರಣಿಕೆಯಾದ ತೆಲುಗು ಭಾಷೆಯಲ್ಲಿಯೇ. ನಾಳೆ 'ಕೆಜಿಎಫ್-2' ಬಿಡುಗಡೆಯಾದರೂ ಅದರ ಮೊದಲ ಮೂಲ ಪ್ರೇಕ್ಷಕ ಕನ್ನಡಿಗನೆ!

    ಮಾರ್ಕೆಟಿಂಗ್ ಮಾಡುವುದು ಗೊತ್ತಿರಬೇಕು!

    ಮಾರ್ಕೆಟಿಂಗ್ ಮಾಡುವುದು ಗೊತ್ತಿರಬೇಕು!

    ಬಂಡವಾಳ ಹೂಡುವುದು ಅಷ್ಟೇ ಅಲ್ಲ ಅದನ್ನು ದೊಡ್ಡಮಟ್ಟದಲ್ಲಿ ಮಾರ್ಕೆಟಿಂಗ್ ಮಾಡಬೇಕಾದ ಜವಾಬ್ದಾರಿ ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ದೇಶಕರು, ನಿರ್ಮಾಪಕರು ಮತ್ತು ನಟ-ನಟಿಯರ ಮೇಲಿರುತ್ತದೆ. ಸಿನಿಮಾ ಮಾಡುವುದರ ಜೊತೆಗೆ ಮಾರ್ಕೆಟಿಂಗ್ ಮೇಲೆ ಕೂಡ ದೊಡ್ಡ ಪ್ರಮಾಣದಲ್ಲಿ ಹಣ ಹೂಡಬೇಕಾಗುತ್ತದೆ. ಜೊತೆಗೆ ಮುಖ್ಯವಾಗಿ ಕಥಾವಸ್ತುವಿಗೆ ಯುನಿವರ್ಸಲ್ ಅಪೀಲ್ ಇರಬೇಕಾಗುತ್ತದೆ. ಅಂದರೆ ಇದನ್ನು ಯಾವುದೇ ಪ್ರದೇಶದಲ್ಲಿ ನೋಡಿದರೂ ಕೂಡ ಜನ ಕನೆಕ್ಟ್ ಆಗಲಿಕ್ಕೆ ಬೇಕಾದಂತಹ ಕಥಾವಸ್ತು ಮತ್ತು ಮೇಕಿಂಗ್ ಅದರಲ್ಲಿ ಗಮನ ಸಳೆಯಬೇಕಾಗುತ್ತದೆ. ಇದು ಎಲ್ಲಾ ಕಾಲದಲ್ಲಿ ಎಲ್ಲಾ ಚಿತ್ರಗಳಿಗೂ ಕೂಡ ಅನ್ವಯಿಸಿ ನೋಡಲಿಕ್ಕೆ ಆಗುವುದಿಲ್ಲ. ಆದರೆ ಹೌದು ಇತ್ತೀಚಿನ ಸೌತ ಸಿನಿಮಾಗಳ ಇಂಪ್ಯಾಕ್ಟ್ ಮಾತ್ರ ಖಂಡಿತ ದೇಶವ್ಯಾಪ್ತಿ ಬೆಳೆಯುತ್ತಿದೆ. ಹೀಗಾಗಿ ಸುಮಾರಾಗಿ ನಾರ್ಥ್ ಬೆಲ್ಟ್ ಅಲ್ಲಿ ಹಿಂದಿ ಚಿತ್ರಗಳಿಗೆ ಸರಿಸಮವಾದ ಮಟ್ಟದ ವ್ಯವಹಾರ ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ನಡೆಯುತ್ತಿದೆ. ಹಾಗಂತ ಎಲ್ಲಾ ಚಿತ್ರಗಳು ಕೂಡ ನಾರ್ಥ್ ಬೆಲ್ಟ್ ನಲ್ಲಿ ಬಾಹುಬಲಿ- ಕೆಜಿಎಫ್ ಚಿತ್ರಗಳಂತೆ ಗಳಿಕೆ ಮಾಡಲು ಸಾಧ್ಯವಿಲ್ಲ.

    ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಆಗಲು ಸಾಧ್ಯವೇ?

    ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಆಗಲು ಸಾಧ್ಯವೇ?

    ಕನ್ನಡದಲ್ಲೂ ಸಾಕಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳು ಈಗ ತಲೆಯೆತ್ತುತ್ತಿದೆ. ಸುದೀಪ್ ಅಭಿನಯದ 'ವಿಕ್ರಾಂತ್ ರೋಣ', ಉಪೇಂದ್ರ ಅವರ 'ಕಬ್ಜಾ',ರಕ್ಷಿತ್ ಶೆಟ್ಟಿ ಅಭಿನಯದ 'ಚಾರ್ಲಿ', ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್',
    ದರ್ಶನ್ ಅಭಿನಯದ 'ಕ್ರಾಂತಿ' ಇದೆಲ್ಲಾ ಮುಂಬರುವ ಪ್ಯಾನ್ ಇಂಡಿಯಾ ಸಿನಿಮಾಗಳು ಅಂತ ಹೇಳಲಾಗುತ್ತಿದೆ. ನೀವು ಪ್ಯಾನ್ ಇಂಡಿಯಾ ಸಿನಿಮಾ ಅಂತ ಮಾಡಬೇಕಾದಾಗ ಶೂಟಿಂಗ್ ನಂಬರ್ ಆಫ್ ಡೇಸ್ ಹೆಚ್ಚುತ್ತೆ, ಹೊರಗಿನ ಮುಖಗಳಿಗೆ ಹೆಚ್ಚಿಗೆ ಮನ್ನಣೆ ಕೊಡಬೇಕಾಗುತ್ತದೆ, ಮೇಕಿಂಗ್ ನಲ್ಲಿ ವಿಶೇಷತೆ ಮತ್ತು ಗ್ರಾಫಿಕ್ಸ್ ಗಾಗಿ ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ. ಇದರ ನಂತರ ಇತರ ಭಾಷೆಗಳಿಗೆ ಸಮರ್ಥವಾದ ಡಬ್ಬಿಂಗ್ ಮಾಡಿಸಿ ಅದನ್ನು ಮಾರ್ಕೆಟಿಂಗ್ ಮಾಡಿ, ಬಿಡಗಡೆ ಮಾಡಬೇಕಾಗುತ್ತದೆ. ಹೀಗೆ ಮಾಡಬೇಕಾದರೆ ಕನಿಷ್ಠ 100 ಕೋಟಿ ಬಂಡವಾಳದಿಂದ 150 ಕೋಟಿ ಹಣ ಹೂಡಬೇಕಾಗುತ್ತದೆ. ಅಂದರೆ ಇದು ಕನಿಷ್ಠ 150 ರಿಂದ 200 ಕೋಟಿ ಬಿಸಿನೆಸ್ ಮಾಡಿದರೆ ಮಾತ್ರ ಸಿನಿಮಾ ಗೆಲ್ಲುತ್ತೆ. ಕರ್ನಾಟಕದ ಒಟ್ಟು ಸಿನಿಮಾದ ಮಾರ್ಕೆಟ್ 100 ಕೋಟಿ. ಅಂದರೆ ಉಳಿದ 75ರಿಂದ 100 ಕೋಟಿ ಹಣವನ್ನು ನೀವು ಇತರ ಭಾಷೆಗಳಿಂದ ಪಡೆಯಬೇಕಾಗುತ್ತದೆ. ಮತ್ತೊಂದು ಅಂಶ ಯಾವುದೇ ಚಿತ್ರದ ಪೂರ್ಣ ಗಳಿಕೆಯ ನಿರ್ಣಯ ಮೊದಲ ಮೂರು ದಿನದ ಮೇಲೆ ನಿಂತಿರುತ್ತದೆ. ಅಂದರೆ ಕರ್ನಾಟಕದಲ್ಲಿ ಮೊದಲ ಮೂರು ದಿನದಲ್ಲಿ ಚಿತ್ರ 20 ರಿಂದ 30 ಕೋಟಿ ವ್ಯವಹಾರ ಮಾಡಬೇಕಾಗುತ್ತೆ.

    ಮೊದಲ ವಾರಾಂತ್ಯಕ್ಕೆ ಕನಿಷ್ಠ 50ರಿಂದ 60 ಕೋಟಿ ಗಳಿಕೆ ಮಾಡಬೇಕು. ಎರಡನೇ ವಾರದಲ್ಲಿ 30 ಕೋಟಿ ಮೂರನೇ ವಾರದಲ್ಲಿ 10 ಕೋಟಿ ಗಳಿಕೆ ಕಂಡರೆ ಅದು 100 ಕೋಟಿ ಕ್ಲಬ್ ಸೇರಲು ಸಾಧ್ಯವಾಗುತ್ತದೆ. ಅಂದರೆ 75 ರಿಂದ 100 ಕೋಟಿ ಉಳಿದ ಭಾಷೆಯಿಂದ ಬರಬೇಕಾದರೆ ಉಳಿದೆಲ್ಲಾ ಭಾಷೆಗಳಲ್ಲಿ ಸೇರಿ ಅದು 75 ರಿಂದ 100 ಕೋಟಿಯನ್ನು ಮೂರುವಾರದಲ್ಲಿ ಗಳಿಕೆ ಮಾಡಬೇಕಾಗುತ್ತೆ. ಒಂದು ಕನ್ನಡ ಸಿನಿಮಾಗೆ ಉಳಿದ ಭಾಷೆಗಳಲ್ಲಿ ಮೂರು ವಾರ ಸತತವಾಗಿ ಚಿತ್ರಮಂದಿರ ದೊರೆಯುತ್ತದೆ? ದೊರೆತರೂ ಅಲ್ಲಿ ಬಿಡುಗಡೆಯಾಗುವ ಚಿತ್ರಗಳ ಕಾಂಪಿಟೇಷನ್ನಲ್ಲಿ ಇಷ್ಟು ಹಣ ಗಳಿಕೆ ಮಾಡಲು ಸಾಧ್ಯವೇ? 'ಕೆಜಿಎಫ್' ಅಂತ ಫ್ರಾಂಚೈಸಿ ಬಿಟ್ಟರೆ ಉಳಿದ ಯಾವ ಚಿತ್ರಗಳು ಈ ತರದ ಗಳಿಕೆಯನ್ನು ಹೊರಗೆ ಮಾಡಲು ಸಾಧ್ಯವಾಗುವುದಿಲ್ಲ.

    200 ಕೋಟಿ ಬಿಸಿನೆಸ್ ಮಾಡಬಹುದೇ?

    200 ಕೋಟಿ ಬಿಸಿನೆಸ್ ಮಾಡಬಹುದೇ?

    ಈಗ ಮುಖ್ಯವಾಗಿ ಇರುವಂತಹ ಪ್ರಶ್ನೆ ಕನ್ನಡ ಚಿತ್ರಗಳನ್ನು ಇಂಡಿಯಾ ಸಿನಿಮಾಗಳಾಗಿ ನೋಡಲು ಸಾಧ್ಯವೇ? ಇದನ್ನು ನಾವು ಎರಡು ಭಾಗದಲ್ಲಿ ಇಟ್ಟು ನೋಡಬೇಕಾಗುತ್ತದೆ. ಮೊದಲು ಈಗ ನಾಯಕ ನಟ 'ಯಶ್' ಇಡೀ ದೇಶವ್ಯಾಪಿ ನಟನಾಗಿ ಬೆಳೆದಿದ್ದಾರೆ. ಹೀಗಾಗಿ ಯಶ್ ಮುಂದಿನ ಚಿತ್ರದ ಮೇಲೆ ಕೂಡ ದೊಡ್ಡಮಟ್ಟದ ಬಂಡವಾಳ ನಿರ್ಮಾಪಕರು ಹೂಡುತ್ತಾರೆ ಮತ್ತು ಅದಕ್ಕೆ ತಕ್ಕಂತೆ ಅದು ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬರುತ್ತದೆ. ಅಂದರೆ ಇನ್ನು ಮುಂದೆ ಯಶ್ ಮಾಡುವ ಪ್ರತಿ ಚಿತ್ರದ ಬಜೆಟ್ ಕೂಡ ಇನ್ನುಮೇಲೆ ಇನ್ನೂರರಿಂದ ಮುನ್ನೂರು ಕೋಟಿ ಇರುತ್ತದೆ. ಯಶ್ ಚಿತ್ರಗಳು ಹಾಗೆಯೇ ಮುಂದೆ ಕೂಡ ಅದೇ ಮಟ್ಟದ ಬಂಡವಾಳ ಹೂಡಿಕೆಗೆ ತಕ್ಕಂತೆ ಇಂಡಿಯಾ ಸಿನಿಮಾಗಳಾಗಿ ವ್ಯವಹಾರ ಮಾಡಿ ಗೆಲ್ಲಬೇಕಾಗುತ್ತದೆ. ಹಾಗೆ ಗೆದ್ದಾಗ ಮಾತ್ರವೇ ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಕನ್ನಡದ ಮತ್ತಷ್ಟು ಚಿತ್ರಗಳು ಹೊರಹೊಮ್ಮಲು ಸಾಧ್ಯವಾಗುತ್ತದೆ. ಆದರೆ ಉಳಿದ ಪ್ಯಾನ್ ಇಂಡಿಯಾ ಸಿನಿಮಾಗಳ ಮೇಲೆ 'ಕೆಜಿಎಫ್' ನಂತಹ ನಿರೀಕ್ಷೆಗಳನ್ನು ಬಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮಗೆ ಒಂದು ಪ್ಯಾನ್ ಇಂಡಿಯಾ ಸಿನಿಮಾ 200ಕೋಟಿ ಬಿಸಿನೆಸ್ ಮಾಡಬೇಕು ಅಂದರೆ ಅದು ಕರ್ನಾಟಕದಲ್ಲಿ 100ಕೋಟಿ ಹಾಗೂ ಹೊರಗೆ 100ಕೋಟಿ ಬಿಸಿನೆಸ್ ಮಾಡಬೇಕಾಗುತ್ತದೆ. ಅಂತಹ ಅವಕಾಶಗಳು ಕೆಜಿಎಫ್ ಫ್ರಾಂಚೈಸಿ ಬಿಟ್ಟರೆ ಇತರ ಚಿತ್ರಗಳ ವಿಷಯದಲ್ಲಿ ದೊಡ್ಡದಾಗಿ ಕಂಡುಬರುತ್ತಿಲ್ಲ.

    ಹೊರಗೆ ಕನ್ನಡ ಸಿನಿಮಾಗಳಿಗೆ ಇರುವ ಮಾರ್ಕೆಟ್ ಎಷ್ಟು?

    ಹೊರಗೆ ಕನ್ನಡ ಸಿನಿಮಾಗಳಿಗೆ ಇರುವ ಮಾರ್ಕೆಟ್ ಎಷ್ಟು?

    ತೆಲುಗು ಚಿತ್ರಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ತೆಗೆದಾಗ ಅದರ ಶೇಕಡ 60ರಷ್ಟು ಬಂಡವಾಳವನ್ನು ತನ್ನ ಮೂಲ ಮಾರ್ಕೆಟ್ ಮೂಲಕವೇ ಪಡೆದುಕೊಳ್ಳುತ್ತದೆ. ಉಳಿದ ಶೇಕಡ 40 ಅದು ಇತರ ಭಾಷೆಗಳ ಮೂಲಕ ಪಡೆಯಬೇಕಾಗುತ್ತದೆ. ಆದರೆ ಕನ್ನಡಕ್ಕೆ ಬಂದಾಗ ಇದು ರಿವರ್ಸ್ ಆಗುತ್ತೆ. ಅಂದರೆ ಕರ್ನಾಟಕದ ಮಾರ್ಕೆಟ್ ಇಂದ 40ರಷ್ಟು ಹಣ ಬಂದರೆ ಉಳಿದ 60ರಷ್ಟು ಹಣ ಇತರ ಭಾಷೆಗಳಿಂದ ಬರಬೇಕಾಗುತ್ತದೆ. ಏಕೆಂದರೆ ಕರ್ನಾಟಕದ ಒಟ್ಟು ಮಾರುಕಟ್ಟೆ 100 ಕೋಟಿ. ಮತ್ತು ಎಲ್ಲಾ ಚಿತ್ರಗಳು ಕರ್ನಾಟಕದಲ್ಲಿ 100 ಕೋಟಿ ಗಳಿಕೆ ಮಾಡಲು ಸಾಧ್ಯವಿಲ್ಲ.ನೀವು ಪ್ರತಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದಾಗಲೂ ಕನ್ನಡ ಸಿನಿಮಾ ಶೇಕಡ 60ರಷ್ಟು ಗಳಿಕೆಯನ್ನು ಹೊರಗಡೆಯಿಂದ ವ್ಯವಹಾರ ಮಾಡಿ ಪಡೆಯಬೇಕಾಗುತ್ತದೆ.ಆದರೆ ಇದು ಎಲ್ಲಾ ಸಿನಿಮಾಗಳಿಗೂ ಸಾಧ್ಯವಾಗದ ಮಾತು, ಕೇವಲ 'ಕೆಜಿಎಫ್' ಅಂತೆ ತುಂಬಾ ದೊಡ್ಡಮಟ್ಟದಲ್ಲಿ ಕ್ರೇಜ್ ಕ್ರಿಯೇಟ್ ಆದ ಸಿನಿಮಾಗಳಿಂದ ಮಾತ್ರ ಸಾಧ್ಯ.

    ಹಾಗೆ ನೋಡಿದರೆ ಈ ವರ್ಷ ಬಿಡುಗಡೆಯಾದ ದರ್ಶನ್ ಅಭಿನಯದ 'ರಾಬರ್ಟ್' , ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರಗಳನ್ನ ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡಿದಾಗ ಅದು ಯಾವುದೇ ನಿರೀಕ್ಷೆಗಳನ್ನು ಮುಟ್ಟಲು ವಿಫಲವಾಗಿದೆ.ಈಗ 'ಮದಗಜ' ಚಿತ್ರ ತೆಲುಗು- ತಮಿಳಿನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ಧರಾಗಿದ್ದಾರೆ. ಆದರೆ ಅಲ್ಲಿ 'ಮದಗಜ' ಎಷ್ಟರಮಟ್ಟಿಗೆ ಹಣ ಮಾಡಲು ಸಾಧ್ಯ? 'ರಾಬರ್ಟ್', 'ಪೊಗರು' 'ಮದಗಜ', ಅಂತಹ ದೊಡ್ಡ ಮಟ್ಟದ ಬಂಡವಾಳ ಹೂಡಿದ ಚಿತ್ರಗಳು ಕರ್ನಾಟಕದಲ್ಲಿ ಕಂಡಂತಹ ಗಳಿಕೆಯನ್ನು ತೆಲುಗು ಅಥವಾ ತಮಿಳಿನಲ್ಲಿ ಕಾಣಲು ಸಾಧ್ಯವಿಲ್ಲ. ಮಾಸ್ ಚಿತ್ರಗಳು ಮೊದಲು ಕನ್ನಡದಲ್ಲಿ ಹೆಚ್ಚಿನ ಹಣಗಳಿಕೆ ಮಾಡಿ ನಂತರ ತೆಲುಗು ಅಥವಾ ತಮಿಳಿನಲ್ಲಿ ಬಿಡುಗಡೆಯಾದಾಗ ಬರಬಹುದಾದ ಹಣ ಅದು ಹೆಚ್ಚುವರಿ ಹಣವಾಗಿ ವರ್ಗಾವಣೆ ಆಗಬೇಕು. ಹೂಡಿದ ಬಂಡವಾಳದ ರಿಕವರಿಗಾಗಿ ಅಲ್ಲಿಗೆ ಹೋದರೆ ಚಿತ್ರ ಖಂಡಿತವಾಗಿ ನಿರ್ಮಾಪಕರ ಕೈ ಕೊಡುತ್ತದೆ.

    ತೆಲುಗು-ತಮಿಳು ಚಿತ್ರಗಳ ಹೊರಗಿನ ಮಾರ್ಕೆಟ್ ಹೇಗಿದೆ?

    ತೆಲುಗು-ತಮಿಳು ಚಿತ್ರಗಳ ಹೊರಗಿನ ಮಾರ್ಕೆಟ್ ಹೇಗಿದೆ?

    ಈಗ 'ಪುಷ್ಪ' ಸಿನಿಮಾ ಒಂದು ವಾರದ ಗಳಿಕೆ 220 ಕೋಟಿ ಅಂತ ಹೇಳುತ್ತಿದ್ದಾರೆ. ಇದರಲ್ಲಿ 170 ಕೋಟಿ ಬಂದಿರುವುದು ತೆಲುಗು ವರ್ಷನ್ ನಲ್ಲಿ. ಉಳಿದ 50 ಕೋಟಿ ಬೇರೆ ಭಾಷೆಗಳಿಂದ ಬಂದಿದೆ. ಅಂದರೆ ಶೇಕಡಾ 75ರಷ್ಟು ಹಣ ಬಂದಿರುವುದು ಮೂಲ ಭಾಷೆಯಿಂದ. ಈಗ ವಿಜಯ್ ಚಿತ್ರ 'ಮಾಸ್ಟರ್' ಒಟ್ಟು ಗಳಿಕೆ 230 ಕೋಟಿ. ಇದರಲ್ಲಿ ಶೇಕಡ 80ರಷ್ಟು ಹಣಗಳಿಕೆ ಥಿಯೇಟರ್ ಗಳಲ್ಲಿ ಆಗಿರುವುದು ತಮಿಳು ಭಾಷೆಯಲ್ಲಿಯೇ. ಯಾವುದೇ ಒಂದು ಚಿತ್ರವನ್ನು ತೆಗೆದುಕೊಂಡರು ಥಿಯೇಟರ್ ಬಿಜಿನೆಸ್ ಅಂತ ನಡೆಯುವುದು ಮೂಲ ಭಾಷೆಯಲ್ಲಿ ಹೆಚ್ಚಿಗೆ. ಬಹುತೇಕ ಅಂದರೆ ಶೇಕಡಾ 70 ರಿಂದ 80 ರಷ್ಟು ಹಣವನ್ನು ಇಲ್ಲಿಂದಲೇ ಪಡೆಯಬೇಕಾಗುತ್ತದೆ.

    ಅದು ಕೂಡ ಬಹುತೇಕ ಗಳಿಕೆಯನ್ನು ಮೊದಲ ವಾರದಲ್ಲೇ ಕಾಣಬೇಕಾಗುತ್ತದೆ. ಡಿಜಿಟಲ್ ಅಥವಾ ಯೂಟ್ಯೂಬ್ ರೈಟ್ಸ್ ಅದು ಪ್ಯಾನ್ ಇಂಡಿಯಾ ಸಿನಿಮಾ ಅಂತ ಕರೆಸಿಕೊಳ್ಳುವುದಿಲ್ಲ. ಯಾವ ಚಿತ್ರ ಥಿಯೇಟರ್ ಗಳಲ್ಲಿ ಬಿಡುಗಡೆ ಆಗುತ್ತದೆ ಮತ್ತು ಅಲ್ಲಿ ವ್ಯವಹಾರ ನಡೆಯುತ್ತದೆ ಅದು ಮಾತ್ರವೇ ಪ್ಯಾನ್ ಇಂಡಿಯಾ ಸಿನಿಮಾ. ತೆಲುಗು ಅಥವಾ ತಮಿಳು ಚಿತ್ರಗಳು ಮೂಲದಲ್ಲಿ 150ರಿಂದ 200 ಕೋಟಿಯನ್ನು ಗಳಿಕೆ ಮಾಡುವುದರಿಂದ ಹೊರಗಿನ ಮಾರ್ಕೆಟ್ ಇಂದ ಪಡೆದುಕೊಳ್ಳುವುದು ಅಥವಾ ಪಡೆದುಕೊಳ್ಳದೇ ಹೋದರು ದೊಡ್ಡಮಟ್ಟದ ನಷ್ಟವೇನೂ ಆಗುವುದಿಲ್ಲ.

    ಕನ್ನಡ ವರ್ಸಸ್ ತೆಲುಗು ಫ್ಯಾನ್ ಇಂಡಿಯಾ ಸಿನಿಮಾಗಳು

    ಕನ್ನಡ ವರ್ಸಸ್ ತೆಲುಗು ಫ್ಯಾನ್ ಇಂಡಿಯಾ ಸಿನಿಮಾಗಳು

    100 ಕೋಟಿ ಬಂಡವಾಳದ ಒಂದು ಕನ್ನಡ ಸಿನಿಮಾ ಸೂಪರ್ ಹಿಟ್ ಅನಿಸಿಕೊಳ್ಳಲು 150 ಕೋಟಿ ಗಳಿಕೆ ಮಾಡಬೇಕಾಗುತ್ತದೆ. ಒಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಿದರೆ ಕರ್ನಾಟಕದಲ್ಲಿ ಕನ್ನಡ ಸಿನಿಮಾಗೆ ಸುಮಾರು 60 ರಿಂದ 80 ಕೋಟಿ ವ್ಯವಹಾರ ನಡೆದರೆ ಇನ್ನುಳಿದ ಭಾಷೆಗಳಲ್ಲಿ ಸರಿ ಸುಮಾರು 80 ಕೋಟಿ ಹಣ ಗಳಿಕೆ ಕಾಣಬೇಕಾಗುತ್ತದೆ. ಅದೇ ನೀವು ಒಂದು ತೆಲುಗು ಚಿತ್ರವನ್ನು ನೋಡಿದರೆ, 'ಪುಷ್ಪ' ಒಟ್ಟು ವಾರದ ಗಳಿಕೆ 220 ಕೋಟಿ. ಸಿನಿಮಾ ಮೇಲೆ ಹೂಡಿರುವ ಬಂಡವಾಳ 180 ಕೋಟಿ. ತೆಲುಗು ವರ್ಷನ್ ಗಳಿಕೆ 170 ಕೋಟಿ ಉಳಿದ ವರ್ಷನ್ ಗಳ ಗಳಿಕೆ 50 ಕೋಟಿ. ಅಂದರೆ ಶೇಕಡ 75 ರಿಂದ 80 ರಷ್ಟು ಬಂಡವಾಳ ವಾಪಸ್ಸು ಬಂದಿರುವುದು ಮೂಲ ಭಾಷೆಯಲ್ಲಿ. ಅಂದರೆ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಕನ್ನಡ ವರ್ಷನ್ ನಿಂದ ಕನ್ನಡ ನಿರ್ಮಾಪಕ ಪಡೆಯಬಹುದಾದ ಶೇಕಡ 40 ರಿಂದ 50 ರಷ್ಟು ಹಣ ಮಾತ್ರ.ಅಂದರೆ 50 ರಿಂದ 60 ರಷ್ಟು ಹೆಚ್ಚುವರಿ ಹಣ ಇತರ ಭಾಷೆಗಳ ಮೂಲಕವೇ ಬರಬೇಕು,ಇದು ತುಂಬಾ ದೊಡ್ಡ ರಿಸ್ಕ್. ನೀವು ಅದೇ ತೆಲುಗು ಅಥವಾ ತಮಿಳು ಸಿನಿಮಾ ತೆಗೆದುಕೊಂಡರೆ ಮೂಲ ವರ್ಷನ್ ಬಿಸಿನೆಸ್ 60 ರಿಂದ 70ರಷ್ಟು ಆಗುತ್ತೆ. ಅದು ಇತರ ಭಾಷೆಗಳಿಂದ ಪಡೆಯಬೇಕಾದದ್ದು 30ರಿಂದ 40ರಷ್ಟು ಹಣ ಮಾತ್ರ. ತೆಲುಗು ಅಥವಾ ತಮಿಳು ಚಿತ್ರಗಳಿಗೆ ಹೆಚ್ಚಿನ ಚಿತ್ರಮಂದಿರಗಳು ಆಯಾ ರಾಜ್ಯಗಳಲ್ಲಿ ದೊರೆಯುತ್ತದೆ.

    ವಿದೇಶಿ ಮಾರ್ಕೆಟ್ ದೊಡ್ಡದಾಗಿದೆ

    ವಿದೇಶಿ ಮಾರ್ಕೆಟ್ ದೊಡ್ಡದಾಗಿದೆ

    ವಿದೇಶಗಳಲ್ಲಿ ಕೂಡ ಈ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ, ಅವರು ಇದೇ ಭಾಷೆಯ ಸಿನೆಮಾಗಳನ್ನೇ ನೋಡುವುದರಿಂದ ಚಿತ್ರದ ರಿಕವರಿ ರೇಟ್ ಹೆಚ್ಚಿರುತ್ತದೆ. ಈಗ ಎಸ್ಎಸ್ ರಾಜಮೌಳಿ ಅವರ 'ಆರ್ ಆರ್ ಆರ್' ಚಿತ್ರ ಅಮೆರಿಕವೊಂದರಲ್ಲೇ 2000 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.ಅದರಲ್ಲಿ ತೆಲುಗು ವರ್ಷನ್ ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ತೆಲುಗು ಚಿತ್ರ ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ಮೂರು ದಿನದ ಗಳಿಕೆ ಅಮೆರಿಕದಲ್ಲಿ ಎಷ್ಟು ಡಾಲರುಗಳಲ್ಲಿ ಇರುತ್ತದೆ ಅಂತ ನೀವೇ ಲೆಕ್ಕಹಾಕಿ ನೋಡಿ? ಕನ್ನಡ ಸಿನಿಮಾ ನೀವು ಅಮೆರಿಕದಲ್ಲಿ ಸಾವಿರ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಸಾಧ್ಯವೇ? ಕರ್ನಾಟಕದ 600 ಚಿತ್ರಮಂದಿರಗಳಲ್ಲಿ ಮತ್ತು ಮಲ್ಟಿಪ್ಲೆಕ್ಸುಗಳಲ್ಲಿ ಪೂರ್ಣಪ್ರಮಾಣದಲ್ಲಿ ನಮಗೆ ಸಿನಿಮಾ ಬಿಡುಗಡೆ ಮಾಡಲು ಅವಕಾಶವಿಲ್ಲ, ಇನ್ನು ಹೊರಗೆ ಹೋಗಿ ಎಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಾಧ್ಯವಾಗುತ್ತದೆ? ಇನ್ನೊಂದು ವಿಷಯ ವಿದೇಶಗಳಲ್ಲಿರುವ ಇತರ ಭಾಷಿಕರು ಯಾವುದೇ ಕಾರಣಕ್ಕೂ ಮತ್ತೊಂದು ಭಾಷೆಯ ಸಿನಿಮಾಗಳನ್ನು ಕಾತರದಿಂದ ಎದುರು ನೋಡುವುದಿಲ್ಲ. ಅವರು ಅವರ ಭಾಷೆಯ ಚಿತ್ರಗಳನ್ನು ನೋಡುತ್ತಾರೆ. ಉಳಿದ ಭಾಷೆಯ ವಿಚಾರಕ್ಕೆ ಬಂದರೆ ಆ ಚಿತ್ರದ ರಿಪೋರ್ಟ್ extra-ordinary ಅನಿಸಿದರೆ ಮಾತ್ರ ಅವರು ಬಂದು ನೋಡುವ ಸಾಧ್ಯತೆಗಳಿರುತ್ತದೆ. ಏಕೆಂದರೆ ಸಿನಿಮಾದ ಟಿಕೆಟ್ ಪ್ರೈಸ್ ಸಿಕ್ಕಾಪಟ್ಟೆ ಇರುತ್ತದೆ. ಹೀಗಾಗಿ ವಿದೇಶಗಳಲ್ಲಿ ಹೆಚ್ಚಿನ ಮಾರ್ಕೆಟ್ ತೆಲುಗು ಮತ್ತು ತಮಿಳು ಜೊತೆಗೆ
    ಹಿಂದಿ ಹೊಂದಿರುವುದರಿಂದ ಮೊದಲ ಮೂರು ದಿನದಲ್ಲೇ ಸಾಕಷ್ಟು ಹಣವನ್ನು ಅಲ್ಲಿಂದ ಕೊಳ್ಳೆ ಹೊಡೆಯುತ್ತವೆ. ಜೊತೆಗೆ ಗಮನಿಸಬೇಕಾದ ಮತ್ತೊಂದು ಅಂಶ ವಿದೇಶಗಳಲ್ಲಿರುವ ಕನ್ನಡಿಗರು ಇತರ ಭಾಷಿಕರಂತೆ ಮೊದಲ ದಿನದ ಮೊದಲ ಶೋ ನೋಡುವ ಕ್ರೇಜ್ ಹೊಂದಿಲ್ಲ. ಸಿನಿಮಾ ಚನ್ನಾಗಿದೆ ಎಂಬ ರಿಪೋರ್ಟ್ ಬಂದರೆ ಮಾತ್ರ ಅವರು ಚಿತ್ರಮಂದಿರಗಳ ಕಡೆಗೆ ಹೋಗುತ್ತಾರೆ.

    ಪ್ಯಾನ್ ಇಂಡಿಯಾ ಸಿನಿಮಾ ಎಂಬ ಭ್ರಮೆ ಬಿಡಿ

    ಪ್ಯಾನ್ ಇಂಡಿಯಾ ಸಿನಿಮಾ ಎಂಬ ಭ್ರಮೆ ಬಿಡಿ

    ಇತ್ತೀಚೆಗೆ ಯಾವುದೇ ಸಿನಿಮಾ ತೆಗೆದುಕೊಂಡರು ಅದು ದೊಡ್ಡ ಚಿತ್ರ ಆಗಬಹುದು ಅಥವಾ ಸಣ್ಣ ಬಜೆಟಿನ ಚಿತ್ರವೇ ಆಗಬಹುದು ಅದಕ್ಕೆ ಪ್ಯಾನ್ ಇಂಡಿಯಾ ಎಂಬ ಟ್ಯಾಗ್ ಲೈನ್ ಹಾಕಿಕೊಳ್ಳುತ್ತಾರೆ. ಆದರೆ ನೆನಪಿಡಿ ಹೊರಗೆ ಹೋಗಿ ಎಲ್ಲಾ ಚಿತ್ರಗಳು ಬಿಸಿನೆಸ್ ಮಾಡಲು ಸಾಧ್ಯವಾಗುವುದಿಲ್ಲ. ಒಂದು ನಾಯಕ ನಟನ ಹೆಸರು ದೊಡ್ಡದಾಗಿರಬೇಕು ಅಥವಾ ನಿರ್ದೇಶಕನ ಹೆಸರು ಸ್ಟ್ರಾಂಗ್ ಆಗಿರಬೇಕು ಅಥವಾ ನಿರ್ಮಾಪಕನ ಬಳಿಯಲ್ಲಿ ದೊಡ್ಡಮಟ್ಟದ ಹಣವಾದರೂ ಇರಬೇಕು. ಮಾರ್ಕೆಟಿಂಗ್ ಮಾಡುವುದರ ಜೊತೆಗೆ ಅಲ್ಲಿ ಹೋಗಿ ಚಿತ್ರಮಂದಿರಗಳನ್ನು ಹಿಡಿದು ಬಿಡುಗಡೆ ಮಾಡುವಂತಹ ತಾಕತ್ತು ಇದ್ದಾಗ ಮಾತ್ರವೇ ನೀವು ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಗೆಲ್ಲಲು ಸಾಧ್ಯವಾಗುತ್ತದೆ. ಸುಮ್ಮನೆ ಪ್ಯಾನ್ ಇಂಡಿಯಾ ಸಿನಿಮಾ ಅಂತ ಬಿಲ್ದಪ್ ಕೊಡುವುದರಿಂದ ಯಾವುದೇ ತರದ ಪ್ರಯೋಜನ ಆಗುವುದಿಲ್ಲ.

    ಇದೆಲ್ಲದಕ್ಕಿಂತ ಹೆಚ್ಚಾಗಿ ಮೊದಲು ಕನ್ನಡದ ನಟ, ನಿರ್ಮಾಪಕ, ನಿರ್ದೇಶಕರು ಕನ್ನಡಿಗರಿಗಾಗಿ ಸಿನಿಮಾ ಮಾಡಿ ಕನ್ನಡದಲ್ಲಿ ಸಿನಿಮಾ ಗೆದ್ದಾಗ ಖಂಡಿತ ಆ ಚಿತ್ರದ ಡಬ್ಬಿಂಗ್ ಅಥವಾ ರೀಮೇಕ್ ರೈಟ್ಸ್‌ಗೆ ಒಳ್ಳೆ ಡಿಮ್ಯಾಂಡ್ ಸೃಷ್ಟಿಯಾಗುತ್ತದೆ. ಕನ್ನಡದಲ್ಲಿ ಗೆದ್ದ ಚಿತ್ರಗಳನ್ನು ಹೊರಗೆ OTT ಪ್ಲಾಟ್ಫಾರ್ಮ್ ಗಳ ಮೂಲಕ ಕೂಡ ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡಿ ಹಣ ಕೂಡ ಮಾಡಬಹುದು. ಹೀಗಾಗಿ ಕನ್ನಡ ನಿರ್ಮಾಪಕರುಗಳು ಕನ್ನಡ ನಿರ್ದೇಶಕರು ನಾಯಕನಟರು ಮೊದಲು ಕನ್ನಡಿಗರಿಗಾಗಿ, ಕನ್ನಡ ಸಿನಿಮಾ ಮಾಡುವ ಪ್ರಯತ್ನ ಮಾಡಿದರೆ ಅದು ಕನ್ನಡ ಮತ್ತು ಕರ್ನಾಟಕದ ಹಿತಾಸಕ್ತಿಯನ್ನು ಕಾಯುತ್ತದೆ.ಅದನ್ನು ಬಿಟ್ಟು ಪ್ಯಾನ್ ಇಂಡಿಯಾ ಎಂಬ ಭ್ರಮೆಯಲ್ಲಿ ಕೋಟಿಗಟ್ಟಲೆ ಹಣ ಹೂಡಿದರೆ ಮೂಲಕ್ಕೆ ಮೋಸ ಆಗುತ್ತದೆ.

    English summary
    If kamnada movie makers try to produce more pan India movie's, more they going to trouble themselves. Not all Pan India Cinemas can become a KGF franchise.
    Friday, December 24, 2021, 16:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X