IFFI 2023 Goa: 54 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭ, ಹಾಲಿವುಡ್ ನಟನಿಗೆ ಪ್ರತಿಷ್ಠಿತ ಪ್ರಶಸ್ತಿ
54 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ನವೆಂಬರ್ 20 ರಂದು ಗೋವಾದಲ್ಲಿ ಪ್ರಾರಂಭವಾಗಲಿದೆ. ಚಲನಚಿತ್ರೋತ್ಸವವು ನವೆಂಬರ್ 28 ರವರೆಗೆ ನಡೆಯಲಿದೆ. ಪಣಜಿಯ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.
2023 ರ ನವೆಂಬರ್ 20 ರಿಂದ 28 ರವರೆಗೆ ಗೋವಾದಲ್ಲಿ 54 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಘೋಷಿಸಿದ್ದಾರೆ. ಜಾಗತಿಕವಾಗಿ 5 ನೇ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಭಾರತದ ಮಾಧ್ಯಮ ಮತ್ತು ಮನರಂಜನಾ ಉದ್ಯಮವು ಗಮನಿಸಬೇಕಾದ ಶಕ್ತಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಈ ಮಾರುಕಟ್ಟೆಯು ಪ್ರತಿ ವರ್ಷ ಸರಾಸರಿ ಶೇ.20 ರಷ್ಟು ಬೆಳೆಯುತ್ತಿದೆ. ಭಾರತದಲ್ಲಿ ತಯಾರಾದ ಸಿನಿಮಾಗಳು ದೇಶದ ಮೂಲೆ ಮೂಲೆಯನ್ನು ಆವರಿಸಿ ಈಗ ಜಗತ್ತಿನ ಮೂಲೆಗಳನ್ನು ತಲುಪುತ್ತಿವೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

ಮೈಕೆಲ್ ಡಗ್ಲಾಸ್‌ಗೆ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ
ವಿಶ್ವ ಚಿತ್ರರಂಗದ ಖ್ಯಾತ ತಾರೆ ಮತ್ತು ಸಿನಿಮಾ ಜಗತ್ತಿಗೆ ಅಪಾರ ಕೊಡುಗೆ ನೀಡಿರುವ ಮೈಕೆಲ್ ಡಗ್ಲಾಸ್ ಅವರಿಗೆ ಈ ವರ್ಷ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಐಎಫ್‌ಎಫ್‌ಐನ ಅಂತಾರಾಷ್ಟ್ರೀಯ ವಿಭಾಗವು ಸ್ವೀಕರಿಸಿದ ಚಲನಚಿತ್ರಗಳ ಸಂಖ್ಯೆಯಲ್ಲಿ ಮೂರು ಪಟ್ಟು ಏರಿಕೆಯಾಗಿದೆ. ಇದು ಅಂತಾರಾಷ್ಟ್ರೀಯ ಚಲನಚಿತ್ರೋದ್ಯಮಕ್ಕಿರುವ ಆಕರ್ಷಣೆಯ ಫಲ ಎಂದೂ ಹೇಳಿದ್ದಾರೆ.
ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ (SRLTA) ಯನ್ನು ವಿಶ್ವ ಸಿನಿಮಾದಲ್ಲಿನ ಶ್ರೇಷ್ಠತೆಗಾಗಿ ನೀಡಲಾಗುತ್ತದೆ. ಹಾಲಿವುಡ್ ನಟ ಮತ್ತು ನಿರ್ಮಾಪಕ ಮೈಕೆಲ್ ಡಗ್ಲಾಸ್, ಪ್ರಸ್ತುತ ವಿಶ್ವ ಚಿತ್ರರಂಗದ ಶ್ರೇಷ್ಠ ಅಂತಾರಾಷ್ಟ್ರೀಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಐಎಫ್‌ಎಫ್‌ಐನ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲು ಅವರು ತಮ್ಮ ಪತ್ನಿ ಮತ್ತು ಹೆಸರಾಂತ ನಟಿ ಕ್ಯಾಥರೀನ್ ಝೀಟಾ-ಜೋನ್ಸ್ ಅವರೊಂದಿಗೆ ಗೋವಾಗೆ ಆಗಮಿಸಿದ್ದಾರೆ.
ಹಾಲಿವುಡ್ ನಟ ಮೈಕೆಲ್ ಡಗ್ಲಾಸ್
50 ವರ್ಷಗಳಿಂದ ಚಲನಚಿತ್ರ ಮತ್ತು ದೂರದರ್ಶನ ಉದ್ಯಮದಲ್ಲಿರುವ "ಮೈಕೆಲ್ ಡಗ್ಲಾಸ್", 2 ಆಸ್ಕರ್, 5 ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು, ಪ್ರೈಮ್ ಟೈಮ್ ಎಮ್ಮಿ ಪ್ರಶಸ್ತಿ ಮತ್ತು ಲೆಕ್ಕವಿಲ್ಲದಷ್ಟು ಇತರ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. 2023 ರಲ್ಲಿ, ಅವರು 76 ನೇ ಕಾನ್ ನಲ್ಲಿ ಜೀವಮಾನದ ಸಾಧನೆಗಾಗಿ ಪಾಮ್ ಡಿ'ಓರ್ ಪಡೆದಿದ್ದಾರೆ.

'ವಾಲ್ ಸ್ಟ್ರೀಟ್' ಚಿತ್ರದಲ್ಲಿ ಗಾರ್ಡನ್ ಗೆಕ್ಕೊ ನಟನೆಗಾಗಿ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ. ಫೇಟಲ್ ಅಟ್ರಾಕ್ಷನ್, ದಿ ಅಮೇರಿಕನ್ ಪ್ರೆಸಿಡೆಂಟ್, ಬೇಸಿಕ್ ಇನ್‌ಸ್ಟಿಂಕ್ಟ್, ಟ್ರಾಫಿಕ್ ಮತ್ತು ರೊಮ್ಯಾನ್ಸಿಂಗ್ ದಿ ಸ್ಟೋನ್ ಸಿನಿಮಾಗಳಲ್ಲಿನ ಅಭಿನಯಕ್ಕಾಗಿ ಖ್ಯಾತಿ ಗಳಿಸಿದ್ದಾರೆ. ಮೈಕೆಲ್ ಒಬ್ಬ ನಟ ಮಾತ್ರವಲ್ಲದೆ ಉತ್ತಮ ನಿರ್ಮಾಪಕ ಕೂಡ ಆಗಿದ್ದಾರೆ. ಅವರು ಒನ್ ಫ್ಲ್ಯೂ ಓವರ್ ದಿ ಕಕ್ಕೂಸ್ ನೆಸ್ಟ್ ಮತ್ತು ದಿ ಚೈನಾ ಸಿಂಡ್ರೋಮ್‌ನಂತಹ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.
ಮೈಕೆಲ್ ಡಗ್ಲಾಸ್ ತಮ್ಮ ಸಾಮಾಜಿಕ ಕೆಲಸಗಳಿಂದಲು ಹೆಸರುವಾಸಿಯಾಗಿದ್ದಾರೆ. ಅವರು ನ್ಯೂಕ್ಲಿಯರ್ ಥ್ರೆಟ್ ಇನಿಶಿಯೇಟಿವ್ ಸಂಘಟನೆಯ ಜೊತೆಗೆ ಕೆಲಸ ಮಾಡುತ್ತಾರೆ. 1998 ರಲ್ಲಿ ವಿಶ್ವಸಂಸ್ಥೆಯ ಶಾಂತಿ ಸಂದೇಶವಾಹಕರಾಗಿಯೂ ನೇಮಕಗೊಂಡಿದ್ದರು.


Click it and Unblock the Notifications











