Independence Day 2025: ದೇಶಭಕ್ತಿಯನ್ನು ಬಡಿದೆಬ್ಬಿಸುವ 7 ಸಿನಿಮಾಗಳಿವು !
ಸ್ವಾತಂತ್ರ್ಯದ ಕಿಚ್ಚು ಬೆಳ್ಳಿತೆರೆಯಲ್ಲಿ ಚಿತ್ರ ರೂಪದಲ್ಲಿ ಹಲವಾರು ಬಾರಿ ಅನಾವರಣವಾಗಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಇಲ್ಲಿಯವರೆಗೆ ದೇಶ ಪ್ರೇಮವನ್ನು ಬಡಿದೆಬ್ಬಿಸುವ ಹತ್ತು ಹಲವು ಚಿತ್ರಗಳು ಬಂದಿವೆ. ಒಂದು ರೀತಿಯಲ್ಲಿ ದೇಶಪ್ರೇಮವನ್ನು ಬಡಿದೆಬ್ಬಿಸುವ ಕಾರ್ಯದಲ್ಲಿ ಚಿತ್ರರಂಗದವರ ಯೋಗದಾನ ಕೂಡ ದೊಡ್ಡದಿದೆ. ಇನ್ನೇನು ಭಾರತ ಕೆಲವೇ ಗಂಟೆಗಳಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದೆ.
ಧ್ವಜಾರೋಹಣ, ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸ್ವಾತಂತ್ರೋತ್ಸವದ ಈ ಸುಸಂದರ್ಭದಲ್ಲಿ ದೇಶಭಕ್ತಿಯನ್ನು ಬಡಿದೆಬ್ಬಿಸುವ, ಸ್ವಾತಂತ್ರ್ಯ ಹೋರಾಟದ ಕಥೆಗಳಿಗೆ ಕೈಗನ್ನಡಿ ಹಿಡಿಯುವ ಚಿತ್ರಗಳನ್ನು ಮನೆಯವರ ಜೊತೆ ಕುಳಿತು ನೋಡುವ ಅನುಭವವೇ ಸುಂದರ ಮತ್ತು ರೋಮಾಂಚಕಾರಿ ಆಗಿರುತ್ತೆ. ಈ ಹಿನ್ನೆಲೆ ಕಳೆದ ಎರಡು ದಶಕಗಳಲ್ಲಿ ಬಂದ 7 ಚಿತ್ರಗಳ ಪಟ್ಟಿಯನ್ನು ನಾವು ಇಲ್ಲಿ ಮಾಡಿದ್ದೇವೆ.

ದಿ ಲೆಜೆಂಡ್ ಆಫ್ ಭಗತ್ ಸಿಂಗ್ (2002)
2002ರಲ್ಲಿ ಹಿಂದಿ ಚಿತ್ರರಂಗದಲ್ಲಿ ಭಗತ್ ಸಿಂಗ್ ಅವರ ಜೀವನದ ಕುರಿತು ಮೂರು ಚಿತ್ರಗಳನ್ನು ನಿರ್ಮಾಣ ಮಾಡಲಾಗಿತ್ತು. ಬಿಡುಗಡೆ ಮಾಡಲಾಗಿತ್ತು. ಆ ಪೈಕಿ ಅಜಯ್ ದೇವಗನ್ ಅಭಿನಯದ ''ದಿ ಲೆಜೆಂಡ್ ಆಫ್ ಭಗತ್ ಸಿಂಗ್'' ಹಲವರ ಗಮನ ಸೆಳೆಯಿತು.
ರಾಜ್ ಕುಮಾರ್ ಸಂತೋಷಿ ನಿರ್ದೇಶನದ ಈ ಚಿತ್ರದಲ್ಲಿ ದಾಸ್ಯದ ಸಂಕೋಲೆಯಿಂದ ಬಿಡಿಸಬೇಕು ಎಂಬ ಭಗತ್ ಸಿಂಗ್ ಅವರ ಕನಸು.. ಚಿಂತನೆ.. ಆದರ್ಶ.. ಹೋರಾಟದ ಕಿಚ್ಚು .. ಅನೇಕರನ್ನು ಭಾವುಕರಾಗಿಸಿತ್ತು. ಈ ಚಿತ್ರದಲ್ಲಿನ ಅಭಿನಯಕ್ಕೆ ಅಜಯ್ ದೇವಗನ್ ಅವರಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿಯನ್ನು ಕೂಡ ನೀಡಲಾಗಿತ್ತು. ರಾಜ್ ಬಬ್ಬರ್, ಫರೀದಾ ಜಲಾಲ್, ಡಿ ಸಂತೋಷ್, ಅಖಿಲೇಂದ್ರ ಮಿಶ್ರಾ ಮತ್ತು ಅಮೃತಾ ರಾವ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದರು.

ಸ್ವದೇಸ್ (2004)
ಕನ್ನಡದ ಶಿವರಾಮ ಕಾರಂತರ 'ಮರಳಿ ಮಣ್ಣಿಗೆ' ಕತೆ ಆಧರಿತ ಚಿತ್ರ ಸ್ವದೇಸ್ 2004ರಲ್ಲಿ ತೆರೆಗೆ ಬಂದಿತ್ತು. ಅಶುತೋಷ್ ಗೋವಾರಿಕರ್ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಖಾನ್ ನಾಯಕನ ಪಾತ್ರ ನಿರ್ವಹಿಸಿದ್ದರು. ವಿದೇಶದಲ್ಲಿರುವ ವ್ಯಕ್ತಿಯೊಬ್ಬ ತನ್ನ ಮೂಲ ಹುಡುಕಿ ಭಾರತದ ಹಳ್ಳಿಯೊಂದಕ್ಕೆ ಬಂದು ಇಲ್ಲಿಯೇ ನೆಲೆಸುವ ಕತೆಯನ್ನು ಹೊಂದಿದ್ದ ಈ ಚಿತ್ರದಲ್ಲಿ ಶಾರುಖ್ ತಾಯಿಯ ಪಾತ್ರದಲ್ಲಿ ಕನ್ನಡದ ಕಿಶೋರಿ ಬಲ್ಲಾಳ್ ಅಭಿನಯಿಸಿದ್ದು ವಿಶೇಷ. 'ಮರಳಿ ಮಣ್ಣಿಗೆ' ಕತೆಯನ್ನು ಆಧರಿಸಿದ ಕನ್ನಡದಲ್ಲಿ 'ಚಿಗುರಿದ ಕನಸು' ಮಾಡಿರುವುದು ವಿಶೇಷ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅಭಿನಯಿಸಿದ್ದಾರೆ.

ಲಗಾನ್ (2001)
ಆಮಿರ್ ಖಾನ್ ಅಭಿನಯದ ಆಶುತೋಶ್ ಗೋವರಿಕರ್ ನಿರ್ದೇಶನದ 'ಲಗಾನ್' ಭಾರತೀಯ ಚಿತ್ರರಂಗದಲ್ಲಿನ ಅತ್ಯುತ್ತಮ ಚಿತ್ರಗಳಲ್ಲಿ ಒಂದು. ಬ್ರಿಟಿಷ್ ವಸಾಹತುಶಾಹಿ ವಿರುದ್ಧ ನಡೆಯುವ ಹೋರಾಟವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿತ್ತು. ಕ್ರಿಕೆಟ್ ಪಂದ್ಯದ ಮೂಲಕ ಕಥೆಯನ್ನು ಹೆಣೆಯಲಾಗಿತ್ತು. ಈ ಚಿತ್ರದ ಹಾಡುಗಳು ಇಂದಿಗೂ ಜನಪ್ರಿಯ. 'ಲಗಾನ್' ಸಿನಿಮಾ ಕೇವಲ ಕತೆಯಿಂದ ಮಾತ್ರವೇ ಅಲ್ಲದೆ ಸಿನಿಮಾ ಮೇಕಿಂಗ್ ದೃಷ್ಟಿಯಿಂದಲೂ ಕೂಡ ಮಾಸ್ಟರ್ ಪೀಸ್ ಎನಿಸಿಕೊಂಡಿತ್ತು. ಆಸ್ಕರ್‌ಗೆ ನಾಮಿನೇಟ್ ಆಗಿ ಅಂತಿಮ ಸುತ್ತಿಗೂ ಈ ಸಿನಿಮಾ ಆಯ್ಕೆ ಆಗಿತ್ತು ಆದರೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯ್ತು.

ರಂಗ್ ದೇ ಬಸಂತಿ (2006)
ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರ ಮತ್ತೊಂದು ಕ್ಲಾಸಿಕ್ ಚಿತ್ರ ರಂಗ್ ದೇ ಬಸಂತಿ. ಈ ಚಿತ್ರದಲ್ಲಿ ಕೂಡ ಭಗತ್ ಸಿಂಗ್, ರಾಜ್‌ಗುರು, ಸುಖದೇವ್ ಮತ್ತು ಚಂದ್ರಶೇಖರ್ ಆಜಾದ್ ಅವರ ನೆರಳಿತ್ತು. ಭಾರತದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಒಂದು ಸಾಕ್ಷ್ಯಚಿತ್ರದಲ್ಲಿ ಅಭಿನಯಿಸುತ್ತಿರುವಾಗ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಅರಿತುಕೊಂಡು ಹೇಗೆ ಹೋರಾಡುತ್ತಾರೆ ಎನ್ನುವುದನ್ನು ತೋರಿಸಲಾಗಿತ್ತು. ಸೋಹಾ ಅಲಿ ಖಾನ್, ಸಿದ್ಧಾರ್ಥ್, ಆರ್ ಮಾಧವನ್ ನಟಿಸಿದ್ದಾರೆ, ಅತುಲ್ ಕುಲಕರ್ಣಿ, ಶರ್ಮನ್ ಜೋಶಿ ಚಿತ್ರದಲ್ಲಿ ಅಭಿನಯಿಸಿದ್ದರು.

ಉರಿ: ದಿ ಸರ್ಜಿಕಲ್ ಸ್ಟ್ರೈಕ್ (2019)
ದೇಶಪ್ರೇಮ ಬಡಿದೆಬ್ಬಿಸುವ ಚಿತ್ರಗಳಲ್ಲಿ 'ಉರಿ; ದಿ ಸರ್ಜಿಕಲ್ ಸ್ಟ್ರೈಕ್' ಕೂಡ ಒಂದು ಹಾಗೂ ಮಹತ್ವದ್ದು. 2016ರ ಉರಿ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಮಾಡಿದ್ದ ಸರ್ಜಿಕಲ್ ಸ್ಟ್ರೈಕ್ ಆಧರಿಸಿ ಮಾಡಲಾಗಿದ್ದ ಈ ಚಿತ್ರ ಬಾಕ್ಸಾಫೀಸ್‌ನ ಕೂಡ ಕೊಳ್ಳೆ ಹೊಡೆಯಿತು. ವಿಕ್ಕಿ ಕೌಶಲ್, ಯಾಮಿ ಗೌತಮ್, ಮೋಹಿತ್ ರೈನಾ, ಪರೇಶ್ ರಾವಲ್, ಕ್ರಿತಿ ಕುಲ್ಹಾರಿ ಇನ್ನೂ ಹಲವರು ಅಭಿನಯಿಸಿದ್ದ ಈ ಚಿತ್ರವನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿನ ಅಭಿನಯಕ್ಕೆ ವಿಕ್ಕಿ ಕೌಶಲ್‌ಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು

ಶೇರ್‌ಷಾ (2021)
ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಜೀವನಕಥೆಯನ್ನಾಧರಿಸಿದ ಚಿತ್ರ ಶೇರ್‌ಷಾ. ಸಿದ್ದಾರ್ಥ್ ಮಲ್ಹೋತ್ರಾ ಈ ಚಿತ್ರದಲ್ಲಿ ವಿಕ್ರಮ್ ಬಾತ್ರಾ ಪಾತ್ರವನ್ನು ಸೊಗಸಾಗಿ ನಿರ್ವಹಿಸಿದ್ದರು. ಕಿಯಾರಾ ಅಡ್ವಾಣಿ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಚಿತ್ರ ಚಿತ್ರಮಂದಿರದಲ್ಲಿ ಬಿಡುಗಡೆಯನ್ನು ಮಾಡದೇ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಒಟಿಟಿಯಲ್ಲಿ ಈ ಚಿತ್ರ ವ್ಯಾಪಕವಾಗಿ ಸದ್ದು ಮಾಡಿ ಎಲ್ಲರ ಗಮನ ಸೆಳೆಯಿತು. ಅನೇಕರ ಕಣ್ಣಂಚನ್ನು ಒದ್ದೆಯಾಗಿಸಿತ್ತು.

ಮೇಜರ್ (2022)
ಬೆಂಗಳೂರಿನಲ್ಲಿಯೇ ವಾಸ ಮಾಡುತ್ತಿದ್ದ ಮುಂಬೈ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಬದುಕಿನ ಚಿತ್ರಣವನ್ನು ಅಡವಿ ಶೇಷ್ ಬೆಳ್ಳಿ ಪರದೆಗೆ ತಂದಿದ್ದರು. ಸಂದೀಪ್ ಉನ್ನಿಕೃಷ್ಣನ್ ಅವರ ಪಾತ್ರವನ್ನು ನಿರ್ವಹಿಸಿದ್ದರು. ತನ್ನ ಪ್ರಾಣವನ್ನು ಬಲಿ ಕೊಟ್ಟು ದೇಶವನ್ನು ಉಳಿಸಿ ಮುಂಬಯಿ ದಾಳಿಯ ಹಿರೋ ಆಗಿ ಹೊರಹೊಮ್ಮಿದ್ದ ಸಂದೀಪ್ ಉನ್ನಿಕೃಷ್ಣನ್ ತಾಜ್ ಹೋಟೆಲ್ ಒಳಗಡೆ ಹೋಗುವ ಮುನ್ನ 'ಯಾರೂ ಒಳಗೆ ಬರಬೇಡಿ, ನಾನು ಇವರನ್ನು ನೋಡಿಕೊಳ್ಳುತ್ತೇನೆ'.. ಎಂದು ಹೇಳಿದ್ದರು. 2022 ಜೂನ್‌ನಲ್ಲಿ ಚಿತ್ರ ಬಿಡುಗಡೆಯಾಗಿತ್ತು.


Click it and Unblock the Notifications










