Independence Day: ದೇಶಪ್ರೇಮ ಮೆರೆವ ಈ ಕನ್ನಡ ಚಿತ್ರಗಳನ್ನು ನೀವು ನೋಡಲೇಬೇಕು
ನಾಳೆ ( ಆಗಸ್ಟ್ 15 ) 76ನೇ ಸ್ವಾತಂತ್ರ್ ದಿನಾಚರಣೆಯನ್ನು ಆಚರಿಸಲು ಇಡೀ ದೇಶ ಸಜ್ಜಾಗುತ್ತಿದೆ. ಈ ಮಹಾನ್ ದಿನಾಚರಣೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಈ ಕಾರ್ಯಕ್ರಮಗಳಲ್ಲಿ ದೇಶ ಪ್ರೇಮ ಸಾರುವ ಹಾಡುಗಳನ್ನು ಬಳಸಿ ನೃತ್ಯ ಮಾಡಿ ಸಂಭ್ರಮಿಸಲು ದೇಶ ಪ್ರೇಮಿಗಳು ಕಾಯುತ್ತಿದ್ದಾರೆ. ಕನ್ನಡ ಚಿತ್ರರಂಗ ದೇಶ ಭಕ್ತಿ ಸಾರುವ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದು, ಅವುಗಳಲ್ಲಿ ದೇಶ ಪ್ರೇಮ ಮೆರೆಯುವ ಹಾಡುಗಳನ್ನು ರಚಿಸಿವೆ.
ಕನ್ನಡ ಚಿತ್ರರಂಗ ಹಾಡುಗಳಲ್ಲಿ ಮಾತ್ರವಲ್ಲದೇ ಇಡೀ ಚಿತ್ರದಲ್ಲಿ ದೇಶ ಪ್ರೇಮದ ಕಥೆಯನ್ನು ಸಾರಿ ಸಿನಿ ರಸಿಕರಲ್ಲಿನ ದೇಶ ಪ್ರೇಮಿಯನ್ನು ಬಡಿದೆಬ್ಬಿಸಿದ ಹಲವಾರು ಉದಾಹರಣೆಗಳಿವೆ. ಇಂತಹ ಚಿತ್ರಗಳನ್ನು ಕನ್ನಡ ಕಿರುತೆರೆ ಚಾನೆಲ್‌ಗಳು ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಟಿವಿಯಲ್ಲಿ ಪ್ರಸಾರ ಮಾಡುತ್ತಿರುತ್ತವೆ. ಇನ್ನೂ ಕೆಲ ಸಿನಿ ರಸಿಕರು ಈ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಹುಡುಕಿ ವೀಕ್ಷಿಸುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ನೀವೂ ಅಂತಹ ದೇಶ ಪ್ರೇಮ ಮೆರೆಯುವ ಕನ್ನಡ ಚಿತ್ರಗಳನ್ನು ನೋಡಬೇಕು ಎಂದುಕೊಂಡಿದ್ದರೆ ಅಥವಾ ನಿಮ್ಮ ಮನೆಯಲ್ಲಿನ ಮಕ್ಕಳಿಗೆ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಒಂದೊಳ್ಳೆ ದೇಶ ಪ್ರೇಮ ಮೆರೆವ ಕನ್ನಡ ಚಿತ್ರವನ್ನು ತೋರಿಸಬೇಕು ಎಂಬ ಯೋಜನೆ ಇದ್ದರೆ ಈ ಕೆಳಕಂಡ ಚಿತ್ರಗಳ ಪೈಕಿ ಯಾವುದಾದರೊಂದು ಚಿತ್ರವನ್ನು ಆರಿಸಿಕೊಳ್ಳಬಹುದಾಗಿದೆ.

ಮುತ್ತಿನಹಾರ
ಡಾ ವಿಷ್ಣುವರ್ಧನ್, ಸುಹಾಸಿನಿ, ಅಶ್ವತ್ಥ್ ಹಾಗೂ ಮಾಸ್ಟರ್ ಆನಂದ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಮುತ್ತಿನಹಾರ ಚಿತ್ರ ಕನ್ನಡ ಚಿತ್ರರಂಗ ನಿರ್ಮಿಸಿದ ಸಾರ್ವಕಾಲಿಕ ಅತ್ಯುತ್ತಮ ದೇಶ ಪ್ರೇಮ ಮೆರೆಯುವ ಚಿತ್ರಗಳ ಪಟ್ಟಿಯಲ್ಲಿದೆ. ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡುವ ಕೊಡಗಿನ ವೀರ ಯೋಧನ ಕಥೆ ಇದಾಗಿದೆ. ಈ ಚಿತ್ರಕ್ಕೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶನವಿದೆ.
ವೀರಪ್ಪ ನಾಯಕ
ವಿಷ್ಣುವರ್ಧನ್ ನಟನೆಯ ಮತ್ತೊಂದು ಚಿತ್ರ ವೀರಪ್ಪ ನಾಯಕ ಸಹ ದೇಶ ಭಕ್ತಿ ಸಾರುವ ಅತ್ಯುತ್ತಮ ಕನ್ನಡ ಚಿತ್ರಗಳಲ್ಲಿ ಒಂದಾಗಿದೆ. ಟಿ ಎಸ್ ನಾಗಾಭರಣ ನಿರ್ದೇಶನದ ಈ ಚಿತ್ರದಲ್ಲಿ ಭಾರತದ ತ್ರಿವರ್ಣ ಧ್ವಜದ ಕುರಿತಾದ ಕಥೆ ಇದ್ದು, ಒಂದೊಳ್ಳೆ ಮಾಹಿತಿಯಿಂದ ಕೂಡಿರುವ ದೇಶ ಪ್ರೇಮದ ಸಿನಿಮಾವಾಗಿದೆ.
ಕಿತ್ತೂರು ಚೆನ್ನಮ್ಮ
1961ರಲ್ಲಿ ತೆರೆಗೆ ಬಂದಿದ್ದ ಕಿತ್ತೂರು ರಾಣಿ ಚೆನ್ನಮ್ಮನ ವೀರಗಾಥೆ ಕಿತ್ತೂರು ಚೆನ್ನಮ್ಮ ಸಹ ಸ್ವಾತಂತ್ರ ದಿನಾಚರಣೆಯಂದು ಒಂದೊಮ್ಮೆ ನೋಡಲೇಬೇಕಾದ ಸಿನಿಮಾವಾಗಿದೆ. ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರದಲ್ಲಿ ಬಿ ಸರೋಜಾ ದೇವಿ ನಟಿಸಿದರೆ, ಮುಖ್ಯ ಭೂಮಿಕೆಯಲ್ಲಿ ರಾಜ್‌ಕುಮಾರ್, ಲೀಲಾವತಿ, ಎಂ ವಿ ರಾಜಮ್ಮ ಹಾಗೂ ನರಸಿಂಹ ರಾಜು ಸೇರಿದಂತೆ ಇನ್ನೂ ಹಲವರು ನಟಿಸಿದ್ದರು.
ಹಗಲು ವೇಷ
ಶಿವರಾಜ್‌ಕುಮಾರ್ ನಟನೆಯ ದೇಶಪ್ರೇಮ ಕಥೆಯನ್ನು ಹೊಂದಿರುವ ಸಿನಿಮಾವಾದ ಹಗಲುವೇಷ. ಈ ಚಿತ್ರವನ್ನೂ ಸಹ ಸ್ವಾತಂತ್ರ ದಿನಾಚರಣೆಯಂದು ಕುಳಿತು ವೀಕ್ಷಿಸಬಹುದಾಗಿದೆ.
ಎಕೆ 47
ಶಿವರಾಜ್‌ಕುಮಾರ್ ನಟನೆಯ ಮತ್ತೊಂದು ದೇಶ ಪ್ರೇಮ ಚಿತ್ರ 'ಎಕೆ 47' ಸಹ ದೇಶ ಪ್ರೇಮ ಮೆರೆವ ಕನ್ನಡ ಚಿತ್ರಗಳ ಪಟ್ಟಿಯಲ್ಲಿದೆ. ಈ ಚಿತ್ರದಲ್ಲಿ ಅಮಾಯಕನೋರ್ವ ತಾನು ಮಾಡದ ತಪ್ಪಿಗೆ ಸಿಲುಕಿ ದೇಶ ದ್ರೋಹಿ ಎಂಬ ಪಟ್ಟಕ್ಕೆ ಸಿಲುಕಿದಾಗ ಅದರಿಂದ ಹೇಗೆ ಪಾರಾಗುತ್ತಾನೆ ಹಾಗೂ ತನ್ನ ದೇಶವನ್ನು ಯಾವ ರೀತಿ ರಕ್ಷಿಸಲು ಸಹಾಯ ಮಾಡುತ್ತಾನೆ ಎಂಬುದನ್ನು ಚೆನ್ನಾಗಿ ತೋರಿಸಿದ್ದಾರೆ.
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ
2012ರಲ್ಲಿ ತೆರೆಕಂಡ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ. ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ, ಸ್ವಾತಂತ್ರ್ಯಹೋರಾಟಗಾರ ಸಂಗೊಳ್ಳಿ ರಾಯಣ್ಣನ ಕಥೆ. ದರ್ಶನ್ ರಾಯಣ್ಣನಾಗಿ ಕಾಣಿಸಿಕೊಂಡಿದ್ದರು. ನಾಗಣ್ಣ ಈ ಚಿತ್ರ ನಿರ್ದೇಶಿಸಿದ್ದರು.


Click it and Unblock the Notifications











