Box Office: ಸ್ವಾತಂತ್ರ ದಿನಾಚರಣೆ ವಾರ ಬಿಡುಗಡೆಗೊಂಡ ಚಿತ್ರಗಳಲ್ಲಿ ಅತಿಕಡಿಮೆ ಗಳಿಸಿದ್ದು ಯಾವ ಚಿತ್ರ?
ಈ ಬಾರಿಯ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯ ಚಿತ್ರರಂಗಗಳ ಹಲವು ಸಿನಿಮಾಗಳು ಬಿಡುಗಡೆಗೊಂಡಿದ್ದವು. ಇನ್ನು ಈ ಬಾರಿಯ ಸ್ವಾತಂತ್ರ ದಿನಾಚರಣೆ ಮಂಗಳವಾರವಿದ್ದ ಕಾರಣ ಅದರ ಹಿಂದಿನ ವಾರದ ಗುರುವಾರ ಹಾಗೂ ಶುಕ್ರವಾರದ ದಿನಗಳಂದು ಚಿತ್ರಗಳನ್ನು ಬಿಡುಗಡೆ ಮಾಡಲಾಯಿತು.
ಹೌದು, ಗುರುವಾರ ಹಾಗೂ ಶುಕ್ರವಾರ ಚಿತ್ರಗಳನ್ನು ಬಿಡುಗಡೆ ಮಾಡಿದರೆ ವಾರಾಂತ್ಯ ಹಾಗೂ ಭಾನುವಾರ ಮತ್ತು ಸ್ವಾತಂತ್ರ ದಿನಾಚರಣೆಯ ರಜಾ ದಿನಗಳು ಸಿಗಲಿದ್ದು, ಈ ದಿನಗಳಂದು ಬಿಡುಗಡೆ ಮಾಡಿದರೆ ಚಿತ್ರಗಳು ಹೆಚ್ಚಿನ ಗಳಿಕೆ ಮಾಡಬಹುದು ಎಂಬ ಉದ್ದೇಶದಿಂದ ನಿರ್ಮಾಪಕರು ಚಿತ್ರಗಳನ್ನು ರಿಲೀಸ್ ಮಾಡಿದ್ದರು.

ಅಂದಹಾಗೆ ಈ ಉದ್ದೇಶಗಳೊಂದಿಗೆ ಬಿಡುಗಡೆಗೊಂಡ ಕೆಲ ಚಿತ್ರಗಳು ಗೆದ್ದರೆ ಇನ್ನೂ ಕೆಲ ಚಿತ್ರಗಳು ನಿರೀಕ್ಷಿಸಿದ ಗಳಿಕೆ ಮಾಡುವಲ್ಲಿ ವಿಫಲಗೊಂಡಿವೆ. ಇನ್ನು ಈ ಬಾರಿಯ ಸ್ವಾತಂತ್ರ ದಿನಾಚರಣೆಯನ್ನು ಗುರಿಯನ್ನಾಗಿಸಿಕೊಂಡು ತಮಿಳಿನಿಂದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನೆಲ್ಸನ್ ಕುಮಾರ್ ಕಾಂಬಿನೇಶನ್‌ನ ಜೈಲರ್ ಚಿತ್ರ ಬಿಡುಗಡೆಗೊಂಡೆರೆ, ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟನೆಯ ಭೋಳಾ ಶಂಕರ್ ಚಿತ್ರ ತೆರೆಗೆ ಬಂದಿತ್ತು. ಅತ್ರ ಬಾಲಿವುಡ್‌ನಲ್ಲಿ ಸನ್ನಿ ಡಿಯೋಲ್ ನಟನೆಯ ಗದರ್ 2 ಹಾಗೂ ಓ ಮೈ ಗಾಡ್ 2 ಚಿತ್ರಗಳು ಬಿಡುಗಡೆಗೊಂಡವು.
ಇನ್ನು ಜೈಲರ್ ಚಿತ್ರ ಆಗಸ್ಟ್ 10ರ ಗುರುವಾರದಂದು ಬಿಡುಗಡೆಯಾದರೆ, ಭೋಳಾ ಶಂಕರ್, ಗದರ್ 2 ಹಾಗೂ ಓ ಮೈ ಗಾಡ್ 2 ಚಿತ್ರಗಳು ಆಗಸ್ಟ್ 11ರ ಶುಕ್ರವಾರದಂದು ಬಿಡುಗಡೆಗೊಂಡವು. ಈ ಪೈಕಿ ಜೈಲರ್ ಹಾಗೂ ಗದರ್ 2 ಬ್ಲಾಕ್‌ಬಸ್ಟರ್ ಚಿತ್ರಗಳಾಗಿ ಹೊರಹೊಮ್ಮಿದರೆ, ಓ ಮೈ ಗಾಡ್ 2 ಹಿಟ್ ಎನಿಸಿಕೊಂಡಿದೆ. ಇನ್ನುಳಿದಂತೆ ಮೆಗಾಸ್ಟಾರ್ ಚಿರಂಜೀವಿ ನಟನೆಯ ಭೋಳಾ ಶಂಕರ್ ಚಿತ್ರ ಮಕಾಡೆ ಮಲಗಿದ್ದು, ದೊಡ್ಡ ನಷ್ಟ ಎದುರಿಸುತ್ತಿದೆ.
ಸದ್ಯ ನಿನ್ನೆಗೆ ( ಆಗಸ್ಟ್ 18 ) ಜೈಲರ್ ಚಿತ್ರ 9 ದಿನಗಳ ಪ್ರದರ್ಶನವನ್ನು ಪೂರೈಸಿದ್ದರೆ, ಇನ್ನುಳಿದ ಚಿತ್ರಗಳು 8 ದಿನಗಳ ಪ್ರದರ್ಶನಗಳನ್ನು ಪೂರೈಸಿವೆ. ಹಾಗಿದ್ದರೆ ಈ ಎಲ್ಲಾ ಚಿತ್ರಗಳು ಇಷ್ಟು ದಿನಗಳಲ್ಲಿ ಎಷ್ಟು ಕೋಟಿ ಗಳಿಸಿವೆ ಹಾಗೂ ಯಾವ ಚಿತ್ರ ಅತಿಕಡಿಮೆ ಗಳಿಸಿ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತದ ಬಿಡುಗಡೆಯ ರೇಸ್‌ನಲ್ಲಿ ಸೋತಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ರಜನಿಕಾಂತ್ ನಟನೆಯ ಜೈಲರ್ ಸಿನಿಮಾ 9 ದಿನಗಳಲ್ಲಿ 468 ಕೋಟಿ ರೂಪಾಯಿ ಗಳಿಕೆ ಮಾಡಿದೆ.
2. ಗದರ್ 2 ಚಿತ್ರ 8 ದಿನಗಳಲ್ಲಿ 396 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
3. ಓ ಮೈ ಗಾಡ್ 2 ಚಿತ್ರ 8 ದಿನಗಳಲ್ಲಿ 130 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
4. ಭೋಳಾ ಶಂಕರ್ ಚಿತ್ರ 8 ದಿನಗಳಲ್ಲಿ 43 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಸೋತ ಭೋಳಾ ಶಂಕರ್‌ಗೆ ತೀವ್ರ ನಷ್ಟ:
ಭೋಳ ಶಂಕರ್ ಒಟ್ಟಾರೆ ಕಲೆಕ್ಷನ್ ನಲ್ಲಿ 26.94 ಕೋಟಿ ಶೇರ್ ಕಲೆಕ್ಷನ್ ಇದ್ದು, ಚಿತ್ರ ಲಾಭ ಗಳಿಸಲು ಆರಂಭಿಸಬೇಕೆಂದರೆ 80.50 ಕೋಟಿ ಗಳಿಸಬೇಕಿಸದೆ. ಅಂದರೆ ಸದ್ಯ ಭೋಳ ಶಂಕರ್ ಈ ಬ್ರೇಕ್ ಈವನ್ ತಲುಪಲು ಇನ್ನೂ 53.56 ಕೋಟಿ ರೂಪಾಯಿ ಶೇರ್ ಕಲೆಕ್ಷನ್ ಮಾಡಬೇಕಿದೆ. ಸದ್ಯಕ್ಕೆ ಚಿತ್ರ ಗಳಿಸುತ್ತಿರುವ ವೇಗ ನೋಡಿದ್ರೆ 50 ಕೋಟಿ ನಷ್ಟ ಅನುಭವಿಸುವುದಂತೂ ಕಟ್ಟಿಟ್ಟ ಬುತ್ತಿ.


Click it and Unblock the Notifications











