27 ವರ್ಷಗಳ ಬಳಿಕ ಭಾರತಕ್ಕೆ ಮರಳಿದ ಮಿಸ್ ವರ್ಲ್ಡ್ ಸ್ಪರ್ಧೆ
ಈ ವರ್ಷದ ಅಂತ್ಯದಲ್ಲಿ ವಿಶ್ವದ ಅತಿ ದೊಡ್ಡ ಸೌಂದರ್ಯ ಸ್ಪರ್ಧೆ 'ಮಿಸ್ ವರ್ಲ್ಡ್ ಚಾಂಪಿಯನ್‌ಶಿಪ್' ಭಾರತದಲ್ಲಿ ನಡೆಯಲಿದೆ. ನವೆಂಬರ್ ತಿಂಗಳಿನಲ್ಲಿ ಈ ಸ್ಪರ್ಧೆ ನಡೆಯಲಿದೆ ಎಂದು ನಿನ್ನೆ ( ಜೂನ್ 8 ) ಮಿಸ್ ವರ್ಲ್ಡ್ ಆರ್ಗನೈಝೇಶನ್ ಅಧಿಕೃತ ಘೋಷಣೆ ಮಾಡಿದೆ.
ಇದು 71ನೇ ಆವೃತ್ತಿಯ ಭುವನ ಸುಂದರಿ ಸ್ಪರ್ಧೆಯಾಗಿದ್ದು, ಕೊನೆಯದಾಗಿ ಭಾರತ 1996ರಲ್ಲಿ ಈ ಭುವನ ಸುಂದರಿ ಸ್ಪರ್ಧೆಯ ಆತಿಥ್ಯ ವಹಿಸಿತ್ತು. ಈ ಮೂಲಕ ಬರೋಬ್ಬರಿ 27 ವರ್ಷಗಳ ಬಳಿಕ ಈ ಪ್ರತಿಷ್ಟಿತ ಸ್ಪರ್ಧೆ ಭಾರತಕ್ಕೆ ಮರಳಿದ್ದು, ಮೂರು ದಶಕಗಳ ಬಳಿಕ ಭಾರತದ ನೆಲದಲ್ಲಿ ಇಷ್ಟು ದೊಡ್ಡ ಸ್ಪರ್ಧೆ ನಡೆಯುವುದು ವಿಶೇಷವಾಗಿರಲಿದೆ.

"71ನೇ ವಿಶ್ವ ಸುಂದರಿ ಫೈನಲ್ ಭಾರತದಲ್ಲಿ ನಡೆಯಲಿದೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ. ನಿಮ್ಮ ವಿಶಿಷ್ಟ ಮತ್ತು ವೈವಿಧ್ಯಮಯ ಸಂಸ್ಕೃತಿ, ವಿಶ್ವ ದರ್ಜೆಯ ಆಕರ್ಷಣೆಗಳು ಮತ್ತು ಅದ್ಭುತ ಸ್ಥಳಗಳನ್ನು ಪ್ರಪಂಚದ ಇತರರೊಂದಿಗೆ ಹಂಚಿಕೊಳ್ಳಲು ಕಾಯುತ್ತಿದ್ದೇವೆ. ಈ ಅದ್ಭುತವಾದ ವಿಶ್ವ ಸುಂದರಿ ಫೈನಲ್ ಸ್ಪರ್ಧೆಯಲ್ಲಿ ಭಾರತದಾದ್ಯಂತ ಒಂದು ತಿಂಗಳ ಕಾಲ 130 ರಾಷ್ಟ್ರೀಯ ಚಾಂಪಿಯನ್‌ಗಳು ತಮ್ಮ ಸಾಧನೆಗಳನ್ನು ಪ್ರದರ್ಶಿಸಲಾಗುತ್ತಾರೆ" ಎಂದು ಮಿಸ್ ವರ್ಲ್ಡ್ ಆರ್ಗನೈಝೇಶನ್‌ನ ಸಿಇಒ ಜೂಲಿಯಾ ಮೋರ್ಲಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಭಾರತವನ್ನು ಹಾಡಿ ಹೊಗಳಿದ ಮಿಸ್ ವರ್ಲ್ಡ್ ಆರ್ಗನೈಝೇಶನ್‌ನ ಸಿಇಒ ಜೂಲಿಯಾ ಮೋರ್ಲಿ ಭಾರತದಲ್ಲಿ ಈ ಸ್ಪರ್ಧೆ ಆಯೋಜನೆಯಾಗಿರುವುದು ಸಂತಸ ತಂದಿದೆ ಎಂದರು. ಈ ಪತ್ರಿಕಾಗೋಷ್ಟಿಯಲ್ಲಿ ಹಾಲಿ ವಿಶ್ವ ಸುಂದರಿ ಕ್ಯಾರೊಲಿನಾ ಬಿಲಾವಸ್ಕಾ ಸಹ ಹಾಜರಿದ್ದರು.
ಇನ್ನು ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಪರ ನಂದಿನಿ ಗುಪ್ತಾ ಭಾಗವಹಿಸುತ್ತಿದ್ದಾರೆ. 19 ವರ್ಷದ ಇವರು ರಾಜಸ್ಥಾನ ಮೂಲದ ಕೋಟಾದವರಾಗಿದ್ದು, ಈ ವರ್ಷ ನಡೆದ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಈಕೆ ಚಾಂಪಿಯನ್ ಸಹ ಆಗಿದ್ದರು. ಸದ್ಯ ನಂದಿನಿ ಗುಪ್ತಾ ಮುಂಬೈನಲ್ಲಿ ಎರಡನೇ ವರ್ಷದ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಪದವಿ ವ್ಯಾಸಾಂಗ ಮಾಡುತ್ತಿದ್ದಾರೆ.


Click it and Unblock the Notifications











