ಸುಶಾಂತ್ ಟು ವಿಜೆ ಚಿತ್ರ: 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಸೆಲೆಬ್ರಿಟಿಗಳು
ಆತ್ಮಹತ್ಯೆ ಮಹಾಪಾಪ ಎಂಬ ಮಾತಿದೆ. ಸಾಯುವ ಹಕ್ಕು ಯಾರಿಗೂ ಇಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಯಾವ ಧರ್ಮವೂ ಒಪ್ಪುವುದಿಲ್ಲ. ಆದ್ರೆ, ಮನುಷ್ಯ ತನ್ನ ಜೀವನದಲ್ಲಿ ಕೆಲವು ಒತ್ತಡಗಳಿಗೆ ಮಣಿದು ಪ್ರಾಣ ಕಳೆದುಕೊಳ್ಳುತ್ತಾರೆ. ಈ ವರ್ಷ ಸಿನಿಮಾ ಇಂಡಸ್ಟ್ರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ತುಸು ಹೆಚ್ಚಿದೆ.
ಅದರಲ್ಲೂ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣ ಇಡೀ ದೇಶದ ಚರ್ಚೆಯ ವಿಷಯವಾಗಿತ್ತು. ಈಗಲೂ ಈ ಕೇಸ್ ತನಿಖೆ ನಡೆಯುತ್ತಲೇ ಇದೆ. ಸುಶಾಂತ್ ಸಿಂಗ್ ಬಿಟ್ಟು ಇನ್ನು ಹಲವು ಕಲಾವಿದರು 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾದ್ರೆ, ಕೊರೊನಾ ವರ್ಷದಲ್ಲಿ ತನ್ನ ಜೀವನ ಅಂತ್ಯಗೊಳಿಸಿಕೊಂಡ ಸೆಲೆಬ್ರಿಟಿಗಳು ಯಾರು ಎಂಬುದರ ಒಂದು ವಿಶೇಷ ಲೇಖನ ಇಲ್ಲಿದೆ. ಮುಂದೆ ಓದಿ...

ಕಿರುತೆರೆ ನಟಿ ಸೆಜಲ್ ಶರ್ಮಾ
ಹಿಂದಿಯ ಖ್ಯಾತ ಕಿರುತೆರೆ ನಟಿ ಸೆಜಲ್ ಶರ್ಮಾ ಆತ್ಮಹತ್ಯೆಗೆ ಶರಣಾಗಿದ್ದರು. 'ದಿಲ್ ತೋ ಹ್ಯಾಪಿ ಹೈ ಜಿ' ಶೋ ಮೂಲಕ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದ ನಟಿ ಸೆಜಲ್ ಜನವರಿ 25 ರಂದು ರಾತ್ರಿ ಮುಂಬೈನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಹಿಂದಿನ ಕಾರಣ ಬಹಿರಂಗವಾಗಿಲ್ಲ. ಆದರೆ ವೈಯಕ್ತಿಕ ಬದುಕಿನ ಸಮಸ್ಯೆಯಿಂದ ಸೆಜಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ.

ನಟಿ ಪ್ರೇಕ್ಷಾ ಮೆಹ್ತಾ
'ಕ್ರೈಮ್ ಪ್ಯಾಟ್ರೋಲ್' ಟಿವಿ ಸರಣಿ ಮೂಲಕ ಹೆಸರು ಗಳಿಸಿದ್ದ ನಟಿ ಪ್ರೇಕ್ಷಾ ಮೆಹ್ತಾ ಮೇ 25 ರಂದು ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮಧ್ಯಪ್ರದೇಶದ ಇಂದೋರ್‌ನ ಬಜರಂಗ್ ನಗರದಲ್ಲಿನ ತಮ್ಮ ನಿವಾಸದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿತ್ತು.

ಕನ್ನಡ ನಟ ಸುಶೀಲ್ ಗೌಡ
ನಟ, ರೂಪದರ್ಶಿ ಹಾಗೂ ಫಿಟ್ನೆಸ್ ಟ್ರೇನರ್ ಆಗಿ ಗುರುತಿಸಿಕೊಂಡಿದ್ದ ಸುಶೀಲ್ ಗೌಡ (30), ಜುಲೈ 8 ರಂದು ಆತ್ಮಹತ್ಯೆ ಮಾಡಿಕೊಂಡರು ಎಂದು ವರದಿಯಾಗಿದೆ. ದುನಿಯಾ ವಿಜಯ್ ನಾಯಕರಾಗಿರುವ 'ಸಲಗ' ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದ ಸುಶೀಲ್ ಗೌಡ ನಟಿಸಿದ್ದರು. ಕಮರೊಟ್ಟು ಚೆಕ್ ಪೋಸ್ಟ್ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದ ಅವರು, 'ಲೋಟಸ್' ಎಂಬ ಫಿಟ್ನೆಸ್ ಕೇಂದ್ರ ನಡೆಸುತ್ತಿದ್ದರು.

ಮರಾಠಿ ನಟ ಅಶುತೋಷ್ ಭಾಕ್ರೆ
ಮರಾಠಿ ಚಿತ್ರರಂಗದ ನಟ ಅಶುತೋಷ್ ಭಾಕ್ರೆ ಜುಲೈ 30 ರಂದು ಮರಾಠಾವಾಡಾ ಪ್ರದೇಶ ನಾಂಡೇದ್ ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮರಾಠಿ ಧಾರಾವಾಹಿ ಖುಲ್ತಾ ಕಾಲಿ ಖುಲೇನಾ ಧಾರಾವಾಹಿಯ ಪಾತ್ರದಿಂದ ಜನಪ್ರಿಯರಾಗಿದ್ದ ನಟಿ ಮಯೂರಿ ದೇಶ್ ಮುಖ್ ಅವರನ್ನು ಅಶುತೋಷ್ ಮದುವೆಯಾಗಿದ್ದರು. ಭಾಕರ್, ಇಚರ್ ತರ್ಲಾ ಪಕ್ಕಾ ಮುಂತಾದ ಚಿತ್ರಗಳಲ್ಲಿ ಅಶುತೋಷ್ ನಟಿಸಿದ್ದರು.

ರೂಪದರ್ಶಿ ಸಮೀರ್ ಶರ್ಮಾ
ಹಿಂದಿ ಕಿರುತೆರೆ ನಟ ಮತ್ತು ರೂಪದರ್ಶಿ ಸಮೀರ್ ಶರ್ಮಾ (44) ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಜನಪ್ರಿಯ ಧಾರಾವಾಹಿ 'ಯೆ ರಿಷ್ತೆ ಹೈ ಪ್ಯಾರ್ ಕೆ' ಧಾರಾವಾಹಿಯಲ್ಲಿ ಅವರು ಕುಹು ಪಾತ್ರಧಾರಿಯ ತಂದೆಯಾಗಿ ನಟಿಸಿದ್ದರು. ಕಹಾನಿ ಘರ್ ಘರ್ ಕಿ ಮತ್ತು ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ, ಜ್ಯೋತಿ, ಇಸ್ ಪ್ಯಾರ್ ಕೋ ಕ್ಯಾ ನಾಮ್ ದು ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.

ನಟಿ ಅನುಪಮಾ ಪಾಠಕ್
ಭೋಜಪುರಿ ಚಿತ್ರರಂಗದ ನಟಿ ಅನುಪಮಾ ಪಾಠಕ್, ಮುಂಬೈನ ದಹಿಸಾರ್‌ನಲ್ಲಿನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಆಗಸ್ಟ್ 2ರಂದೇ ಅವರು ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ. ಸಾಯುವ ಒಂದು ದಿನ ಮುನ್ನ ಫೇಸ್‌ಬುಕ್‌ನಲ್ಲಿ ಲೈವ್ ಬಂದಿದ್ದ ಅನುಪಮಾ, ತಾವು ವಂಚನೆಗೆ ಒಳಗಾಗಿದ್ದು, ಯಾರನ್ನೂ ನಂಬುವ ಸ್ಥಿತಿಯಲ್ಲಿಲ್ಲ ಎಂದು ಹೇಳಿಕೊಂಡಿದ್ದರು.

ಟಿವಿ ನಿರೂಪಕಿ ಕೊಂಡಪಲ್ಲಿ ಶ್ರಾವಣಿ
ತೆಲುಗಿನ ಯುವ ನಟಿ, ಟಿವಿ ನಿರೂಪಕಿ ಕೊಂಡಪಲ್ಲಿ ಶ್ರಾವಣಿ ಸೆಪ್ಟೆಂಬರ್ 8 ರಂದು ಹೈದರಾಬಾದ್‌ನ ಮಧುರಾನಗರದ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಕೇಸ್‌ನಲ್ಲಿ ನಟಿಯ ಪ್ರಿಯಕರನಾದ ದೇವರಾಜ್ ರೆಡ್ಡಿ ಹಾಗೂ ಶ್ರಾವಣಿಯ ಮಾಜಿ ಪ್ರಿಯಕರ ಸಾಯಿಕೃಷ್ಣ ರೆಡ್ಡಿ ಎಂಬ ಇಬ್ಬರನ್ನು ಬಂಧಿಸಿದ್ದರು.

ಬಾಲಿವುಡ್ ನಟ ಆಸಿಫ್ ಬಾಸ್ರಾ
ಬಾಲಿವುಡ್ ಖ್ಯಾತ ನಟ ಆಸಿಫ್ ಬಾಸ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ನವೆಂಬರ್ 12 ರಂದು ಹಿಮಾಚಲ ಪ್ರದೇಶದ ಕಾಂಗ್ರಾ ಜೆಲ್ಲೆಯ ಧರ್ಮಶಾಲಾದ ಖಾಸಗಿ ಕಾಂಪ್ಲೆಕ್ಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ನಟ ಆಸಿಫ್ ಮೃತ ದೇಹ ಪತ್ತೆಯಾಗಿದೆ. ಆಸಿಫ್ ಬಾಸ್ರಾ ಹಿಂದಿ ಸಿನಿಮಾ ಸೇರಿದಂತೆ ವೆಬ್ ಸೀರಿಸ್ ಮತ್ತು ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ. ಬ್ಲಾಕ್ ಫ್ರೈಡೇ, ಜಬ್ ವಿ ಮೆಟ್, ಕ್ರಿಶ್-3, ಏಕ್ ವಿಲನ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಆಸಿಫ್ ನಟಿಸಿದ್ದಾರೆ.

ನಟಿ ವಿಜೆ ಚಿತ್ರಾ
ತಮಿಳು ಕಿರುತೆರೆ ಲೋಕದ ಜನಪ್ರಿಯ ನಟಿ ವಿಜೆ ಚಿತ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. 28 ವರ್ಷದ ಚಿತ್ರಾ ಚೆನ್ನೈನ ನಜರೆತ್ ಪೆಟ್ಟೈನ ಪಂಚತಾರಾ ಹೋಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಜಯ್ ಟಿವಿಯ ಜನಪ್ರಿಯ ಧಾರಾವಾಹಿ ಪಾಂಡಿಯನ್ ಸ್ಟೋರ್ಸ್ ನ ಮುಲೈ ಪಾತ್ರದ ಮೂಲಕ ಚಿತ್ರಾ ಹೆಚ್ಚು ಖ್ಯಾತಿಗಳಿಸಿದ್ದರು.

ಸುಶಾಂತ್ ಸಿಂಗ್ ಆತ್ಮಹತ್ಯೆ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14 ರಂದು (34) ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಕೇಸ್ ಸಿಬಿಐ ತನಿಖೆ ನಡೆಯುತ್ತಿದ್ದು, ಅಂತಿಮ ವರದಿ ಬಂದಿಲ್ಲ. ಈ ಸಾವು ಇಡೀ ದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಕಾಯ್ ಪೋಚೆ, ಶುದ್ಧ್ ದೇಸಿ ರೊಮ್ಯಾನ್ಸ್, ಎಂಎಸ್ ಧೋನಿ, ಚಿಚೋರೆ, ಕೇದಾರ್‌ನಾಥ್, ಪಿ.ಕೆ., ವೆಲ್ಕಂ ಟು ನ್ಯೂಯಾರ್ಕ್, ಸೊಂಚಿರಿಯಾ ಮುಂತಾದ ಚಿತ್ರಗಳಲ್ಲಿ ಸುಶಾಂತ್ ಖ್ಯಾತಿ ಗಳಿಸಿದ್ದರು.


Click it and Unblock the Notifications











